ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ |
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ ||
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ |
ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ ||
ಇದ್ದಕ್ಕಿದ್ದಂತೆ ಜಿಗ್ಗನೆದ್ದು ಎಲ್ಲೆಂದರಲ್ಲಿ ಹರಡುವ ಸಾಂಕ್ರಾಮಿಕ ರೂಪದ ರೋಗರುಜಿನಗಳು, ಯುದ್ಧಾವಘಡಘಳಿಂದ ಜರ್ಝರಿತವಾಗಿದ್ದ ಕಾಲಘಟ್ಟದಲ್ಲಿ ದುಗುಡ, ತಳಮಳದಿಂದ ಕೂಡಿದ ಕವಿಯ ಮನದಲ್ಲಿ ಮೂಡುವ ಸಂಕಟಗಳ ಭಾರದ ಆಲಾಪ ಈ ಸಾಲುಗಳಲ್ಲಿ ಕಾಣಿಸಿಕೊಂಡಿವೆ. ಸಂಭವಿಸುತ್ತಿರಬಹುದಾದ ಅನಾಹುತ ಸ್ಥಳೀಯವಾಗದೆ ಜಾಗತಿಕ ಸ್ವರೂಪದ್ದಾದ ಕಾರಣ ಇಡೀ ಭೂಮಿಯನ್ನೆ ಬಂದಪ್ಪಳಿಸಿದೆಯೊಂದು ದುರ್ದೈವ – ಎಂದು ಅಲವತ್ತುಗೊಳ್ಳುತ್ತದೆ ಕವಿ ಮನ. ಬಂದು ಮುತ್ತಿದ ದುರ್ದೈವದ ದೆಸೆಯಿಂದ ಎಲ್ಲೆಡೆಯು ಕೇಕೆ ಹಾಕುತ್ತ, ಹಾಹಾಕಾರದೊಡನೆ ಕಾಣಿಸಿಕೊಳ್ಳುತ್ತಿರುವ ಮೃತ್ಯುವಿನ ಅಟ್ಟಹಾಸಕ್ಕು ಒದ್ದಾಡಿಕೊಂಡೆ, ವಿಲಪಿಸುತ್ತದೆ ಕವಿ ಹೃದಯ. ಆ ದಿನ ಧರ್ಮಕ್ಕೆ ಸಹಜವಾಗಿ ಎಲ್ಲೆಡೆಯು ಬರಿ ಅವುಗಳದೆ ಸುದ್ಧಿಯಾಗಿ, ಎಲ್ಲೇ ಹೋದರು, ಏನೆ ಮಾಡಲ್ಹೊರಟರು ಅದರ ಪ್ರಭಾವವೆ ಎಲ್ಲೆಡೆ ತನ್ನ ಛಾಪು ಒತ್ತುತ್ತ ಅದು ಬಿಟ್ಟರೆ ಬೇರೆ ವಿಷಯವೆ ಇಲ್ಲವೆನ್ನುವಂತಾಗಿಸಿಬಿಟ್ಟಿದೆ; ಅದು ಪ್ರಭಾವ ಬೀರದಿರುವ ಯಾವ ತಾಣವೂ, ಯಾವ ಸಂಗತಿಯೂ ಕಾಣದಾಗಿ, ಇದ್ದಕ್ಕೆಲ್ಲ ಕೊನೆಯಿದೆಯೆ ಎಂದಾದರು? ಇದರಿಂದೆಲ್ಲ ಬಿಡುಗಡೆ, ಮುಕ್ತಿ ಸಿಗಲಿದೆಯೆ ? ಎಂದು ಖೇದಗೊಳ್ಳುತ್ತದೆ. ತನ್ನೆಲ್ಲ ಆಧ್ಯಾತ್ಮಿಕ ಮತ್ತು ಮಾಮೂಲಿ ದೈನಂದಿನ ಪ್ರಭಾವಲಯದ ಪರಿಧಿಯಲ್ಲಿ ವಿಹರಿಸುತ್ತಿದ್ದ ಕವಿಮನ ತನ್ನ ಸುತ್ತಲಿನ ಅಪರೂಪದ ಕಠೋರ ವಾಸ್ತವಕ್ಕೆ ಸ್ಪಂದಿಸುವ ಬಗೆಯನ್ನಿಲ್ಲು ಕಾಣಬಹುದು.