ಅಕ್ಷರರೂಪ : ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ .ಪುಣೆ.
‘ಮೂಲವಾಗಿ ಇಲ್ಲಿ ಅಭಿನ್ನತೆಯೇ ಇದೆ. ಬಂಜೆಯ ಮಗು ಎಂದರೆ ಹೇಗೆ ಮಿಥ್ಯವೋ ಅದೇ ರೀತಿ ಭಿನ್ನತೆಯೂ ಕೇವಲ ಮಿಥ್ಯವೇ ಆಗಿದೆ’
(ಇಸವಿ ಸನ ೧೯೪೬ರಲ್ಲಿ ಕುಮಾರಿ ರಾಧಾಳ ತಂದೆಗೆ ಅವಳ ಲಗ್ನದ ಸಂದರ್ಭದಲ್ಲಿ ಬರೆದ ಪತ್ರ)
ಓಂ
ಮಂಗಳೂರು
೦೭-೦೩-೧೯೪೬
ಚಿ.ರಾಮಭಾವುಗೆ ಆಶೀರ್ವಾದ
ನಿನ್ನ ಪತ್ರ ಇಂದು ರಾತ್ರಿ ೮ಗಂಟೆ ಸುಮಾರಿಗೆ ಸಿಕ್ಕಿತು. ಆನಂತರ ನಿತ್ಯದ ಸ್ನಾನಾದಿಕಗಳನ್ನೆಲ್ಲ ಮುಗಿಸಿ ಈಗ ರಾತ್ರಿ ೧|| ಗಂಟೆ … ನೋಡು! ಉತ್ತರ ಬರೆಯಲು ಕುಳಿತಿದ್ದೇನೆ.
ಬಿಕ್ಕಟ್ಟಿನ ಪ್ರಸಂಗವಂತೂ ಸರಿ!! ನಿನ್ನ ಪರಿಸ್ಥಿತಿಯಲ್ಲಿ, ನಿನಗೇಕೆ, ಯಾವುದೇ ನಿನ್ನ ಭೂಮಿಕೆಯ ಮನುಷ್ಯನಿಗೂ, ನಿನಗನಿಸಿದಂತೆ ನಾಲ್ಕೂ ಕಡೆಯಿಂದ ಆಕಾಶ ಮುರಿದು ಬಿದ್ದ ಹಾಗೆ ಅನಿಸುವದು ಅತ್ಯಂತ ಸ್ವಾಭಾವಿಕವೇ. ಶಾಂತತೆಯ, ಮನಸ್ಸಿನ ಸಮಸ್ಥಿತಿಯ, ವಿವೇಕದ, ಅನನ್ಯಭಕ್ತಿಯ, ಆತ್ಮಸ್ಥಿತಿಯ ನಿಶ್ಚಯದ ಬಲಪರೀಕ್ಷೆ ಮಾಡಲೆಂದೇ ಈ ರೀತಿ ಪ್ರಸಂಗ ಕರೆಯದೇ, ತಾನೇ ತಾನಾಗಿ, ಮನಸ್ಸಿನಲ್ಲಿ ಎಳ್ಳಷ್ಟೂ ಇಲ್ಲದಿರುವಾಗ, ಒಮ್ಮೆಲೇ ಮುಂದೆ ಬಂದು ನಿಲ್ಲುತ್ತದೆ ಅಂದರೆ, ಆತ್ಮಸ್ಥಿತಿಯ – ಮನಸ್ಸಿನಲ್ಲಿ ಅಚ್ಚಾಗಿರುವ ಜಗತ್ತಿನ ಮಿಥ್ಯತ್ವ – ಇವುಗಳ ಪರೀಕ್ಷೆಯೇ ನಡೆಯುತ್ತಿದೆ ಎನ್ನಬೇಕು. ಅರೇ! ಪರಮಾರ್ಥದ ಈ ಕಣ್ಣುಮುಚ್ಚಾಲೆ ಯಾರಿಗೂ ಬೇಡ; ದಕ್ಷ ಮತ್ತು ಸಮಾಧಾನಿ ಮಾತ್ರ ಇದನ್ನರಿತಿರುವನು!
ನೋಡಪ್ಪಾ! ಸ್ವಂತ ಸಾಮರ್ಥ್ಯ, ಪರಮಾರ್ಥದೆಡೆ ತಿರುವು, ಇಂಥ ಪರಿಸ್ಥಿತಿಯನ್ನು ಎದುರಿಸಿದಾಗಲೇ ಪ್ರಕಾಶಕ್ಕೆ ಬರುತ್ತದೆ. ಇದಕ್ಕೆ ಬೇರೆ ಉಪಾಯವಿಲ್ಲ. ಇದು ದೇವರ ಉಳಿಯ ಪೆಟ್ಟು. ಇದರಿಂದಲೇ ದೇವತ್ವ ಪ್ರಕಟವಾಗುತ್ತದೆ. ‘ಎದೆಗುಂದಬೇಡ, ಎದೆಗುಂದಬೇಡ ಮಬ್ಬಿನಲಿ! ಗಡಿಬಿಡಿ-ಗೊಂದಲದಲಿ ಬೀಳಬೇಡ!’ ‘ಸ್ವಸ್ವರೂಪದ ಅನುಸಂಧಾನ! ಅದೇ ಸಾಧು ಲಕ್ಷಣ!’
“ಯಾವ ಈ ಜಗತ್ತು ಎಷ್ಟು ದೊಡ್ಡ ಬೆದರುಗೊಂಬೆಯಂತೆ ಅನಿಸುತ್ತದೆಯೋ, ಅದೇ ಜಗತ್ತು ಸ್ವಸ್ವರೂಪದ ಸ್ಥಿತಿಯಲ್ಲಿ ‘ಅರೇ! ಯಾವುದು ಇಲ್ಲೇ ಇಲ್ಲವೋ, ಅದರ ಸುದ್ದಿಯಾದರೂ ಯಾರಿಗೆ ಬೇಕು?’ ಎಂದು ಹೇಳಿ ಹೇಳಿಸಿಕೊಳ್ಳುವಷ್ಟೇ ಬೆಲೆಯದ್ದಾಗಿದೆ!’’
‘ಮೂಲವಾಗಿ ಇಲ್ಲಿ ಅಭಿನ್ನತೆಯೇ ಇದೆ. ‘ಬಂಜೆಯ ಮಗು’ ಎಂದರೆ ಹೇಗೆ ಅದೆಷ್ಟು ಮಿಥ್ಯವೋ ಅದೇ ರೀತಿ ಭಿನ್ನತೆಯೂ ಕೇವಲ ಮಿಥ್ಯವೇ ಆಗಿದೆ’
ನಿನ್ನ ಮೇಲೆ ಘಟಿಸಿದ ಈ ರೀತಿಯ ಅಥವಾ ಇದಕ್ಕಿಂತಲೂ ಕಡುತರ ಪ್ರಸಂಗದಲ್ಲೂ ಯಾರ ಸಮಾಧಾನ ಕಲಕುವದಿಲ್ಲವೋ ಅವನನ್ನೇ ಪಕ್ವ ಪುರುಷನೆನ್ನುತ್ತಾರೆ.