ಏನು ಭೈರವಲೀಲೆಯೀ ವಿಶ್ವಭ್ರಮಣೆ! |
ಏನು ಭೂತಗ್ರಾಮನರ್ತನೋನ್ಮಾದ! ||
ಏನಗ್ನಿ ಗೋಳಗಳು! ಏನಂತರಾಳಗಳು! |
ಏನು ವಿಸ್ಮಯ ಸೃಷ್ಟಿ! ಮಂಕುತಿಮ್ಮ ||
ಭೈರವ ಲೀಲೆಯೆನ್ನುವುದು ಆ ಕಾಲ ಭೈರವನ ಪ್ರಚಂಡ ರೂಪಿನ ರೌದ್ರಾವತಾರದ ಹಿನ್ನಲೆಯಲ್ಲಿ ಪರಿಗಣಿಸಬೇಕಾದ ಹೋಲಿಕೆ. ಇಲ್ಲಿ ಕವಿ ಸೃಷ್ಟಿಯುಂಟಾದ ಬಗೆಯನ್ನು ನಮ್ಮ ಕಲ್ಪನೆಗೆಟುಕುವ ಪರಿಧಿಯಲ್ಲಿ ವಿವರಿಸುವ ಸಲುವಾಗಿ ಈ ಭೈರವನ ಪ್ರಚಂಡತೆಯ ಅಂಶವನ್ನು ಬಳಸಿಕೊಳ್ಳುತ್ತಾರೆ. ಮೂಲತಃ ಇಲ್ಲಿ ವಿಶ್ವ ಭ್ರಮಣೆಯೆನ್ನುವುದು ಕೇವಲ ವಿಶ್ವದ ನಿರಂತರ ಪರಿಭ್ರಮಣೆಯೆಂದು ಮಾತ್ರವಲ್ಲದೆ, ಅದರ ಮೂಲ ಸೃಷ್ಟಿಯ ಹಿನ್ನಲೆಯಲ್ಲಿ ಹೇಳಿದ್ದೆಂದು ಪರಿಗಣಿಸಬೇಕು. ಆ ದೃಷ್ಟಿಕೋನದಲ್ಲಿ ನೋಡಿದರೆ ಈ ವಿಶ್ವಭ್ರಮಣೆಯನ್ನು ‘ಬೃಹತ್ ಸ್ಪೋಟ’ಕ್ಕೆ ನೇರವಾಗಿ ಸಮೀಕರಿಸಿಬಿಡಬಹುದು. ಆ ಸ್ಪೋಟದ ತರುವಾಯ ತಾನೆ ವಿಶ್ವದ ಸೃಷ್ಟಿಯಾದದ್ದು ? ಆ ಬೃಹತ್ ಸ್ಪೋಟದಲ್ಲುಂಟಾದ ಹಾಹಾಕಾರದ, ಸೋಜಿಗದ ಭೈರವ ಲೀಲೆಯನ್ನು ಹೇಗೆಂದು ವರ್ಣಿಸುವುದೆಂದು ವಿಸ್ಮಯ ಪಡುತ್ತದೆ ಕವಿ ಮನಸು. ಆ ವಿಶ್ವಭ್ರಮಣೆಯ ಆರಂಭದ ಸರಣಿ ಪ್ರಕ್ರಿಯೆಯ ಮುಂದುವರೆದ ಮರುಸ್ಪೋಟದ ಭಾಗವಾಗಿ ತಾನೆ ಮಿಕ್ಕೆಲ್ಲ ಗ್ರಹತಾರಾ ಮಂಡಲಗಳ ಸೃಷ್ಟಿಯಾದದ್ದು ? ಅವೆಲ್ಲ ಕವಿ ದೃಷ್ಟಿಯಲ್ಲಿ ಉನ್ಮಾದದ ಭೂತಗ್ರಾಮ ನರ್ತನದಂತೆ ಕಾಣುತ್ತದೆ. ಇಲ್ಲಿ ನನಗನಿಸುವಂತೆ ಭೂತಗ್ರಾಮವನ್ನು ಎರಡು ರೀತಿಯಲ್ಲಿ ನೋಡಬಹುದು – ಮೊದಲನೆಯದು ನಮ್ಮ ವೇದಾಂತಿಕ ತಳಹದಿಯಿಂದ ಬರುವ ನಂಬಿಕೆಯಾದ ಪಂಚ ಭೂತಗಳದು. ಸೃಷ್ಟಿಯಲ್ಲೆಲ್ಲವೂ ಪಂಚಭೂತಗಳಿಂದಲೆ (ಆಕಾಶ, ಗಾಳಿ, ನೀರು, ಭೂಮಿ, ಅಗ್ನಿ) ಆದುದೆನ್ನುವ ಸಿದ್ದಾಂತ ಇಲ್ಲಿ ಪ್ರಸ್ತುತವಾಗುವ ಕಾರಣ ಭೂತಗ್ರಾಮ ನರ್ತನವೆನ್ನುವುದು ಈ ಪಂಚಭೂತಗಳ ಪಾಕವೆತ್ತಿ ಸೃಷ್ಟಿಯಡುಗೆ ಮಾಡುತ್ತಿರುವ ಪ್ರಕೃತಿಯ ಕ್ರಿಯೆ ಎಂದು ವಿವರಿಸಬಹುದು. ಮತ್ತೊಂದು ರೀತಿಯಲ್ಲಿ ನೋಡಿದರೆ ಭೂತಗ್ರಾಮವೆನ್ನುವುದು ಭೂತಗಳು ನೆಲೆಸಿದ ನೆಲೆಯಾದ ಸ್ಮಶಾನದ ಸಂಕೇತವೂ ಆಗಬಹುದೇನೊ ? ಮಸಣದಲ್ಲಿ ತಾನೆ ಭೂತ ಪ್ರೇತಗಳು ಉನ್ಮಾದದಿಂದ ಹೆಣದ ಸುತ್ತ ನರ್ತನಗೈಯ್ಯುವುದು ? ಕವಿಗೆ ಈ ಸೃಷ್ಟಿ ಪ್ರಕ್ರಿಯೆಯಲ್ಲಿ ಅದೇ ರೀತಿಯ ಉನ್ಮಾದವೆ ಕಂಡಿರಬಹುದು. ಮತ್ತೊಂದು ಬದಿಯಿಂದ ನೋಡಿದರೆ ಅದು ಲಯದ ಅಥವ ನಾಶದ ಸಂಕೇತವೂ ಆಗಬಹುದು. ಒಟ್ಟಾರೆ ಮೊದಲೆರಡು ಸಾಲುಗಳಲ್ಲಿ ಸೃಷ್ಟಿ ಪ್ರಕ್ರಿಯೆಯ ಆಂತರ್ಯವನ್ನು ಅದರೆಲ್ಲ ರೌದ್ರತೆಯೊಡನೆ ಹಿಡಿದಿಡುವ ಯತ್ನ ಕಾಣುತ್ತದೆ.
ಮಿಕ್ಕೆರಡು ಸಾಲುಗಳು ಅದನ್ನೆ ಮುಂದುವರೆಸುತ್ತ ಆ ಸೃಷ್ಟಿ ಪ್ರಕ್ರಿಯೆಯ ಫಲಿತದತ್ತ ಕಣ್ಣು ಹಾಯಿಸುತ್ತದೆ. ಸ್ಪೋಟದಿಂದಾದ ಉತ್ಪನ್ನಗಳೆಲ್ಲ ಒಂದೇ ಎರಡೆ ? ನಕ್ಷತ್ರಗಳಂತಹ ಲಕ್ಷಾಂತರ ಅಗ್ನಿಗೋಳಗಳು, ಅದರ ಸುತ್ತ ನೆರೆದ ಗ್ರಹ ಸಮೂಹಗಳು, ಧೂಮಕೇತು – ಉಲ್ಕೆಯಂತಹ ಆಕಾಶಕಾಯಗಳು, ಅದರ ನಿಗೂಢತೆಯನ್ನು ಹೆಚ್ಚಿಸುವ ಯಾವಾವುದೊ ಕಾಯದಸ್ತಿತ್ವಗಳು, ಕಪ್ಪುಬಿಲ – ಬಿಳಿಬಿಲದಂತಹ ಅರಿಯಲಾಗದ ಒಗಟಿನ ಅಂತರಾಳಗಳು – ಒಂದೆ, ಎರಡೆ ಅಲ್ಲಿನ ವಿಸ್ಮಯಗಳು ? ಅದೆಲ್ಲವನ್ನು ಒಗ್ಗೂಡಿಸುತ್ತ ಕವಿ ಒಂದೆ ಮಾತಿನಲ್ಲಿ ಹೇಳಿಬಿಡುತ್ತಾರೆ – ‘ಏನು ವಿಸ್ಮಯ ಸೃಷ್ಟಿ !’ ಎಂದು. ಸೃಷ್ಟಿಯ ನಂತರವೂ ಅದನ್ನು ನಿಖರವಾಗಿ ಅರಿಯಲಾಗದ, ಅದರ ನಿರಂತರತೆಯೂ, ಅನಂತ ಸ್ವರೂಪವು ಕೂಡ ‘ಏನಂತರಾಳ’ ಎಂಬ ಮಾತಿನಲ್ಲಿ ಸೂಚ್ಯವಾಗಿ ಧ್ವನಿತವಾಗುತ್ತದೆ.