ಬದುಕಿಗಾರ್ ನಾಯಕರು ? ಏಕನೊ ಅನೇಕರೋ? |
ವಿಧಿಯೊ, ಪೌರುಷವೊ, ಧರುಮವೊ, ಅಂಧಬಲವೋ? ||
ಕುದುರುವುದದೆಂತು ಈಯವ್ಯವಸ್ಥೆಯ ಪಾಡು ? |
ಅದಿಗುದಿಯೆ ಗತಿಯೇನೊ? – ಮಂಕುತಿಮ್ಮ ||

ಬದುಕಿನ ನಾವೆ ನಡೆಸಲು ಚುಕ್ಕಾಣಿ ಹಿಡಿದಿರುವ ನಾಯಕರಾದರು ಯಾರು ? ಅದೇನು ಒಬ್ಬರಿಂದ ನಡೆಯುವ ಯಾನವೊ ಅಥವಾ ಅನೇಕರಿಂದ ಲೊ? ಅದನ್ನು ನಡೆಸುತ್ತಿರುವುದೇನು ವಿಧಿ ಬಲವೊ, ಮೈ ತುಂಬಿದ ಕಸುವು ನೀಡುವ ಶಕ್ತಿಯೊ, ಪಾಪಪುಣ್ಯದ ಪರಿವೆಯಲ್ಲಿ ನೇರ ಹಾದಿಯಲ್ಲಿ ನಡೆಸುವ ಧರ್ಮ ಪ್ರಜ್ಞೆಯೊ ಅಥವಾ ಯಾವುದೊ ಕಣ್ಗಾಣದ ಅಂಧಬಲವೊ? ಇಷ್ಟೆಲ್ಲಾ ಸೇರಿಕೊಂಡು ಎಲ್ಲವೂ ನಾಯಕರಾಗಿ ತಂತಮ್ಮತ್ತ ಎಳೆದಾಡಿಸುತಿದ್ದರೆ ಬದುಕಿನ ವ್ಯವಸ್ಥೆ ತನ್ನ ಅಸಮತೋಲನದ ಅವ್ಯವಸ್ಥೆಯನ್ನು ನಿವಾರಿಸಿಕೊಂಡು, ಸಮತೋಲನದಲ್ಲಿ ಕುದುರಿಕೊಳ್ಳಲಾದರೂ ಹೇಗೆ ಸಾಧ್ಯ ? ಬಹುಶಃ ಅದು ಸಾಧ್ಯವೆ ಇರದ ಸಂಭವವಾಗಿ ಬರಿಯ ತಳಮಳವಾಗಿಯೆ ಉಳಿದುಬಿಡುವ ನಿರಂತರ ಗತಿಯೊ ? ಎಂದು ಕಳವಳವನ್ನು ವ್ಯಕ್ತಪಡಿಸುತ್ತಾನೆ ಮಂಕುತಿಮ್ಮ.

ಎಷ್ಟೊಂದು ಬದುಕಿನ ಅನುಭವ, ಕಷ್ಟ-ಕಾರ್ಪಣ್ಯ, ಸುಖದುಃಖಗಳೆಲ್ಲದರ ಸಂಕಲಿತ ಮೊತ್ತ ಅನುಭವ ಮೂಸೆಯಿಂದೆದ್ದು ಪದಗಳಾಗಿವೆಯಿಲ್ಲಿ ನೋಡಿ. ಆ ಅನುಭವದೆಲ್ಲಾ ಸಾರಕ್ಕು ಒಂದು ಷರಾ ಹಾಕುವ ಅಧಿಕಾರಯುತ ದನಿಯಲ್ಲಿ ಕವಿ ಪ್ರಶ್ನಿಸಿಕೊಳ್ಳುತ್ತಾನೆ – ಈ ಬದುಕಿಗೆ ಯಾರಾದರು ಒಬ್ಬರು ನಾಯಕರೆಂದು ಇದ್ದಾರೆಯೊ? ಒಂದು ಪಂದ್ಯದ, ಕದನದ, ಪಂಥದ ಜಯಾಪಜಯ, ಯಶಾಪಯಶಗಳು ನಾಯಕತ್ವದ ಮೇಲೆ ಅವಲಂಬಿಸಿರುತ್ತದೆ ಎನ್ನುತ್ತೇವೆ. ಹಾಗಿದ್ದಲ್ಲಿ ಬದುಕಿನ ನಾವೆಯನ್ನು ಸುಗಮವಾಗಿ ನಡೆಸಲು ಒಬ್ಬ ಧೀಮಂತ ನಾಯಕನ ಅವಶ್ಯಕತೆಯಷ್ಟೆ ಇರಬೇಕಲ್ಲವೆ, ತಾರ್ಕಿಕವಾಗಿ? ನಮ್ಮೆಲ್ಲರ ಬದುಕಿನಲ್ಲಿ ಪರಿಸ್ಥಿತಿ ಹಾಗಿದೆಯೆ ? ನಾಯಕನೆನಿಸಿಕೊಂಡವನೊಬ್ಬ ನಮ್ಮ ಬದುಕಲ್ಲಿ ಇರುವುದೆ ನಿಜವಾದರೆ ಅವನು ಯಾರು? ಅದೇನು ಒಬ್ಬ ನಾಯಕನೊ ಅಥವಾ ಹಲವು ನಾಯಕರ ತಿಕ್ಕಾಟ, ತಾಕಲಾಟದ ದೊಂಬಿಯೊ ? ಎಂದೂ ಪ್ರಶ್ನಿಸುತ್ತಾನೆ. ಒಂದು ವೇಳೆ ಅನೇಕರಿರುವುದು ನಿಜವಾದರು ಅವರಲ್ಲೊಬ್ಬನಾದರೂ ನಾಯಕತ್ವ ವಹಿಸಿದ್ದಾನೆಯೆ ? ಅಥವಾ ಅವರಾರು ಜವಾಬ್ದಾರಿ, ಹೊಣೆ ಹೊರದೆ ತಮಗೆ ಬೇಕಾದಂತೆ ತಮ್ಮ ಪಾಡಿಗೆ ಎಲ್ಲ ಕಡೆಗು ಎಳೆದಾಡಿಸುತ್ತ, ಕಂಗೆಡಿಸುತ್ತ ಅವ್ಯವಸ್ಥೆಯನ್ನು ಹುಟ್ಟುಹಾಕಿವೆಯೆ ? ನಾವಾಡುವ ರೀತಿಯನ್ನೆಲ್ಲ ನಿಯಂತ್ರಿಸುವ ನಾಯಕತ್ವ ವಹಿಸುವುದು ವಿಧಿಯೊ, ಪೌರುಷವೊ, ಧರ್ಮವೊ, ಅಂಧಬಲವೊ ? ಅವೆಲ್ಲದರ ಒಟ್ಟಾರೆ ಪ್ರಭಾವದಿಂದ ರೂಪುಗೊಂಡ ಗೊಂದಲ, ಕಳವಳಗಳೊ? ಅವೇನೆ ಆಗಿದ್ದರು ಅಂತಿಮವಾಗಿ ಅವುಗಳೆಲ್ಲದರ ನಿವ್ವಳ ಫಲಿತ ಬರಿಯ ತಳಮಳ ಮಾತ್ರವೆ ಇರುವಂತಿದೆಯಲ್ಲಾ? ಏನು ಆ ತಳಮಳದೊಂದಿಗೆ ಸಾಗುತ್ತ ಬದುಕು ಮುಗಿಸಬೇಕೇನೊ – ಎಂದು ನಿರಾಶೆಯ ಉದ್ಗಾರವೆತ್ತುತ್ತಾನೆ ಕವಿ.

RELATED ARTICLES  ನಮ್ಮ ಧ್ಯೇಯ ಸಾಧಿಸಲು ನಿಷ್ಕಾಮ ಸೇವೆ ಮಾಡಬೇಕು ಎಂದರು ಶ್ರೀಧರ ಸ್ವಾಮಿಗಳು.

ಇಲ್ಲೂ ಕೂಡ ಸೃಷ್ಟಿಸಿ ಬದುಕಲು ಬಿಟ್ಟದಾವುದೊ ಶಕ್ತಿಯ ಮೇಲಿನ ಆಕ್ರೋಶ, ಸಾತ್ವಿಕ ಸಿಟ್ಟು ಅವ್ಯಕ್ತ ಮತ್ತು ಪರೋಕ್ಷ ರೂಪದಲ್ಲಿ ವ್ಯಕ್ತವಾಗುವುದನ್ನು ಕಾಣಬಹುದು – ಅದರ ಅರೆಬರೆ ಕೆಲಸಕ್ಕೆ. ಒಂದೆಡೆ ನಮ್ಮ ಬದುಕಿನಲ್ಲಿ ಪುಕ್ಕಟೆ ಸಲಹೆ ಕೊಡುವವರು ನೂರಾರು ಜನ ಸಿಗುತ್ತಾರೆ. ತಾವಿತ್ತರೆ ಅವರೆ ಇತರರ ಬದುಕಿನ ನಾಯರಂತೆಯೂ ವರ್ತಿಸಿಬಿಡುತ್ತಾರೆ. ಆದರೆ ನಮ್ಮನ್ನು ಸರಿಯಾಗಿ ಮಾರ್ಗದರ್ಶನ ಕೊಟ್ಟು, ಸರಿಯಾದ ಸಂಗತ ಪಥದಲ್ಲಿ ನಡೆಸಬಲ್ಲ ನಿಜವಾದ ನಾಯಕ ಯಾರು ಎಂದರೆ ಬರುವ ಉತ್ತರ – ಮೌನ. ಆ ನಾಯಕತ್ವ ನಿಜಕ್ಕೂ ಬರಬೇಕಾದದ್ದು ಹೊರಗಿನಿಂದಲ್ಲ, ಬದಲಿಗೆ ಒಳಗಿನಿಂದ. ಆ ಒಳಗನ್ನು ನಿಯಂತ್ರಿಸುವ ನಾಯಕತ್ವ ಯಾರದೂ ಎಂದರೆ ಅಲ್ಲೂ ತರತದ ನಾಯಕರ ಪೈಪೋಟಿ; ಕೆಲವೊಮ್ಮೆ ವಿಧಿಯಾಟ ತನ್ನನ್ನೆ ನಾಯಕನೆನಿಸುವಂತೆ ಮಾಡಿದರೆ, ಮತ್ತೊಮ್ಮೆ ಸಾಹಸ, ಬಲದಾಸರೆ ಸಹಾಯಕ್ಕೆ ಬಂದು ತಾನೆ ನಾಯಕನೆನ್ನುತ್ತದೆ. ಮತ್ತೆ ಕೆಲವು ಸನ್ನಿವೇಶದಲ್ಲಿ ಧರ್ಮದ ಕೈ ಮೇಲಾದರೆ ಮಿಕ್ಕಿದ ಗಳಿಗೆಯಲ್ಲಿ ಮುನ್ನಡೆಸುವುದು ಯಾವುದೊ ಅಂಧಶ್ರದ್ಧೆಯ ಬಲ. ಹೀಗೆ ಒಂದೊಂದು ಒಂದೊಂದು ರೀತಿಯ ವಿಶ್ವರೂಪ ತಾಳುತ್ತ, ಬೇರೆ ಬೇರೆ ಸಮಯದಲ್ಲಿ ಸಂಗತವಾದಂತೆ ತೋರುವ ಅವುಗಳ ಪರಿ ಸಮಾಧಾನಕ್ಕಿಂತ ಗೊಂದಲ ತಳಮಳಗಳನ್ನು ಹೆಚ್ಚಿಸುವುದೆ ಹೆಚ್ಚು. ಆ ಪ್ರಕ್ರಿಯಲ್ಲಿ ಅವು ಹುಟ್ಟುಹಾಕುವ ಅವ್ಯವಸ್ಥೆಯ ತಲೆ ಬೇನೆ ಮತ್ತೊಂದೆಡೆ. ಇದೆಲ್ಲ ಕರ್ಮಫಲವೆಂದು ಸುಮ್ಮನೆ ಅನುಭವಿಸಿಕೊಂಡು ಹೋಗಬೇಕೆನ್ನುವ ಅನಿವಾರ್ಯತೆ, ನಿರ್ಲಿಪ್ತ ಶರಣಾಗತ ಭಾವವೂ ಇಲ್ಲಿ ಇಣುಕುತ್ತದೆ. ಅಂತೆಯೆ ಮತ್ತೆ ಕವಿಯ ಸಾಧಾರಣ ಬದುಕಿನ ಸ್ತರದಿಂದ ಅಗಾಧತೆಯ ಸ್ತರದತ್ತ ಒಯ್ಯುವ ಪದ ಸಾಲುಗಳ ಚಮತ್ಕಾರವು ಕಾಣುತ್ತದೆ ಈ ಸಾಲುಗಳ ಅಂತರಾಳದಲ್ಲಿ.

RELATED ARTICLES  ಅಪಘಾತಗಳು !! –ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆ .