ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ ? |
ನಾವರಿಯಲಾರದೆಲ್ಲದರೊಟ್ಟು ಹೆಸರೆ ? ||
ಕಾವನೋರ್ವನಿರಲ್ಕೆ ಜಗದ ಕಥೆಯೇಕಿಂತು ? |
ಸಾವು ಹುಟ್ಟುಗಳೇನು ? – ಮಂಕುತಿಮ್ಮ ||

ಒಳಗೇನಿದೆಯೆಂದು ಕಾಣಿಸದಂತೆ ಗಾಡಾಂಧಕಾರದಿಂದ ತುಂಬಿರುವ ನಿಗೂಢ ಗವಿಯಂತಹ ಅಸ್ತಿತ್ವವೆ ದೇವರೆ ? ನಮ್ಮ ನಿಲುಕಿಗೆ ಸಿಗದ, ನಾವು ಅರಿಯಲಾಗದೆ ಹೋಗುತ್ತಿರುವುದೆಲ್ಲವುಗಳ ಮೊತ್ತವನ್ನೆ ಸಮಷ್ಟಿಸಿ ಅದಕ್ಕೆ ಒಟ್ಟಾರೆ ದೇವರೆಂದು ಹೆಸರು ಕೊಟ್ಟು ಕೈ ತೊಳೆದುಕೊಂಡುಬಿಡಬಹುದೆ? ಎಲ್ಲರನ್ನು ಕಾಯುವವನೆ ದೇವರೆನ್ನುತ್ತಾರೆ, ಇಡಿ ಜಗವನ್ನೆ ಅವನು ಕಾಪಾಡುತ್ತಾನೆನ್ನುತ್ತಾರೆ. ಅಂತಿದ್ದರೂ, ಈ ಜಗದ ಕಥೆಯೇಕೆ ಏನೊ ಸರಿಯಿಲ್ಲದಂತೆ, ಹದಗೆಟ್ಟಂತೆ ಕಾಣುತ್ತದೆ ? ಜೀವಿಗಳೇಕೆ ದುರ್ಬಲವಾಗಿ ಸಾವು ಹುಟ್ಟುಗಳ ನಿಯತ ಚಕ್ರಕ್ಕೆ ಸಿಲುಕಿ ನರಳುವ ಫಲಿತದಲ್ಲಿ ಪರ್ಯಾವಸನವಾಗುತ್ತಿದೆ ? ಯಾಕಿರಬೇಕಿತ್ತು ಈ ಸಾವು ಹುಟ್ಟುಗಳು, ನಿಜದಲಿ ಏನವುಗಳ ಸಂದೇಶ, ಸಂಕೇತ, ಸೂಚನೆ ? – ಎಂದು ದೇವರ ಸ್ವರೂಪದ ಕುರಿತ ಮಂಕುತಿಮ್ಮನ ಜಿಜ್ಞಾಸೆ ಇಲ್ಲಿದೆ.

ಮೊದಲಿಗೆ ಗವಿಯೆನ್ನುವುದು ನಾವು ನಿರ್ಮಿಸಿದ್ದಲ್ಲ, ಸಹಜ, ಸ್ವಾಭಾವಿಕವಾಗಿ ಪ್ರಕೃತಿಯಲ್ಲಿ ಉಂಟಾಗಿದ್ದು. ಅದರ ಆಳ ಅಗಲಗಳು ಅಷ್ಟು ಸುಲಭವೇದ್ಯವಲ್ಲ. ಒಳಗೇನಿದೆಯೆಂದು ಕಾಣಲೂ ಆಗದ ಗಾಢ ಅಂಧಕಾರ ಬೇರೆ ಸೇರಿಕೊಂಡು ಅದರ ನಿಗೂಢತೆಯನ್ನು ಇನ್ನಷ್ಟು ಜಟಿಲಗೊಳಿಸಿಬಿಡುತ್ತದೆ. ಒಂದೆಡೆ ಅದು ಒಳಗೇನಿರಬೇಕೆಂಬ ಕುತೂಹಲವನ್ನು ಹುಟ್ಟಿಸಿದಷ್ಟೆ ಸಹಜವಾಗಿ, ಮತ್ತೊಂದೆಡೆ ಏನು ಅಪಾಯವಿದೆಯೊ ಭಯ ಭೀತಿಯನ್ನು ಪ್ರಚೋದಿಸುತ್ತದೆ – ಏನು ನಿರೀಕ್ಷಿಸಬಹುದೆಂಬ ಕಲ್ಪನೆಯಿರದ ಕಾರಣ. ಒಟ್ಟಾರೆ ಗವಿಯ ಅಸ್ತಿತ್ವ ಕುತೂಹಲ ಭೀತಿಗಳ ಸಮ್ಮಿಶ್ರ ಸಂಕೇತ. ನಾವು ದೇವರೆಂದು ಪರಿಭಾವಿಸುವುದು ಈ ಗವಿಯ ಹಾಗೆ ತಾನೆ ? ಬಾಹ್ಯದಿಂದ ಗವಿಯ ಅಸ್ತಿತ್ವ ಸುಲಭ ಗ್ರಹಿಕೆಗೆ ಸಿಗುವುದರಿಂದ ದೇವರಿದ್ದಾನೆನ್ನುವ ಸ್ಥೂಲ ಕಲ್ಪನೆಯೆ ಗವಿಯ ಬಾಹ್ಯದೋಲಿಕೆಗೆ ಸುಲಭವಾಗಿ ಸಮೀಕರಿಸಿಕೊಂಡುಬಿಡುತ್ತದೆ. ಆದರೆ ಆ ದೇವರ ಹತ್ತಿರದ, ಒಳನೋಟ, ಸ್ಪಷ್ಟ ಸ್ವರೂಪ, ಅಂತರಾಳಗಳ ಶೋಧನೆಗ್ಹೊರಟರೆ ಗವಿಯ ಬಾಗಿಲಿಗಿಣುಕಿದಷ್ಟೆ ರೀತಿಯ ಅಸ್ಪಷ್ಟತೆ ಕಾಣಿಸಿಕೊಳ್ಳುತ್ತದೆ. ಒಳಗೆಲ್ಲ ಬರಿ ಗಾಢಾಂಧಕಾರವೆ ತುಂಬಿಕೊಂಡು ಏನೂ ಕಾಣಿಸುವುದಿಲ್ಲ. ಹೊರಗಿನ ಬೆಳಕಲಿ ಕಾಣಿಸಿದಷ್ಟು ದೂರವೂ ಕೂಡ ಮಸುಕು ಮಸುಕು ಮಾತ್ರವೆ. ಇದೊಂದು ರೀತಿ ಗವಿಯಿಲ್ಲವೆಂದು ನಿರಾಕರಿಸುವಂತಿಲ್ಲ – ಎದುರಿಗೆ ಕಾಣಿಸುತ್ತಿರುವ ಆಕಾರವದು. ಆದರೆ ತನ್ನೊಳಗಿನ ಅಸ್ತಿತ್ವವೇನೆಂದು ಪ್ರಕಟವಾಗಿ ತೋರಿಸಿಕೊಳ್ಳುವ ಗುಟ್ಟುಗಳಾವುದನ್ನು ಬಿಟ್ಟುಕೊಡದೆ ಎಲ್ಲವನ್ನು ಕಗ್ಗತ್ತಲಲ್ಲಿ ಬಚ್ಚಿಟ್ಟುಕೊಂಡು ಮಾತಡದೆ, ಬಿಮ್ಮನೆಯ ಮೌನದಲ್ಲಿ ಕೂತುಬಿಟ್ಟಿರುತ್ತದೆ, ನಿರ್ಲಿಪ್ತ ಗವಿ ತನ್ನ ಪಾಡಿಗೆ ತಾನು. ನಮಗೆ ದೇವರ ಬಗೆ ಗೊತ್ತಿರುವುದು ಈ ಗವಿಯ ಸ್ವರೂಪದಲ್ಲೆ ತಾನೆ ? ಇರುವನೆಂದು ಹೇಳಬಹುದಾದರು ಶತಃಸಿದ್ಧ ಪ್ರಮಾಣಿಸುವ ಸಾಕ್ಷಾಧಾರಗಳು ಸಿಗುವುದಿಲ್ಲ. ಇಲ್ಲವೆಂದು ಹೇಳಬೇಕಾದರೂ ಆ ತಮದ ಒಗಟನ್ನು ಬಿಡಿಸದೆ ಖಚಿತವಾಗಿ ಸಾರಲಾಗುವುದಿಲ್ಲ. ಹೀಗಾಗಿ ಗವಿಯ ಸಾಂಕೇತಿಕತೆ ದೇವರ ಅಸ್ತಿತ್ವಕ್ಕೆ ಅರ್ಥಪೂರ್ಣ ಹೋಲಿಕೆಯೆಂದೆ ಹೇಳಬಹುದು.

RELATED ARTICLES  ಉದಾಸೀನವೆಂಬ ಮದ್ದು

ಆ ಗವಿಯ ಅಂತರಾಳದ ನಿಶೀಥವೆ ನಮಗಲಭ್ಯವಾದ, ನಮಗಿನ್ನು ಗೊತ್ತಿಲ್ಲದ, ನಾವಿನ್ನೂ ಅರಿಯಲಾಗದ ದೇವರ ಕುರಿತಾದ ಎಲ್ಲದರ ಸಮಗ್ರ, ಸಮಷ್ಟಿ ಮೊತ್ತ ಎಂದಂದುಕೊಳ್ಳುವುದಾದರೆ, ಮತ್ತು ಆ ‘ಅಜ್ಞಾನದ ಮೊತ್ತ’ಕ್ಕೊಂದು ಹೆಸರಿಟ್ಟರೆ – ಅದನ್ನೆ ದೇವರೆನ್ನಬಹುದೆ ? ಎನ್ನುವುದು ಮುಂದಿನ ಸಾಲಿನ ಜಿಜ್ಞಾಸೆ. ಪಾಮರನೊಬ್ಬ ತನ್ನಳತೆಗೆ ಮೀರಿದ್ದೆಲ್ಲವನ್ನು ದೈವಕ್ಕೆ ಆರೋಪಿಸುವಷ್ಟೆ ಸಹಜವಾಗಿ ಪಂಡಿತನು ‘ಅಜ್ಞಾನ’ ವೆಂದು ಹೆಸರಿಟ್ಟು ಅದಕ್ಕೆ ಮತ್ತೊಂದು ವ್ಯಾಖ್ಯೆಯನ್ನು ನೀಡುತ್ತಾನೆ. ಆದರೆ ಅವರಿಬ್ಬರೂ ಒಪ್ಪುವ ರೀತಿಯಲ್ಲಿ ಏಕರೂಪವಾಗಿ ಗವಿ ಮತ್ತದರ ಅಂಧಕಾರ ಪ್ರತಿಮಾರೂಪದಲ್ಲಿ ಬಿಂಬಿತವಾಗಿದೆ.

RELATED ARTICLES  ಎದೆ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಜನಪ್ರಿಯ ಚಲನಚಿತ್ರ ನಟ.

ಸರಿ, ದೇವರ ಸ್ವರೂಪವನ್ನಂತು ಖಚಿತವಾಗಿ ಹೇಳಲಾಗದಿದ್ದರು, ಅವನ ಶಕ್ತಿ, ಸಾಮರ್ಥ್ಯ ಕುರಿತಾದ ನಂಬಿಕೆ, ಶ್ರದ್ದೆ, ವಿಶ್ವಾಸಗಳ ಕಥೆಯೇನು ? ಅವನನ್ನೆ ಸರ್ವಶಕ್ತ, ಸರ್ವರನ್ನು ಸೃಷ್ಟಿಸುವ, ರಕ್ಷಿಸುವ ಹೊಣೆ ಹೊತ್ತವನೆಂದೆಲ್ಲ ವಿಶೇಷಣಗಳನ್ನು ಅವನಿಗೆ ಆರೋಪಿಸಿ, ಅವನನ್ನು ಸರ್ವ ದಯಾಮಯನೆಂದು ಬಿರುದು ಕೊಟ್ಟು ಕೂರಿಸಿಬಿಟ್ಟಿದ್ದೇವೆ. ಇದು ನಿಜವೆ ಆಗಿದ್ದಲ್ಲಿ, ಈ ಜಗವನ್ನೆಲ್ಲ ಪರಿಪಾಲಿಸಿ ಕಾಪಾಡುವವನು ಅವನೆ ಎಂದಾದಲ್ಲಿ ಈ ಜಗದ ಸ್ಥಿತಿಯೇಕೆ ಇಂತಿದೆ ? ಯಾಕೀ ರೀತಿ ಇಟ್ಟಿದ್ದಾನೆ ? ಯಾಕಿಲ್ಲಿ ಹುಟ್ಟು ಸಾವುಗಳ ವಿಷಮ ಚಕ್ರದ ಜತೆ ಸುತ್ತುವ ಸುಖ ದುಃಖಗಳ ಅನಿವಾರ್ಯತೆ ? ಯಾವ ಧ್ಯೇಯೋದ್ದೇಶದಿಂದಲೆ ಸೃಷ್ಟಿಸಿದ್ದರೂ, ಪರಿಪಾಲನೆಯಲ್ಲಿ ಈ ಅಸಮತೋಲನವನ್ನಿಡುವ ಕಾರಣವಾದರೂ ಏನು ? ಎಂದು ಅವನ ಕಾರ್ಯಾಚರಣೆಯ ಮೂಲ ಶೋಧಿಸಲು ಹೊರಡುತ್ತಾನೆ ಮಂಕುತಿಮ್ಮ.

ಇಲ್ಲಿ ಮತ್ತದೆ ಆಧ್ಯಾತ್ಮದ ಎಳೆ ಹಿನ್ನಲೆಯ ನಂಬಿಕೆಯಾಗಿ ಒತ್ತಾಸೆ ನೀಡುವುದು ಇಲ್ಲಿನ ವೈಶಿಷ್ಠ್ಯ. ‘ಕಾಯುವವನು’ ಎನ್ನುವ ಒಂದು ಪದ ಹೇಳಿದರೆ ಸಾಕು ಅದರ ಹಿಂದಿನದೆಲ್ಲ ತಟ್ಟನೆ ದೃಗ್ಗೋಚರವಾಗಿಬಿಡುತ್ತದೆ ಆ ಹಿನ್ನಲೆಯರಿವಿರುವ ಓದುಗ ಮನಕ್ಕೆ. ದೇವರು, ವೇದಶಾಸ್ತ್ರ, ಆಧ್ಯಾತ್ಮಿಕತೆ ಎಲ್ಲವೂ ನಮ್ಮರಿವಿಲ್ಲದೆ ಮನಃಪಟಲದಲ್ಲೊಂದು ಅಮೂರ್ತ ರೂಪಾಗಿ ಕಾಣಿಸಿಕೊಂಡುಬಿಡುತ್ತದೆ – ನಮಗದರ ಸಂಪೂರ್ಣ ಜ್ಞಾನವಿರದಿದ್ದರು. ಅದೇ ಗಳಿಗೆಯಲ್ಲಿ ಕವಿಯು ಇದನ್ನು ಬರೆದಾಗ ಇದ್ದ ಸಾಮಾಜಿಕ ಪರಿಸ್ಥಿತಿ ಈಗಿನದಕ್ಕಿಂತ ಭಿನ್ನವಾಗೇನು ಇರಲಿಲ್ಲವೇನೊ ಎನ್ನುವ ಅನಿಸಿಕೆಯನ್ನು ಮೂಡಿಸುತ್ತದೆ – ಅವರು ಜಗದ ಕಥೆಯ ಮಾತಾಡುವಾಗ. ಬಹುಶಃ ‘ಕಾಲ ಕೆಟ್ಟು ಹೋಯಿತು’ ಎನ್ನುವ ಉದ್ಗಾರ ಪ್ರತಿ ಪೀಳಿಗೆಯಲ್ಲು ಅನುರಣಿತವಾಗುವ ಸರಕೊ ಏನೊ – ಅದರರ್ಥ ಗಹನತೆಯ ವ್ಯಾಪ್ತಿಯ ಅಸೀಮ ಚೌಕಟ್ಟನ್ನು ಮೀರಿ.