ಲೇಖಕರು: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್, ಪುಣೆ

 

ದೇಹದೃಷ್ಟಿಯಿಂದ ಅವಳು ಹೇಗೆ ನಿನ್ನ ಮಗಳೋ ಅದೇ ರೀತಿ ಆಧ್ಯಾತ್ಮ ದೃಷ್ಟಿಯಿಂದ ಅವಳು ನನ್ನದೇ ಸಂತಾನ ಆಗಿದ್ದಾಳೆ.
(ಇಸವಿ ಸನ ೧೯೪೬ರಲ್ಲಿ ಕುಮಾರಿ ರಾಧಾಳ ತಂದೆಗೆ ಅವಳ ಲಗ್ನದ ಸಂದರ್ಭದಲ್ಲಿ ಬರೆದ ಪತ್ರದ ಮುಂದುವರಿದ ಎರಡನೆಯ ಭಾಗ)

‘ಗುರುವಾಕ್ಯದ ಮಾರ್ಗದಲ್ಲಿ ಹೋಗುತ್ತಿರುವಾಗ ಬ್ರಹ್ಮಾಂಡವೇ ಉರುಳಿಬಿದ್ದರೂ ಯಾರ ಶುದ್ಧ ಗತಿವಿಧಿಯಲ್ಲಿ ಎಳ್ಳಷ್ಟೂ ಬದಲಾವಣೆಯಿಲ್ಲವೋ ಅದೇ ಸಚ್ಛಿಷ್ಯನ ಮುಖ್ಯ ಲಕ್ಷಣ! ಅಹಾ! ಅದೆಂತ ಗುರುವಚನದಲ್ಲಿ ಸಂಪೂರ್ಣ ವಿಶ್ವಾಸ!
ಮುಂದಿನ ಪರಿಸ್ಥಿತಿ ಕಣ್ಮುಂದೆ ಕಾಣುತ್ತಲೇ ಇದ್ದಾಗ್ಯೂ ‘ಸದ್ಗುರುವಿನ ಅಪ್ಪಣೆಯ ವಿರುದ್ಧ ಮಗಳ ಮದುವೆ ಮಾಡಲು ನಾನು ಸಿದ್ಧನಿಲ್ಲ!’ ಈ ನಿನ್ನ ವಾಕ್ಯ ನನಗೆ ಅದೆಷ್ಟು ಸಮಾಧಾನ ಕೊಡುತ್ತಿದೆ! ಇದು ಗುರುಭಕ್ತಿಯ ಓರೆಗಲ್ಲೇ ಅಲ್ಲವೇ?
ಶ್ರೀ ಸಮರ್ಥ ಮಾತೆ ಶ್ರೀಮತಿ ರಾಣುಬಾಯಿಯ ಉದಾಹರಣೆ ಕಣ್ಮುಂದೆ ತಂದುಕೊಂಡರೆ ನಿನ್ನ ಚಿಂತೆಯ ಸುಂಟರಗಾಳಿ ಶಾಂತವಾಗುತ್ತದೆ.
ನಿನ್ನ ಪತ್ರದಲ್ಲಿ ಮುಂದೆ – ಮುಂದೆ ಕಂಡುಬರುವ ಯಾರೆಲ್ಲ ತಲೆಯ ಮೇಲೆ ಬೂದಿ ಹೊಯ್ದರೆಂಬ ಆಕ್ಷೇಪಕ್ಕೂ ಕೂಡ ಯಾವುದೇ ಕಾರಣವಿರುವದಿಲ್ಲ. ಪ್ರತಿಯೊಂದು ಬಿಕ್ಕಟ್ಟಿನ ಪ್ರಸಂಗ ಮತ್ತು ವಿವೇಕಶೂನ್ಯ ಜನಪ್ರಕೋಪವೂ ಆಧ್ಯಾತ್ಮಿಕ ಭೂಮಿಕೆಯ ಉನ್ನತಿಗೇ ಎಂದಾದ ಮೇಲೆ ನಿರಾತಂಕ ಸ್ವಹಿತದ ದೃಢ ನಿಶ್ಚಯದ ಜೀವನದಲ್ಲಿ ಮನಃಸಂತಾಪಕ್ಕೆ ಕಾರಣವೆಲ್ಲಿರುತ್ತದೆ?
ಆಕಾಶ-ಪಾತಾಳಗಳನ್ನು ಒಂದು ಕ್ಷಣದಲ್ಲಿ ಒಂದು ಮಾಡಿ ಬಿಡುವ ಪ್ರಚಂಡ ಶಕ್ತಿ ಮನಸ್ಸಿಗಿದೆ. ನಿನ್ನ ಆ ಮನಸ್ಸಿಗೆ ಸ್ಥಿರತೆ ಮತ್ತು ಶಾಂತಿ ಸ್ಥಾಪಿಸಲೆಂದೇ ನಾನು ಈ ಪತ್ರ ಮುದ್ದಾಂ ನಿನಗೆ ಬರೆಯುತ್ತಿದ್ದೇನೆ.
ನನ್ನ ಕಡೆಯಿಂದ ಏನಾದರೂ ನ್ಯೂನ್ಯತೆ ಆಗಿದ್ದಲ್ಲಿ ನಾನೇ ಅದರ ಹೊಣೆ ಹೊರುತ್ತೇನೆ; ಅಪಯಶಸ್ಸಿನ ಮಡಿಕೆಯೇ ನನ್ನ ತಲೆಯ ಮೇಲೆ ಒಡೆದು ಚೂರಾದರೂ ಮತ್ತು ಎಲ್ಲ ಜನರ ಉಪಹಾಸಕ್ಕೆ ನಾನು ಕಾರಣನಾದರೂ ಯಾವುದೇ ಚಿಂತೆ ಮಾಡದೇ, ಆನಂದದಿಂದಲೇ ಸಹಿಸುತ್ತೇನೆ. ನನಗೆ ಎಷ್ಟು ಬೇಕಾದರೂ ಕಾರಣ ಕೊಟ್ಟು ಸಹಜವಾಗಿಯೇ ತಪ್ಪಿಸಿಕೊಳ್ಳಲು ಶಕ್ಯವಿದ್ದರೂ, ಬೇರೆಯವರದೇ ತಪ್ಪೆಂದು ಪ್ರಮಾಣ ಸಹಿತ ಸಿದ್ಧ ಮಾಡಲಿಕ್ಕೆ ಬರುತ್ತಿದ್ದರೂ, ಹಾಗೆ ಮಾಡಬೇಕೆಂದು ನನ್ನ ನವಿರು ಮನಕ್ಕೆಂದೂ ಬರುವದೇ ಇಲ್ಲ. ಪರಿಸ್ಥಿತಿಯಿಂದ ನರಕಬಾಧೆ ಅನುಭವಿಸುತ್ತಿರುವ, ಸಂಕಷ್ಟಗಳ ಬೆಂಕಿಯಿಂದ ಹುರಿದು ಹೊರಪಲಾಗುತ್ತಿರುವ ಮನಸ್ಸಿನ ಸ್ವಸುರಕ್ಷತೆಯ ದೃಷ್ಟಿಯಿಂದ ಅದು ಸಮರ್ಪಕವೇ ಇದ್ದರೂ ನಾನು ಆ ರಾಕ್ಷಸೀ ಕಾರ್ಯ ಮಾಡುವದಿಲ್ಲ. ನನ್ನ ನಿರ್ಮಲ ಜೀವನದಲ್ಲಿ ಈ ಜಗತ್ತಿನ ಸಂಕಷ್ಟ ಅಥವಾ ಕೀರ್ತಿ-ಸಮ್ಮಾನ ಇವೆಲ್ಲಾ ಅರ್ಥವಿಲ್ಲದ ಶಬ್ಧಗಳು. ಆಧ್ಯಾತ್ಮ ದೃಷ್ಟಿಯ ಉನ್ನತಿ – ಬೆಳವಣಿಗೆ – ಪ್ರಗತಿಯಿಂದ ಜನಹಿತ ಮಾಡುವದೇ ನನ್ನ ಜೀವನದ ಒಂದೇ ಒಂದು ಉದ್ದೇಶ!
ಇಂದು ಮೂರು-ನಾಲ್ಕು ವರ್ಷಗಳಿಂದ ಚಿ|ರಾಧೆಯ ಭೂಮಿಕೆ ಉನ್ನತವಾಗುತ್ತಿದೆ. ಬಹಳಿಷ್ಟು ಪತ್ರ ಬರೆದಿದ್ದೇನೆ. ಚಿಕ್ಕಮಗಳೂರಿನ ವಾಸ್ತವ್ಯದ ವೇಳೆ ಸಹಜ ಮಾತುಕತೆಗಳಲ್ಲಿ, ಪ್ರವಚನ ಮೊದಲಾದವುಗಳಲ್ಲಿ ಮನಸ್ಸಿನ ಶಂಕಾ ಸಮಾಧಾನ ಸ್ವತಃ ಮಾಡಿದ್ದೇನೆ. ಅನೇಕ ಸ್ವಪ್ನ ದೃಷ್ಟಾಂತಗಳಿಂದಲೂ ಆಕೆಯ ಆಧ್ಯಾತ್ಮ ಭೂಮಿಕೆಯನ್ನು ಹೆಚ್ಚಿಸಿದ್ದೇನೆ. ‘ದೇಹದೃಷ್ಟಿಯಿಂದ ಅವಳು ಹೇಗೆ ನಿನ್ನ ಮಗಳೋ ಅದೇ ರೀತಿ ಆಧ್ಯಾತ್ಮ ದೃಷ್ಟಿಯಿಂದ ಅವಳು ನನ್ನದೇ ಸಂತಾನ ಆಗಿದ್ದಾಳೆ’ – ಹೀಗೆ ರೂಪಕವಾಗಿ ನಾನು ಬರೆದರೂ ಅಂತಃಕರಣದ ಭಾವನೆಗಳ ಪಾವಿತ್ರ್ಯ ಮತ್ತು ಮನಸ್ಸಿನ ಕಳಕಳಿ ಎತ್ತಿ ತೋರಿಸಲು ಪೋಷಕವೇ ಆಗುತ್ತದೆ. ಅವಳ ಐಹಿಕ ಜೀವನದ ಪ್ರಶ್ನೆ ಹೇಗೆ ನಿನ್ನ ಮುಂದಿದೆಯೋ ಅದೇ ರೀತಿ ಅವಳ ಆಧ್ಯಾತ್ಮಿಕ ಉಜ್ವಲತೆಯ, ಐಹಿಕ ಮತ್ತು ಪಾರಲೌಕಿಕ ಜೀವನದ ಯೋಜನೆ ನನ್ನ ದೃಷ್ಟಿಯಲ್ಲೂ ಇದೆ.
(ಪತ್ರದ ಮುಂದಿನ ಭಾಗ ಮುಂದುವರಿಯುವದು)

RELATED ARTICLES  ದಿನದ ದೀವಿಗೆ