ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |ನಚ್ಚುವುದೆ ಮರೆಯೋಲಿಹುದನೆ ಸತ್ಯವೆಂದು ? ||ಅಚ್ಚರಿಯ ತಂತ್ರವಿದು ಬ್ರಹ್ಮ ಸೃಷ್ಟಿಗಳೇಕೋ |ಮುಚ್ಚಿಹವು ಸಾಜತೆಯ- ಮಂಕುತಿಮ್ಮ ||

  • ನಚ್ಚುವುದು = ನೆಚ್ಚುವುದು, ನಂಬುವುದು, ಇಹುದನೆ = ಇರುವುದನ್ನು , ಸಾಜತೆಯ = ಸಹಜತೆಯ.
  • ಸತ್ಯವಾದ ಆ ಪರಮಾತ್ಮವಸ್ತು ಅಸತ್ಯವಾದ ಈ ಸೃಷ್ಟಿಯ ಹಿಂದೆ ಬಚ್ಚಿಟ್ಟುಕೊಂಡಿರುವುದೇ? ಜಗತ್ತು ಕಾಣುತ್ತದೆ. ಇಂದ್ರಿಯ ಗ್ರಾಹ್ಯ. ಇದನ್ನು ಮಿಥ್ಯವೆಂದು ಅಸಥ್ಯವೆಂದು ಹೇಳುತ್ತಾರೆ. ಆದರೆ ಅದನ್ನು ಸೃಜಿಸಿದ ಶಕ್ತಿ ಕಾಣುವುದಿಲ್ಲ. ಭಾವಿಸಬಹುದು ಮತ್ತು ಕೇವಲಅನುಭವ ವೇಧ್ಯ. ಅದನ್ನು ಸತ್ಯವೆನ್ನುತ್ತಾರೆ.ಕಣ್ಣಿಗೆ ಕಾಣದೆ, ಮರೆಯಲ್ಲಿರುವುದನ್ನು ಸತ್ಯವೆಂದು ನಂಬುವುದು ಹೇಗೆ. ಈ ಸೃಷ್ಟಿಕರ್ತ ಮತ್ತು ಅವನ ಸೃಷ್ಟಿಯ ತಂತ್ರ ಬಹಳ ಆಶ್ಚರ್ಯಕರವಾದವು ಮತ್ತು ಸಹಜತೆಯು ಮುಚ್ಚಿಹುದು, ಸ್ಪಷ್ಟವಿಲ್ಲದೆ ,ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.
  • ನೋಡಿ ಒಂದು ಮಗುವಿಗೆ ಆನೆಯನ್ನು ನೀವು ಬಹಳ ಚೆನ್ನಾಗಿ ವಿವರಿಸುತ್ತೀರಿ. ದೊಡ್ಡ ಕಿವಿ, ಸಣ್ಣ ಕಣ್ಣು, ಸಣ್ಣ ಬಾಲ, ಬೃಹತ್ತಾದ ದೇಹ ಮತ್ತು ಕಾಲುಗಳು, ಒಂದು ದೊಡ್ಡ ಸೊಂಡಿಲು ಎಂದು ಎಷ್ಟು ಹೇಳಿದರೂ ಆ ರೂಪವನ್ನು ಆ ಮಗು ಕಲ್ಪಿಸಿಕೊಳ್ಳಲು ಸಾಧ್ಯವೇ?. ಇಲ್ಲ. ಬದಲಿಗೆ ಅದಕ್ಕೊಂದು ಆನೆಯನ್ನು ತೋರಿಸಿ, ಇದು ಆನೆ ಎಂದು ಹೇಳಿದರೆ. ಮುಂದೆ ಅದಕ್ಕೆ ಆನೆ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ನಿಜವಾದ ಆನೆಯ ರೂಪ ಅದರ ಮನಸ್ಸಿಗೆ ಬರುತ್ತದೆ ಮತ್ತು ಬೇರೆ ರೂಪವನ್ನಲ್ಲ. ಆದರೆ ನಮಗೆ ಯಾರೂ ಆ ಪರಮಾತ್ಮನನ್ನು ತೋರಿಸಿಲ್ಲ.
  • ಹಾಗಿರಬೇಕಾದರೆ ನಾವು ಯಾವುದನ್ನು ಪರಮಾತ್ಮ ಎಂದು ನಂಬುವುದು. ಹಾಗೆ ನಾವು ಕಾಣದೆ ಇರುವ, ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಒಂದು ವಸ್ತುವನ್ನು ಸತ್ಯವೆಂದೂ, ಕಣ್ಣಿಗೆ ಕಾಣುವ ಮತ್ತು ನಮ್ಮ ನಿತ್ಯಜೀವನದಲ್ಲಿ ನೋಡುವ ಅನುಭವಿಸುವ ಮತ್ತು ಒಡನಾಡುವ ವಸ್ತು, ವ್ಯಕ್ತಿ ವಿಷಯಗಳನ್ನು ಸುಳ್ಳು ಅಥವಾ ಮಿಥ್ಯೆ ಎನ್ನುವುದು, ಏನಿದು ತಂತ್ರ ಎನ್ನುತ್ತಾರೆ ಶ್ರೀ ಗುಂಡಪ್ಪನವರು.
  • ನಮ್ಮ ಋಷಿ ಮುನಿಗಳು ಬಹಳ ಗಹನವಾದ ತತ್ವವನ್ನು ಪ್ರತಿಪಾದಿಸಿದ್ದಾರೆ. ಜಗತ್ತಿನಲ್ಲಿ ಯಾರೂ ಕಾಣದನ್ನು ಬಹಳ ಹಿಂದೆಯೇ ಅನುಭವದಿಂದ ಕಂಡುಕೊಂಡಿದ್ದಾರೆ. ತೆಲುಗಿನಲ್ಲಿ ಒಬ್ಬ ನಮ್ಮ ಗುಂಡಪ್ಪನವರಂತೆಯೇ ಒಬ್ಬ ತತ್ವಪ್ರತಿಪಾದಕ ಕವಿ, ವೇಮನ. ಸರಿ ಸುಮಾರು ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಜನಿಸಿದ ಈ ಕವಿ ನಮ್ಮ ಗುಂಡಪ್ಪನವರ ಕಗ್ಗಗಳ ರೂಪದಲ್ಲಿಯೇತತ್ವಪ್ರತಿಪಾದಕ ಕೃತಿ” ವೇಮನ ಶತಕ” ವನ್ನು ರಚಿಸಿದ್ದಾರೆ. ಅವರು ಬರೆಯುತ್ತಾರೆ ” ಇಂದು ಗಲಡು ಅಂದು ಲೇಡನಿ ಸಂದೇಹಮು ವಲದು, ಚಕ್ರಿ ಎದೆಂದು ವೆಥಿಕಿತೆ ಅದಂದೆ ಗಲಡು” ಎಂದು. ಇಲ್ಲಿರುವ ಅಲ್ಲಿ ಇಲ್ಲ ಎಂಬ ಸಂದೇಹವು ಬೇಡ ಆ ಚಕ್ರಧಾರಿಯು ಎಲ್ಲೆಲ್ಲಿ ಹುಡುಕಿದರೆ ಅಲ್ಲಲ್ಲಿ ಕಾಣುವ” ಎನ್ನುತ್ತಾರೆ.
  • ಆ ಪರಮಾತ್ಮನ ಸರ್ವಪ್ಯಾಪಕತ್ವವನ್ನು ಪ್ರತಿಪಾದಿಸುವ ಸಾಹಿತ್ಯ ನಮ್ಮಲ್ಲಿ ಹೇರಳವಾಗುಂಟು. ” ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ” ಎನ್ನುವ ಶಿವಶರಣರು, ” ಆ ಪರಮಾತ್ಮ ಎಲ್ಲಕಡೆಯೂ ಇರುವುದರಿಂದ, ಈ ಬಾಳೆ ಹಣ್ಣನ್ನು ನಾ ಮರೆಯಲ್ಲಿ ತಿನ್ನಲಾಗಲಿಲ್ಲ” ಎಂದು ತನ್ನ ಗುರುಗಳಿಗೆ ಹೇಳಿದ ನಮ್ಮ ಕನಕದಾಸರು. ಎಲ್ಲರೂ ಆ ಕಾಣದ ದೈವದ ಸರ್ವವ್ಯಾಪಕತ್ವವನ್ನು ಪ್ರತಿಪಾದಿಸಿದ್ದಾರೆ.
  • ಕಾಣದ್ದೆಲ್ಲ ಅಸತ್ಯವೆಂದು ಹೇಳುವುದು ತಪ್ಪು. ಪ್ರೀತಿ ಪ್ರೇಮಗಳು ಕಾಣದಿದ್ದರೂ ಅದರ ಅನುಭವವಾಗುವುದಿಲ್ಲವೇ? ಗಾಳಿ ಕಾಣದಿದ್ದರೂ ನಮ್ಮನ್ನೆಲ್ಲ ಜೀವಂತವಾಗಿರಿಸಿಲ್ಲವೇ? ನಮಗೆ ವಿದ್ಯುತ್ ಕಣ್ಣಿಗೆ ಕಾಣದಿದ್ದರೂ ಬೆಳಕು ಬರುವುದಿಲ್ಲವೇ? ಕಾಣುವುದಿಲ್ಲವಲ್ಲ ಎಂದು ಪರೀಕ್ಷಿಸಲು ಕೈ ಇಟ್ಟು ನೋಡಿ. ಅಷ್ಟೇ ನಿಮ್ಮನ್ನೇ ಬಲಿ ತೆಗೆದುಕೊಂಡು ಬಿಡುತ್ತೆ. ಅಲ್ಲವೇ? ಹಾಗೆ ನಾವು ನಮಗೆ ಕಣ್ಣಿಗೆ ಕಾಣವುದು ಮಾತ್ರ ಸತ್ಯ ಕಾಣದ್ದೆಲ್ಲ ಸುಳ್ಳು ಅಸತ್ಯವೆಂದು ಹೇಳಲಾಗುವುದಿಲ್ಲ. ಇದ್ದರೂ ಕಾಣದ ಆದರೆ ಸತ್ಯವೆನ್ನಿಸಿಕೊಳ್ಳುವ, ಈಗಕಂಡರೂ ಬದಲಾಗುತ್ತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಸತ್ಯವೆನ್ನಿಸಿಕೊಳ್ಳುವ ಈ ಪರಮಾತ್ಮ ಜಗತ್ಸಂಬಂಧವನ್ನೇ ಗುಂಡಪ್ಪನವರು ಅಚ್ಚರಿಯ ತಂತ್ರ ಎನ್ನುತ್ತಾರೆ.
  • ಕಾಣದ ದೇವರು ಮತ್ತು ಕಾಣುವ ಈ ಜಗತ್ತು ಇವುಗಳ ಬಾಂಧವ್ಯವೆ ಈ ಜಗದ್ವ್ಯಾಪಾರ. ಆದರೆ ಒಂದು ಶಕ್ತಿ, ಕಣ್ಣಿಗೆ ಕಾಣದಿದ್ದರೂ ತನ್ನ ಪ್ರಭಾವ ಮತ್ತು ಪ್ರತಾಪವನ್ನು ಎಲ್ಲ ಕಡೆಯೂ ಬೀರುತ್ತಿರುವ ಅತ್ಯುತ್ತಮ ಶಕ್ತಿ, “ಪರಮ ಪೌರುಷವನ್ನು” ಪಡೆದಿರುವ ಪರಮ ಪುರುಷನೆಂದು ಕರೆಯಲ್ಪಡುವ ಆ ಶಕ್ತಿಯೇ ಎಲ್ಲವೂ ಆಗಿರುವಾಗ, ನಾವು ಅದನ್ನು ನಂಬದೆ ಬೇರೆ ಗತ್ಯಂತರವೇ ಇಲ್ಲ. ನಂಬದೆ ಸತ್ಯ-ಮಿಥ್ಯೆಗಳ ದ್ವಂದ್ವಗಳಲ್ಲಿ ತೊಳಲಾಡುವುದಕ್ಕಿಂತ, ನಂಬಿ ನೆಮ್ಮದಿಯಿಂದ ಇರಬಹುದಲ್ಲವೇ? ನಮ್ಮ ಭಾರತೀಯ ಸಿದ್ಧಾಂತಗಳಲ್ಲಿ ಪ್ರತಿಪಾದಿಸಲ್ಪತ್ತಂತೆ ಎಲ್ಲವೂ ಆ ಪರಮಾತ್ಮನೇ ಆದಮೇಲೆ ನಾನು, ನೀವು, ಅವನು, ಅವಳು, ಇದು, ಅದು, ಎಲ್ಲವೂ ಆ ಪರಮ ಶಕ್ತಿಯ ಸ್ವರೂಪವೇ ಎಂದಮೇಲೆ, ಎಲ್ಲವನ್ನೂ ಪ್ರೀತಿ ಪ್ರೇಮ ವಿಶ್ವಾಸದಿಂದ ಕಂಡು ಒಂದು ಸೌಹಾರ್ಧಯುತವಾದ ಬಾಳು ನಡೆಸಲು ಸಾಧ್ಯವಲ್ಲವೇ?
RELATED ARTICLES  ಬದುಕಿಗೆ ಬಣ್ಣ ತುಂಬಿದವರು