ಭಟ್ಕಳ : ತಾಲೂಕಿನಲ್ಲಿಯೇ ಅತಿ ದೊಡ್ಡ ಜಾತ್ರೆ ಎಂದು ಕರೆಸಿಕೊಳ್ಳುವ ಸುಪ್ರಸಿದ್ದ ಮಾರಿ ಜಾತ್ರೆ ವಿದ್ಯುಕ್ತವಾಗಿ ಆರಂಭಗೊಂಡಿದೆ.
ಜನತೆಯ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವ ದೇವಿ ಎಂತಲೇ ಕರೆಸಿಕೊಳ್ಳುವ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಮಣ್ಕುಳಿಯ ಮಾರುತಿ ಆಚಾರಿಯವರ ಮನೆಯಿಂದ ಬೆಳಗಿನ ಜಾವ 5ಕ್ಕೆ ಹೊರಟು 6 ಗಂಟೆಗೆ ಪೂಜಾ, ಪುನಸ್ಕಾರಗಳೊಂದಿಗೆ ಮೆರವಣಿಗೆಯಲ್ಲಿ ವೆಭವದಿಂದ ತಂದು ಮಾರಿಗುಡಿ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗಿದೆ.
ಮುಂಜಾನೆಯಿಂದಲೇ ದೂರ ದೂರದ ಊರಿನಿಂದ ಬಂದಿರುವ ಭಕ್ತರು ಮಾರಿಯಮ್ಮನಿಗೆ ಪೂಜೆ, ಹರಕೆ ಸಲ್ಲಿಸುವಲ್ಲಿ ನಿರತರಾದರು. ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಈ ಜಾತ್ರೆ ತನ್ನದೇ ಆದ ಹತ್ತು ಹಲವಾರು ವಿಶೇಷತೆಗಳಿಂದ ಅತ್ಯಂತ ಶೃದ್ಧಾ ಭಕ್ತಿಯಿಂದ ಸಂಪ್ರದಾಯಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಯಾವ ಕಾರಣಕ್ಕಾಗಿ ಮಾರಿ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದಾರೆ ಅನ್ನೋದಕ್ಕೆ ಹಲವಾರು ವರ್ಷಗಳ ಹಿಂದೆ ನಡೆದ ದೊಡ್ಡ ಕಥೆಯೇ ಇದೆ. ಅತ್ಯಂತ ಸಂಪ್ರದಾಯ ಬದ್ದವಾದ ಮನೆತನದ ಹೆಣ್ಣೊಬ್ಬಳನ್ನು ವರಿಸುವ ಕೆಳವರ್ಗದ ಗಂಡನನ್ನು ಮಾರಿಯಾಗಿ ಬೆನ್ನಟ್ಟಿದ ಕಥೆ ಒಂದುಕಡೆಯಾದರೆ. ಊರಿಗೆ ಬರುವ ಸಾಂಕ್ರಾಮಿಕ ಕಾಯಿಲಿಗೆಳನ್ನೂ ದೂರಿಕರಿಸುವ ಒಂದು ಸಮಾಜದ ನಂಬಿಕೆಯ ಶಕ್ತಿ ಸ್ವರೂಪಳಾಗಿಯೂ ಮಾರಿಯಮ್ಮನ್ನು ಪೂಜಿಸಲಾಗುತ್ತಿದೆ. ಎರಡು ದಿನಗಳ ಕಾಲ ಮಾರಿಕಾಂಬೆಯ ಗದ್ದುಗೆಯಲ್ಲಿ ಪೂಜಿಸುವ ಮಾರಿಯಮ್ಮನನ್ನು ಎರಡನೆ ದಿನ ಸಂಜೆ ಸಹಸ್ರಾರು ಭಕ್ತರ ಮೆರವಣಿಗೆಯೊಂದಿಗೆ ಸುಮಾರು ಐದಾರು ಕಿ.ಮೀ.ದೂರದ ಜಾಲಿಕೋಡಿಯ ಸಮುದ್ರ ತೀರದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಮರದಿಂದ ಮಾಡಿದ ಈ ಮಾರಿಯಮ್ಮನ ಮೂರ್ತಿಯ ಕೈ ಕಾಲು ರುಂಡ ಮುಂಡಗಳನ್ನು ಬೇರ್ಪಡಿಸಿ ಯಾವ ರೋಗ ರುಜಿನಗಳು ಊರಿಗೆ ಬಾರದಿರಲಿ ಎಂದು ತಮ್ಮ ನಂಬಿಕೆಯಲ್ಲಿಯೇ ಆಸ್ತಿಕರು ಬೇಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಸಮುದ್ರ ದಂಡೆಯಲ್ಲಿ ಸೇರುತ್ತಾರೆ.
ಈ ಹಿಂದೆ ಮಾರಿಯಮ್ಮನಿಗೆ ತಮ್ಮ ಸಂಕಷ್ಟ ನಿವಾರಣೆಯಾದರೆ ಕುರಿ ಕೋಳಿಗಳನ್ನು ಬಲಿ ಕೊಡುತ್ತೇನೆ ಎಂದು ಹರಕೆ ಹೊತ್ತ ಭಕ್ತರು ಮಾರಿಕಟ್ಟೆಯಲ್ಲೇ ಕುರಿ ಕೋಳಿಗಳನ್ನು ಬಲಿ ಕೊಡುವ ಪದ್ದತಿ ರೂಢಿಯಲ್ಲಿತ್ತು ಎಂದು ಹಿರಿಯರು ಹೇಳುತ್ತಾರೆ. ಆದರೆ ಸರಕಾರದ ಪ್ರಾಣಿ ಬಲಿ ನಿಷೇಧ ಕಾಯ್ದೆಯ ಅನ್ವಯ ಸಮಾಜದ ಒಪ್ಪಿಗೆ ಮೇರೆಗೆ ಇಂದಿಲ್ಲಿ ಯಾವುದೇ ಬಲಿ ಕೊಡುವ ಪದ್ಧತಿ ನಿಲ್ಲಿಸಲಾಗಿದೆ. ಆದ್ದರಿಂದ ಭಕ್ತರು ಮಾರಿಯಮ್ಮನಿಗೆ ಹೂವು ಹಣ್ಣು, ಬೆಳ್ಳಿಯ ಕಣ್ಣು, ಹಸಿರು ಬಳೆ, ಉಡಿ, ಸೀರೆ, ಬಣ್ಣ ಬಳಿಯುವುದು, ಹೂವಿನ ಟೋಪಿ ಮುಂತಾದ ಸೇವೆಗಳನ್ನು ಒಪ್ಪಿಸುವ ಮೂಲಕ ಶ್ರೀ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಮಾರಿಜಾತ್ರೆಯನ್ನು ಸಹ ಅನೇಕ ತಲಾಮಾರಿನಿಂದ ಮಾರಿಕಟ್ಟೆಯಲ್ಲಿದ್ದ ಆಲದ ಮರವೊಂದರ ಬುಡದಲ್ಲಿ ಆಚರಿಸಲಾಗುತ್ತಿತ್ತಾದರೂ ಕ್ರಮೇಣ ಬದಲಾವಣೆಗೆ ತಕ್ಕಂತೆ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ ಮಾರಿಗುಡಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಆಷಾಢ ಅಮವಾಸ್ಯೆಯ ಹಿಂದಿನ ಗುರುವಾರಕ್ಕೆ ಎಂಟು ದಿನ ಮೊದಲು ಊರ ಹೊರಗಿರುವ ಒಂದು ಅಮಟೆ ಮರವನ್ನು ಆರಿಸಿ ಅದಕ್ಕೆ ಶ್ರದ್ಧೆ ,ಭಕ್ತಿಯಿಂದ ಪೂಜೆ ಪುನಸ್ಕಾರ ಮಾಡಿ ಅದನ್ನು ಕಡಿಯಲಾಗುತ್ತದೆ. ಸಂಪ್ರದಾಯದಂತೆ ಮರವನ್ನು ಮಣ್ಕುಳಿಕೇರಿಯ ಮಾರುತಿ ಆಚಾರಿಯವರ ಮನೆಗೆ ತಂದು ತಲುಪಿಸಲಾಗುತ್ತದೆ. ಮಂಗಳವಾರದಿಂದ ಆಚಾರಿ ಮನೆಯವರು ತಮ್ಮದೇ ಮನೆಯಲ್ಲಿ ಮಾರಿಯನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಜಾತ್ರೆ ಹಿಂದಿನ ದಿನ ರಾತ್ರಿ ಅಂದರೆ ಮಂಗಳವಾರ ಆಚಾರಿ ಮನೆಯವರು ಸಮಾಜದವರಿಗೆಲ್ಲಾ ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಆ ದಿನ ರಾತ್ರಿ ಅವರ ಮನೆಯಲ್ಲಿಯೇ ವಿಜಂಭಣೆಯಿಂದ ಪೂಜಿಸಲ್ಪಡುವ ಮಾರಿಯಮ್ಮ ತನ್ನ ಭಕ್ತರ ರಕ್ಷಣೆಗಾಗಿ ಬುಧವಾರ ಬೆಳಗ್ಗೆ ಮಾರಿಗುಡಿಗೆ ಆಗಮಿಸುತ್ತಾಳೆ. ಆಚಾರಿಯವರ ಮನೆಯಲ್ಲಿ ಪೂಜೆ ಸಲ್ಲಿಸಿ ಬಿಟ್ಟುಕೊಟ್ಟ ನಂತರ ಮಾರಿ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತದೆ.
ಮಾರಿ ಜಾತ್ರೆಯಲ್ಲಿ ಮಾರಿಕಾಂಬಾ ದೇವಾಲಯದಲ್ಲಿ ಇರುವ ಮಾರಿಯಮ್ಮನ ಪ್ರತಿಮೆಯ ಎದುರು ಸಂಪ್ರದಾಯದಂತೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಮೊದಲನೇ ದಿನ ತಾಲೂಕಿನ ಗ್ರಾಮೀಣ ಭಾಗದವರು ಅಂದರೆ ದೂರದೂರದ ಊರಿನವರು ಬಂದು ಪೂಜೆ, ಸೇವೆ ಸಲ್ಲಿಸಿದರೆ, ಮಾರನೆಯ ದಿನ ನಗರ ಭಾಗದವರು ಪೂಜೆ ಪುನಸ್ಕಾರ ಮಾಡುತ್ತಾರೆ.
ಮಾರಿಯಮ್ಮನಿಗೆ ತಮ್ಮ ಕಷ್ಟಕಾರ್ಪಣ್ಯಗಳು ದೂರವಾಗಲೆಂದು ಹರಕೆ ಹೊತ್ತವರು ಒಪ್ಪಿಸುವ ಸಲುವಾಗೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.ಹೊಸದಾಗಿ ಮದುವೆಯಾದ ಮದುಮಕ್ಕಳಿಗೂ ಇದು ಮೊದಲ ಸಂಭ್ರಮದ ಕ್ಷಣವೂ ಹೌದು. ಎರಡು ದಿನ ಮಾತ್ರ ಜಾತ್ರೆ ನಡೆಯುತ್ತದಾದರೂ ಎರಡೇ ದಿನದಲ್ಲಿ ಸಹಸ್ರಾರು ಭಕ್ತರು ಬಂದು ಜಾತ್ರೆಯಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸಿ ಕೃತಾರ್ತರಾಗುತ್ತಾರೆ. ಶಕ್ತಿಯ ಪ್ರತೀಕವಾದ ಮಾರಿಯಮ್ಮನಿಗೆ ಬೆಳ್ಳಿಯ ಕಣ್ಣು,ಹೂವಿನ ಟೊಪ್ಪಿ ಒಪ್ಪಿಸುವುದು ಇಲ್ಲಿನ ವಿಶೇಷತೆಗಳಲ್ಲೊಂದು. ಈ ಬೆಳ್ಳಿಯ ಕಣ್ಣುಗಳನ್ನು ಮಾರಲೆಂದೇ ಸುವರ್ಣಕಾರರ ಸಮಾಜದ ಜನರು ಅಲ್ಲಲ್ಲಿ ನಿಂತು ಕಣ್ಣು ಕಣ್ಣು ಎಂದು ಕೂಗುವ ಶಬ್ದವೇ ಜಾತ್ರೆಯ ಕಳೆ ತಂದಿರುತ್ತದೆ. ಭಕ್ತರ ಹೆಸರಲ್ಲಿ ದೇವಿಗೆ ಬಣ್ಣ ಬಳಿಯುವ ಹರಕೆಯು ನಡೆಯುತ್ತದೆ.
ಒಟ್ಟಿನಲ್ಲಿ ಮಳೆಗಾಲದ ಆರಂಭದ ಹಬ್ಬ ಸಂಬಂಧಿಗಳನ್ನು ಒಂದೂಗೂಡಿಸುವ ,ಹೊಸ ಮದುಮಕ್ಕಳಿಗೆ ಸಂಭ್ರಮಿಸುವ, ಮಳೆ ಗಾಳಿಗೆ ಅಲ್ಲಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳು ದೂರಾಗಲಿ ಎಂದು ಜನ ಭಕ್ತಿಯಿಂದ ಬಿದ್ದು ಬೇಡುವ ನಂಬುಗೆಯ ಅತ್ಯಂತ ಅರ್ಥಪೂರ್ಣ ಹಬ್ಬ ಎನ್ನುವುದು ಎಲ್ಲರ ಅಂಬೋಣ.