ಭಾಷೆ ಅಬ್ಬಬ್ಬಾ! ದೇವರು ಕೊಟ್ಟಂತಹ ಅತ್ಯಮೂಲ್ಯ ವರಗಳಲ್ಲೊ0ದು. ಹೌದು ಅಕ್ಷರಶಃ ನಿಜ ಮಾನವರ ನಡುವೆ ಅಥವಾ ಯಾವುದೇ ಜೀವಿಗಳ ನಡುವೆ ಒಂದು ಸಂವಹನ ಮಾದ್ಯಮವೇ ಭಾಷೆ. ವಾಸ್ತವವಾಗಿ ಈ ಭಾಷೆಗೆ ನಿಜವಾದ ರೂಪವೇ ಇಲ್ಲ,ಕಾರಣಗಳನ್ನು ಹಲವಾರು ನೀಡಬಹುದು, ಮಾತುಬಾರದಿದ್ದವರಿಗೂ ಒಂದು ಭಾಷೆಯಿದೆ, ಕಲೆಯಲ್ಲಿ ಬಾಷೆಯಿದೆ,ಭಾವನೆಗಳಲ್ಲಿ ಭಾಷೆಯಿದೆ,ಗತಕಾಲದ ಇತಿಹಾಸದ ಚರಿತ್ರೆಯಲ್ಲಿನ ಗ್ರಂಥ ಮತ್ತು ಸಾಹಿತ್ಯಗಳಲ್ಲಿ ಕಾವ್ಯಭಾಷೆಯ ಉಲ್ಲೇಖವಿದೆ.ಹೀಗೆ ಹಲವಾರು ಭಾಷೆಗಳ ರೂಪಗಳಿವೆ ಸಂದರ್ಭಕ್ಕನುಗುಣವಾಗಿ ವಿಚಾರಕ್ಕೆ ತಕ್ಕಂತೆ ಪ್ರಜ್ಞಾಶೀಲರಾಗಿ ಆ ಸಂವಹನವನ್ನು ಗ್ರಹಿಸುವುದೇ ಆ ಭಾಷೆಗೆ ರೂಪುಕೊಟ್ಟಂತೆ.ಇಂತಹ ಸಂವಹನ ಮಾದ್ಯಮದಲ್ಲಿ ಮಾತನಾಡುವ ಭಾಷೆಯು ಒಂದು ಪ್ರಭೇಧ ಅಷ್ಟೆ. ಇದನ್ನು ಒಂದು ಮುಖ್ಯ ಗುಂಪಾಗಿ ಪರಿಗಣಿಸಿದರೆ ಇದರಲ್ಲಿ ಹಲವಾರು ಭಾಷೆಗಳು ಹುಟ್ಟಿಕೊಳ್ಳುತ್ತವೆ.ವಾಸ್ತವಿಕವಾಗಿ ನೋಡಿದರೆ ಇದು ಉಪಭಾಷೆಗಳು ಎಂದು ಪರಿಗಣಿಸಬೇಕು, ಆದರೆ ವ್ಯಾವಹಾರಿಕವಾಗಿ ಇದೇ ಭಾಷೆಗಳಾಗಿ ಮಾರ್ಪಾಟಾಗಿದೆ. ಇಂತಹುದರಲ್ಲಿ ಇಡೀ ವಿಶ್ವದಲ್ಲಿ ಸಾವಿರಾರು ಭಾಷೆಗಳಿವೆ. ಉದಾಹರಣೆಗೆ, ಕನ್ನಡ,ಇಂಗ್ಲೀಷ್,ಹಿಂದಿ,ತುಳು,ಕೊಂಕಣಿ,ತಮಿಳು,ತೆಲುಗು,ಮರಾಠಿ,ಮಲೆಯಾಳಿ ಹೀಗೆ ಉಲ್ಲೇಖಿಸುತ್ತಾ ಹೋದರೆ ಪುಟಗಳೇ ಸಾಲದಷ್ಟು ಭಾಷೆಗಳು ಪ್ರಪಂಚದಲ್ಲಿವೆ.
ಅಕಸ್ಮಾತ್ ಬೇರೆ ಎಲ್ಲ ವಿಷಯಗಳೂ ,ಅಂಶಗಳೂ ಪ್ರಪಂಚದಲ್ಲಿ ವಸ್ತುಸ್ಥಿತಿಯನ್ನು ಯಥಾಸ್ಥಿತಕಾಯ್ದುಕೊಂಡು ಭಾಷೆಯೊಂದು ಇಲ್ಲವೆಂದಾಗಿದ್ದಲ್ಲಿ ಎಂತಹ ಪರಿಸ್ಥಿತಿ ಇರುತ್ತಿತ್ತು ಊಹಿಸಿದರೇ ಎಂತಹ ಭಯನಕವೆಂದೆನಿಸುತ್ತದೆ. ಮನುಷ್ಯನ ಜೀವನದ ಅತ್ಯಂತ ಪ್ರಮುಖ ಅಂಶಗಳು ಈ ಭಾಷೆಗಳು ಸಹ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ಮನುಷ್ಯನ ಜೀವನದ ಅತ್ಯಂತ ಪ್ರಮುಖ ಘಟ್ಟಗಳಲ್ಲಿಯೂ ಕೂಡ ಭಾಷೆ ಅತ್ಯಂತ ಪ್ರಮುಖವಾದ ಪಾತ್ರವನ್ನೇ ವಹಿಸುತ್ತದೆ.”ಊಟಬಲ್ಲವನಿಗೆ ರೋಗವಿಲ್ಲ ಮಾತುಬಲ್ಲವನಿಗೆ ಜಗಳವಿಲ್ಲ”ಎಂಬುದೇ ಉತ್ತಮ ನಿದರ್ಶನವನ್ನೂ ದೃಷ್ಠಿಸಿದಾಗ ಮಾತನಾಡುವುದಕ್ಕೂ ಭಾಷೆಯೇ ಬೇಕಲ್ಲವೇ.
ಯಾವ ಭಾಷೆಯನ್ನೇ ನಾವು ಅವಲೋಕಿಸಿದರೆ ಅಥವಾ ಅದರ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿದರೂ ಸಾಕು ಆ ಭಾಷೆಯ ಹುಟ್ಟು,ಬೆಳೆದು ಬಂದ ಬಗೆ,ಸಾಹಿತ್ಯಗಳ ವೈಭವ ಎಂತಹುದೆಂದು ಗೊತ್ತಾಗಿಬಿಡುತ್ತದೆ.ಪ್ರತಿಯೊಂದು ಭಾಷೆಗೂ ಸಹ ಅದರದೇ ಆದ ಮೆರಗು,ವೈಭವವಿದೆ. ಅತಿರಥಮಹಾರಥರು ಅಂತಹ ಸುಮಧುರ ಭಾಷೆಗಳ ಸಾರವನ್ನು ತಮ್ಮ ಕವಿತ್ವ, ಬೌದ್ಧಿಕಶಕ್ತಿಯ ಪ್ರಭಾವದಿಂದ ಇನ್ನಷ್ಟು ಉನ್ನತೀಕರಿಸಿದ್ದಾರೆಯೇ ಹೊರತು ಯಾರೊಬ್ಬರು ಸಹ ತನ್ನ ಭಾಷೆ ಮೇಲೆ ಪರರ ಭಾಷೆ ಕೆಳಗೆಂದು ಭೇಧ ಮಾಡಲಿಲ್ಲ ಅಂತಹ ಸತ್ಕಾರಣಗಳಿಂದಾಗಿಯೇ ಇಂದಿನ ಪೀಳಿಗೆಗೆ ಉತ್ತಮೋತ್ತಮ ಸಾಹಿತ್ಯೇತರ ಗ್ರಂಥಗಳು ಲಭಿಸಿರುವುದು. ಅಂತೆಯೇ ಭಾಷೆಯ ಇನ್ನೊಂದು ಪ್ರಮುಖ ಅಂಶವೆಂದರೆ ಭಾಷೆಗಳ ನಡುವೆ ಕೊಳುಕೊಡುಗೆಯ ವ್ಯವಹಾರಗಳು ಅನಾದಿಕಾಲದಿಂದಲೂ ಬಂದಿರುವುದಾಗಿಯೇ ಇದೆ, ಹಾಗೆ ಬಂದಂತಹ ಪದಗಳು ಆಡುಭಾಷೆಯಲ್ಲಿ ಬೆರತು ಹೋಗಿದೆ. ಭಾಷೆಗಳ ಬಾಂದವ್ಯ ಇವತ್ತು ನೆನ್ನೆಯದಲ್ಲ ಅನಾದಿಕಾಲದಿಂದಲೂ ಅವುಗಳ ಬಾಂದವ್ಯ ಉತ್ತಮವಾಗಿಯೇ ಇದೆ ಆದರೆ ಬರುಬರುತ್ತಾ ಮನುಷ್ಯನ ಅತಿಯಾದ ವ್ಯಾಮೋಹದಿಂದ ಆ ಸುಮಧುರ ಬಾಂದವ್ಯಕ್ಕೆ ಧಕ್ಕೆ ಉಂಟಾಗಿದೆ. ಯಾವುದೇ ವಸ್ತುವಿನ ಮೇಲೆ ಅಥವಾ ವಿಷಯದ ಮೇಲೆ ಅತಿಯಾದ ಪ್ರೀತಿ ಯಾ ವ್ಯಾಮೋಹ ಬೆಳಸಿಕೊಂಡದ್ದೇ ಆದಲ್ಲಿ ಅದರ ಮೇಲಿನ ಸ್ವಾರ್ಥತೆ ಹೆಚ್ಚಾಗುತ್ತಾ ಹೋಗುತ್ತದೆ. ಸ್ವಭಾಷೆ ಅಥವಾ ಮಾತೃಭಾಷೆಯ ಮೇಲೆ ಪ್ರೀತಿ,ಗೌರವ ಇರಬೇಕು ನಿಜ ಆದರೆ ಅನ್ಯಭಾಷೆಯನ್ನು ಅಗೌರವದಿಂದ ನೋಡುವಷ್ಟರ ಮಟ್ಟಿಗಲ್ಲ.ಒಂದು ಮಾತಿದೆ “ಯಾರು ಮತೃಭಾಷೆಯನ್ನು ಚನ್ನಾಗಿ ಮಾತನಾಡುತ್ತಾನೋ,ಅದರ ಸಾರವನ್ನು ಅರ್ಥೈಸಿಕೊಂಡಿರುತ್ತಾನೋ ಅಂತಹವನಿಗೆ ಅನ್ಯಭಾಷೆಯನ್ನು ಗೌರವಿಸಲು ಅಥವಾ ಕಲಿಯಲು ಯಾವುದೇ ಹಿಂಜರಿಕೆಯಿರುವುದಿಲ್ಲ ಎಂತಹಮಾತಲ್ಲವೇ ಮಾತಿನ ತಾತ್ಪರ್ಯ ಸಂಪೂರ್ಣ ನಿಜ. ಪ್ರಸ್ತುತ ಕೆಲವು ವಿದ್ಯಮಾನಗಳನ್ನು ಗಮನಿಸಿದರೆ ಈ ಮಾತಿಗೆ ತದ್ವಿರುದ್ದವಾಗಿಯೇ ಇದೆ. ಭಾಷೆಯ ಕನಿಷ್ಠ ಅರಿವು ಇಲ್ಲದ ಶಕ್ತಿಗಳು ಭಾಷೆಯ ಮೌಲ್ಯದ ಮಾತನ್ನಾಡುತ್ತಿದ್ದಾಗ ಭೂತದ ಭವಿಷ್ಯ ಕೇಳಿದಂತೆ ಭಾಸವಾಗುವುದರಲ್ಲಿ ಎರಡುಮಾತಿಲ್ಲ. ಇನ್ನು ಕೆಲವು ವಿದ್ಯಮಾನಗಳಲ್ಲಿ ಮಾತೃಭಾಷೆಯನ್ನು ಅತಿಯಾಗಿ ಪ್ರೀತಿಸುವವರು ,ವ್ಯಾಮೋಹಿಸುವವರಿಗೆ ಯಾವುದೇ ಒಂದು ಮಾತನ್ನೋ,ವಾಕ್ಯವನ್ನೋ ಬೇರೆ ಭಾಷೆಗೆ ತರ್ಜುಮೆ ಮಾಡಿ ಅರ್ಥೈಸಿಕೊಳ್ಳುವುದು ಅಷ್ಟಾಗಿ ರುಚಿಸುವುದಿಲ್ಲ ಆದ್ದರಿಂದಲೂ ಸಹ ಅನ್ಯ ಭಾಷೆಯ ಬಗ್ಗೆ ತಾತ್ಸಾರ ಮನೋಭಾವನೆ ಮೂಡುವ ಸಾಧ್ಯತೆಯಿದೆ. ವಾಸ್ತವವಾಗಿ ಇಲ್ಲಿ ಮೂಡುವ ಭಾವನೆ ಉದ್ದೇಶಪೂರ್ವಕವಾದ ತಾತ್ಸಾರ ಮನೋಭಾವನೆ ಅಲ್ಲವೇ ಅಲ್ಲ ಆದರ ಮಾತೃಭಾಷೆಯ ಮೇಲಿನ ಅತಿಯಾದ ವ್ಯಾಮೋಹವೇ ಕಾರಣವೆನ್ನಬಹುದು ಇಂತಹ ಸನ್ನಿವೇಶಗಳಲ್ಲಿ ಭಾಷೆಯನ್ನು ಕೇವಲ ನೆಪಮಾತ್ರಕ್ಕಷ್ಟೇ ಎಂದು ಭಾವಿಸುವುದುತ್ತಮ.
ಹಾಗೆಂದ ಮಾತ್ರಕ್ಕೆ ಈ ವೈಷಮ್ಯವನ್ನು ತೊಡೆದು ಹಾಕುವ ಪರಿಯೆಂತು ಎಂದು ಸಾವಧಾನವಾಗಿ ಯೋಚಿಸಿದರೆ ನಮ್ಮನ್ನು ನಾವು ತಿದ್ದಿಕೊಳ್ಳಲು ಹಲವಾರು ಮಾರ್ಗೋಪಾಯಗಳು ಕಾಣಸಿಗುತ್ತವೆ. ಮೊದಲು ನಾವು ಮಾತೃ ಭಾಷೆಯ ಮೇಲಿನ ಹಿಡಿತ ಸಂಪೂರ್ಣ ಗಟ್ಟಿಗೊಳಿಸಿಕೊಳ್ಳಬೇಕು, ಅದರ ಸಂಪೂರ್ಣ ಸಾರವನ್ನು ಅರ್ಥೈಸಿಕೊಳ್ಳಬೇಕು, ರಾಜ ಸಮರ್ಥನಾಗಿದ್ದರೇ,ಆತನ ಸೈನ್ಯ ಬಲಿಷ್ಠವಾಗಿದ್ದರೇ, ಯುದ್ಧ ಸಾಮಗ್ರಿಗಳ ಕೊರತೆಯಿಲ್ಲದಿದ್ದರೇ, ಶತ್ರುವಿನ ಭಯ ಕಾಡುತ್ತದೆಯೇ? ಹಾಗೆಯೇ ಮಾತೃಭಾಷೆಯ ಆಳವಾದ ಜಾÐನ ಅಗತ್ಯ. ಒಂದು ದಿನ ಬಾವುಟ ಹಾರಿಸಿ ಸಿಹಿ ಹಂಚಿ ಸಂಭ್ರಮಿಸುವುದರಿಂದಲೋ, ಯಾವುದೋ ವ್ಯಾಪಾರಿ ಅಥವಾ ಅನ್ಯ ಪ್ರಾಂತ್ಯದ ವ್ಯಕ್ತಿಯು ಆ ಪ್ರಸ್ತುತ ಪ್ರಾದೇಶಿಕ ಭಾಷೆಯನ್ನು ಮಾತನಾಡಲಿಲ್ಲವೆಂದು ಆತನಿಗೆ ಥಳಿಸಿ, ಛೀಮಾರಿ ಹಾಕುವುದರಿಂದಲೋ ಅಥವಾ ಇನ್ನಾವುದೇ ಹಿಂಸಾತ್ಮಕ ಕೃತ್ಯಗಳಿಂದ ಭಾಷೆಯ ಉಳಿವು ಖಂಡಿತಾ ಸಾಧ್ಯವಿಲ್ಲ, ಯಾವುದೇ ಕೆಲಸವನ್ನು ಒತ್ತಾಯಪೂರ್ವಕವಾಗಿ ಮಾಡಿಸುವುದಕ್ಕೂ ಪ್ರೀತಿಪೂರ್ವಕವಾಗಿ ಮಾಡಿಸುವುದಕ್ಕೂ ವ್ಯತ್ಯಾಸವಿದೆಯೋ ಅಂತೆಯೇ ಭಾಷೆಯ ಸಾರವನ್ನು ಹಂಚುವುದೂ ಕೂಡ ಯಾವುದೇ ಒತ್ತಡ ಹೇರದೆಯೇ ಪ್ರೀತಿಯಿಂದಲೇ ಹಂಚಬೇಕು. ಉದಾಹರಣೆಗೆ ಒಂದು ಕೆಲಸವನ್ನು ಒಬ್ಬ ವ್ಯಕ್ತಿಗೆ ಗದರಿಸಿ ಮಾಡಿಸಿದಲ್ಲಿ ಆ ವ್ಯಕ್ತಿಯು ಕೆಲಸವನ್ನು ಮುಂದೆ ದುಷ್ಪರಿಣಾಮವಾದರೂ ಆಗಬಹುದೆಂಬ ಭಯದಿಂದಲೇ ಮಾಡುತ್ತಾನೆ ಹೊರತಾಗಿ ಆ ಕೆಲಸಕ್ಕೆ ದೊರಕಿಸಿಕೊಡಬೇಕಾಗಿದ್ದ ಸ್ವಾಮಿನಿಷ್ಠೆ, ಮೌಲ್ಯದಿಂದ ಖಂಡಿತಾ ಮಾಡುವುದಿಲ್ಲ ಕೇವಲ ಭೌತಿಕವಾಗಿ ಆ ಕೆಲಸ ನೆರವೇರಿರುತ್ತದೆ ಅಷ್ಟೇ, ಅದೇ ಪ್ರೀತಿಯಿಂದ ಹೇಳಿದಲ್ಲಿ ಸ್ವಪ್ರೇರಿತನಾಗಿ ಯಥಾಃಶಕ್ತಿ ಪ್ರೀತಿ ,ಸ್ವಾಮಿನಿಷ್ಠೆಯಿಂದಲೇ ಕೆಲಸ ಮುಗಿಸಿರುತ್ತಾರೆ. ಅಂತೆಯೇ ಭಾಷೆಯನ್ನೂ ಒತ್ತಾಯಪೂರ್ವಕವಾಗಿ ವ್ಯವಹರಿಸುವುದಕ್ಕೋ, ಕಲಿಸುವುದಕ್ಕೋ ಹೇರುವ ಪ್ರಯತ್ನವೆಸಗಿದಲ್ಲಿ ಪದಗಳ ಅರ್ಥದ ಅರಿವೇ ಇಲ್ಲದೆಯೇ ಕಂಠಪಾಠದ ಪದ್ಯದಂತೆ ವ್ಯವಹರಿಸುತ್ತಾನೆಯೇ ವಿನಃ ನಿಜವಾದ ಸಾರಾಂಶ ತಿಳಿದಾಗಿ ಅಲ್ಲ.
ಯಾವುದೇ ಕಾರಣದಲ್ಲೂ,ಯಾವುದೇ ಸಂದರ್ಭದಲ್ಲೂ, ವ್ವಕ್ತಿಯ ಮೇಲೋ, ಭಾಷೆಯ ಮೇಲೋ ಅಥವಾ ಇನ್ನಾವುದೇ ಭೌತಿಕ ವಿಚಾರವಾಗಿ ಅತಿಯಾದ ವ್ಯಾಮೋಹ ಸಲ್ಲ, ಇದರಿಂದ ಅಂಟು ಬೆಳೆದು ಸ್ವಾರ್ಥತೆ ಹೆಚ್ಚಾಗಿ ದುಷ್ಪರಿಣಾಮಗಳಿಗೆಡೆ ಮಾಡಿಕೊಡುವ ಸಾಧ್ಯತೆಗಳೇ ಹೆಚ್ಚು. ಆದ ಕಾರಣ ಭೌತಿಕ ವಿಚಾರಗಳು ಕೇವಲ ನೆಪಮಾತ್ರಕ್ಕಷ್ಟೇ ಎಂದು ಭಾವಿಸಿ ಒಳಗಿನ ನಿಜವಾದ ಸಾರವನ್ನು ಅರ್ಥೈಸಿಕೊಂಡು ಸರ್ವರನ್ನೂ, ಸರ್ವವನ್ನೂ ಸಮಭಾವದಿಂದ ನೋಡುವುದರಿಂದ ಜೀವನದ ಸಾರ್ಥಕ್ಯ ಸಾಧ್ಯ.