ಲೇಖಕರು : ಎನ್. ಮುರಳೀಧರ್
ಅಡ್ವೋಕೇಟ್
ನೆಲಮಂಗಲ
9902772278

ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ಗುರಿಯನ್ನು ಹೊಂದಿ ಅದನ್ನು ಸಾಧಿಸಿದಾಗಲೇ ಜೀವನ ಸಾರ್ಥಕವಾಗುವುದು. ಗುರಿಯನ್ನು ಸಾಧಿಸಲು ಯಾವ ದಾರಿಯಲ್ಲಿ ಸಾಗುತ್ತೇವೋ ಅದರ ಮೇಲೆ ನಮ್ಮ ಸಾಧನೆ ಅವಲಂಬಿತವಾಗಿರುತ್ತದೆ. ಗುರಿಯನ್ನು ತಲುಪಲು ನಮಗೆ ನಾಲ್ಕಾರು ದಾರಿಗಳು ಇರುತ್ತದೆ. ಅಡೆತಡೆಗಳು ಸಾಕಷ್ಟು ಬರುತ್ತವೆ. ನಾವು ಯಾವ ದಾರಿಯಲ್ಲಿ ಹೋದರೂ ಗುರಿಯನ್ನು ಮುಟ್ಟ ಬಹುದೇನೋ ಎನಿಸುತ್ತದೆ. ಆದರೆ ಗುರಿಯನ್ನು ಸಾಧಿಸುವ ಸರಿಯಾದ ದಾರಿಯನ್ನು ಬುದ್ದಿವಂತಿಕೆಯಿಂದ ಹುಡುಕಿ ಬರುವ ಅಡೆತಡೆಗಳನ್ನು ಹೋಗಲಾಡಿಸಿಕೊಂಡು, ಛಲದಿಂದ ಹೋದರೆ ಸರಾಗವಾಗಿ ಗುರಿಯನ್ನು ತಲುಪಬಹುದು. ಇದಕ್ಕೆ ಒಂದು ಸಣ್ಣ ನಿದರ್ಶನ ಎಂಬಂತೆ ಕೆಳಗೆ ಇರುವ ಕಥೆ ಇದಕ್ಕೆ ಹೊಂದಿ ಕೊಂಡಿದೆ.
ಒಂದು ಸಲ ಒಬ್ಬ ಅಂಧ ವೃದ್ದ ಅವರ ಸ್ನೇಹಿತನ ಅಂಗಡಿಯಲ್ಲಿ ಕುಳಿತಿರುತ್ತಾನೆ. ಸಂಜೆ ಯಾಗುತ್ತಾ ಬಂದಿದ್ದು, ಮಳೆ ಬರುವಂತೆ ಇರುತ್ತದೆ. ತನ್ನ ಮಗನು ಮನೆಗೆ ಕರೆದುಕೊಂಡು ಹೋಗಲು ಬರಲಿಲ್ಲ ಎಂದು ಮನದಲ್ಲಿ ಚಡಪಡಿಸುತ್ತಿದ್ದಾಗ, ನಾಲ್ಕು ಜನ ಹುಡುಗರು ಬಂದು ತಾತ ಬನ್ನಿ ನಿಮ್ಮನ್ನು ನಾವುಗಳು ಕರೆದುಕೊಂಡು ಹೋಗುತ್ತೇವೆ ಎಂದು ತಾತನಿಗೆ ಹೇಳಿದರು. ಆಗ ತಾತ ನಗುತ್ತಾ, ಬೇಡ ಮಕ್ಕಳೆ ನನ್ನ ಸ್ವಂತ ಮಗ ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ, ನಿಮಗೇಕೆ ತೊಂದರೆ ನೀವುಗಳು ಅಡಿಕೊಳ್ಳಲು ಹೋಗಿ ಎಂದು ಹೇಳಿದಾಗ, ಇಲ್ಲ ತಾತ, ನಿಮ್ಮನ್ನು ಮನೆಗೆ ಕರೆತರಲು ನಿಮ್ಮ ಮಗನೇ ನಮ್ಮನ್ನು ಕಳುಹಿಸಿದ್ದಾರೆ, ಬನ್ನಿ ತಾತ ಪರವಾಗಿಲ್ಲ ಎಂದು ನಾಲ್ಕು ಜನ ಹುಡುಗರು ತಾತನ ಕೈಯನ್ನು ಹಿಡಿದುಕೊಂಡು ಮುನ್ನಡೆಯುತ್ತಾರೆ.
ಸ್ವಲ್ಪ ದೂರ ನಡೆದಾಗ, ಅದರಲ್ಲಿ ಒಬ್ಬ ಹುಡುಗ ಲೋ ತಾತನ ಮನೆ ಈ ಕಡೆ ಇದೆಯೋ ಇಲ್ಲಿಂದ ಹೋದರೆ ಹತ್ತಿರ ಆಗುತ್ತೆ ಈಕಡೆಯೇ ಹೋಗೋಣ ಎಂದು ತಾತನನ್ನು ತನ್ನ ಕಡೆಗೆ ಎಳೆಯುತ್ತಾನೆ. ಆಗ ಇನ್ನೊಬ್ಬ ಹುಡುಗ ಇಲ್ಲ ಕಣೋ ನಮ್ಮ ಮನೆಯ ಹತ್ತಿರವೇ ತಾತನ ಮನೆ ಇರುವುದು ನಮ್ಮ ಮನೆಯ ಕಡೆಯಿಂದ ಹೋಗೋಣ ಬನ್ನಿ ಎಂದು ತನ್ನ ಕಡೆಗೆ ತಾತನನ್ನು ಎಳೆಯುತ್ತಾನೆ. ಇನ್ನೊಬ್ಬ ಹುಡುಗ ನಿಮಗ್ಯಾರಿಗೂ ಸರಿಯಾಗಿ ತಾತನ ಮನೆಯೇ ಗೊತ್ತಿಲ್ಲ, ತಾತ ಇರುವುದು ಅವರ ಮಗನ ಮನೆಯಲ್ಲೇ ಅವರ ಮನೆ ಇರುವುದು ಪಕ್ಕದ ಬೀದಿಯ ಕಡೆ ಎಂದು ತನ್ನ ಕಡೆ ಎಳೆಯುತ್ತಾನೆ. ಹೀಗೆ ನಾಲ್ಕನೆಯವನು ನೀವೆಲ್ಲಾ ಸುಳ್ಳು ಹೇಳುತ್ತಿದ್ದೀರಿ ತಾತನ ಮನೆ ಇರುವುದು ದೇವಸ್ಥಾನದ ಪಕ್ಕದಲ್ಲೇ ನನಗೆ ಚೆನ್ನಾಗಿ ಗೊತ್ತು ಎಂದು ತನ್ನ ಕಡೆಗೇ ಎಳೆಯುತ್ತಾನೆ. ಹೀಗೆ ಒಬ್ಬೊಬ್ಬರು ಒಂದೊಂದು ಕಡೆ ತಾತನನ್ನು ಎಳೆದಾಡುತ್ತಿರುತ್ತಾರೆ. ತಾತನಿಗೆ ಕೋಪ ಬಂದು ಬಿಡಿ ನನ್ನ ಕೈಯನ್ನು ನನ್ನ ಮಗ ಬರುತ್ತಾನೆ ಎಂದು ನಿಮಗೆ ಹೇಳಲಿಲ್ಲವೆ? ಎಂದು ಕೋಪದಿಂದ ಕೈಯನ್ನು ಕೊಡವುತ್ತಾನೆ. ಅದಕ್ಕೆ ಮಕ್ಕಳು ನಿಮಗೆ ಕಣ್ಣು ಕಾಣಿಸುವುದಿಲ್ಲ ನಾವೇ ನಿಮ್ಮನ್ನು ಮನೆಗೆ ಬಿಡುತ್ತೇವೆ ಬನ್ನಿ ತಾತ ಪರವಾಗಿಲ್ಲ ಎಂದು ಬಲವಂತ ಮಾಡಿ ಕರೆದುಕೊಂಡು ಹೋಗುತ್ತಿದ್ದಾಗ ಜೋರಾಗಿ ಮಳೆ ಬಂದೇ ಬಿಡುತ್ತದೆ. ಆಗ ಅಲ್ಲೇ ಇದ್ದ ಒಂದು ಮನೆಯ ಹತ್ತಿರ ಜಗಲಿ ಮೇಲೆ ತಾತನನ್ನು ಕುಳ್ಳರಿಸಿ ನಾಲ್ಕು ಜನ ಮಕ್ಕಳು ಅಲ್ಲೇ ನಿಂತಿರುತ್ತಾರೆ.
ಇನ್ನೂ ಸ್ವಲ್ಪ ಮಳೆ ಜೋರಾಗಿ ಬಂದು ಅಲಿಕಲ್ಲು ಬರಲು ಪ್ರಾರಂಭಿಸಿತ್ತದೆ. ಆ ಅಲಿಕಲ್ಲುಗಳನ್ನು ನೋಡಿ ಅದರಲ್ಲೊಬ್ಬ ನಾನು ಅಲಿಕಲ್ಲು ಹಿಡಿದು ತರಲು ಹೋಗುತ್ತೇನೆ ಎಂದು ಮಳೆಯಲ್ಲಿ ನಿಂತು ಅಲಿಕಲ್ಲನ್ನು ಹಿಡಿಯಲು ಹೊರಟು ಹೋಗುತ್ತಾನೆ.. ಎರಡನೇಯವನು, ನೀನು ಅಲಿಕಲ್ಲು ಹಿಡಿಯುತ್ತಿರು ನಾನು ಚಾಕಲೇಟ್ ತರುತ್ತೇನೆಂದು ಹೇಳಿ ಆ ಮಳೆಯಲ್ಲೇ ಓಡಿ ಹೋಗುತ್ತಾನೆ. ಮೂರನೆಯವನು ಮಳೆ ಈಗಲೇ ನಿಲ್ಲುವಂತಿಲ್ಲ ನಾನು ಹೋಗಿ ಮನೆಯಿಂದ ಕೊಡೆಯನ್ನು ತರುತ್ತೇನೆಂದು ಓಡಿ ಹೋಗುತ್ತಾನೆ. ನಾಲ್ಕನೆಯವನು ಇನ್ನೂ ಸ್ವಲ್ಪ ಹೊತ್ತು ನೋಡಿ, ತಾತ ಹೊತ್ತಾದರೆ ನಮ್ಮ ಮನೆಯಲ್ಲಿ ಬೈಯುತ್ತಾರೆ, ಅವರು ಮೂರು ಜನ ಬಂದು ನಿಮ್ಮನ್ನು ಮನೆಗೆ ತಲುಪಿಸುತ್ತಾರೆ ನಾನು ಮನೆಗೆ ಹೋಗುತ್ತೇನೆ ಎಂದು ಮಳೆಯಲ್ಲಿಯೇ ಮನೆಗೆ ಓಡಿ ಹೋಗುತ್ತಾನೆ.
ಜಗಲಿಯ ಮೇಲೆ ತಾತ ಒಬ್ಬನೇ ಕುಳಿತುಕೊಂಡು ನನಗೆ ಕಣ್ಣಿದ್ದಿದ್ದರೆ ನಾನೇ ಹೋಗುತ್ತಿದ್ದೆ ಇನ್ನೊಬ್ಬರ ಆಶ್ರಯ ಬೇಕಾಗಿರಲಿಲ್ಲ ಎಂದು ಹಂಬಲಿಸುತ್ತಿರುತ್ತಾನೆ. ಇತ್ತ ಕಡೆ ತಾತನು ಇನ್ನೂ ಏಕೆ ಬರಲಿಲ್ಲ ಹುಡುಗರು ಎಲ್ಲಿ ಹೋದರು? ಹುಡುಗರೇಕೆ ಇನ್ನೂ ಕರೆದುಕೊಂಡು ಬಂದಿಲ್ಲ ಎಂದು ತಾನೇ ತನ್ನ ಅಪ್ಪನನ್ನು ಮನೆಗೆ ಕರೆದುಕೊಂಡು ಹೋಗಲು ಅಲ್ಲಿಗೇ ಕೊಡೆಯನ್ನು ಹಿಡಿದುಕೊಂಡು ಬರುತ್ತಾನೆ. ದಾರಿಯಲ್ಲಿ ಯಾವುದೋ ಮನೆಯ ಜಗಲಿಯ ಮೇಲೆ ತನ್ನ ಅಪ್ಪ ಕುಳಿತಿರುವುದು ಕಾಣಿಸುತ್ತದೆ. ಆಗ ಮನಸ್ಸಿನಲ್ಲಿ ನಾನು ನಾಲ್ಕು ಜನ ಹುಡುಗರನ್ನು ಕಳುಹಿಸಿದ್ದೆ ಅವರು ಎಲ್ಲಿ ಹೋದರು, ನನ್ನ ಅಪ್ಪ ಒಬ್ಬರೇ ಕುಳಿತಿದ್ದಾರಲ್ಲಾ ಎಂದು ಬೇಗ ಬೇಗ ಹೆಜ್ಜೆ ಹಾಕಿ ಅಪ್ಪನ ಸಮೀಪ ಬಂದು, ಯಾಕಪ್ಪಾ? ನಿನ್ನನ್ನು ಮನೆಗೆ ಕರೆತರಲು ನಾಲ್ಕು ಜನ ಹುಡುಗರನ್ನು ಕಳುಹಿಸಿದ್ದೇನೆಲ್ಲಾ ಅವರೆಲ್ಲಿ ಹೋದರು? ಎಂದಾಗ, ತಾತ ಮಗನಿಗೆ ಇದ್ದ ವಿಷಯ ಹೇಳುತ್ತಾನೆ. ಆಗ ಮಗನಿಗೆ ತುಂಬಾ ಬೇಸರವಾಗಿ ನಾವು ಯಾರಿಗೂ ಹೇಳದೆ ನಮ್ಮ ಕೆಲಸ ನಾವು ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದುಕೊಂಡು ಮನೆಗೆ ಕರೆದುಕೊಂಡು ಹೋಗುತ್ತಾನೆ.
ಇದರ ಒಳಾರ್ಥ ಏನೆಂದರೆ, ಅಂಧವೃದ್ದ ಎಂದರೆ, ನಮ್ಮ ಜೀವನದ ಗುರಿ, ಆ ಗುರಿಗೆ ಕಣ್ಣು ಇರುವುದಿಲ್ಲ, ನಾವು ಯಾವ ದಾರಿಯಲ್ಲಿ ಸಾಗಿ ಮುಟ್ಟುತ್ತೇವೋ ಅದರಂತೆ ಗುರಿ ಅವಲಂಬಿಸಿರುತ್ತದೆ. ನಾಲ್ಕು ಮಕ್ಕಳು ಎಂದರೆ ನಮ್ಮೊಳಗಿನ ಚಂಚಲ ಮನಸ್ಸು, ನಮಗೆ ಗುರಿಯನ್ನು ತಲುಪಲು ನಿರ್ದಿಷ್ಠ ದಾರಿ ಇರುವುದಿಲ್ಲ ಅದನ್ನು ಸಾಧಿಸಲು ತಾತ ಚಡಪಡಿಸಿದಂತೆ ಚಡಪಡಿಸುತ್ತೇವೆ. ಅದಕ್ಕೆ ನಾವು ಗುರಿಯನ್ನು ಯಾವ ರೀತಿ ತಲುಪಬೇಕೆಂಬ ಗೊಂದಲದಲ್ಲಿ ಎಲ್ಲಾ ರೀತಿಯಿಂದಲೂ ಮುಟ್ಟಲು ಹೋಗುತ್ತೇವೆ. ಆಗ ನಮಗೆ ಅದು ಸರಿಯಾದ ದಾರಿ ಇಲ್ಲದ ಪಯಣ ಆಗುತ್ತದೆ. ಮಳೆ ಬಂದು ತಾತನನ್ನು ಹುಡುಗರು ಅರ್ಧದಾರಿಯ ಮನೆಯಲ್ಲಿ ಕುಳ್ಳಿರಿಸಿದಂತೆ, ಗುರಿಯನ್ನು ಸಾಧಿಸುವಾಗ ಅಡಚಣೆ ಬಂದು ಅರ್ಧಕ್ಕೇ ನಿಲ್ಲಬಹುದು. ಇದರಿಂದ ನಮ್ಮ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಯಾವ ರೀತಿ ಹೋಗಬೇಕು ಎಂದು ತೋಚದೆ, ತಾತನ ಮನೆ ಅಲ್ಲಿದೆ ಇಲ್ಲದೆ ಎಂದು ತಾತನ ಕೈಯನ್ನು ಎಳೆದಾಡುವಂತೆ ನಾವುಗಳು ಪರದಾಡಬೇಕಾಗುತ್ತದೆ. ತಾತನ ಸ್ವಂತ ಮಗನೇ ಗುರಿಯನ್ನು ತಲುಪಿಸುವ ನಿರ್ದಿಷ್ಠ ದಾರಿ ಅಂದರೆ ದೃಢಮನಸ್ಸು. ಸರಿಯಾದ ದಾರಿಯಲ್ಲಿ ಪಯಣಿಸಿ ಎಷ್ಟೇ ಅಡೆತಡೆ ಬಂದರೂ ಬಿಡದೆ ಮುಂದೆ ಸಾಗಿದರೆ ನಮ್ಮ ಗುರಿ ನಾವು ಮುಟ್ಟಲು ಸಹಕಾರಿಯಾಗುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ನಮ್ಮ ಗುರಿಯನ್ನು ತಲುಪಲು ಆಗುವುದೇ ಇಲ್ಲ.
ಆದ್ದರಿಂದ ನಾವು ಮೊದಲೇ ನಮ್ಮ ಗುರಿಯನ್ನು ನಿರ್ಧರಿಸಿಕೊಂಡು ಅದಕ್ಕೆ ತಕ್ಕಂತೆ ದಾರಿಯಲ್ಲಿ ನಡೆದರೆ ನಮ್ಮ ಗುರಿಯನ್ನು ಸಾಧಿಸಬಹುದು.

RELATED ARTICLES  ಬಲವಂತದ ಜೀವನ