30 ಸಪ್ಟೆಂಬರ್ 2019 ರಂದು ನಿಧನರಾದ ಸೀತಾಬಾಯಿ ಗಜಾನನ ಹೆಗಡೆ ಬಳಗಂಡಿ ಇವರ ಆತ್ಮಕ್ಕೆ ಚಿರ ಶಾಂತಿ ಕೋರಿ ಇಂದು ಮುಂಡಿಗೇಸರದಲ್ಲಿ ನಡೆಯುತ್ತಿರುವ ಶ್ರವಣಾರಾಧನೆಯ ಸಂದರ್ಭದಲ್ಲಿ ಇವರ ಪುತ್ರಿ ಶ್ರೀಮತಿ ಹೆಗಡೆ ಬೆಂಗಳೂರು ಇವರಿಂದ ತಾಯಿಗೆ ಸಂದ ನುಡಿ ನಮನ.

ಆಯೀ…

ನಮ್ಮೆಲ್ಲರಿಗೂ ಪ್ರೀತಿ ತೋರಿ, ನೀತಿ ಕಲಿಸಿ, ಸಮಾಜದಲ್ಲಿ ಸಾಂಗವಾಗಿ ಬದುಕಿನ ಬಂಡಿ ಸಾಗಿಸುವಂತೆ ಮಾಡಿದ ನೀನು ತುಂಬು ಜೀವನ ನಡೆಸಿದೆ. ಜೀವನದ ತುಂಬ ಪ್ರೀತಿಯನ್ನೇ ಉಣಬಡಿಸಿದ ನನ್ನ ಆಯೀ (ಸೀತಾಬಾಯಿ ಗಜಾನನ ಹೆಗಡೆ ಬಳಗಂಡಿ) ಕಾಲನ ಕರೆಗೆ ಓಗೊಟ್ಟು ತುಂಬು ಮನದಿಂದಲೇ ಮರೆಯಾಗಿಬಿಟ್ಟೆಯಲ್ಲ…!

ಆದರೆ ನಾನು, ನೀನಿಲ್ಲದ ಬಾಳ ಈಗ ಹೇಗೆ ಊಹಿಸಲಿ?

‘ಹಾಲು ಕುಡಿಸಿ ಹೃದಯ ಬಿಡಿಸಿ ಪ್ರೀತಿ ಉಣಿಸಿ ಮನಸಿಗೆ, ಬಾಳ ತೇದು ಮಕ್ಕಳಿಗೆ, ಬೆರೆದಳಲ್ಲ ಕನಸಿಗೆ’ ಎಂಬ ಕವಿವಾಣಿ ನಿನ್ನ ಜೀವನದಲಿ ಸತ್ಯವಾಗಿದ್ದು ಮಾತ್ರವಲ್ಲ, ನಮಗೂ ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ ಎಂಬುದನ್ನು ಸತ್ಯವಾಗಿಸಿದೆ ನೀನು..! ಗಂಡನನ್ನು ಕಳೆದುಕೊಂಡ ನೋವಿನಲ್ಲಿಯೂ ತಂದೆಯಿಲ್ಲವೆಂಬ ಕೊರಗು ನಮಗೆ ಬಾರದಂತೆ ನೋಡಿಕೊಂಡ ನಿನ್ನ ಯಶೋಗಾಥೆಯನ್ನು ನಾ ಹೇಗೆ ಹೇಳಲಿ?

ಆಯೀ… ಮೂಲತಃ ಕುಮಟಾ ತಾಲೂಕು ಬಗ್ಗೊಣದÀವಳಾದ ನೀನು, ನಿನ್ನ ತಂದೆ ತಾಯಿ ಅಣ್ಣ, ಅಕ್ಕ, ತಮ್ಮರೊಡನೆ ಚಿಕ್ಕ ವಯಸ್ಸಿನಲ್ಲಿಯೇ ಶಿರಸಿ ಬೇಣದಮನೆಗೆ ಬಂದವಳು. ನಂತರ ಹಿರಿಯರ ಮಾತಿನಂತೆ ಕುಟುಂಬ ಸಹಿತ ಹೆಡಿಗೆಮನೆಯಲ್ಲಿ ನೆಲಿಸಿದೆ. ಎಲ್ಲ ಮಕ್ಕಳೂ ನಲಿವಿಂದ ಆಡುವ ವಯಸ್ಸಿನಲ್ಲಿ ಅಂದರೆ ನಿನ್ನ 9ನೇ ವರ್ಷಕ್ಕೆ ತಾಯಿಯನ್ನು ಕಳೆದುಕೊಂಡು ಬಾಲ್ಯದ ಹುಡುಗಾಟವನ್ನೆಲ್ಲ ಮರೆತು ಮನೆಯ ಜವಾಬ್ದಾರಿಯಲ್ಲಿ ಭಾಗಿಯಾಗಿ ಬದುಕಿನ ಅನುಭವಗಳನ್ನು ತುಂಬಿಕೊಂಡ ನಿನ್ನ ಜೀವನ. ಕಲ್ಪನೆಗೂ ನಿಲುಕದ್ದು. ಹಿರಿಯರು ನಿಶ್ಚಯಿಸಿದಂತೆ ನಿನ್ನ 18ನೇ ವಯಸ್ಸಿಗೆ ಮದುವೆಯಾಗಿ ಮುಂಡಿಗೇಸರದ ಬಳಗಂಡಿ ಮನೆಯ ತುಂಬು ಕುಟುಂಬಕ್ಕೆ ಸೊಸೆಯಾಗಿ ಬಂದು ಮನೆಯ ನಂದಾದೀಪ ಬೆಳಗಿದವಳೆಂಬುದು ನನಗೆ ಗೊತ್ತು.

ಅಪ್ಪ ಗಜಾನನ ಹೆಗಡೆ ಬಳಗಂಡಿ ಜೊತೆಗೆ ಸಂಸಾರ ಸಾಗಿಸುತ್ತಾ ಮಂಜುನಾಥ, ಶ್ರೀಧರ, ಸುರೇಶ, ಚಿದಾನಂದ ಮತ್ತು ನನಗೆ(ಶ್ರೀಮತಿ), ಒಟ್ಟು ಐವರು ಮಕ್ಕಳಿಗೆ ತಾಯಿಯಾಗಿ ತುಂಬು ಸಂಸಾರ ನಡೆಸಿದವಳು. ನಿನ್ನ 34ನೇ ವಯಸ್ಸಿನಲ್ಲಿಯೇ ಅಂದರೆ ಮದುವೆಯಾಗಿ ಹದಿನಾರು ವರ್ಷವಾಗಿದ್ದಾಗಲೇ ಗಂಡನನ್ನು (ನನ್ನ ಅಪ್ಪ) ಕಳೆದುಕೊಳ್ಳಬೇಕಾಯ್ತು. ಆ ನೋವಿನಲ್ಲಿಯೂ ನಮಗೆಲ್ಲರಿಗೂ ತಾಯಿಯ ಮಮತೆ ತಂದೆಯ ಪ್ರೀತಿ ಇವೆರಡನ್ನೂ ಕೊಂಚವೂ ನ್ಯೂನವಾಗದಂತೆ ಕೊಟ್ಟು ಬೆಳೆಸಿದೆ. ಜೀವನ ಯಾನದಲ್ಲಿ ತುಂಬು ಕುಟುಂಬದ ಹಲವಾರು ಸಮಸ್ಯೆಗಳನ್ನು ಒಂಟಿಯಾಗಿ ಎದುರಿಸಿದೆ. ಅಷ್ಟೇ ಅಲ್ಲ, ಸಮರ್ಥವಾಗಿ ಅವುಗಳನ್ನು ನಿಭಾಯಿಸಿದವಳಲ್ಲವೇ ನೀನು?

RELATED ARTICLES  ಕಳೆದುಹೋದ ಎಳೆಯ ದಿನಗಳು (ಭಾಗ೧)

ವಿಧಿ ಲಿಖಿತ ಎಂಬಂತೆ ಮಗನಾದ ಶ್ರೀಧರನನ್ನು ಕಳೆದುಕೊಂಡ ನಿನಗೆ ಅದೆಷ್ಟು ನೋವು ಕಾಡಿರಲಿಕ್ಕಿಲ್ಲ ಹೇಳು? ಪುತ್ರ ಶೋಕಂ ನಿರಂತರಂ ಎಂಬ ಪ್ರಾಜ್ಞರ ಮಾತು ನಿನಗೆ ನಿತ್ಯ ಸ್ಮರಣೆಯಾಗಿರಬಹುದು. ಆಯೀ.. ನಾವೆಲ್ಲ ಚಿಕ್ಕವರಿರುವಾಗಲೇ ಗಂಡನ ಅಗಲಿಕೆ, ಪುತ್ರ ಶೋಕವನ್ನು ನೀನು ಹೇಗೆ ತಡೆದುಕೊಂಡು, ಒಂದು ದಿನವೂ ನಿನ್ನ ನೋವನ್ನು ತೊಡಿಕೊಳ್ಳದೇ, ತೋರಿಸಿಕೊಳ್ಳದೆ ತುಂಬು ಊರಿನ ಸಮಾಜದಲ್ಲಿ ಆತ್ಮಸ್ಥೈರ್ಯದಿಂದ ನಿನ್ನತನವನ್ನು ಉಳಿಸಿಕೊಂಡು ಹತ್ತಾರು ಜನರಿಗೆ ಉಪಕಾರಿಯಾಗಿ ಬದುಕು ಸಾಗಿಸಿದೆ. ಬಡತನದ ಕಷ್ಟ, ಸಿರಿತನದ ಸುಖ ಎಲ್ಲವನ್ನೂ ತದೇಕ ದೃಷ್ಟಿಯಲ್ಲಿ ನೋಡಿ, ಇದ್ದುದರಲ್ಲಿ ತೃಪ್ತಿ ಪಟ್ಟೆ. ಮಕ್ಕಳ ಶ್ರೇಯಸ್ಸಿಗೆ ಹಗಲಿರುಳೂ ಶ್ರಮಿಸಿದೆ. ಅವರೆಲ್ಲರನ್ನೂ ಒಂದು ಹಂತಕ್ಕೆ ತಲುಪಿಸಿದಾಗ ನಿನ್ನಲ್ಲಿ ಬರುವ ಆ ಸಮಾಧಾನದ ನಿಟ್ಟುಸಿರಿನಲ್ಲಿಯೇ ಬದುಕನ್ನು ಸಾಂತ್ವಾನಿಸಿಕೊಂಡವಳು ನೀನು. ಅದನ್ನು ನೋಡುತ್ತಲೇ ನಾನು ಬೆಳೆದಿದ್ದೆ. ಎಷ್ಟೇ ಕಷ್ಟ ಬಂದರೂ ಅಗಾಧ ಪ್ರತಿಭೆಯುಳ್ಳ ನೀನು ನಿನ್ನ 94 ವರ್ಷದ ತುಂಬು ಜೀವನದಲ್ಲಿ ಸಣ್ಣ ಸಣ್ಣ ಸುಖವನ್ನೇ ಪರಮಾನಂದವೆಂದು ತಿಳಿದು, ಹಗಲಿರುಳೂ ದೇವರ ಸ್ಮರಣೆ ಮಾಡುತ್ತಾ ಸುಶ್ರಾವ್ಯವಾಗಿ ಹಾಡುತ್ತಾ ಅತ್ಯಧಿಕ ಜೀವನೋತ್ಸಾಹದಿಂದ ಜೀವನವನ್ನು ನಡೆಸಿ ಪ್ರತಿಯೊಬ್ಬರೂ “ಸೀತಕ್ಕ” ಅಂದರೆ ಪ್ರೀತಿ ತುಂಬಿ ಗೌರವದಿಂದ ಮಾತನಾಡುವಂತೆ ನೀನು ಬಾಳಿದೆ. ಮಕ್ಕಳು, ತರುಣರು, ವೃದ್ಧರು, ಹಾಗೂ ಎಲ್ಲಾ ವಯಸ್ಕರಿಗೂ ಅದಮ್ಯ ಚೇತನವಾಗಿದ್ದೆ. ನಿನ್ನನ್ನು ಎಲ್ಲರೂ “ಮೋಡರ್ನ ಅಜ್ಜಿ” ಎನ್ನುತ್ತಿದ್ದರು. ಪಂಚಾಗ, ಜಾತಕ, ಹಸ್ತ ಸಾಮುದ್ರಿಕಾದಿಂದ ಹಿಡಿದು ಈಗಿನ ಮೊಬೈಲ್, ಕಂಪ್ಯೂಟರ ಬಗೆಗಿನ ಮಾಹಿತಿಯೂ ನಿನಗಿತ್ತು ಎಂಬುದೇ ಆಶ್ಚರ್ಯಕರ ಸಂಗತಿ. ನಿನ್ನನ್ನು ಆಯಿಯಾಗಿ ಪಡೆಯಲು ನಾವೆಷ್ಟು ಪುಣ್ಯ ಮಾಡಿದ್ದೆವೋ ಎಂಬಂತೆ ನಮ್ಮೊಳಗೆ ಹೆಮ್ಮೆ ತುಂಬಿ ಮರೆಯಾದೆಯಾ ಆಯೀ?

ನಿನ್ನ 50ನೇ ವಯಸ್ಸಿಗೆ ಮಕ್ಕಳ ಜೊತೆ ಹುಲದೇವನಸರದ ಜಮೀನಿಗೆ ಬಂದು ನಮ್ಮ ಅಣ್ಣಯ್ಯನವರ ಜೊತೆ ಅವರಿಗೆಲ್ಲಾ ಮಾರ್ಗದರ್ಶನ ನೀಡುತ್ತಾ ಹೆಗಲಿಗೆ ಹೆಗಲು ಕೊಟ್ಟು ಹುಲದೇವನಸರದ ಜಮೀನಿನ ಅಭಿವೃದ್ಧಿಗೆ ಸಹಾಯ ಮಾಡಿದೆ. ನಿನ್ನ ಕೃಷಿ ಪ್ರೀತಿ ಜನರನ್ನೂ ಮೂಕರಾಗಿಸಿದ್ದು ಸತ್ಯವಾದರೂ, ಮುಂದಿನವರಿಗಾಗಿ ಮಾಡಬೇಕೆಂಬ ನಿನ್ನ ಮಾತು ಇನ್ನೂ ನನ್ನ ಮನದಲ್ಲಿ ಅಚ್ಛಾಗಿದೆ. ನಮ್ಮ ಮನೆಯಲ್ಲಿಯೂ ಎಲ್ಲ ತರಹದ ಹಣ್ಣು ಹಂಪಲು ಬೆಳೆಯಬೇಕೆಂದು ಆಸೆಪಟ್ಟ ನಿನ್ನಾಸೆಯ ಬಗ್ಗೆ ನಾವು ಯಾವಗಲಾದರೂ ಆಯಿ, “ಎಂತಕ್ಕೆ ಇಷ್ಟು ಆಸೆ ಪಡ್ತೆ” ಎಂಬುದಾಗಿ ಕೇಳಿದರೆ, ‘ನಾವು ನೆಟ್ಟ ಫಲ ನಮ್ಮ ಮುಂದಿನವರಿU’É ಎನ್ನುತ್ತಿದ್ದೆ. ಆ ಮರಗಳನ್ನು ನೋಡಿದಾಗ ಸದಾ ನಿನ್ನ ನೆನಪು ಹಸಿರಾಗಿರುವಂತೆ ಮಾಡಿದೆ. ಮರಗಳಷ್ಟೇ ಅಲ್ಲ, ಹೂ ಹಣ್ಣುಗಳೂ, ಹಕ್ಕಿ ಪಕ್ಷಿಗಳೂ, ಹರಿವ ನೀರೂ ಸೀತಕ್ಕನ ಸ್ಮರಣೆಯನ್ನು ನಿತ್ಯವಾಗಿಸಿದೆ ಎಂಬಂತೆ ತೋರುತ್ತಿದೆ.

RELATED ARTICLES  ವಿದ್ಯೆ ಎನ್ನುವ ಬಹುದೊಡ್ಡ ಆಸ್ತಿ ವಿದ್ಯಾರ್ಥಿಗಳಿಸಿಕೊಳ್ಳಬೇಕು.

ಕುಟುಂಬ ನಿರ್ವಹಣೆ ಜೊತೆಗೆ ಸಾಮಾಜಿಕ ಜೀವನದಲ್ಲಿಯೂ ನಿನ್ನನ್ನು ತೊಡಗಿಸಿಕೊಂಡು 1976ರಲ್ಲಿ ಇಸಳೂರು ಗ್ರಾಮ ಪಂಚಾಯತಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದೆ. ಇದಕ್ಕೂ ಮೊದಲು ಮುಂಡಿಗೇಸರ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿ ಊರ ಮಹಿಳೆಯರ ಅಭ್ಯುದಯಕ್ಕೆ ಶ್ರಮಿಸಿ ಮೆಚ್ಚುಗೆಗಳಿಸಿದ್ದು ನನಗೆ ನೆನಪಾಗುವುದಷ್ಟೇ ಅಲ್ಲ ಇಂದಿಗೂ ಸಮಾಜದ ಅನೇಕರು ಅದನ್ನು ಸಂಸ್ಮರಿಸುವುದು ನಿನ್ನ ಸಾಮಾಜಿಕ ಕತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.

ತೊಂಬತ್ತಾ ನಾಲ್ಕು ವರ್ಷದ ತುಂಬು ಜೀವನದಲ್ಲಿ ಕೊನೆಯ ಒಂದು ತಿಂಗಳು ಮಾತ್ರ ವಯೋಸಹಜ ಅನಾರೋಗ್ಯದಿಂದ ಬಳಲಿದೆ. ಬದುಕಿನುದ್ದಕ್ಕೂ ಇತರರ ಉನ್ನತಿಯನ್ನೇ ಬಯಸಿದ ನಿನ್ನ ಔನತ್ಯದ ಜೀವನದಲ್ಲಿ ಕೊನೆಗೂ ಯಾರಿಗೂ ತೊಂದರೆ ನೀಡದೆ, ಎಲ್ಲ ಶುಭ ಕಾರ್ಯಗಳಿಗೆ ಆಶೀರ್ವದಿಸಿ ನಿನ್ನ ಅನಿಸಿಕೆಯಂತೆ ಇಚ್ಛಾಮರಣ ಹೊಂದಿದೆ ಎಂದರೂ ತಪ್ಪಲ್ಲ.

ಮುಕ್ತಿ ದೊರೆಯಲೆಂದು ಬಹಳ ಪ್ರೀತಿಯಿಂದ ಕಳಿಸಿಕೊಡಬೇಕೆಂದು ಊಹಿಸಿದರೂ ‘ಆಯಿ’ ಎಂಬ ಎರಡಕ್ಷರದ ಸ್ಪೂರ್ತಿಯ ಚೇತನ ನಮ್ಮೊಂದಿಗೆ ಇರದು ಎಂಬ ದುಗುಡ, ಮನಸನ್ನು ಆವರಿಸಿಬಿಟ್ಟಿದೆ. ನೀನು ಮಲಗುವ ಜಾಗ, ಕುಲಿತುಕೊಳ್ಳುವ ಖುರ್ಚಿ, ಎಲ್ಲವೂ ಬಣ ಬಣ ಎನಿಸುತಿದೆ. ಆಗಾಗ ತಂಗಿ.. ತಂಗಿ.. ಎಂದು ಮತ್ತೆ ಮತ್ತೆ ಕರೆದಂತೆ ಭಾಸವಾಗುತ್ತಿದೆ. ಮತ್ತೆ ಬಾರದೇ ಚಿರ ನಿದ್ರೆಗೆ ಜಾರಿದರೂ, ನಿತ್ಯ ನೀನು ಮಲಗಿದಾಗ ‘ಮತ್ತೊಂದು ಹೊದಕಲು ಹಾಕು ಬೆಳಗಿನ ಜಾವದಲ್ಲಿ ಚಳಿಯಾಗುತ್ತದೆ’ ಎಂದಂತೆ ಅನಿಸುತ್ತಿದೆ. ಮನಸ್ಸಿನಾಳದ ಭಾವನೆಗಳಿಗೆ ಕೊನೆಯುಂಟೆ ? ಆಯಿ. .
ಭೌತಿಕವಾಗಿ ನೀ ಮರೆಯಾದರೂ ಮನಃ ಪಟಲದಲ್ಲಿ ನಿನ್ನ ನೆನಪು ಮತ್ತೆ ಮತ್ತೆ ಆವರಿಸಕೊಳ್ಳುತ್ತಿದೆ. ನಿನ್ನ ಆಪ್ತೇಷ್ಠರೆಲ್ಲರೂ ಇಂದು ಸೇರಿ ನಿನ್ನೊಂದಿಗಿನ ಆ ಕ್ಷಣಗಳನ್ನು ನೆನಪಿಸುತ್ತಾ ನಿನ್ನ ಆತ್ಮಕ್ಕೆ ಚಿರ ಶಾಂತಿ ಕೋರುತ್ತಿದ್ದಾರಾದರೂ ನಮ್ಮ ಆತ್ಮದಲ್ಲಿ ನಿನ್ನ ಇರುವಿಕೆ ಅಮರವಾಗುವಂತೆ ಭಾಸವಾಗುತ್ತಿದೆ. ಕಾಯ ಅಳಿದರೂ ಕಾಯಕ ಉಳಿಯುವುದೆಂಬಂತೆ ಬದುಕಿ ಬೆಳಗಿದ ಪ್ರೀತಿಯ ಆಯೀ.. ನಿನಗಿದೋ ನನ್ನ ನಮನ… ಇದು ನಿನ್ನ ಮಗಳು ಶ್ರೀಮತಿಯ ನುಡಿ ನಮನ.

ಧನ್ಯಳು ಆಯಿ, ನಾನೂ ಧನ್ಯಳು

ಇಂತಿ ನಿನ್ನ ಮಗಳು

ಶ್ರೀಮತಿ ಹೆಗಡೆ ಬೆಂಗಳೂರು 8310554273