ಕಲೆಗೆ ಒಲಿಯದವರಿಲ್ಲ ಮನಸೋಲದವರಿಲ್ಲ. ಸಂಗೀತ ಸಾಹಿತ್ಯ ಚಿತ್ರಕಲೆ ನೃತ್ಯ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಆಸಕ್ತಿದಾಯಕ ಕ್ಷೇತ್ರವಾಗಿರತ್ತೆ. ಪ್ರತಿಭೆ ಹಾಗೂ ಸತತ ಪರಿಶ್ರಮದಿಂದ ನಾವು ನಮಗಿರುವ ಆಸಕ್ತಿ ಕ್ಷೇತ್ರದಲ್ಲಿ, ಕಲೆಯಲ್ಲಿ ಹಣತೆಯಂತೆ ಬೆಳಗಲು ಸಾಧ್ಯ.ಇದರ ಜೊತೆಗೆ ಒಬ್ಬ ಕ್ರಿಯಾಶೀಲ ಸಹೃದಯಿ ಶಿಕ್ಷಕ ಗುರುವಿನ ಮಾರ್ಗದರ್ಶನ ದೊರೆತರಂತೂ ನಿಸ್ಸಂದೇಹವಾಗಿ ಪ್ರತಿಭೆ ಬೆಳಗಬಲ್ಲದು.
ಅಂತಹ ಕ್ರಿಯಾಶೀಲ ಗುರುವಿನ ಪರಿಶ್ರಮ ಶಾಲಾ ಆಡಳಿತ ಮಂಡಳಿ ಹಾಗೂ ಶ್ರೀ ಚಿತ್ರಾಪುರ ಮಠದ ಸಂಪೂರ್ಣ ಸಹಕಾರದಿಂದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ತಲೆ ಎತ್ತಿನಿಂತಿದೆ ಕಲಾಕುಸುಮ ಆರ್ಟ್ ಗ್ಯಾಲರಿ.
ಚಿತ್ರಕಲೆಯಲ್ಲಿ ಜಿಲ್ಲೆಯಲ್ಲಿಯೇ ಅತ್ಯಂತ ಗಮನ ಸೆಳೆದ ಕಲಾವಿದ ಸದಾ ಹಸನ್ಮುಖಿ ಶಿಕ್ಷಕ ಸಂಜಯ ಗುಡಿಗಾರ ಅವರೇ ಈವೊಂದು ಕಲಾಕುಸುಮದ ಕನಸುಗಾರ.
ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ರಾಜ್ಯಮಟ್ಟದವರೆಗೂ ಗುರುತಿಸಿಸುವಂತೆ ಮಾಡಿದ ಚಿತ್ರಕಲಾ ಶಿಕ್ಷಕ.
ಇಂದು ಮಠದ ಸಹಕಾರದಿಂದ ವಿದ್ಯಾರ್ಥಿಗಳೇ ರಚಿಸಿದ ಅನೇಕ ಅದ್ಬುತ ಕಲಾಕೃತಿಗಳನ್ನು ಸಂರಕ್ಷಿಸುವ ಮಹತ್ವದ ಕಾರ್ಯ ಮಾಡಿದ್ದಾರೆ.ಇದು ಇನ್ನೂ ಮುಂಬರುವ ಅನೇಕ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಅಭಿರುಚಿ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಅಬ್ಬರದ ಪ್ರಚಾರ ಆಡಂಭರಕ್ಕೆ ಆಸೆ ಪಡದೆ ಶೃದ್ದೆಯಿಂದ ತಮ್ಮ ಕಾರ್ಯದಲ್ಲಿ ಯಶಸ್ಸು ಕಂಡಿದ್ದಾರೆ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪ್ರೌಢಶಾಲೆಯಲ್ಲಿ ಇಂತಹ ಒಂದು ಆರ್ಟ್ ಗ್ಯಾಲರಿ ನಿರ್ಮಾಣವಾಗಿರುವುದು ಶ್ರೀವಲ್ಲಿ ಶಾಲೆಗೆ ಭಟ್ಕಳ ತಾಲೂಕಿಗೆ ಹೆಮ್ಮೆಯ ಸಂಗತಿ.
ಈ ಆರ್ಟ್ ಗ್ಯಾಲರಿಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚಿನ ಕಲಾಕೃತಿಗಳನ್ನು ನಾವು ಕಾಣಬಹುದಾಗಿದೆ. ಒಂದೊಂದು ಕಲಾಕೃತಿಯು ಒಂದಕ್ಕಿಂತ ಒಂದು ಹೆಚ್ಚೆ ಎನ್ನುವಂತೆ ಕಾಣುತ್ತದೆ. ಇಲ್ಲಿನ ಎಲ್ಲ ಕೃತಿಗಳು ಕೂಡ ವಿದ್ಯಾರ್ಥಿಗಳೇ ಬಿಡಿಸಿದಂತಹುಗಳು ಎನ್ನುವುದು ವಿಶೇಷ.
ಕಥಕ್ಕಳಿಯ ವೇಷದಾರಿ, ಕೊಳದಲ್ಲಿ ಬಾಯಾರಿಕೆ ನೀಗಿಸಿಕೊಳ್ಳುವ ಹುಲಿ, ಜೋಕಾಲಿಯಲ್ಲಿ ಕುಳಿತ ಪುಟ್ಟ ಬಾಲೆ, ನವಿಲಗರಿ ಹಿಡಿದು ತನ್ನ ಕೃಷ್ಣನ್ನ ನೆನೆವ ರಾಧೆಯ ಚಿತ್ರಗಳು ತಕ್ಷಣ ಗಮನ ಸೆಳೆಯುವಂತ ಅದ್ಬುತ ಕಲಾಕೃತಿಗಳು. ಚಿತ್ರಾಪುರ ಮಠದ ಶ್ರೀ ಗಳಾದ ಸದ್ಯೋಜ್ಯಾತ ಶಂಕರಾಶ್ರಮ ಸ್ವಾಮಿಗಳ ಕುಳಿತ ಭಂಗಿಯಲ್ಲಿರು ಚಿತ್ರ ಒಳಬಂದ ಪ್ರತಿಯೊಬ್ಬ ಕಲಾ ಆರಾಧಕನು ನಿಂತು ನೋಡುವಂತೆ ಕಲಾವಿದ ಚಿತ್ರಿಸಿದ್ದಾನೆ.
ಇಲ್ಲಿ ಅನೇಕ ಉಬ್ಬು ಶಿಲ್ಪ ಕಲಾಕೃತಿಗಳು ಇರುವುದು ಇನ್ನೊಂದು ವಿಶೇಷ. ಇಲ್ಲಿನ ಕಲಾಕೃತಿಗಳಲ್ಲಿ ಆದರ್ಶ ರೇವಣ್ಕರ್, ಸಚಿನ ಗೊಂಡ, ನಿತಿನ್ ನಾಯ್ಕ ವಿದ್ಯಾರ್ಥಿಗಳು ರಾಜ್ಯಮಟ್ಟದವರೆಗೂ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಬಾಲ ಕಲಾವಿದರಾಗಿದ್ದಾರೆ.
ಒಟ್ಟಾರೆಯಾಗಿ ಯಾವ ಪ್ರೌಢ ಹೆಸರಾಂತ ಕಲಾವಿದರಿಗೂ ಕಡಿಮೆ ಇಲ್ಲದಂತೆ ಕಲಾಕೃತಿಯನ್ನು ನೀಡಿರುವ ಇಲ್ಲಿನ ವಿದ್ಯಾರ್ಥಿಗಳ ಕಲೆಯ ಸವಿಯನ್ನೊಮ್ಮೆ ಸವಿಯಲಾದರೂ ನೀವೂ ಒಮ್ಮೆ ಭೇಟಿ ನೀಡಲೇಬೇಕು ಎನ್ನುವುದು ಲೇಖಕನಾದ ನನ್ನ ಅಭಿಪ್ರಾಯ. ಕಲಾಕುಸುಮ ಸದಾ ಬೆಳಗುತ್ತಿರಲಿ.
ಲೇಖನ -ಉಮೇಶ ಮುಂಡಳ್ಳಿ ಭಟ್ಕಳ 9945840552