ಪ್ರತಿಯೊಬ್ಬ ಸಂಸ್ಕಾರಯುತನಿಗೂ ತನ್ನ ನೆಲದ ಋಣ ,ಸಮಾಜದ ಋಣ ತೀರಿಸಬೇಕೆಂಬ ಬಯಕೆಯಿರುತ್ತದೆ. ದೇಶದ ಸೈನಿಕನಾಗಲು ಅಥವಾ ಪೋಲಿಸ್ ಆಗಿಯೋ ದೇಶಭಕ್ತಿಯ ತೋರಿಸುವುದಕ್ಕೆ ನಮ್ಮಲ್ಲಿ ಆಗದಿರಬಹುದು.  ಒಳಿತು ಮಾಡುವ ಮನಸ್ಸು ಇರುವವರಿಗೆ ಸಾವಿರಾರು ದಾರಿಗಳು ‌ಇದ್ದೇ ಇರುತ್ತದೆ.   ಸಮಾಜಕ್ಕಾಗಿ ನೆತ್ತರು ನೀಡುವ  ಒಂದು ಸುಸಂದರ್ಭ ಹೆಗ್ಗಾರಿನಲ್ಲಿ.

       ರುಧಿರವೆಂಬುದು ನಮ್ಮೊಳಗಿರುವ ಚೈತನ್ಯ. ನಾವು ಕ್ರಿಯಾಶೀಲವಾಗಿ ಇರಬೇಕೆಂದಾದರೆ ಶಕ್ತಿ ಇರಬೇಕೆಂದಾದರೆ ದೇಹದೊಳಗೆ ರಕ್ತವಿರಬೇಕು.  ನಮ್ಮ ಸ್ವಾಸ್ಥ್ಯಕ್ಕಾಗಿ ಹೊಸ ಹೊಸ ರಕ್ತಕಣಗಳು ಹುಟ್ಟುತ್ತಿರಬೇಕು. ರಕ್ತವಿಲ್ಲದೇ ಸಾಯುವವರು ಹಲವಾರು ಮಂದಿ. ಅಪಘಾತದಲ್ಲಿ , ಮಾರಕ ಕಾಯಿಲೆಗಳಲ್ಲಿ, ಹೆರಿಗೆಯ ಸಮಯದಲ್ಲಿ , ಹುಟ್ಟಿದ ಮಗುವಿನ ರಕ್ತವನ್ನು ಬದಲಾಯಿಸಬೇಕಾದ ಸಂದರ್ಭಗಳಲ್ಲಿ… ಹೀಗೆ ಹತ್ತು ಹಲವು.

      ಅಸಹಾಯಕ ಸ್ಥಿತಿಯಲ್ಲಿರುವ ಒಬ್ಬರಿಗೆ ಜೀವವಿತ್ತ ಪುಣ್ಯ‌ ಎಲ್ಲಕ್ಕಿಂತಲೂ ದೊಡ್ಡದು. ದೇಶಭಕ್ತಿ ಮನಸ್ಸು ಇರುವವರಿಗೆಲ್ಲ ರಕ್ತ ಕೊಡುವಷ್ಟು ಆರೋಗ್ಯ ಇಲ್ಲದಿರಬಹುದು. ಆದರೆ ನಮ್ಮ ನಿಮ್ಮೊಳಗಿರುವ  ಆರೋಗ್ಯಯುತ ರಕ್ತ ಹಲವು ಕುಟುಂಬದ ಕಣ್ಣಲ್ಲಿ ನಗುತರಿಸುವ ಶಕ್ತಿ ಹೊಂದಿದೆ. ಮಾತ್ರವಲ್ಲದೆ ನಮ್ಮೊಳಗಿರುವ ರಕ್ತ ದಾನ ಮಾಡಿದಾಗ ಹುಟ್ಟುವ ಹೊಸ ರಕ್ತ ನಮ್ಮ ಆರೋಗ್ಯವನ್ನು ಸುಧಾರಣೆ ಮಾಡುತ್ತದೆ.
  

ರಕ್ತದಾನ ಜೀವದಾನ– ನೀವು ಮಾಡುವ ರಕ್ತದಾನಕ್ಕೆ ಜೀವದಾನದ ಶಕ್ತಿ ಇದೆ ಎಂಬುದನ್ನು ಮತ್ತೊಮ್ಮೆ ಮನವರಿಕೆ ಮಾಡುತ್ತದೆ ಈ ಧ್ಯೇಯ ವಾಕ್ಯ. ಆಯುರ್ವೇದದಲ್ಲೂ ರಕ್ತದ ಮಹತ್ವವನ್ನು ವರ್ಣಿಸುವಾಗ ರಕ್ತಂ ಜೀವ ಇತಿ ಸ್ಥಿತಿಃ ಎಂದಿದ್ದಾರೆ. ಅಂದರೆ ರಕ್ತವನ್ನು ಜೀವ ಎಂದು ಸಂಬೋಧಿಸಿದ್ದಾರೆ.

ರಕ್ತದಾನದ ಬಗ್ಗೆ ಬಹಳಷ್ಟು ಜನರಿಗೆ ಅನಗತ್ಯ ಭಯ, ತಪ್ಪು ತಿಳಿವಳಿಕೆಗಳೇ ಹೆಚ್ಚು. ಆದರೆ ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಲ್ಲ, ರಕ್ತದಾನಿಗಳೂ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತ ಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ, ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ, ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗುತ್ತದೆ, ಆತ ಇನ್ನಷ್ಟು ಆರೋಗ್ಯವಂತನಾಗಿರಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಕೆಲವು ರೋಗಗಳನ್ನು ತಡೆಗಟ್ಟಬಹುದು ಎಂದು ಆಯುರ್ವೇದದಲ್ಲಿ ಹೇಳಿದ್ದಾರೆ. ಇಂತಹ ರೋಗಗಳಿಗೆ ರಕ್ತಮೋಕ್ಷಣ ಎಂಬ ಪಂಚಕರ್ಮ ಚಿಕಿತ್ಸೆಯನ್ನು ಸುಶ್ರುತರು ವರ್ಣಿಸಿದ್ದಾರೆ. ರಕ್ತಮೋಕ್ಷಣ ಎಂದರೆ ರೋಗಿಯ ಶರೀರದಿಂದ ನಿರ್ದಿಷ್ಟ ಪ್ರಮಾಣದಲ್ಲಿ ಕೆಟ್ಟ ರಕ್ತವನ್ನು ಹೊರಹಾಕುವುದು ಎಂದರ್ಥ. ಒಟ್ಟಾರೆ ರಕ್ತದಾನದಿಂದ ರಕ್ತದಾನಿ ಮತ್ತು ರಕ್ತ ಪಡೆದವರು ಇಬ್ಬರಿಗೂ ಲಾಭವಾಗುವುದು ನಿಶ್ಚಿತ. ಹಾಗಂತ ಎಲ್ಲರೂ ರಕ್ತದಾನ ಮಾಡುವಂತಿಲ್ಲ.

RELATED ARTICLES  ಕೆರೆಯ ನೀರನು ಕೆರೆಗೆ ಚೆಲ್ಲು

ಯಾರು ರಕ್ತದಾನಕ್ಕೆ ಅರ್ಹರು?
* 18–60 ವರ್ಷದೊಳಗಿನ ಎಲ್ಲ ಆರೋಗ್ಯವಂತ ವ್ಯಕ್ತಿಗಳು
* ತೂಕ 45 ಕಿ.ಜಿ.ಗಿಂತ ಹೆಚ್ಚಿರುವವರು
* ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ.ಗಿಂತ ಹೆಚ್ಚಿರುವವರು
* ಆರೋಗ್ಯವಂತ ಪುರುಷರು ಮೂರು ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ಯಾರು ಅನರ್ಹರು?
* ರಕ್ತದಾನ ಮಾಡಿದವರು ಮುಂದಿನ ಮೂರು ತಿಂಗಳುಗಳವರೆಗೆ
* ಯಕೃತ್, ಮೂತ್ರಪಿಂಡ, ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಇರುವವರು
* ಗರ್ಭಿಣಿ, ಋತು ಸ್ರಾವದಲ್ಲಿರುವ ಸ್ತ್ರೀ, ಮಗುವಿಗೆ ಹಾಲುಣಿಸುವ ತಾಯಂದಿರು
* ರಕ್ತಹೀನತೆ ಇರುವವರು
* ರಕ್ತ ವರ್ಗಾವಣೆ ಮಾಡಿಸಿಕೊಂಡವರು, ಮಲೇರಿಯಾ, ಟೈಫಾಯ್ಡ್, ಕಾಮಾಲೆಯಿಂದ ಬಳಲಿದವರು ಮುಂದಿನ 6 ತಿಂಗಳವರೆಗೆ
* ಶಸ್ತ್ರ ಚಿಕಿತ್ಸೆಗೊಳಗಾದವರು
* ಯಾವುದೇ ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೂಂಡವರು ಮುಂದಿನ 3 ತಿಂಗಳಿನವರೆಗೆ

‌‌‌‌ ರಕ್ತಕ್ಕೆ ಪರ್ಯಾಯವಾದ ವಸ್ತು ಮತ್ತೊಂದಿಲ್ಲ. ಒಬ್ಬ ದಾನಿಯಿಂದ ಪಡೆದ ರಕ್ತದಿಂದ ರಕ್ತದ ಘಟಕಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿ ಅನೇಕ ವ್ಯಕ್ತಿಗಳ ಪ್ರಾಣ ಉಳಿಸಬಹುದು. ಅಲ್ಲದೇ ಒಬ್ಬ ದಾನಿಯಿಂದ ಪಡೆದ ರಕ್ತವನ್ನು ಕೇವಲ 35 ದಿನಗಳ ಒಳಗೆ ಮಾತ್ರ ಉಪಯೋಗಿಸಲು ಸಾಧ್ಯ ಮತ್ತು ಅದನ್ನು ಅದೇ ರಕ್ತ ಗುಂಪಿನ ಮತ್ತೊಬ್ಬ ವ್ಯಕ್ತಿಗೆ ಮಾತ್ರ ಉಪಯೋಗಿಸಬಹುದು. ದಾನ ಮಾಡಿದ ವ್ಯಕ್ತಿಯಲ್ಲಿ ಶುದ್ಧ ರಕ್ತ 3 ತಿಂಗಳಲ್ಲಿ ಪುನಃ ಉತ್ಪತ್ತಿಯಾಗುತ್ತದೆ.

RELATED ARTICLES  ಹಣತೆ ಹಚ್ಚೋಣ ನಾವೂ.

ಒಬ್ಬ ಆರೋಗ್ಯವಂತನ ದೇಹದಲ್ಲಿ ಸುಮಾರು 6 ಲೀಟರ್‌ನಷ್ಟು ರಕ್ತವಿದ್ದು ರಕ್ತದಾನಕ್ಕೆ ಕೇವಲ 350 ಮಿ.ಲೀ. ರಕ್ತವನ್ನು ಮಾತ್ರವೇ ದಾನಿಯಿಂದ ಸ್ವೀಕರಿಸಲಾಗುತ್ತದೆ ಮತ್ತು ಇದರಿಂದ ದಾನಿಗೆ ಯಾವುದೇ ಅಪಾಯವಿಲ್ಲ. ಈ ಸೂಕ್ಷ್ಮ ಅಂಶಗಳ ಅರಿವು ಹೆಚ್ಚಿನ ಜನರಿಗಿಲ್ಲ. ಈ ಕಾರಣದಿಂದಲೇ ಇಂದಿಗೂ ಹೆಚ್ಚಿನ ದೇಶಗಳಲ್ಲಿ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ದೊಡ್ಡ ಪ್ರಮಾಣದ ಅಸಮತೋಲನ ಎದ್ದು ಕಾಣುತ್ತಿದೆ

    ಆರೋಗ್ಯ ಕೇಂದ್ರಗಳನ್ನು ಹುಡುಕಿ ಹೋಗಿ ರಕ್ತ ಕೊಟ್ಟು ಬರುವ ಕಾರ್ಯ ನಮ್ಮ ಒತ್ತಡದ ದಿನಗಳಲ್ಲಿ ಆಗದಿರಬಹುದು‌.ಆದರೆ ಊರಿಗೆ ವೈದ್ಯರು ಬರುವಾಗ ಪುಣ್ಯದ ಕಾರ್ಯದಲ್ಲಿ ಸಾಧ್ಯವಾದವರೆಲ್ಲರೂ ಪಾಲ್ಗೊಳ್ಳಿ. ಇಂದು ನಾವು ಕೊಟ್ಟ ನೆತ್ತರು ಹಲವು ಜನರ ಪ್ರಾಣ ಉಳಿಸಿದರೆ ಮುಂದೊಂದು ದಿನ ನಮ್ಮ  ಪ್ರಾಣವೂ… ಇನ್ನೊಂದು ಜೀವದಿಂದ  ಉಳಿದೀತು ತಾನೆ. …??

   ನೆತ್ತರು ಹರಿಸದಿರಿ ,ಸುರಿಸದಿರಿ …ದೇಶಪ್ರೇಮಕ್ಕೆ…! ನೆತ್ತರಿಲ್ಲದೇ ಬಳಲಿದವನ ಜೀವದಲ್ಲಿ ಮಿಂಚಾಗಿಸಿ.. ನಗುವಾಗಿಸಿ…. ಜೀವನವಾಗಿಸಿ.ನಿಮ್ಮ ನೆತ್ತರು ಸಮೃದ್ಧವಾಗಿ ಆರೋಗ್ಯಯುತವಾಗಿ ಪ್ರತಿ ವರ್ಷವೂ ಹಲವಾರು ಜನರಿಗೆ  ಪ್ರಾಣ ಉಳಿಸಲಿ..
  

ಮಧುರಾಗ (ಮಧುರಾ ಗಾಂವ್ಕರ್)