ಹಿರಿಯ ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಹೊಸ್ತೋಟಾ ಮಂಜುನಾಥ ಭಾಗವತ ಅವರು ನಿಧನರಾಗಿದ್ದಾರೆ ಎಂದು ಅವರನ್ನು ತುಂಬ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದ ಹಿರಿಯೂರಿನ ಶ್ರೀಪಾದ ಜೋಶಿ ಅವರು ನನಗೆ ದೂರವಾಣಿ ಮೂಲಕ ತಿಳಿಸಿದರು.

ತುಂಬ ಅನಾರೋಗ್ಯದಲ್ಲಿದ್ದ ಅವರನ್ನು ಕಳೆದವಾರವಷ್ಟೇ ಶಿರಸಿಯ ಹಿರಿಯೂರಿನ ಶ್ರೀಪಾದ ಜೋಶಿ ಅವರ ಮನೆಗೆ ನಾನು ಹೋಗಿ ನೋಡಿ ಬಂದಿದ್ದೆ. ಅಗಲೇ ಅವರು ಬದುಕಿನ ಕೊನೆಯಂಚಿನಲ್ಲಿದ್ದರು. ನಾನು ನನ್ನ ಹೆಸರು ಹೇಳಿದ ತಕ್ಷಣ ಪ್ರಜ್ಞೆ‌ ಕಳೆದು ಕೊಂಡಿದ್ದರೂ ನನ್ನ ತೋಳು ಗಟ್ಟಿಯಾಗಿ ಹಿಡಿದು ರಾಮ ರಾಮ..ರಾಮ ರಾಮ.. ಎಂದು ಏರು ಧ್ವನಿಯಲ್ಲಿ ಕೂಗಿದ್ದರು.

ಅವರ ನಿಧನ ತುಂಬ ನೋವು ತಂದಿತು. ಸಂತನಂತೆ ಬದುಕಿದ ಅವರ ಪಾಂಡಿತ್ಯ ಯಾವ ಭಾಷಾಶಾಸ್ತ್ರಜ್ಞನಿಗೂ ಕಡಿಮೆ ಇರಲಿಲ್ಲ. ಅದಕ್ಕಾಗಿಯೇ ನಾನು ಅವರನ್ನು ಸಾಹಿತಿ ಅಂತಲೇ ಕರೆಯುವುದು. ಕನ್ನಡಕ್ಕೆ ಅವರು ಕೊಟ್ಟ ಕೊಡುಗೆ ಅನನ್ಯ. ಈ ನೆಲೆಯಲ್ಲಿ ಕನ್ನಡ ಉಳಿಸಿಕೊಳ್ಳಲು ಅವರದ್ದು ಮೌನ ಹೋರಾಟ. ಹಳಿಯಾಳದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಕಾರಣಕ್ಕಾಗಿ ಅವರಿಂದಲೇ ಉದ್ಘಾಟನೆ ಮಾಡಿಸಿದ್ದೆ. ಈ ಉದ್ಘಾಟನೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಯಕ್ಷಗಾನಕ್ಕೆ ಕೊಟ್ಟ ಗೌರವದ ರೂಪಕವೂ ಆಗಿತ್ತು. ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಹೊಸ್ತೋಟಾ ಮಂಜುನಾಥ ಭಾಗವತ ಅವರ ಹೆಸರಿನ ಮುಂದೆ ಸಾಹಿತಿ ಅಂತಲೇ ಮುದ್ರಿಸಿದ್ದೆ. ಯಕ್ಷಗಾನ ಪ್ರಸಂಗಕರ್ತರೊಬ್ಬರನ್ನು ಕನ್ನಡ ಸಾರಸ್ವತ ಲೋಕ ಸಾಹಿತಿ ಅಂತ ಕರೆದದ್ದು ಇದೇ ಮೊದಲಾಗಿತ್ತು. ಆ ಮನ್ನಣೆ ಹೊಸ್ತೋಟಾ ಅವರ ಮೂಲಕ ಯಕ್ಷಗಾನಕ್ಕೆ ದಕ್ಕಿತ್ತು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ


ನನ್ನ ಅಭಿಪ್ರಾಯ ಇಷ್ಟೇ, ಇನ್ನು ಮುಂದೆ ಸಾಹಿತ್ಯ ಪರಿಷತ್ತಿನಿಂದ ಸಿಗಬೇಕಾದ ಎಲ್ಲ ಪುರಸ್ಕಾರಗಳೂ ಅಪ್ಪಟ ಕನ್ನಡ ಪರಿಚಾರಕರಾದ ಯಕ್ಷಗಾನ ಪ್ರಸಂಗಕರ್ತರಿಗೂ ಸಿಗಬೇಕು ಎಂಬುದಾಗಿತ್ತು. ಜಿಲ್ಲಾ ಸಮ್ಮೇಳನ ಉದ್ಘಾಟಿಸಿದ ಹೊಸ್ತೋಟಾ ಅವರು ಪ್ರಸಂಗಕರ್ತರನ್ನು ಗುರುತಿಸುವ ಪರಿಷತ್ತಿನ ಕ್ರಮಕ್ಕೆ ಕೃತಜ್ಞತೆ ಸಲ್ಲಿಸಿದ್ದರು.

RELATED ARTICLES  ಬಲವಂತದ ಜೀವನ

ಹಳದೀಪುರದಲ್ಲಿ ‘ಯಕ್ಷರಂಗ’ ಪತ್ರಿಕೆಯ ಸಂಪಾದಕ, ಗೆಳೆಯ ಗೋಪಾಲಕೃಷ್ಣ ಭಾಗವತ ಅವರು ತಮ್ಮ ತಂದೆ ಕಡತೋಕಾ ಮಂಜುನಾಥ ಭಾಗವತರ ಸ್ವರಣಾರ್ಥ ಸಂಘಟಿಸಿದ್ದ ತಾಳಮದ್ದಳೆ ವಿಚಾರ ಸಂಕಿರಣದಲ್ಲಿ ನಾನು ಮತ್ತು ಹೊಸ್ತೋಟಾ ಮಂಜುನಾಥ ಭಾಗವತ್ ಕೂಡ ಪಾಲ್ಗೊಂಡಿದ್ದೆವು. ನಾನು ವೇದಿಕಯಲ್ಲಿ ಮಾತನಾಡುತ್ತ ” ಪುರಾಣದಲ್ಲಿದ್ದಂತೆ ಯಕ್ಷಗಾನ ಕಥನದಲ್ಲೂ ಪ್ರಸಂಗಕರ್ತರು‌ ಜಾತಿವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಅದು ಅಪ್ಡೇಟ್ ಆಗುವ ತುರ್ತು ಇದೆ” ಎಂದು ಹೇಳಿದೆ.
ಅದಕ್ಕೆ ತುಂಬ ಸಂಯಮದಿಂದ ಪ್ರತಿಕ್ರಿಯಿಸಿದ ಹೊಸ್ತೋಟಾ ” ಕರ್ಕಿಕೋಡಿಯವರೇ, ನಿಮ್ಮ ಸೂಕ್ಷ್ಮತೆ ಮತ್ತು ಆತಂಕ ಎರಡೂ ನನಗೆ ಅರ್ಥವಾಗುತ್ತದೆ. ಕಾಲ ಎಲ್ಲವನ್ನೂ ಸರಿಪಡಿಸುತ್ತದೆ. ಆ ಭರವಸೆ ನಿಮ್ಮಲ್ಲಿರಲಿ” ಎಂದು ಮಾರ್ಮಿಕವಾಗಿ ಹೇಳಿದರು.

ಅವರೊಂದಿಗೆ ನಾನು ಒಡನಾಡಿದ್ದು ಕೆಲವೇ ಕೆಲವು ಕ್ಷಣಗಳಾಗಿದ್ದವು. ಆ ಕ್ಷಣಗಳು ನನ್ನೊಳಗಿನ ಎಷ್ಟೋ ಭ್ರಮೆಗಳನ್ನು ಕಳಚಿಹಾಕಿದ್ದವು.

ಅವರೊಂದಿಗಿನ ಎಲ್ಲ ಸವಿ ನೆನಪುಗಳೊಂದಿಗೆ ???
– ಅರವಿಂದ ಕರ್ಕಿಕೋಡಿ