ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಡಾ ರವೀಂದ್ರ ಭಟ್ಟ ಸೂರಿ
ಕುಮಟಾ ತಾಲೂಕಿನ ಹೆಗಡೆ ಗ್ರಾಮದ ನಿವಾಸಿ ಡಾ||ರವೀಂದ್ರ ಭಟ್ಟ ಸೂರಿ ತನ್ನ ಭಾಷೆ, ವಿನೋದ, ನಿರೂಪಣೆ, ಗಾಂಭೀರ್ಯ, ಸೂಕ್ಷ್ಮಸಂವೇದನೆಗಳಿಂದ ನನಗೆ ತುಂಬಾ ಇಷ್ಟವಾಗುತ್ತಾರೆ.
ಒಬ್ಬ ಪ್ರತಿಭಾವಂತ ದೈಹಿಕ ಶಿಕ್ಷಕರಾಗಿ ಯೋಗ, ವ್ಯಾಯಾಮಗಳನ್ನಷ್ಟೇ ಮಕ್ಕಳಿಗೆ ಕಲಿಸದೆ ಜೀವನದ ಕೌಶಲ್ಯವನ್ನು ಕಲಿಸಬಲ್ಲ ರವೀಂದ್ರ ಭಟ್ಟ ಸೂರಿ ಅದ್ಭುತ ವಾಗ್ಮಿ. ಭಗವಂತ ಇವರಿಗೆ ನೀಡಿದ ವಿಶೇಷ ಧ್ವನಿ, ಶೈಲಿ, ಸಾಮರ್ಥ್ಯಗಳಿಂದ ಇಂದು ನಾಡಿನ ಅದ್ಭುತ ನಿರೂಪಕರಲ್ಲಿ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಸುಮಾರು 3000 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಿರೂಪಿಸಿದ ಇವರು ನಮ್ಮ ಸಂದೇಶ ಮಂಟಪ ಹರಟೆ ತಂಡದ ಒಬ್ಬ ಹಿರಿಯ ಸದಸ್ಯ.
ವಿವಿಧ ಕಾರ್ಯಕ್ರಮಗಳನ್ನು ಸುವ್ಯವಸ್ಥಿತವಾಗಿ ಸಂಘಟಿಸುವ ಇವರ ಜಾಣ್ಮೆ, ಕ್ರಿಯಾಶೀಲತೆ ನಿಜಕ್ಕೂ ಒಂದು ಮಾದರಿ. ಹಿರಿಯರನ್ನು ಗೌರವಿಸುವ, ಕಿರಿಯರನ್ನು ಅಪಾರವಾಗಿ ಪ್ರೀತಿಸುವ ಇವರು ನಂಜಿಲ್ಲದೇ ನನ್ನನ್ನು ಅಪಾರವಾಗಿ ಪ್ರೀತಿಸಿದ ವ್ಯಕ್ತಿ.
ಬಹುತೇಕವಾಗಿ ನನ್ನ ಮತ್ತು ಅವರ ಹವ್ಯಾಸಗಳು ಒಂದೇ ಇದ್ದರೂ ಗುಣೀ ಗುಣಿಷು ಮತ್ಸರೀ ಎಂಬ ವಾಕ್ಯಕ್ಕೆ ತದ್ವಿರುದ್ಧವಾಗಿ ಅವರು ನನ್ನ ಮೇಲೆ ಪ್ರಭಾವ ಬೀರಿದರು.
ರಾಮಚಂದ್ರಾಪುರಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಶ್ರೀಗಳ ಮೇಲೆ ಅಪಾರ ಶೃದ್ಧೆಯನ್ನಿಟ್ಟು ಮಠದ ಅನೇಕ ಕಾರ್ಯಗಳಲ್ಲಿ ಸೇವಾಕೈಂಕರ್ಯ ಮಾಡುವ ರವೀಂದ್ರ ಭಟ್ಟ ಸೂರಿ ಸಾಹಿತಿಗಳಾಗಿ ಕೂಡ ಸಾಧನೆ ಮಾಡಿದವರು. ನಿರೂಪಣೆ, ಭಾವಜೀವಿಯಂತಹ ಅನೇಕ ಕೃತಿಗಳನ್ನು ಹೊರತಂದು ಸಾಧಕರೆನಿಸಿಕೊಂಡವರು. ಅವರಿಂದ ನಾನು ಅನೇಕ ವಿಷಯಗಳಲ್ಲಿ ಪ್ರಭಾವಿತಗೊಂಡಿದ್ದೇನೆ. ಅವರಿಗೊಂದು ಹೃದಯಪೂರ್ವಕ ಕೃತಜ್ಞತೆಯನ್ನು ಈ ಸಂದರ್ಭದಲ್ಲಿ ಅಕ್ಷರಗಳ ಮೂಲಕ ಸಲ್ಲಿಸಬೇಕನ್ನಿಸಿತು. ಗಜ ಗಾಂಭೀರ್ಯದ ಸೂರಿ ಭಟ್ಟರು ಅವರ ಹೊಲನಗದ್ದೆ ಸರಕಾರಿ ಪ್ರಾಥಮಿಕ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ರೂಪಿಸಿದ್ದು ಅದು ಉತ್ತರ ಕನ್ನಡ ಜಿಲ್ಲೆಯ ಅತ್ಯುತ್ತಮ ಪ್ರಾಯೋಗಿಕ ಶಾಲೆಯಾಗಿ ರೂಪುಗೊಂಡಿದೆ. ನಮ್ಮ ನಿಮ್ಮ ನಡುವಿನ ಒಬ್ಬ ಶ್ರೇಷ್ಠ ಸಾಧಕ.
ಎಲ್ಲಕ್ಕಿಂತ ಹೆಚ್ಚಿಗೆ ಮಾನವೀಯ ಸಂವೇದನೆಯ ಡಾ|| ರವೀಂದ್ರ ಭಟ್ಟ ಸೂರಿಯವರಿಗೆ ನಾನು ಸದಾ ಋಣಿ. ಅವರ ಸ್ನೇಹ, ಪ್ರೀತಿ, ನನಗೆ ಭಗವಂತ ಕರುಣಿಸಿದ ಆಸ್ತಿ. ಅವರ ಧರ್ಮಪತ್ನಿ ಕೂಡ ಪ್ರತಿಭಾವಂತ ಶಿಕ್ಷಕಿ. ಮಗನೊಂದಿಗೆ ಸಂತೃಪ್ತ ಸಂಸಾರ ನಡೆಸುತ್ತಿರುವ ರವೀಂದ್ರ ಭಟ್ಟ ಸೂರಿಯವರಿಗೆ ನನ್ನ ಇಷ್ಟ ದೈವ ಇಡಗುಂಜಿ ಮಹಾಗಣಪತಿಯು ಸುಖ, ನೆಮ್ಮದಿ, ಆರೋಗ್ಯ, ನೆಮ್ಮದಿಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.
ಸರ್ ನಿಮಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ