ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ಎನ್.ರಾಮು ಹಿರೇಗುತ್ತಿ

ಹಿರೇಗುತ್ತಿ ಹೈಸ್ಕೂಲಿನಲ್ಲಿ ಕನ್ನಡ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ರಾಮು ಹಿರೇಗುತ್ತಿ ಒಬ್ಬ ಪ್ರಾಮಿಸಿಂಗ್ ಯುವಕ. ತನ್ನದೇ ಆದ ಬದ್ಧತೆ, ತನ್ನದೇ ಆದ ಶಿಸ್ತು, ಖದರ್ ಹೊಂದಿದ ರಾಮು ಸರ್ ಜೀವಕ್ಕೆ ಜೀವ ಕೊಡುವ ಸ್ನೇಹಜೀವಿ. ನಾನು ಬರೆದ 21 ಪುಸ್ತಕಗಳನ್ನು ಕೊಂಡು ಓದಿ ನನಗೆ ಪ್ರತಿಕ್ರಯಿಸಿದ ಗೆಳೆಯ. ಎಲ್ಲಕ್ಕಿಂತ ಹೆಚ್ಚಿಗೆ ತಾನು ಸಮಾಜಕ್ಕೆ ಏನಾದರೊಂದು ಕೊಟ್ಟು ಹೋಗಬೇಕು…ವಿದ್ಯಾರ್ಥಿಗಳಿಗೆ ಪ್ರಾಮಾಣಿಕವಾಗಿ ಕಲಿಸಬೇಕೆನ್ನುವ ತುಡಿತವುಳ್ಳವರು.
ಈಗೊಂದು ಹತ್ತು ವರ್ಷಗಳ ಹಿಂದಿನ ಮಾತು. ಕುಮಟಾದಲ್ಲೊಂದು ಪುಸ್ತಕ ಮೇಳ ನಡೆದಿತ್ತು. ಗೆಳೆಯ ಚಿದಾನಂದ ಭಂಡಾರಿಯವರೊಂದಿಗೆ ಬಂದ ರಾಮು ಹಿರೇಗುತ್ತಿಯನ್ನು ಅವರೇ ನನಗೆ ಪರಿಚಯಿಸಿದರು. ಆಗಷ್ಟೇ ನನ್ನ ಮೊದಲ ಪುಸ್ತಕ ಮೌಲ್ಯಗಳು ಎಲ್ಲಿ ಸಿಗುತ್ತವೆ?! ಎನ್ನುವ ಪುಸ್ತಕ ಪ್ರಕಟವಾಗಿತ್ತು. ತಕ್ಷಣ ಪುಸ್ತಕ ಕೈಗೆತ್ತಿಕೊಂಡವರೆ ಹತ್ತು ಪುಸ್ತಕ ಎಣಿಸಿ ಸಾವಿರ ಕೈಗಿತ್ತು ನಡೆದೇ ಬಿಟ್ಟರು. ಅಷ್ಟಕ್ಕೇ ನಮ್ಮ ಸ್ನೇಹ ಮುಗಿದು ಬಿಡಲಿಲ್ಲ. ನನ್ನ ಬರವಣಿಗೆಯ ಕುರಿತಾಗಿ ಸ್ಪಂದಿಸಿದರು. ಮತ್ತೂ ಬರೆಯಿರಿ ನಾನೂ ನಿಮ್ಮ ಬರವಣಿಗೆಗೆ ಖಂಡಿತ ಪ್ರೋತ್ಸಾಹ ನೀಡುವೆ ಎಂದು ಭರವಸೆ ತುಂಬಿದರು. ಮನೆಗೂ ಬಂದು ನಮ್ಮ ಮನೆಯ ಆತಿಥ್ಯ ಸ್ವೀಕರಿಸಿದರು.
ಹಿರೇಗುತ್ತಿಯ ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿ ಬೆಳೆದ ರಾಮು ಸರ್ ಗೆ ತನ್ನ ಪ್ರತಿಷ್ಠೆಯೇ ಹೆಚ್ಚಲ್ಲ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ರಾಮು ಸರ್ ಸಮ ವಯಸ್ಕರೊಂದಿಗೆ ಸ್ನೇಹಿತರಾಗಿ ಬೆರೆಯುತ್ತಾರೆ. ಹಿರಿಯರಿಗೆ ಗೌರವಿಸುವ ವಿಧೇಯತೆ ಅವರಿಗೆ ಕುಟುಂಬ ಕೊಟ್ಟ ಸಂಸ್ಕಾರ.
ಕುಮಟಾದಲ್ಲಿ ತನ್ನದೇ ಆದ ಶಿಕ್ಷಕರ ಬಳಗ ಕಟ್ಟಿ ಅದನ್ನು ಮುನ್ನಡೆಸುವ ರಾಮು ಹಿರೇಗುತ್ತಿ ಸಂಘಟನಾ ಚತುರರೂ ಹೌದು. ತನಗೆ ಗೊತ್ತಿಲ್ಲದ ವಿಷಯಗಳನ್ನು ಬೇರೆಯವರಿಂದ ನಿರ್ಬಿಡೆಯಿಂದ ಕೇಳಿ ತಿಳಿದು ತನ್ನ ಕಾರ್ಯತತ್ಪರತೆಯನ್ನು ಹೆಚ್ಚಿಸಿಕೊಳ್ಳುವ ಜಾಣ್ಮೆ ಅವರದ್ದು. ಪತ್ನಿ ವೈಶಾಲಿ ನಾಯಕ್ ಕೂಡ ಒಬ್ಬ ಆದರ್ಶ ಶಿಕ್ಷಕಿ. ಕ್ರಿಯಾಶೀಲತೆ ಉಳ್ಳ ಉತ್ಸಾಹಿ.
ರಾಮು ಹಿರೇಗುತ್ತಿಯವರನ್ನು ಇಂಥದ್ದೊಂದು ಕೆಲಸ ನಿಮ್ಮಿಂದ ಆಗಬೇಕು….. ಅಂದರೆ ಸಾಕು ಖಂಡಿತ ಅದು ಅವರಿಂದ ಸಾಧ್ಯವಾಗುತ್ತದೆ. ನನಗೆ ಸಮಯವಿಲ್ಲ…..ನಂತರ ನೋಡುವ…….ಮಾಡೋಣ…..ನೋಡೋಣ….. ಇಂಥ ಸಬೂಬುಗಳನ್ನು ನೀಡದೆ ಸ್ನೇಹಕ್ಕೆ ಸಿದ್ಧರಾಗುತ್ತಾರೆ…ಬದ್ಧರಾಗುತ್ತಾರೆ. ತನ್ನ ವೃತ್ತಿ, ಪ್ರವೃತ್ತಿಗಳನ್ನು ಶೃದ್ಧೆಯಿಂದ ತೂಗಿಸಿಕೊಂಡು ಹೋಗುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುವ ರಾಮು ಹಿರೇಗುತ್ತಿಯವರನ್ನು ಶಿಕ್ಷಣ ಇಲಾಖೆಯ ಅನೇಕ ಅಧಿಕಾರಿಗಳೂ ಮೆಚ್ಚಿಕೊಂಡಿರುವುದನ್ನು, ಶ್ಲಾಘಿಸಿರುವುದನ್ನು ಹತ್ತಿರದಿಂದ ನಾನು ಬಲ್ಲೆ.
ರಾಮು ಸರ್ ಅಪಾರವಾದ ಸ್ನೇಹಿತರ ಬಳಗವನ್ನು ಹೊಂದಿದವರು. ಚುರುಕಾದ ನಡಿಗೆ, ಗಂಭೀರವಾದ ಮಾತು, ಉದಾರತೆ, ಸರಳತೆ ಅವರನ್ನು ಎಂಥವರೂ ನೆಚ್ಚಿಕೊಳ್ಳುವಂತೆ ಮಾಡುತ್ತದೆ.

RELATED ARTICLES  ಬಲವಂತದ ಜೀವನ


ನಾಯಕತ್ವ ಗುಣ ನಾಯಕರಿಗೇ ಬಂದ ವರದಾನ. ಅಂಥ ನಾಡವರ ನಾಯಕರ ಗುರುತಿಸಬಹುದಾದ ಯುವಕರಲ್ಲಿ ರಾಮು ಹಿರೇಗುತ್ತಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಮಗಳು ಅನನ್ಯ ಅಪ್ಪನಷ್ಟೇ ಚೂಟಿ. ನಿರೂಪಣೆ, ಸಂಘಟನೆ, ಸಂಯೋಜನೆ, ಸಾತ್ವಿಕತೆ ಅವರನ್ನು ಗೆಲ್ಲಿಸಲಿ.
ನನ್ನ ಇಷ್ಟ ದೈವ ಇಡಗುಂಜಿ ಮಹಾಗಣಪತಿಯು ಸುಖ, ಸಂಪತ್ತು, ಶಾಂತಿ, ಆರೋಗ್ಯ, ನೆಮ್ಮದಿಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಧರ್ಮಮೂರ್ತಿ ಶ್ರೀರಾಮನ ಬಗ್ಗೆ ಶ್ರೀಧರರು ಹೇಳಿದ ಮಾತು ಹೀಗಿದೆ.

ಸರ್ ನಿಮಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ