123 copy

ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಪ್ರಾರಂಭ. ಶ್ರಾವಣವೇ ಹಬ್ಬದ ದಿನಗಳು. ವೃತಗಳು ನಿತ್ಯವೂ ಒಂದೊಂದು ಇರುತ್ತದೆ. ಹಾಗಿರುವಾಗ ನಿನ್ನೆ ಶ್ರಾವಣಕ್ಕೆ ಟಾಟಾ ಮಾಡುತ್ತ ನಾಡಿದ್ದು ಬಂದ ಗಣಪತಿಗೆ ಸ್ವಾಗತ ಕೋರಲು ಭರದಲ್ಲಿ ತಯಾರಿ ನಡೆದಿದೆ. ವಿವಿಧ ರೂಪದ, ವಿವಿಧ ಬಣ್ಣಗಳ ಅಲಂಕಾರಿತ ಗಣಪ ಪೇಟೆಗಳಲ್ಲಿ ರಾರಾಜಿಸುತಿದ್ದಾನೆ. ಗ್ರಾಹಕ ತಾನು ಯಾವ ರೀತಿಯ ಗಣಪನನ್ನು ತೆಗೆದುಕೊಂಡು ಹೋಗಲಿ ಎಂದು ನೋಡಿ ಮನಸ್ಸಿಗೂ ತಮ್ಮ ಕಿಸೆಗೂ ಸರಿಹೊಂದುವ ಗಣಪನ್ನು ಆರಿಸಿಕೊಂಡು ಮನೆಗೆ ತರುವುದು ಸಹಜ. ಈ ಗಣಪ ಹಾಗೆ ಬರುವುದಿಲ್ಲ. ಜೊತೆಗೆ ಗೆಳೆಯ ಇಲಿರಾಯನನ್ನು ಕರೆದುಕೊಂಡು ಬರುತ್ತಾನೆ.
ಈ ಗಣಪನಿಗೆ ಹೊಟ್ಟೆ ತುಂಬುವುದು ತುಂಬ ಕಷ್ಟ. ಯಾವುದೇ ತಿಂಡಿ ಮಾಡಿಕೊಟ್ಟರೂ ತಿಂದು ಮುಗಿಯಿತು ಹೊಟ್ಟೆ ತುಂಬಿ ಮುಗಿಯಿತು ಎಂದು ಹೇಳಿದ ದಾಖಲೆಯೇ ಇಲ್ಲ. ಹಾಗಿದ್ದಾಗ ವಿವಿಧ ಕಜ್ಜಾಯಗಳನ್ನು ಮಾಡುವುದು ಮನೆಮನೆಗಳಲ್ಲಿ ಕಾಣುತ್ತೇವೆ, ಚಕ್ಕುಲಿ, ವಡೆ, ಅತ್ರಾಸ, ಪಂಚಕಜ್ಜಾಯ, ಉಂಡೆಗಳು, ಕರ್ಜಿಕಾಯಿ, ಮೋದಕ, ಪಾಯಸ ಹೀಗೆ ವಿಧವಿಧದ ತರಾವರಿ ಕಜ್ಜಾಯ ತಯಾರಾಗುತ್ತವೆ. ಮಕ್ಕಳ ಕುಣಿದಾಟ, ಹೊರಗಡೆ ಪಟಾಕಿಯ ಸದ್ದು, ಒಳಗೆ ಎಣ್ಣೆಯ ತಿಂಡಿಗಳ ಸಾಲು, ಗಂಟೆ ಶಬ್ದ ಮಂತ್ರಗಳ ಮಧ್ಯ ಕುಳಿತಿರುವ ಈ ಗಣಪನಿಗೆ ಕೆಲವು ವಸ್ತುಗಳು ಅತೀ ಪ್ರಿಯವಾದುದ್ದು.ಯಾವುದು ಎಂದು ಕೇಳುತ್ತಿರ, ತಿನ್ನುವುದರಲ್ಲಿ ಮೊದಲನೆದು ಮೋದಕ ಮತ್ತು ಪಂಚಕಜ್ಜಾಯ. ಅವನ ನೈವೇದ್ಯಕ್ಕೆ ಇವೆರಡು ಇಲ್ಲದಿದ್ದರೆ ಆತನಿಗೆ ಸಂಪೂರ್ಣ ನೈವೇದ್ಯ ಅರ್ಪಿಸಿದಂತೆ ಆಗುವುದಿಲ್ಲ. ಅದರಂತೆ ಗರಿಕೆ ಅಥವಾ ದುರ್ವೆ. ಕಂಡಕಂಡಲ್ಲಿ ಹುಟ್ಟಿ ಕುರುಚಲಾಗಿ ಬೆಳೆದು ಚಿಡ್ಡಾ ಅಲೆಯುವ ಆ ಹಸಿರು ಗರಿಕೆ ಹುಲ್ಲು ಎಂದರೆ ಆತನಿಗೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಗಣೇಶನ ಪೂಜೆಯಾದ ಸತ್ಯ ಗಣಪತಿ ಕಥೆ, ಗಣ ಹವನ ಇತ್ಯಾದಿಗಳಲ್ಲಿ ಈ ಗರಿಕೆ ಹುಲ್ಲನ್ನು ಎಲ್ಲಿದೆ ಎಂದು ಹುಡುಕಿ ತರುತ್ತಾರೆ. ಚೌತಿಯಲ್ಲಿ ಮಳೆಗಾಲವಾಗಿದ್ದರಿಂದ ಈ ಗರಿಕೆಗೆ ಬರಗಾಲವಿಲ್ಲ. ಎಷ್ಟೋ ಕಡೆಗಳಲ್ಲಿ ಈ ಹುಲ್ಲಿನಿಂದಲೇ ಗಣಪನನ್ನು ಅಲಂಕಾರ ಕೂಡ ಮಾಡುತ್ತಾರೆ. ಇವನ ಪೂಜೆಗೆ ಹೂವಿಲ್ಲದಿದ್ದರೂ ನಡೆಯುತ್ತದೆ ಗರಿಕೆ ಬೇಕೆ ಬೇಕು. ಅದರಂತೆ ಕೆಸುವಿನ ಕರಕಲಿ ಎನ್ನುವ ಖಾರದ ಪದಾರ್ಥವೂ ಬೇಕು. ಇನ್ನು ಅವನ ಪ್ರೀತಿಯ ಗೆಳೆಯನಿಗೆ ಪೂಜಿಸದಿದ್ದರಾದಿತೆ? ಅದಕ್ಕಾಗಿ ಒಂದು ದಿನವನ್ನೆ ಮೀಸಲಾಗಿರಿಸಿದ.ಅದೇ ಇಲಿ ಪಂಚಮಿ. ಪಂಚಮಿಯ ದಿನ ಇಲಿಗಾಗಿ ವಿಷೇಶವಾದ ಹಬ್ಬವನ್ನು ಮಾಡುವುದುಂಟು. ಅನ್ಯ ಆಹಾರ ತಿನ್ನುವ ಹಲವು ಜನಾಂಗದಲ್ಲಿ ಮೊದಲೆಲ್ಲ ಇಲಿ ಪಂಚಮಿಯ ದಿನವಿಡಿ ಬೇಟೆ ಮಾಡಿ ಸಿಕ್ಕ ಬೇಟೆಯ ವಿಶೇಷ ತಿನಿಸು ಅಥವಾ ಪದಾರ್ಥವನ್ನು ಮಾಡಿ ಇಲಿಯಾಯನಿಗೆ ಸಮರ್ಪಿತ ಎಂದು ಹೇಳುತ್ತಾರೆ. ಆದರೆ ಇದನ್ನು ನೈವೇದ್ಯ ಎಂದು ದೇವರ ಮುಂದೆ ತೆಗೆದುಕೊಂಡು ಹೋಗುವುದಿಲ್ಲ ಎಂದು ನಾನು ಚಿಕ್ಕವಳಿದ್ದಾಗ ಕೆಲಸಕ್ಕೆ ಬರುತ್ತಿದ ಒಬ್ಬ ಅಜ್ಜ ಹೇಳುತ್ತಿದ್ದರು.ಹಬ್ಬ ಸಂಭ್ರಮದ ಒಂದು ಸೆಲೆ. ಮನೆಯ ಜನ ಎಲ್ಲಿದ್ದರೂ ಸೇರಿ ಕಲೆತು ಮಾಡುವುದು. ಆಗಲಾದರೂ ಮನೆಯ ಮಂದಿ ಒಂದೆರಡು ದಿನ ಹಾಯಾಗಿ ತಿಂದುಂಡು ಇರುವುದಾಗಿತ್ತು. ಈಗ ಹಬ್ಬ ಎನ್ನುವುದು ಸೀಮಿತವಾಗಿದೆ. ಮನೆಯಲ್ಲಿನ ಸಂಭ್ರಮ ಹಂಚಿಹೋಗಿದೆ. ಎಲ್ಲರಲ್ಲೂ ಒತ್ತಡದ ಜೀವನ ಹಾಸಿಹೊದ್ದಿದೆ. ಹಾಗಿರುವಾಗ ದೂರದಲ್ಲಿರುವವರು ಊರಿಗೆ ಬಂದು ಈ ಗಣಪನಿಗೆ ವಿವಿಧ ತಿಂಡಿತಿನಿಸು ಮಾಡುವುದಕ್ಕೆ ಸಮಯವೆಲ್ಲಿದೆ. ಮಾಡುವ ಮನಸ್ಸಿದ್ದರೂ ಹಲವು ಅಡೆತಡೆಗಳು ಎದುರಾಗುತ್ತವೆ. ಹೊರಗಡೆ ಕೆಲಸದಲ್ಲುವವರಿಗೆ ತಮ್ಮ ಕಂಪನಿ ಅಥವಾ ಇನ್ನೆಲ್ಲಿಯೇ ಇರಲಿ ಅಲ್ಲಿ ರಜೆ ಸಿಗಬೇಕು. ಮಕ್ಕಳು ಸ್ಕೂಲ್ ರಜೆ ಕೊಡಬೇಕು. ಅಷ್ಟರಲ್ಲಿ ಆ ಮಕ್ಕಳದ್ದು ಯಾವುದಾದರೂ ವಿಶೇಷ ಕ್ಲಾಸ್ಗಳು ಇರುತ್ತವೆ. ಅದನ್ನು ಮುಗಿಸಿಕೊಳ್ಳಬೇಕು. ಬಸ್ ಅಥವಾ ರೇಲ್ವೆ ಟಿಕೇಟ್ ಕಾದಿರಿಸಬೇಕು. ಇಲ್ಲವಾದರೆ ಊರಿಗೆ ಬಂದು ಹೋಗುವುದು ಒಂದು ಸಾಗರ ದಾಟಿದಷ್ಟೆ ಕಷ್ಟದ ಕೆಲಸ. ಅಷ್ಟೆಲ್ಲ ಮುಗಿಸಿ ಊರಿಗೆ ಬಂದರೆ ಹಬ್ಬ ಎಂದು ಅದಕ್ಕಾಗಿ ತಯಾರಿಗಳು ಎನ್ನುತ್ತ ದುಡಿದು ತಿನ್ನುವ ಬದಲು ಎಲ್ಲಿದ್ದೇವೆಯೋ ಅಲ್ಲಿಯೇ ಹಬ್ಬ ಮಾಡಿದರಾಯಿತು. ಇಲ್ಲಿಯೂ ಸಾರ್ವಜನಿಕ ಗಣಪತಿಗಳು ಬೇಕಷ್ಟಿವೆ ಅಲ್ಲಿಗೆ ಹೋಗಿ ಕೈ ಮುಗಿದು ಹಬ್ಬಕ್ಕೆ ಮಾಡುವ ಖರ್ಚಿನ ಲೆಕ್ಕದಲ್ಲಿ ಕಾಣಿಕೆ ಹಾಕಿದರಾಯಿತು ಎಂದು ಮನಸ್ಸಲ್ಲಿ ಅನಿವಾರ್ಯವಾಗಿ ಮೂಡುತ್ತದೆ. ಎಲ್ಲರೂ ಹೀಗೆ ಮಾಡುತ್ತಾರೆ ಯೋಚಿಸುತ್ತಾರೆ ಅಂತಲ್ಲ. ಪರಿಸ್ಥಿತಿಯೂ ಹಾಗೆ ಬೆಳೆಯುತ್ತಿದೆ.

RELATED ARTICLES  ಕಳೆದು ಹೋದ ಎಳೆಯ ದಿನಗಳು (ಭಾಗ ೧೩)

God Ganesh Wallpaper 1 1442559592

ಅದೇನೆ ಇರಲಿ ಹಬ್ಬವನ್ನಂತೂ ಎಲ್ಲರೂ ಆಚರಿಸುತ್ತಾರೆ. ಅವರವರ ಅನುಕೂಲಕ್ಕೆ ತಕ್ಕಂತೆ ಹಬ್ಬ ಆಚರಣೆ ನಡೆಯುತ್ತದೆ. ಹಬ್ಬದ ಆಚರಣೆಯಲ್ಲಿ ಭಕ್ತಿ ಭಾವವೇ ಮುಖ್ಯ ಹೊರತು ಆಡಂಭರ ಅಲ್ಲ. ಆಡಂಭರ ಮಾಡದಿದ್ದರೂ ಸಂಸ್ಕಾರ ಸಂಪ್ರದಾಯ ಬಿಡಲು ಸಾಧ್ಯವಿಲ್ಲ. ನಮ್ಮ ನಾಡು, ದೇಶ ನಿಂತಿರುವುದೇ ಈ ಸಂಸ್ಕಾರ ಮತ್ತು ಸಂಪ್ರದಾಯಗಳ ಮೇಲೆ. ಅದನ್ನು ಭಾರತೀಯನಾದ ಪ್ರತೀಯೊಬ್ಬ ಹಿಂದೂವೂ ಆಚರಿಸುತ್ತಾನೆ.
ನಾಡಿದ್ದು ಬರುವ ಗಣಪ ಯಾರ್ಯಾರ ಮನೆಯಲ್ಲಿ ಯಾವ ಯಾವ ರೀತಿ ಆಚರಿಸಿದರೂ ಗಣಪನಿಗೆ ಬೇಕಾದ ತಿಂಡಿ ತಿನಿಸುಗಳು ಭರ್ಜರಿಯಾಗಿಯೇ ಇರುತ್ತವೆ. ಹಬ್ಬದ ಸೊಗಡು ಉಂಡವನು ವರ್ಷಗಳ ಕಾಲ ಮತ್ತೆ ಹಬ್ಬ ಎಂದು ಬಂದೀತು ಎಂದು ಕಾಯುತ್ತಾನೆ. ನಾವು ಯಾವ ರೀತಿಯಲ್ಲಿಯೇ ಪೂಜೆ ಮಾಡಿದರೂ ಮೋದಕ ಹಸ್ತದಲ್ಲಿನಮ್ಮನ್ನು ಕಾಪಾಡುತ್ತಾನೆ. ನಂಬಿದವರ ಕೈ ಬಿಡದೆ ಕಾಪಾಡುವ ಪ್ರಥಮ ವಂದಿತ, ವಿಗ್ನ ಪರಿಹಾರಕ ಗಣೇಶನು ಎಂದು ಈಶ್ವರನೇ ವರವನ್ನು ಇಟಿದ್ದಾನೆ. ಎಲ್ಲರೂ ಸೇರಿ ಸಂತಸದಲ್ಲಿ ಹಬ್ಬ ಆಚರಿಸೋಣ ಅಲ್ವಾ?

RELATED ARTICLES  ತೃಪ್ತಿ -ನೆಮ್ಮದಿ, ಸಂತೋಷ ಸಮಾಧಾನದ 5 ನೇ ಭಾಗ