ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀಮತಿ ಮಾಧವಿ ಸುಭಾಸ್ ಚಂದ್ರ
ಸಹಪಾಠಿಗಳೆಂದರೆ ಅವರು ಎಂದೂ ಮುಗಿಯದ ಸಿಹಿ ಸಿಹಿ ಪೆಪ್ಪರಮೆಂಟುಗಳು. ಸಹಪಾಠಿಗಳೆಂದರೆ ಅವರು ಎಂದೂ ಮರೆಯದ ಮಧುರ ಹಾಡುಗಳು. ಸಹಪಾಠಿಗಳೆಂದರೆ ಅದೊಂದು ಖರ್ಚೇ ಆಗದ ಸಂಪತ್ತು. ನನ್ನೊಲವಿನ ಸಹಪಾಠಿ ಶ್ರೀಮತಿ ಮಾಧವಿ ಸುಭಾಸ್ ಚಂದ್ರ ನನ್ನ ಈ ದಿನದ ಅಕ್ಷರ ಅತಿಥಿ.
ಕೆರೆಕೋಣದ ಪ್ರತಿಷ್ಠಿತ ವ್ಯಕ್ತಿ ಶ್ರೀಯುತ ಗುಬ್ಬು ಜಿ.ಆರ್ ಹೆಗಡೆಯವರ ಮಗಳು ಮಾಧವಿ. ಖ್ಯಾತ ಉದ್ಯಮಿ ಸುಭಾಸ ಚಂದ್ರರ ಧರ್ಮಪತ್ನಿ. ನಮ್ಮ ಸಹಪಾಠಿಗಳಲ್ಲಿ ಮೊಟ್ಟ ಮೊದಲು ಮದುವೆಯಾಗಿ ದಾಖಲೆ ನಿರ್ಮಿಸಿದ ಶ್ರೇಯಸ್ಸು ನಮ್ಮ ಮಾಧವಿಯದ್ದು. ನಮ್ಮ ಸಹಪಾಠಿಗಳಲ್ಲಿ ಕೆಲವರಿಗೆ ಇನ್ನೂ ಮದುವೆಯಾಗಿಲ್ಲ ಆದರೆ ನಮ್ಮ ಮಾಧವಿಗೆ ಪಿ.ಯು.ಸಿ. ಓದುವ ಮಗನಿದ್ದಾನೆ. ಇಬ್ಬರು ತಂಗಿಯರಿಗೆ ಅಕ್ಕನಾದ ಮಾಧವಿಗೆ ಇದು ಆ ಸಮಯಕ್ಕೆ ಅನಿವಾರ್ಯವೆನಿಸಿತ್ತು ಕೂಡ. ಆದರೂ ನಮ್ಮ ಮಾಧವಿ ಎಂತ ಬಯೋಮಿಗಾದರೂ ಹೊಂದಿಕೊಳ್ಳಬಲ್ಲ ಸಜೀವಿ.
ನನಗೆ ನೃತ್ಯ ಸಂಗೀತಗಳಲ್ಲಿ ಸ್ವಲ್ಪ ಆಸಕ್ತಿ……ಪ್ರಾಥಮಿಕ ಶಾಲೆ ಓದುವಾಗಲೇ ಇತ್ತು. ಹೀಗಾಗಿ ನಮ್ಮ ರಾಜು ಸರ್ ನನ್ನನ್ನು ಬೇರೆ ಬೇರೆ ಶಾಲೆಗಳಲ್ಲಿ ಮಕ್ಕಳಿಗೆ ನೃತ್ಯ ಕಲಿಸಲು ಕರೆದುಕೊಂಡು ಹೋಗುತ್ತಿದ್ದರು. ಆ ಸಂದರ್ಭಕ್ಕೆ ನಾನು ಮಾಧವಿ ಕಲಿಯುತ್ತಿದ್ದ ಕೆರೆಕೋಣ ಶಾಲೆಗೆ ನೃತ್ಯ ಕಲಿಸಲು ಹೋಗಿದ್ದೆ. ನಾನು ಮೊದಲು ನೃತ್ಯ ಮಾಡಿ ತೋರಿಸಿದರೆ…. ನಂತರ ಅವರು ಮಾಡುವುದು. ಮಾಧವಿ ಕಣ್ಣು ಹಾಗೆ ಹೀಗೆ ಮಾಡಿ ಕುಣಿದದ್ದು ನೋಡಿ ನನಗೆ ಒಳಗೊಳಗೇ ನಗು. ಇವಳು ಒಂದು ಹೇಳಿದರೆ ಒಂಭತ್ತು ಮಾಡುತ್ತಾಳೆ ಎಂದೆನಿಸಿತು. ( ಈಗ ಅವಳು ಕಲಿತ ಶಾಲೆಯಲ್ಲೇ ಮಕ್ಕಳಿಗೆ ಕಲಿಸುವ ಕೆಲಸ ಬಂದಿದ್ದು ಬೇರೆ ಮಾತು.)
ಕೊನೆಗೆ ಹೈಸ್ಕೂಲ್ ಮೆಟ್ಟಿಲು ಹತ್ತಿದ ಮೊದಲ ದಿನವೇ ಮಾಧವಿ ಮತ್ತು ಸಂಗಡಿಗರ ದರ್ಶನವಾಗಿತ್ತು. ಮಾಧವಿ ಬಂದರೆ ಸಾಕು. ಶಾಂತವಾಗಿದ್ದ ತರಗತಿಯಲ್ಲಿ ಒಮ್ಮೆಗೇ ಕೋಲಾಹಲವಾಗುತ್ತಿತ್ತು. ದೊಡ್ಡ ದೊಡ್ಡ ಧ್ವನಿಯಲ್ಲಿ ಮಾತನಾಡುವ ಮಾಧವಿಯನ್ನು ಕಂಡರೆ ನನಗೆ ಸಹ್ಯವಾಗುತ್ತಿರಲಿಲ್ಲ. ನನ್ನ ಪಕ್ಕದ ಬೆಂಚಿನಲ್ಲೇ ಮಾಧವಿ ಕುಳಿತುಕೊಳ್ಳುತ್ತಿದ್ದುದು. ಒಮ್ಮೊಮ್ಮೆ ಸಣ್ಣದಾಗಿ ಮಾತನಾಡುವಂತೆ ಗದರಿಸುತ್ತಿದ್ದೆ. ಅವಳೂ ಗದರಿಸುತ್ತಿದ್ದಳು. ಒಂದು ದಿನ ಬರದಿದ್ದರೂ ನಮ್ಮ ತರಗತಿ ನಿರ್ಜನ ಪ್ರದೇಶದಂತೆ ತೋರುತ್ತಿತ್ತು. ಅವಳಿಗೆ ಏನಾದರೂ ಹೇಳಿ ಅವಳು ಅವಳ ಅಪ್ಪನ ಹತ್ತಿರ ಹೇಳಿಕೊಟ್ಟರೆ ಎನ್ನುವ ಭಯ ಕೂಡ ಇತ್ತು ನನ್ನಲ್ಲಿ. ಆದರೂ ಎಡೆಬಿಡದ ಅಭ್ಯಾಸ ವಷ್ಟೇ ನಮ್ಮ ಪಾಲಿಗೆ ಹೆಚ್ಚಾಗಿತ್ತು ಆಗ.
ಕಾಲೇಜಿಗೆ ಬಂದ ಕಾಲಕ್ಕೆ ಒಂದಿಷ್ಟು ಜನ ಅಪ್ರತಿಮ ಪ್ರತಿಭಾವಂತರು science ಮಾಡುವುದಕ್ಕೆಂದು ಹೊನ್ನಾವರ ಬಸ್ ಹತ್ತಿದ್ದರು. ನಮ್ಮದು ಪುನಃ ಕಾಲ್ನಡಿಗೆಯಲ್ಲಿ ಅದೇ ಕಾಲೇಜಿಗೆ ಪ್ರಯಾಣ. ಹೇಗಾದರೂ ಮಾಡಿ ಟಿ.ಸಿ.ಹೆಚ್ ಮಾಡಿ ಕನ್ನಡ ಶಾಲೆಯ ಮಾಸ್ತರಿಕೆ ಗಿಟ್ಟಿಸಬೇಕೆಂಬುದೇ ನನ್ನ ಪರಮೋಚ್ಛ ಗುರಿ ಆಗಿತ್ತು. ಮನೆಯಲ್ಲಿ ಪಠಿಸುತ್ತಿದ್ದ ಮಂತ್ರವೂ ಕೂಡ ಅದೇ. ಮಾಧವಿಯ ಮನೆಯಲ್ಲಿ ಶ್ರೀಮಂತರು. ಅವಳಿಗೆ ಈ ಅನಿವಾರ್ಯತೆ ಇರಲಿಲ್ಲ. ಆದರೂ ಎಡೆಬಿಡದ ಓದಿನಿಂದ ನನಗೆ ಸಿಂಹಸ್ವಪ್ನಳಾದಳು ಮಾಧವಿ. ಆದರೆ ಅವಳದು ಯಾವಾಗಲೂ ಒಳ್ಳೆಯ ಮನಸ್ಸು. ಭಾಷಣ, ಪ್ರಬಂಧ ಸ್ಪರ್ಧೆಗಳು ಬಂದಾಗ ನಾವು ಕಾಲೇಜಿನ ಪರವಾಗಿ ಸ್ಪರ್ಧಿಸಲು ಬೇರೆ ಬೇರೆ ಕಡೆ ಹೋಗುತ್ತಿದ್ದೆವು.
ಕಾಲೇಜಿನ ದಿನಗಳಲ್ಲಿ ನಾವು 96 ಜನ ತರಗತಿಯಲ್ಲಿ ಇದ್ದುದರಿಂದ ಕೆಲವೇ ಕೆಲವು ಸ್ನೇಹಿತರ ಜೊತೆ ಬೆರೆಯುತ್ತಿದ್ದೆವು. ಮಾಧವಿ ನನ್ನ ಅಚ್ಚುಮೆಚ್ಚಿನ ಸ್ನೇಹಿತೆ. ಪಿ.ಯು.ಸಿ ಮುಗಿಯುವ ಹೊತ್ತಿಗೆ ನಾನು ಕುಮಟಾ ಸೇರಿದೆ. ಅವಳು ಹೊನ್ನಾವರಕ್ಕೆ ಪದವಿ ಮಾಡಲು ತೆರಳಿದಳು.
ಸ್ವಲ್ಪ ದಿನಕ್ಕೆ ಮಾಧವಿಯ ಮದುವೆಯ ಆಮಂತ್ರಣ ಬಂತು. ನನ್ನ ಪ್ರೀತಿಯ ಸಹಪಾಠಿ ಮಾಧವಿಗಾಗಿ ಒಂದು ಒಳ್ಳೆಯ ಉಡುಗೊರೆ ನೀಡಿ ಬರಬೇಕೆಂದು ಹಸ್ತಾಕ್ಷರ ಬರೆದು ಗಣಪತಿಯ ಫೋಟೋ ನೀಡಿ ಬಂದೆ.
ಮಾಧವಿ ನಮ್ಮ ಬಾಲ್ಯದ ದಿನಗಳನ್ನು ಬಂಗಾರವಾಗಿಸಿದವಳು. Student life is golden life ಎಂಬುದು ಅಕ್ಷರಶಃ ನಿಜವಾದದ್ದು. ನಮ್ಮ ಶ್ರೇಯಸ್ಸಿನ ಹಿಂದೆ ನಮ್ಮ ಸ್ನೇಹಿತರ ಪಾಲೂ ಅಷ್ಟೇ ಇದೆ. ಅವರು ನಮ್ಮ ಸ್ಪರ್ಧಾಳುಗಳೇ ಆದರೂ ನಮ್ಮನ್ನು ಗೆರೆಯ ಅಂಚಿನವರೆಗೂ ಅಟ್ಟಿಸಿಕೊಂಡು ಬಂದು ನಮ್ಮನ್ನು ಬಿಟ್ಟು ಹೋಗುತ್ತಾರೆ. ಹಾಗೆ ನನ್ನನ್ನು ಅಟ್ಟಿಸಿಕೊಂಡು ಬಂದು ಗೆಲುವಿನ ದಡ ಹತ್ತಿಸಿದ ಮಾಧವಿಯ ನೆನಪು ಬಹಳ ಖುಷಿ ಕೊಡುತ್ತದೆ.
ಖ್ಯಾತ ಉದ್ಯಮಿ ಸುಭಾಸ್ ಚಂದ್ರರ ಕೈಹಿಡಿದ ಮಾಧವಿ ಬಹಳ ಖುಷಿ ಹಾಗೂ ಉತ್ಸಾಹದಿಂದ ಅತ್ತೆ, ಮಾವ, ಮಗನೊಂದಿಗೆ ತುಂಬು ಸಂಸಾರ ನಡೆಸಿಕೊಂಡು ಹೋಗುತ್ತಾಳೆ. ತಾನು ಮತ್ತೂ ಓದಬೇಕಿತ್ತು ಎಂಬ ಕೊರಗನ್ನು ಮೆಟ್ಟಿ ನಿಂತು ತಾನೂ ಸ್ವ ಉದ್ಯೋಗದ ಹಾದಿ ಕಂಡುಕೊಳ್ಳುತ್ತಾಳೆ. ಬಿಂದಾಸಾಗಿ ನಗುನಗುತ್ತಾ ಯಾರಿಗೂ ಕಡಿಮೆಯಿಲ್ಲದಂತೆ ಬದುಕುತ್ತಾಳೆ.
ತನ್ನದೇ ಆದ ಶಿಸ್ತು, ಸೌಜನ್ಯ, ಸಂಯಮಪೂರಿತ ಮಾತು, ದೂರದೃಷ್ಟಿ, ನಿತ್ಯೋಲ್ಲಾಸಗಳಿಂದ ಕೂಡಿದ ಮಾಧವಿ ನನ್ನ ನೆಚ್ಚಿನ ಸಹಪಾಠಿ. ಅವಳು ಕಲಿತ ಕರಿಹಲಿಗೆಯ ಮೇಲೆ ನಾನಿಂದು ಕಲಿಸುತ್ತಿದ್ದೇನೆ. ಇದೂ ಒಂದು ಭಾಗ್ಯವೇ ಸರಿ. ಕಲಿಸಿದ ಎಲ್ಲರೂ ಜೊತೆಗೇ ಕಲಿತ ಎಲ್ಲರೂ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದಲ್ಲ. ಆದರೆ ಕೆಲವರು ಮಾಸದೇ ಮನಸ್ಸಿನಲ್ಲೇ ಉಳಿದು ಬಿಡುತ್ತಾರೆ. ಮಾಧವಿ ಅಂತಹ ಸಹಪಾಠಿ. ಮಾತ್ಸರ್ಯ ತೋರದ ಸಹೃದಯಿ. ನನ್ನನ್ನು ಗೌರವಾದರಗಳಿಂದ ಕಾಣುವ ಸ್ನೇಹಿತೆ.
ಮಾಧವಿ ಸುಭಾಸಚಂದ್ರ ದಂಪತಿಗೆ ಹಾಗೂ ಮಗ ಪ್ರತೀಕನಿಗೆ ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.
ಶ್ರೀಮತಿ ಮಾಧವಿಗೆ ಸಂದೀಪನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ