ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀಯುತ ನಾರಾಯಣ ಶೇರಗಾರ

ನಾನು ಕಂಡ ಸರಳ ಸಜ್ಜನಿಕೆಯ ವ್ಯಕ್ತಿ, ಸಾಯಿ ಭಕ್ತ, ನಿಷ್ಠಾವಂತ ಕ್ರಿಯಾಶೀಲ ಶಿಕ್ಷಕ, ಮಿತಭಾಷಿ ನಾರಾಯಣ ಶೇರಗಾರ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯವರು. ಭರತನಹಳ್ಳಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಆರಡಿ ಎತ್ತರದ ಈ ಯೋಗ ಗುರು ಯಾರೂ ಮಾಡದಂತಹ ಕ್ರಿಯಾಶೀಲ ಕಾರ್ಯ ಮಾಡುತ್ತಾರೆ. ಪ್ರತಿಫಲಾಪೇಕ್ಷೆ ಬಯಸದ ನಿಗರ್ವಿಯಂತೆ ಎದ್ದು ನಡೆದು ಬಿಡುತ್ತಾರೆ.
ಏಳೆಂಟು ವರ್ಷಗಳ ಹಿಂದಿನ ಮಾತು. ಅವತ್ತೊಂದಿನ ಯಲ್ಲಾಪುರದಿಂದ ನನಗೊಂದು ದೂರವಾಣಿ ಕರೆ ಬಂತು. “ಸರ್……. ನಾನು ನಾರಾಯಣ ಶೇರಗಾರ ಅಂತ ಯಲ್ಲಾಪುರದಿಂದ ಕರೆ ಮಾಡುತ್ತಿದ್ದೇನೆ…… ನಿಮ್ಮ ಮೌಲ್ಯಗಳು ಎಲ್ಲಿ‌ ಸಿಗುತ್ತವೆ?! ಎನ್ನುವ ಪುಸ್ತಕ ಓದಿದೆ…ಅದೆಷ್ಟು ಚೆನ್ನಾಗಿ ಬರೆದಿದ್ದೀರಿ….” ಎಂದು ಬಾಯ್ತುಂಬ ಹೊಗಳಿದರು. ಹೊಗಳಿದರೆ ಯಾರಿಗೆ ಖುಷಿಯಾಗುವುದಿಲ್ಲ ಹೇಳಿ?! “ಸರ್ ನಿಮ್ಮ ಉಳಿದೆಲ್ಲ ಪುಸ್ತಕಗಳನ್ನು ಓದಬೇಕೆನಿಸಿದೆ…ಕಳಿಸಿಕೊಡಿ” ಎಂದ ಅವರು….ಹಾಸಣಗಿಯಲ್ಲಿ ಮಕ್ಕಳ ವಸಂತ ಶಿಬಿರ ನಡೆಸಿ ನನ್ನನ್ನು ಕರೆಸಿಕೊಂಡೇ ಬಿಟ್ಟರು. ನಾನು ಕೇವಲ ಅವರ ಧ್ವನಿಯನ್ನಷ್ಟೇ ಆಲಿಸಿದ್ದರಿಂದ ಅವರ ಯಾವುದೋ ಒಂದು ರೇಖಾ ಚಿತ್ರ ನನ್ನ ಮನಸ್ಸಿನಲ್ಲಿ ಮೂಡಿತ್ತು. ಹಿರಿಯ ಶಿಕ್ಷಕರಾಗಿರಬೇಕು ಅಂದುಕೊಂಡಿದ್ದ ನನಗೆ ಮಂಚಿಕೇರಿಗೆ ಹೋದಾಗಲೇ young and energetic ಎಂಬ ಅನುಭವವಾದದ್ದು.
ಕೆಲವರು ಬನ್ನಿ ಎಂದು ಬಾಯ್ತುಂಬ ಕರೆದು ಬಿಡುತ್ತಾರೆ. ಆದರೆ ಹೋದ ಮೇಲೆ ಅಂತಹ ಆತಿಥ್ಯವಾಗಲೀ ಗೌರವವಾಗಲೀ ಸಿಕ್ಕುವುದಿಲ್ಲ. ಆದರೆ ನಾರಾಯಣ ಸರ್ ನನ್ನನ್ನು ಅವರ ಬಳಗಕ್ಕೆಲ್ಲ ಅಭಿಮಾನದಿಂದ ಪರಿಚಯಿಸಿದರು. ನಾನೇ ಗುರುತಿಸಕೊಳ್ಳಬೇಕೆಂಬ ಹಪಹಪಿಕೆ ಇರುವವನಿಗೆ ಇನ್ನೊಬ್ಬನನ್ನು ಪರಿಚಯಿಸುವುದಕ್ಕೂ ಮುಜುಗರವಾಗುತ್ತದೆ. ಆದರೆ ನಾರಾಯಣ ಸರ್ ರ ಸರಳತೆ, ನಿಗರ್ವಿತನ ನನ್ನನ್ನು ಮೊದಲೇ ಆಕರ್ಷಿಸಿತು.
ಅಲ್ಲಿಂದ ಆರಂಭಗೊಂಡ ನಮ್ಮ ಸ್ನೇಹ ಬತ್ತದ ಶರಧಿ. ನನ್ನಿಂದ ಯಾವುದೇ ಅಪೇಕ್ಷೆಗಳಿಲ್ಲ ಅವರಿಗೆ. ಅವರಿಂದಲೂ ಯಾವುದೇ ನಿರೀಕ್ಷೆಗಳಿಲ್ಲ ನನಗೆ. ಅಪೇಕ್ಷೆ ಹಾಗೂ ನಿರೀಕ್ಷೆಗಳಿಗೆ ಸೀಮಿತವಾದ ಗೆಳೆತನಕ್ಕೆ ಬಹಳ ದಿನಗಳ validity ಇರುವುದಿಲ್ಲ.
ನಾರಾಯಣ ಸರ್ ಯೋಗ ಗುರು. ರಾಷ್ಟ್ರ ಮಟ್ಟದ ವಾಲಿಬಾಲ್ ಪ್ಲೇಯರ್. ಅನೇಕ ಸಾರ್ವಜನಿಕ ಸನ್ಮಾನಗಳನ್ನು ಸ್ವೀಕರಿಸಿದ ಮಹಾನುಭಾವರು. ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮ ಸಂಘಟನೆಗಳಲ್ಲಿ ಎತ್ತಿದ ಕೈ. ಎಲ್ಲಕ್ಕಿಂತ ಹೆಚ್ಚಿನದಾಗಿ ವಿದ್ಯಾರ್ಥಿಗಳಿಗೆ, ಊರವರಿಗೆ ಮೆಚ್ಚಿನ ನಾರಾಯಣ ಸರ್. ಧನ್ಯತೆಯೇ ಮೂರ್ತಿವೆತ್ತ ಭಾವ ಅವರದು. ಸತ್ಯ ಸಾಯಿಬಾಬಾರ ಅನುಯಾಯಿಗಳಾದ ಅವರು ಪ್ರತಿವರ್ಷ ಸೇವೆಗೆ ತೆರಳಿದರೆ ತಿಂಗಳಾದರೂ ಮನೆಯ ಕಡೆ ಮುಖ ಹಾಕುವುದಿಲ್ಲ. ಅವರ ಧರ್ಮಪತ್ನಿಯೂ ಪ್ರಾಮಾಣಿಕ ಶಿಕ್ಷಕಿ. ಪತಿಗೆ ಸಾಥ್ ನೀಡುವ ಸಾತ್ವಿಕ ಮನಸ್ಸು.
ನಾರಾಯಣ ಸರ್ ವಿಶೇಷವಾಗಿ ಬಂಗಾರದ ಚೈನನ್ನೋ ಉಂಗುರಗಳನ್ನೋ ಧರಿಸಿದ್ದನ್ನು ನಾನು ನೋಡಿಯೇ ಇಲ್ಲ. ಬಂಗಾರದ ಮನಸ್ಸು ಅವರದು. ಅದನ್ನು ಮಾತ್ರ ಯಾವಾಗಲೂ ಧರಿಸಿಯೇ ಇರುತ್ತಾರವರು.

RELATED ARTICLES  ಶ್ರೀಧರರು ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ಎರಡನೆಯ ಭಾಗ

‌‌‌‌‌‌‌‌ ಭರತನಹಳ್ಳಿಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಶಾಲೆ ನಾರಾಯಣ ಸರ್ ನ್ನು ನೆಚ್ಚಿಕೊಳ್ಳುತ್ತದೆ. ಮೆಚ್ಚಿಕೊಳ್ಳುತ್ತದೆ. ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಅವರು ಇಷ್ಟವಾಗದೇ ಇರಲಾರರು. ಸಂಪನ್ಮೂಲ ವ್ಯಕ್ತಿಯಾಗಿ ಕೂಡ ರಾಜ್ಯದ ಅನೇಕ ಕಡೆಗೆ ತೊಡಗಿಕೊಳ್ಳುವ ನಾರಾಯಣ ಸರ್ ಅನನ್ಯವಾದ ವ್ಯಕ್ತಿ.
‌ ತಾನೇನೋ ಕಲಿಯಬೇಕೆನ್ನುವ ಅವರ ಹಪಹಪಿಕೆ ಅವರನ್ನು ಮತ್ತಷ್ಟು ದೊಡ್ಡವರನ್ನಾಗಿಸಿದೆ. ಬೇಗ ಮಲಗಿ ಬೇಗ ಏಳುವ ಅವರು ಮೊಬೈಲ್ ಕರೆಗಳನ್ನು ಸ್ವೀಕರಿಸುವುದೇ ಅಪರೂಪ. ಈಗಿನ ಜನಾಂಗ ಫೋನ್ ಗೆ addict ಆದರೆ ಅವರು ಕೆಲಸಕ್ಕೆ addict ಆಗುತ್ತಾರೆ. ನನ್ನಲ್ಲಿಲ್ಲದ ಅದೆಷ್ಟೋ ಗುಣಗಳು ಅವರಲ್ಲಿರುವದರಿಂದಲೇ ನನಗವರು ತುಂಬಾ ಇಷ್ಟದ ವ್ಯಕ್ತಿ. ಜೀವನಕ್ಕೆ ಬೇಕು ಇಂಥಾ ಸಾಥಿ. ಬರೀ ದುಡ್ಡು, ಹೆಸರು ಮಾಡುವುದೇ ಬದುಕಲ್ಲ. ಅದನ್ನು ಆನಂದದ ಬಣ್ಣಗಳಿಂದ ತುಂಬುವುದೇ ಬದುಕು. ನಮ್ಮ ಚಿತ್ರಕ್ಕೆ ಎಲ್ಲಾ ಕಡೆ ನಾವೇ ಬಣ್ಣ ಬಳಿಯುವುದಕ್ಕಾಗದು. ಕೈಮುಟ್ಟದ ಜಾಗಕ್ಕೆ ಬೇರೆಯವರ ಕುಂಚ ಬೇಕು. ಅವರು ನಮ್ಮ ಮೇಲೆ ಇಟ್ಟ ಪ್ರೀತಿ ವಿಶ್ವಾಸ ನಮ್ಮ ಬದುಕನ್ನು ಮತ್ತೂ ಸುಂದರಗೊಳಿಸುತ್ತದೆ ಎನ್ನುವುದು ನಿಸ್ಸಂದೇಹ.
ಮಗ, ಮಗಳು ಪತ್ನಿ ಸಹೋದರರೊಂದಿಗೆ ತುಂಬು ಸಂಸಾರ ನಡೆಸುವ ನಾರಾಯಣ ಸರ್ ಅವರಿಗೆ ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಘನ ಸರಕಾರದ ಬಳಿ ಘನತೆ ಕಳೆದುಕೊಂಡ ಬಿಪಿಎಲ್ ಹಾಗೂ ಅದರ ಪರಿವಾರದ ಅಳಲಿನ ಮನವಿ.

ನಾರಾಯಣ ಸರ್ ಅವರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ