ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಅಂಥೋನಿ ಸರ್

ಹೊನ್ನಾವರದ ಸಂತ ಇಗ್ನೇಷಿಯಸ್ ಸಂಸ್ಥೆ ಜಿಲ್ಲೆಗೇ ದೊಡ್ಡ ಹೆಸರು. ಜಿಲ್ಲೆಯ ಅತಿದೊಡ್ಡ ಆಸ್ಪತ್ರೆ ಜೊತೆಗೆ ಸಾಮಾಜಿಕ ಸೇವೆಗಳಿಂದ ಮನೆ ಮಾತಾದ ಇಗ್ನೇಷಿಯಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಒಬ್ಬ ಶ್ರೇಷ್ಠ ಸಾಮಾಜಿಕ ಸ್ನೇಹಜೀವಿ ಶ್ರೀಯುತ ಅಂಥೋನಿಯವರು.
ಒಬ್ಬ ವ್ಯಕ್ತಿ ಯಾವ ಪ್ರದೇಶದವನು? ಯಾವ ಧರ್ಮದವನು? ಯಾವ ಜಾತಿಯವನು? ಎಂಬುದಕ್ಕಿಂತ ಆತ ಎಷ್ಟು ಜನರಿಗೆ ಬೇಕಾಗಿ ಬದುಕುತ್ತಿದ್ದಾನೆ….. ಮತ್ತು ಎಷ್ಟು ಸೌಜನ್ಯವಿದೆ ಎಂಬುದೇ ನನಗೆ ಶ್ರೇಷ್ಠವೆನಿಸುತ್ತದೆ. ಹಾಗೆ ನೋಡಿದರೆ ಅಂಥೋನಿ ಸರ್ ಎಂಥವರಿಗೂ ಪ್ರಿಯವಾಗುತ್ತಾರೆ.
ತಾನು ತನಗಾಗಷ್ಟೇ ಬದುಕದೇ ಸಮಾಜಕ್ಕೂ ತನ್ನಿಂದಾದ ಸೇವೆಯನ್ನು ಮಾಡಿ ಹೋಗಬೇಕೆಂಬ ಅವರ ಬದುಕು ನಿಜಕ್ಕೂ ಒಂದು ಆದರ್ಶ. ಅನೇಕ ಸಾಮಾಜಿಕ ಕಾರ್ಯಗಳನ್ನು ಸಂಘಟಿಸಿ ಅನೇಕ ಜನರಿಗೆ ತನು-ಮನ-ಧನಗಳಿಂದ ನೆರವಾಗುವ ಈ ವ್ಯಕ್ತಿ ತಾನೇನೂ ಅಲ್ಲವೆಂಬಂತೆ ಸುಮ್ಮನಿದ್ದು ಬಿಡುತ್ತಾರೆ. ಶಿಸ್ತಿನ ಮಾತು, ಸೌಜನ್ಯಪೂರಿತ ನಡವಳಿಕೆ, ಸದಾ ಪ್ರೇರಣೆ ನೀಡುವ ಅವರ ಮುಗುಳ್ನಗು ನನ್ನ ಮೇಲೆ ಅಗಾಧವಾದ ಪರಿಣಾಮ ಬೀರಿವೆ.
ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುವ ಅಂಥೋನಿ ಸರ್ ನಾನೊಮ್ಮೆ ಕಂಡರೆ ಸಾಕು ಎಂತಹ busy schedule ಇದ್ದರೂ ಒಮ್ಮೆ ಗಾಡಿ ನಿಲ್ಲಿಸಿ ಮಾತಾಡದೇ ತೆರಳುವವರೇ ಅಲ್ಲ. ನಿಗರ್ವಿಯಾದ ಅಂಥೋನಿಯವರು ಸಂತ ಇಗ್ನೇಷಿಯಸ್ ಸಂಸ್ಥೆಯ ಪ್ರಖ್ಯಾತಿಯ ರೂವಾರಿ. ಬಡವರಿರಲಿ ಅಥವಾ ಕೋಟ್ಯಧಿಪತಿಯೆ ಇರಲಿ ಅಂಥೋನಿ ಸರ್ ಮಾತನಾಡುವ ಧಾಟಿ ವ್ಯತ್ಯಾಸವಾಗದ್ದನ್ನು ಹತ್ತಿರದಿಂದ ನೋಡಿ ನಾನು ಬಲ್ಲೆ. ನಮ್ಮ ಅಂಥೋನಿ ಸರ್ ಅಂತ ಎಷ್ಟೋ ಜನ ಅಭಿಮಾನದಿಂದ ಅವರನ್ನು ಕರೆದಿದ್ದನ್ನು ನಾನು ನೋಡಿದ್ದೇನೆ.
ಹಾಗೆ ನೋಡಿದರೆ ನಮ್ಮಷ್ಟಕ್ಕೆ ನಾವು ಬದುಕುವವರಿಗೆ ಯಾರಿಗೆ ಯಾರೂ ಬೇಕಾಗುವುದಿಲ್ಲ. ಆದರೆ ಇಷ್ಟಪಟ್ಟು ಬದುಕುವವನಿಗೆ ತಮ್ಮ ಭಾವನೆಗಳನ್ನು ಗೌರವಿಸುವವರು ಇಷ್ಟವಾಗುತ್ತಾರೆ. ನನ್ನ ನಿತ್ಯದ ಪ್ರಾರ್ಥನೆಯಲ್ಲಿ ಅಂತೋನಿ ಸರ್ ಇರುತ್ತಾರೆ…..ಯಾಕೆಂದರೆ ಅವರು ನನಗೆ ಗೆಲುವಿದ್ದಾಗ ಸಿಕ್ಕವರಲ್ಲ…ನನ್ನ ಸೋಲಿನ ದಿನಗಳಲ್ಲಿ ಜೊತೆಯಿದ್ದು ನನ್ನನ್ನು ಗೆಲ್ಲಿಸಿ ತಾನು ಏನೂ ಅಲ್ಲವೆಂಬಂತೆ ಇಂದಿಗೂ ಇದ್ದವರು. ನೀವಂದರೆ ನನಗೆ ತುಂಬಾ ಪ್ರೀತಿ ಮತ್ತು ನೀವೇ ನನಗೆ ಸ್ಫೂರ್ತಿ ಎಂದು ಬಾಯ್ಮಾತಿನಲ್ಲಿ ಹೇಳಿದರೆ ಸಾಲದು….ಅದಕ್ಕಾಗಿ ಪ್ರೀತಿಯಿಂದ ಬರೆದೆ.
ಹತ್ತಾರು ವರ್ಷಗಳಿಂದ ನನ್ನನ್ನು ಅತ್ಯಂತ ಕಾಳಜಿಯ ಕಣ್ಣುಗಳಲ್ಲೇ ಗಮನಿಸುತ್ತಾ ನನ್ನ ಬೆನ್ನು ತಟ್ಟಿದ ಅಂಥೋನಿ ಸರ್ ಆಪ್ತವಾಗುವ ಹೃದಯ. ಅವರ ಉತ್ಸಾಹ ಇಮ್ಮಡಿಯಾಗಲಿ. ಏಸುವಿನ ಕೃಪೆ ಸದಾ ಅವರ ಮೇಲಿರಲಿ. ನನ್ನ ಇಷ್ಟ ದೈವ ಇಡಗುಂಜಿ ಮಹಾಗಣಪತಿಯು ಸುಖ, ನೆಮ್ಮದಿ, ಆರೋಗ್ಯ, ನೆಮ್ಮದಿಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ದಿನದ ದೀವಿಗೆ

ಸರ್ ನಿಮಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ