ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀಯುತ ಶಿವರಾಮ ಗಾಂವಕರ

ಖ್ಯಾತ ಪರಿಸರವಾದಿ. ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ. ಅಲ್ಲಿ ನಿಂತರೆ…… ಹರಿದಾಸ. ಇಲ್ಲಿ ನಿಂತರೆ ಯಕ್ಷಗಾನ ಕಲಾವಿದ. ಆಚೆ ನಿಂತರೆ…ಕೊಳಲುವಾದಕ. ಈಚೆ ನಿಂತರೆ ಗೋಪಾಲಕ. ಬಹುಮುಖ ವ್ಯಕ್ತಿತ್ವದ ಬಹುಜನ ಮೆಚ್ಚಿಗೆಯ ಸರಳ ಸಜ್ಜನ ಶಿವರಾಮ ಗಾಂವಕರ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಕನಕನಹಳ್ಳಿಯ ಕನಕ. ಇವರು ನಮ್ಮ ಜಿಲ್ಲೆಗೇ ಒಂದು ಪದಕ.
ನೈತಿಕತೆ ಒಂದು ಇದ್ದರೆ ಸಾಕು ಎಂತಹವರೆದುರು ಕೂಡ ನಿಷ್ಠುರವಾಗಿ ಹೇಳುವುದಕ್ಕಂಜದ ಧೀಮಂತ ವ್ಯಕ್ತಿ. ನಿಜವಾಗಿ ಜಿಲ್ಲೆಯ ಒಂದು ಶಕ್ತಿ.
ಕಾಳಿ ಯೋಜನೆಯಲ್ಲಿ ಜನ ನಿರಾಶ್ರಿತರಾಗಿ ನಿಂತಾಗ ಮುಂದೆ ನಿಂತು ಹೋರಾಡಿದ ಮುಖಂಡ, ರಾಜಕೀಯಕ್ಕಂಟಿಕೊಳ್ಳದೇ ಸಮಾಜ ಸೇವೆಯೇ ಧ್ಯೇಯವಾಗಿಸಿಕೊಂಡ ಸ್ನೇಹಜೀವಿ, ಇದ್ದುದನ್ನು ಇದ್ದ ಹಾಗೆ ಲಕ್ಷ ಜನರೆದುರೂ ಘಂಟಾಘೋಷವಾಗಿ ಹೇಳಬಲ್ಲ ಧೀಮಂತ. ಪ್ರಖರವಾದ ಮಾತು. ಪ್ರಸನ್ನತೆಯ ಮುಖ. ಶಿವರಾಮ ಗಾಂವಕರ ನಮ್ಮಪ್ಪ ನನಗಾಗಿ ಗಳಿಸಿಟ್ಟ ಆಸ್ತಿ.
ನಮ್ಮ ತಂದೆ ಕಿಸಾನ್ ಸಂಘ ಅದೂ ಇದೂ ಅಂತ ಸಮಾಜದಲ್ಲೇ ಮುಳುಗಿಕೊಂಡಿರುವವರು. ಅವರಿಗೆ ಮೊದಲು ಭೇಟಿಯಾದ ಶಿವರಾಮ ಗಾಂವಕರ ಒಮ್ಮೆ ನಮ್ಮೂರ ಉಮಾಮಹೇಶ್ವರ ದೇವಾಲಯಕ್ಕೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಆ ದಿನ ತಂದೆಯವರ ಒತ್ತಾಯದ ಮೇರೆಗೆ ಕಾರ್ಯಕ್ರಮ ನಿರೂಪಣೆಗಾಗಿ ತೆರಳಿದ್ದೆ. ಕಾರ್ಯಕ್ರಮ ಮುಗಿದ ತರುವಾಯ ನನ್ನನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅವರು ತಂದೆ ಗೋಪಾಲಕೃಷ್ಣ ಗಾಂವಕರ ಹಾಗೂ ಮಗನೊಂದಿಗೆ ನಮ್ಮ ಮನೆಗೇ ಬಂದು ಆತಿಥ್ಯ ಸ್ವೀಕರಿಸಿದರು.
ಎಷ್ಟೇಷ್ಟೋ ದೊಡ್ಡ ದೊಡ್ಡ ಅಧಿಕಾರಿ ವೃಂದದವರನ್ನು, ಮಂತ್ರಿ ಮಹೋದಯರನ್ನು ಹತ್ತಿರದಿಂದ ನೋಡಿ ಬಲ್ಲ ಶಿವರಾಮ ಗಾಂವಕರರಿಗೆ ನಾನು ಏನೂ ಆಗಿರಲಿಲ್ಲ. ಆದರೆ ಅವರು ನನ್ನನ್ನು ಅತ್ಯಂತ ಪ್ರೀತಿಯಿಂದ ಕನಕನಹಳ್ಳಿಗೆ ಕರೆಸಿಕೊಂಡು ಸಾರ್ವಜನಿಕರೆದುರು ಸನ್ಮಾನಿಸಿದರು. ಇದು ನನಗೆ ಸಿಕ್ಕ ಮೊಟ್ಟ ಮೊದಲ ಸಾರ್ವಜನಿಕ ಸನ್ಮಾನವಾಗಿತ್ತು ಕೂಡ. ನನಗೆ ಸನ್ಮಾನ ಮಾಡಿದರು ಎಂಬ ಕಾರಣಕ್ಕೆ ಅವರು ದೊಡ್ಡ ಮನುಷ್ಯ ಎಂದೆನಿಸಲಿಲ್ಲ ನನಗೆ. ಅವರ ತಂದೆಯವರ ಭಾವುಕತೆ, ಮನೆಯವರ ಸಂಸ್ಕಾರಯುತ ನಡವಳಿಕೆ, ಇವೆಲ್ಲವೂ ನನ್ನನ್ನು ಅತಿಯಾಗಿ ಆಕರ್ಷಿಸಿತು. ಶಿವರಾಮ ಗಾಂವಕರರು ಯಾವದೋ ಪೂರ್ವಜನ್ಮದ ಸಂಬಂಧಿ ಎನಿಸಿಬಿಟ್ಟರು.
ಮುಂಜಾನೆದ್ದು ಅಂಗಳದಲ್ಲಿ ನಿಂತು ಕೊಳಲನೂದುವ ಮೂಲಕ ದಿನಕ್ಕೆ ಚಾಲನೆ ನೀಡುವ ಅವರಿಗೆ ಆಕಳ ಕೆಲಸ, ಕೃಷಿ, ಸಂಘಟನೆ, ಸಮಾಜಸೇವೆ, ಪರಿಸರ ಜಾಗೃತಿ ಹೋರಾಟ, ಕೀರ್ತನೆ, ಭಜನೆ, ಯಕ್ಷಗಾನ, ತಾಳಮದ್ದಲೆ, ನ್ಯಾಯನಿರ್ಣಯ ಹೀಗೆ ದಿನಕ್ಕೆ 48 ಗಂಟೆಗಳಿದ್ದರೂ ಸಾಕಾಗದಷ್ಟು ಕೆಲಸ. ಈ ನಡುವೆಯೂ ತಮ್ಮನ್ನು ಆತ್ಮೀಯವಾಗಿ ಕಾಣುವವರ ಮನೆಗೆ ಹೋಗದಿರುವವರಲ್ಲ ಅವರು.
ತಂದೆ ಗೋಪಾಲಕೃಷ್ಣ ಗಾಂವಕರ ಕೂಡ ಅತ್ಯಂತ ಸಾತ್ವಿಕ ಮನುಷ್ಯರು. ಇಡೀ ಮನೆಗೆ ಅವರು ಕಳಶ ಪ್ರಾಯರು. ಮನೆಗೆ ಬಂದವರನ್ನು ಅವರು ಉಪಚರಿಸುವ ರೀತಿ, ಜವಾಬ್ದಾರಿಗಳನ್ನು ಮಕ್ಕಳಿಗೇ ನೀಡಿ ಅವರನ್ನು ಮಾರ್ಗದರ್ಶಿಸುವ ಪರಿ ಆದರ್ಶವಾದದ್ದು. ಪತ್ನಿ ಶ್ರೀಮಾಲಾ ಶಿವರಾಮ ಗಾಂವಕರ ಕೂಡ ಆತಿಥ್ಯಕ್ಕೆ ಮನೆಯವರ ಜೊತೆಗೂಡುತ್ತಾರೆ. ತಾಯಿ, ತಮ್ಮ, ತಮ್ಮನ ಹೆಂಡತಿ, ಮಕ್ಕಳು ಹೀಗೆ ತುಂಬು ಸಂಸಾರ ಅಪರೂಪವಾಗಿ ಕಾಣಸಿಗುತ್ತದೆ.
ಕನಕನಹಳ್ಳಿ ಎಂದರೆ ಮೊದಲು ನೆನಪಾಗುವ ಹೆಸರೇ ಶಿವರಾಮ ಗಾಂವಕರರದ್ದು. ನೀರು, ರಸ್ತೆ, ಅರಣ್ಯ, ಅಣೆಕಟ್ಟು, ಯಾವುದೇ ಸಮಸ್ಯೆಯಿರಲಿ ಹೈಕೊರ್ಟಿನ ಮೆಟ್ಟಿಲೇರಿಯಾದರೂ ಜನರಿಗೆ ನ್ಯಾಯ ಕೊಡಿಸುವ ಬದ್ಧತೆ ಶಿವರಾಮ ಗಾಂವಕರರದ್ದು.
‌ಅವರ ಮಾತಿನ ಶೈಲಿ ಮಾತ್ರ ಅನನ್ಯವಾದದ್ದು. ಯಾವುದೇ ಧ್ವನಿವರ್ಧಕ ಇಲ್ಲದಿದ್ದರೂ ನೂರಾರು ಜನರಿಗೆ ಕೇಳಿಸಬಲ್ಲಷ್ಟು ಪ್ರಖರವಾದ ಧ್ವನಿ, ವಿಷಯ ಪ್ರಭುತ್ವ ಎಂಥವರೂ ಮೆಚ್ಚಬೇಕು. ಅವರು ಒಮ್ಮೊಮ್ಮೆ ಮಾತನಾಡುವಾಗ ನಾನು ದೇವರೇ ಇವರಿಗೆ ಯಾರೂ ಏನೂ ಮಾಡದಿರಲಿ ಎಂದು ಬೇಡಿಕೊಳ್ಳುತ್ತಿದ್ದೆ. ದಿಟ್ಟ ನಡೆ ನುಡಿಯಿಂದಲೇ ಅವರು ಸ್ವ ಸತ್ವಾತಿಶಯದಿಂದ ಪ್ರಖ್ಯಾತಿಗೆ ಬಂದವರು.
ನಮ್ಮನ್ನು ಕುಟುಂಬದವರಂತೆ ಪ್ರೀತಿ ಆತ್ಮೀಯತೆಯಿಂದ ಕಾಣುವ ಶಿವರಾಮ ಗಾಂವಕರ ನಮ್ಮ ಹತ್ತಿರ ಇನ್ಸೂರೆನ್ಸ ಪಾಲಿಸಿ ಕೇಳದ್ದಿಲ್ಲ. ನಿಸ್ವಾರ್ಥ ಪ್ರೀತಿಯವರದ್ದು. ನಾವೊಮ್ಮೆ ಇಡೀ ಕುಟುಂಬ ಮಾನಸಿಕವಾಗಿ ಜರ್ಜರಿತವಾದಾಗ ಮನೆ ಆಸ್ತಿಗಳನ್ನು ಮಾರಾಟ ಮಾಡಿ ಎಲ್ಲಾದರೂ ದೂರ ಹೊರಟೋಗೋಣ ಎಂಬ ನಿರ್ಧಾರಕ್ಕೆ ಬಂದಾಗ ಶಿವರಾಮ ಗಾಂವಕರ ನಮಗೆ ನೈತಿಕ ಸ್ಥೈರ್ಯ ತುಂಬಿದರು. ನಮ್ಮ ಮಾನ, ಪ್ರಾಣ ಉಳಿಸಿದರು. ಹೀಗಾಗಿ ಜನುಮ ಜನುಮಾಂತರಕ್ಕೂ ನಾವು ಅವರ ಋಣ ತೀರಿಸಲಾರೆವು. ಭಗವಂತನೇ ಬಳಿಗೆ ಕಳುಹಿಸಿದ ವ್ಯಕ್ತಿ ಅವರು.
ಹಂಗಿಸುವವರು ಮಾರಿಗೊಬ್ಬರು ಸಿಗುತ್ತಾರೆ ಆದರೆ ಸ್ಪಂದಿಸುವವರು ಮಾತ್ರ ನೂರು ಮೈಲಿ ದೂರ ಸಾಗಿದರೂ ಅಪರೂಪಕ್ಕೆ ಕಾಣ ಸಿಗುತ್ತಾರೆ. ಬಹುಮುಖ ಪ್ರತಿಭೆಯ ಮಹಾಪುರುಷ ಅವರು. King ಕೂಡ ಹೌದು. King maker ಕೂಡ ಹೌದು. ಮಗಳು ಸುಹಾಸಿನಿ ಗಾಂವಕರ ಒಳ್ಳೆಯ ಹಾಡುಗಾರ್ತಿ.
ಜಿಲ್ಲೆಯ ಅಪರೂಪದ ಈ ಪರಿಸರವಾದಿ ಅರಣ್ಯ, ಜಲ, ನೆಲ ಸಂರಕ್ಷಣೆಯ ಮುಂಚೂಣಿ ಹೋರಾಟಗಾರ. ಗಂಭೀರ ನಡೆ, ನುಡಿ….ಸಜ್ಜನಿಕೆಯಿಂದ ರಾಜ್ಯದ ಗಮನ ಸೆಳೆಯುವುದರಲ್ಲಿ ನಿಸ್ಸಂದೇಹ. ರಾಜ್ಯ ಸರ್ಕಾರ ನಡೆಸುವ ಬಹುತೇಕ ರೈತ ಸಮಾವೇಶದಲ್ಲಿ ಶಿವರಾಮ ಗಾಂವಕರ ಪ್ರತಿನಿಧಿಯಾಗಿ ಭಾಗವಹಿಸುತ್ತಾರೆ. ಮುಖ್ಯ ಮಂತ್ರಿಗಳ ಖಾಸಗಿ ಸಮಾಲೋಚನೆಯಲ್ಲೂ ಭಾಗವಹಿಸಿ ಚುರುಕಾದ ಪ್ರಶ್ನೋತ್ತರಗಳಿಂದ ಗಮನ ಸೆಳೆದಿದ್ದಾರೆ.
ಹತ್ತಾರು ಸಂಘ ಸಂಸ್ಥೆಗಳು ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸಿವೆ. ಅಪರೂಪದ ಈ ವ್ಯಕ್ತಿ ಸಮಾಜದ ನಿಜವಾದ ಆಸ್ತಿ. ಕಲ್ಲೇಶ್ವರದ ಹೈಸ್ಕೂಲಿನಲ್ಲಿ ಮಾಸದ ಮಾತು ಕಾರ್ಯಕ್ರಮ ನಡೆಸುವುದಷ್ಟೇ ಅಲ್ಲದೇ…. ಗಣಪತಿ ಉತ್ಸವ, ದಸರಾ, ಸಂಕ್ರಾಂತಿ ಉತ್ಸವಗಳನ್ನು ಭರ್ಜರಿಯಾಗಿ ಊರಿನಲ್ಲಿ ಸಂಘಟಿಸುತ್ತಾರೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಶ್ರೀಯುತರಿಗೆ ಮತ್ತು ಅವರ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಅಕ್ಕರೆ ಮತ್ತು ಮಗು

ಶಿವರಾಮ ಗಾಂವಕರ ಅವರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ