ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀಯುತ ಆರ್.ಎಸ್.ಭಟ್ಟ
ಶ್ರೀಯುತ ಆರ್.ಎಸ್ ಭಟ್ಟ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ನವಿಲಗೋಣದವರು. ಸಮಾಜದಲ್ಲೇ ಅತ್ಯಂತ ಶ್ರೇಷ್ಠವಾದ ಶಿಕ್ಷಕ ವೃತ್ತಿಯನ್ನು ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಗೈದು.. ಸರಳತೆ, ಸಜ್ಜನಿಕೆಯನ್ನು ಬಿಡದೇ ಪ್ರತಿಕ್ಷಣವೂ ಉತ್ಸಾಹದ ಚಿಲುಮೆಯಂತೆ ಇನ್ನೊಬ್ಬರಿಗೆ ಸ್ಫೂರ್ತಿ ಆಗಬಲ್ಲ ವ್ಯಕ್ತಿತ್ವವನ್ನು ಹೊಂದಿ ತಾನಿದ್ದ ಕಡೆಯಲ್ಲೆಲ್ಲ ನಗುವಿನ ಅಲೆಯನ್ನೇ ಹೊಮ್ಮಿಸಿ ತಾನೇ ಕೈಯೆತ್ತಿ ಕೊಟ್ಟು ಇನ್ನೊಬ್ಬರೆದುರು ಕೈಚಾಚದೇ, ಯಾವ ಪ್ರತಿಷ್ಠೆ, ಪ್ರಶಸ್ತಿಗಳನ್ನು ಬೆನ್ನಟ್ಟದೇ, ಯಾರ ಹೊಗಳಿಕೆಯನ್ನೂ ಬಯಸದೇ, ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಶ್ರೀಯುತರಿಗೆ ನಾನು ನೀಡುತ್ತಿರುವ ಅಕ್ಷರಗಳ ಅಭಿನಂದನೆಯಿದು.
ನವಿಲಗೋಣದಲ್ಲಿ ಜನಿಸಿದ ಇವರು ತಂದೆ ಸತ್ಯನಾರಾಯಣ ಭಟ್ಟರಿಂದ ಸತ್ಯವನ್ನೂ, ತಾಯಿ ಲಕ್ಷ್ಮಿಯಿಂದ ದಾರಿದ್ರ್ಯ ರಹಿತ ಬದುಕನ್ನೂ ಪಡೆದವರೆಂದು ತೋರಿದ್ದು ನಮಗೆ. ಕರ್ತವ್ಯದಿಂದ ನುಣುಚಿಕೊಳ್ಳದೇ ವಿದ್ಯಾರ್ಥಿಗಳಿಗೆ ಪಾಠ ಮಾಡುವುದೇ ನನಗೆ ಖುಷಿ ಎಂದು ಕಾಯಾ ವಾಚಾ ಮನಸಾ ಗುರುವಾಗಿ ಬೆಳಕಾದವರು ಇವರು. ನೋವಿನ ಮುಖಗಳಲ್ಲೂ ತಮಾಷೆಯಿಂದ ನಗುವಿನ ಬುಗ್ಗೆಯನ್ನೇ ಹೊರ ಹೊಮ್ಮಿಸುವ ಅವರ ಮಾತಿನ ವೈಖರಿಯೇ ವಿಭಿನ್ನ. ಅವರ ಸುತ್ತಲಿರುವ ಪ್ರತಿಯೊಬ್ಬರನ್ನೂ ಪ್ರತಿದಿನವೂ ನೆನಪಿಸುವಂತೆ ಮಾಡುವ ಅವರ ವ್ಯಕ್ತಿತ್ವ ಒಂದರ್ಥಕ್ಕೆ ಮಾದರಿಯೇ ಸರಿ. ಕರ್ತವ್ಯಕ್ಕೆ ಚ್ಯುತಿ ಬಾರದೇ, ಅಧಿಕಾರಿಗಳ ಮೆಚ್ಚುಗೆಗೆ ಅವರ ಮನೆಬಾಗಿಲಿಗೆ ಅಲೆದಾಡದೇ, ಅತಿಶಯೋಕ್ತಿಗಳಿಂದ ಬೇರೆಯವರನ್ನು ಹೊಗಳಿ ಅವರಿಂದ ಇನ್ನೇನನ್ನೋ ಗಿಟ್ಟಿಸಿಕೊಳ್ಳುವ ಇರಾದೆ ಇಲ್ಲದೇ ತನ್ನ ಸ್ವ ಭಾವದಿಂದಲೇ ಸಹೃದಯರ ಮನ ಗೆಲ್ಲುವವರು ಇವರು.
ಬುದ್ಧಿವಂತರು ನಮಗೆ ಮಾರಿಗೊಬ್ಬರು ಸಿಗುತ್ತಾರೆ. ಅದರೆ ಹೃದಯವಂತರು ಮಾತ್ರ ಅಪರೂಪಕ್ಕೆ ಕಾಣ ಸಿಗುತ್ತಾರೆ. ಇದ್ದೊಬ್ಬ ಮಗನನ್ನೂ ದೇಶದ ವೀರ ಯೋಧನಾಗುವುದಕ್ಕೆ ಸಂತೋಷದಿಂದ ಕಳುಹಿಸಿಕೊಟ್ಟ ತಂದೆ ಇವರು. ಆದರ್ಶ ರಾಮ.( ಆದರ್ಶ- ಮಗ, ರಾಮ-ತಂದೆ) ಅವರ ಪಿತೃತ್ವವೂ ಪಾವನವಾಯಿತು. ಬದುಕಿನ ಎಲ್ಲಾ ಪಾತ್ರಗಳನ್ನೂ ಅವರು ಸಮರ್ಥವಾಗಿಯೇ ನಿರ್ವಹಿಸಿದವರು ಎಂಬುದರಲ್ಲಿ ಎರಡು ಮಾತಿಲ್ಲ. ಬಾಹ್ಯ ನೋಟಕ್ಕೆ ಉದ್ದಕ್ಕೆ ತೆಳ್ಳಗಿನ ಮೈಕಟ್ಟು ಹೊಂದಿರುವ ಇವರನ್ನು ಕೆಲವರು ದಡ್ಡರೆಂದು ಭಾವಿಸಿರಲಿಕ್ಕೂ ಸಾಕು. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎಂಬಂತೆ ಅವರ ಜೊತೆ ಕಾರ್ಯ ನಿರ್ವಹಿಸಿದ ದಿನಗಳ ನೆನಪಿನ ಸಿಹಿ ಸಾಯುವವರೆಗೂ ಮರೆಯುವುದಲ್ಲ.
ಗುರೌ ನಮ್ರಾ ಲಘುನ್ಯುಚ್ಛಾ ಸಮೇ ಸಮತಯಾನ್ವಿತಾ
ಸಾಧುವೃತ್ತಿಸ್ತಥಾ ಭಾತಿ
ತುಲಾ ವೃತ್ತಿರಿವೋತ್ತಮಾ ||
ಎಂಬಂತೆ ತಕ್ಕಡಿಯಂತಹ ಜನ ಅವರು. ತನಗಿಂತ ತೂಕದ ವಸ್ತುವಿರುವಾಗ ತಕ್ಷಣವೇ ಮೇಲೇರಿ ಗೌರವಿಸುತ್ತಾರೆ. ಸಮಾನ ತೂಕದ್ದಾದರೆ ಸಮಾನವಾಗಿಯೇ ನಿಲ್ಲುತ್ತಾರೆ. ತನಗಿಂತ ಹಗುರವೆಂದೆನಿಸಿದರೆ ತಾನೇ ಮಾರ್ಗದರ್ಶಿಸುತ್ತಾರೆ. ಹಲವು ಸಲ ಅವರನ್ನು ಗಮನಿಸಿದಾಗ ಅವರ ಒಳ್ಳೆಯತನವೇ ಅವರ ಆರೋಗ್ಯವನ್ನು ಚೆನ್ನಾಗಿ ಇಟ್ಟಿದೆ ಎಂದು ನಮಗನ್ನಿಸುವುದು. ಸಿಟ್ಟು ಮಾಡುವವರನ್ನು, ತಾನೇ ಸರ್ವಶ್ರೇಷ್ಠ ಎನ್ನುವವರನ್ನೂ, ಹೊಂದಾಣಿಕೆಯೇ ಇಲ್ಲದೇ ಬೇರೆಯವರ ನೆಮ್ಮದಿಯನ್ನೂ ಹಾಳು ಮಾಡುವವರ ನಡುವೆ ಸಮಾಧಾನಿಯಾಗಿ ನಾಯಕತ್ವದ ಸಮರ್ಥ ನಿರ್ವಹಣೆ ಮಾಡಬಲ್ಲವರು ಶ್ರೀಯುತ ಆರ್.ಎಸ್. ಭಟ್. ಸ್ನೇಹಿತರಿಗೆ ಸ್ನೇಹಿತರಾಗಿ ಪ್ರೀತಿಯಿಂದ ಕಾಣುವವರಿಗೆ ಮಾರ್ಗದರ್ಶಿಯಾಗಿ ಶಿಕ್ಷಣ ರಂಗದಲ್ಲಿ ದುಡಿದವರು. ದಣಿದರೂ ದಣಿಯದಂತೆ ಇಂದಿಗೂ ಜೀವನೋತ್ಸಾಹದಿಂದ ಓಡಾಡುವವರು. ವಯಸ್ಸಾಗುವುದು ದೇಹಕ್ಕಲ್ಲ ಮನಸ್ಸಿಗೆ ಎಂಬ ಅವರ ಮಾತುಗಳು ನನಗೆ ಸದಾ ಚೈತನ್ಯ ತುಂಬುತ್ತದೆ.
ಅವರೊಡನೆ ಕೆಲಸ ಮಾಡಿದ ದಿನಗಳು ನನಗೊಂದು ಸುವರ್ಣ ಕ್ಷಣ. ಅವರನ್ನು ಇನ್ನೂ ಮನಸ್ಸಿನಲ್ಲಿ ಉಳಿಸಿಕೊಂಡಿದ್ದೇನೆ ಎಂಬುದಕ್ಕಷ್ಟೇ ಸಾಕ್ಷಿ ಈ ಅಕ್ಷರಗಳು. Nothing is given so freely as advice. ಉಪದೇಶ ಮಾಡುವವರಲ್ಲ ಅವರು. ಸಾಧ್ಯವಾದರೆ ತಾವೇ ಮಾಡುವವರು. ಅಸಾಧ್ಯವೆನಿಸಿದರೆ ಯಾರಿಗೂ ಬೇಸರವಾಗದಂತೆ ಮಾಡಿಸುವವರು. ಯಾರಿಂದಲೂ ಏನನ್ನೂ ನಿರೀಕ್ಷಿಸದ ಉದಾತ್ತತೆಯೇ ಅವರನ್ನು ಎತ್ತರದಲ್ಲಿಟ್ಟಿದೆ.
ಜೀವನದ ಪಯಣದಲಿ ಬಂದು ಹೋಗುವರೆಷ್ಟೊ……
ಹೃದಯದಲೆ ತಳ ಹಿಡಿದು ಕುಳಿತಿರುವರೆಷ್ಟೋ……
ಕಣ್ಣಲ್ಲೆ ಕಣ್ಣಾಗಿ ಕರುಣೆ ತೋರುವರೆಷ್ಟೊ……
ಸಹನೆಯನೆ ತೋರುತಿರು ಎಂದ ಸಂದೀಪ ||
ಎಂಬ ನನ್ನದೇ ನುಡಿಗಳನ್ನು ಉದಾಹರಿಸಿ ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಶ್ರೀಯುತ ಆರ್ ಎಸ್ ಭಟ್ಟ ಮತ್ತು ಅವರ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.
ಸರ್ ನಿಮಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ