ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಜ್ಯೂನಿಯರ್ ಸಂದೀಪ್
ಹೊನ್ನಾವರ ತಾಲೂಕಿನ ಆರೊಳ್ಳಿಯಲ್ಲಿ ನೆಲೆಸಿರುವ ಖ್ಯಾತ ವ್ಯಾಪಾರಿ, ಶ್ರೀಯುತ ಎಂ.ಆರ್.ಹೆಗಡೆ ಗೊಟ್ಣಕೋಡ್ಲು ಮತ್ತು ಸೀತಾ ದಂಪತಿಯ ಪುತ್ರ. ಸದ್ಯ ಪರಿಚಿತವಿರುವ ನಮ್ಮೂರಿನ ಸಂದೀಪ ದ್ವಯರಲ್ಲಿ ನಾನು ಅವನಿಗಿಂತ ಸೀನಿಯರ್ ಅವನು ನನಗಿಂತ ಜ್ಯೂನಿಯರ್. ಹೀಗಾಗಿ ಅವನು ನಾನು ಹೆಸರಿಡಿದು ಕರೆದುಕೊಳ್ಳುವುದಕ್ಕಿಂತ ಹೀಗೆ ಕರೆಯುವುದೇ ಹೆಚ್ಚು.
ಜ್ಯೂನಿಯರ್ ಸಂದೀಪನನ್ನು ನಾನು ಸಣ್ಣವನಿರುವಾಗಿನಿಂದ ನೋಡಿರುವೆ. ನಮ್ಮ ಊರಿನಲ್ಲಿ ದೊಡ್ಡ ಮಟ್ಟದ ಎಮ್ಮೆ ವ್ಯಾಪಾರ ನಡೆಸಿದ ಅವರ ತಂದೆಯವರು ಪ್ರಸ್ತುತ ನಮ್ಮ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಕೂಡ. ಸಂದೀಪನ ಮನೆಗೆ ದಿನಾಲೂ ಹಾಲು ತೆಗೆದುಕೊಂಡು ಬರುವುದಕ್ಕೆ ನಾನು ಹೋಗುತ್ತಿದ್ದವ. ಜ್ಯೂನಿಯರ್ ಚಿಕ್ಕಂದಿನಿರುವಾಗಿಂದಲೂ ಪ್ರತಿಭಾವಂತ.
ಅಮ್ಮ ಸೀತಕ್ಕ ತುಂಬಿದ ಕೊಡ. ನನ್ನನ್ನು ಮನೆ ಮಗನಂತೆ ಮಾತಾನಾಡಿಸುತ್ತಿದ್ದಳು. ನಮ್ಮ ಜ್ಯೂನಿಯರ್ ಸಂದೀಪನಿಗೂ ಅವರ ತಂದೆ ತಾಯಿಯರ ಸೌಜನ್ಯ ಅನುವಂಶಿಕವಾಗೇ ಬಂದುದು.
ಎಲ್ಲರೂ ಅಪ್ಪ ಓದು ಎಂದಿದ್ದನ್ನು ಓದುತ್ತಾರೆ. ಅಪ್ಪ ಮಾಡು ಎಂದಿದ್ದನ್ನು ಮಾಡುತ್ತಾರೆ. ಆದರೆ ನಮ್ಮ ಸಂದೀಪ ತಾನು ಮಾಡಬೇಕಾದ್ದನ್ನು ಮಾಡುತ್ತಾನೆ. ಹೋಲಿ ರೋಸರಿ ಕಾನ್ವೆಂಟಿನಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಮುಗಿಸಿದ ಸಂದೀಪ್ ಇಂಜನಿಯರಿಂಗ್ ಮುಗಿಸಿ ಹತ್ತಾರು ಕಂಪನಿಗಳಿಗೆ ಫೈಲು ಹಿಡಿದು ಕೆಲಸಕ್ಕೆ ಅಡ್ಡಾಡಲೇ ಇಲ್ಲ. ಇಂಜನಿಯರಿಂಗ್ ಮುಗಿಸುವ ಹೊತ್ತಿಗೆ ಸ್ವಂತ ಕಂಪನಿ open ಮಾಡಿ ಹತ್ತಾರು ಜನರಿಗೆ ಕೆಲಸ ಕೊಡುವಂತಾದ. ಎಲ್ಲರೂ ಬೆಂಗಳೂರು ಬಸ್ ಹತ್ತುತ್ತಿದ್ದರೆ ತಾನು ಬೆಳಗಾವಿ ಬಸ್ ಹತ್ತಿದ.
ಬೆಳಗಾವಿಯಲ್ಲಿದ್ದುಕೊಂಡೇ ನಾನಾ ರಾಷ್ಟ್ರಗಳ project ನ್ನು ಯಶಸ್ವಿಯಾಗಿ ಪೂರೈಸಿದ ಸಂದೀಪ್ ವಿದೇಶಗಳಿಗೂ ಹೋಗಿ ಬಂದ.
ಸಂದೀಪನ ತಂದೆ ಎಂ.ಆರ್.ಹೆಗಡೆಯವರು ಕೃಷಿಕರು. ವ್ಯಾಪಾರಿಗಳು. ಸಮಾಜ ಸೇವಕರು. ಎಲ್ಲಕ್ಕಿಂತ ಹೆಚ್ಚಾಗಿ ಅವರದು ವಿಭಿನ್ನ ಆಲೋಚನೆ. ಅದು ಸಂದೀಪನದು ಕೂಡ.
ನನ್ನನ್ನು ಅಪಾರ ಪ್ರೀತಿ ಗೌರವಗಳಿಂದ ಕಾಣುವ ಜ್ಯೂನಿಯರ್ ನನ್ನ ಎಲ್ಲಾ ಕೆಲಸಗಳಿಗೂ ಸ್ಫೂರ್ತಿ ತುಂಬುತ್ತಾನೆ ಸಾಥಿಯಾಗುತ್ತಾನೆ. ಸೀನಿಯರ್…….ನಿನ್ನ ಜೊತೆಗೆ ನಾನಿದ್ದೇನೆ ಎಂಬ ಭರವಸೆಯಾಗುತ್ತಾನೆ.
ಜ್ಯೂನಿಯರ್ ಸಂದೀಪ ಪ್ರಸ್ತುತ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ಆದರೆ ಅವನ ಮನಸ್ಸು ಮಾತ್ರ ತಾನು ಊರಿಗೆ ಊರಿನವರಿಗೆ ಏನಾದರೂ ಮಾಡಬೇಕೆಂಬುದು. ನಗುಮುಖದ ಜ್ಯೂನಿಯರ್ ಮಿತಭಾಷಿ. ಸರಳಜೀವಿ. ವೈಭವೋಪೇತ ವಿಲಾಸಿ ಜೀವನ ಅವನಿಗೆ ಸಲ್ಲದು.
ಜೀವನೋಪಾಯಕ್ಕಾಗಿ ಅಲ್ಪ ಸ್ವಲ್ಪ ಮಂತ್ರ ಕಲಿತಿದ್ದ ನನ್ನನ್ನು ಪ್ರತಿವರ್ಷ ಚೌತಿಹಬ್ಬದ ಪೂಜೆಗೆಂದು ಕರೆಸಿಕೊಳ್ಳುತ್ತಾರೆ. ಜ್ಯೂನಿಯರ್ ನಿಜಕ್ಕೂ ಬೆಳೆಯುತ್ತಿರುವ ಪ್ರತಿಭಾವಂತ.
ನಮಗಿಂತ ಯಾರಾದರೂ ಮುಂದಿದ್ದಾರೆಂದರೆ ಹೊಟ್ಟೆ ಕಿಚ್ಚು ಪಡುವುದರಲ್ಲಿ ಅರ್ಥವಿಲ್ಲ. ಮನಸಾರೆ ಹರಸಬೇಕು. ಹಾರೈಸಬೇಕು. ನಾಳೆ ಒಂದಿನ ಮುಂದಿರುವ ಆತ ನಮ್ಮನ್ನೂ ಕೈಹಿಡಿದು ಮುಂದಕ್ಕೆ ಕರೆ ತಂದಾನು.
ಜ್ಯೂನಿಯರ್ ಕ್ರಿಕೆಟ್ ಅದೂ ಇದೂ ಅಂತ ಕಾಲಹರಣ ಮಾಡುವ ವಿದ್ಯಾರ್ಥಿ ಆಗಿರಲಿಲ್ಲ. ಅಂಗಡಿಯ ಬಾಗಿಲಲ್ಲಿ ನಿಂತು ಅದೂ ಇದೂ ತಿನ್ನುತ್ತಾ ನಿಲ್ಲುವವನೂ ಅಲ್ಲ. ತಾನಾಯಿತು ತನ್ನ ಕೆಲಸವಾಯಿತು ಎನ್ನುವವ. ಅಪ್ಪ ಊರಿಗೇ ದೊಡ್ಡ ಜಮೀನುದಾರರಾದರೂ ಅಳೆದು ತೂಗಿ ನೋಡಿದರೂ ಸ್ವಲ್ಪವೂ ಸೊಕ್ಕಿಲ್ಲ ನಮ್ಮ ಜ್ಯೂನಿಯರ್ ಗೆ.
ನಮ್ಮ ಮಕ್ಕಳು ಹೇಗಾಗಬೇಕೆಂಬುದಕ್ಕೆ ನಮ್ಮ ಜ್ಯೂನಿಯರ್ ಮಾದರಿ. ಆಗಾಗ ಊರಿಗೆ ಭೇಟಿ ನೀಡುವ ಸಂದೀಪನ ದೂರ ದೃಷ್ಟಿಯಲ್ಲಿ ನೂರಾರು ಯೋಜನೆಗಳಿವೆ. ಸುಂದರ ಕನಸುಗಳಿವೆ. ನನ್ನನ್ನು ಅಪಾರವಾಗಿ ಪ್ರೀತಿಸುವ ಜ್ಯೂನಿಯರ್ ಅವನನ್ನು ಅತಿಯಾಗಿ ಗೌರವಿಸುವ ನಮ್ಮಿಬ್ಬರದೂ ಸಾತ್ವಿಕ ಸ್ನೇಹ.
ಮಡದಿ ಮಕ್ಕಳೊಂದಿಗೆ ಚಂದದಿಂದ ಬದುಕುವ ಜ್ಯೂನಿಯರ್ ಯಾರಿಗೂ ನೋಯಿಸುವವನಲ್ಲ. ನನ್ನಲ್ಲಿಲ್ಲದ ಅನೇಕ ಸಾಧ್ಯತೆಗಳು ಜ್ಯೂನಿಯರ್ಗೆ ಅವನ ಸತ್ವಾತಿಶಯದಿಂದ ಲಭಿಸಿದೆ. ಅವನ ಜೊತೆಯಾಗಿ ನಡೆಯುವುದಕ್ಕೆ ನನಗೂ ಸಮಾಧಾನವಿದೆ. ಸಂತೃಪ್ತಿಯಿದೆ. ಜ್ಯೂನಿಯರ ಸಂದೀಪ ವಯಸ್ಸಿನಲ್ಲಿ ನನಗಿಂತ ಜ್ಯೂನಿಯರ್ ಆದರೂ ಒಂದರ್ಥಕ್ಕೆ ಸೀನಿಯರ್. ಆದರೂ ಹಲವಾರು ಜನರ ಬದುಕಿಗೆ ಆತ ಬಣ್ಣವಾಗಲಿ ಎಂಬುದೇ ನನ್ನ ಬಯಕೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಜ್ಯೂನಿಯರ್ ಸಂದೀಪನಿಗೆ ಮತ್ತು ಅವರ ಕುಟುಂಬಕ್ಕೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.
ಜ್ಯೂನಿಯರ್ ಗೆ ಸೀನಿಯರ್ ನ ಶುಭಾಶೀರ್ವಾದಗಳು
✍ಸಂದೀಪ ಎಸ್ ಭಟ್ಟ