ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ಸುರೇಶ ನಾಯ್ಕ ಹೊಳೆಗದ್ದೆ

ನನ್ನ ಪ್ರೀತಿಯ ಸ್ನೇಹಿತ ಸುರೇಶ ನಾಯ್ಕರ ಬಗ್ಗೆ ನಾಲ್ಕಕ್ಷರ ಬರೆಯಬೇಕೆನಿಸಿತು ಇಂದು. ಎಲ್ಲರಿಗೂ ಎಲ್ಲರ ಸ್ವಭಾವಗಳೂ ಇಷ್ಟವಾಗಬೇಕೆಂಬ ನಿಯಮವೇನೂ ಇಲ್ಲ. ಯಾವುದೋ ಸೆಳೆತ, ಕಾಣದ ಭಾವಗಳ ಸಮ್ಮಿಳಿತ ಎಲ್ಲಿಯವರನ್ನೂ, ಎಂಥವರನ್ನೂ ಒಂದಾಗಿಸುತ್ತದೆ. ಅಪರೂಪದ ಎಲ್ಲರಂತಲ್ಲದ ವಿಭಿನ್ನ ವ್ಯಕ್ತಿತ್ವದ ಸುರೇಶ ನಾಯ್ಕರದು ಬುಲೆಟ್ ಗಾಡಿ….ಬುಲೆಟ್ ಮಾತು.


ನಾನು ಕುಮಟಾದಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದವನು. ಕ್ರಿ.ಶ 2011 ರಲ್ಲಿ ಹೊನ್ನಾವರಕ್ಕೆ transfer ಆಯ್ತು. ನನ್ನೂರೇ ಆದರೂ ಹೊನ್ನಾವರ ತಾಲೂಕಿನ ಶಿಕ್ಷಕರನೇಕರ ಪರಿಚಯ ನನಗಿರಲಿಲ್ಲ. ನಾನು ಇಲ್ಲಿ ಬಂದ ಕೆಲವೇ ದಿನಗಳಲ್ಲಿ ರಾಜೇಶ, ಸುರೇಶ ಎಂಬುವರು ಇಬ್ಬರು ಭೇಟಿಯಾದರು. ರಾಜೇಶ ಸರ್ ಗೆ ನನ್ನ ಕಿರು ಪರಿಚಯ ಇದ್ದು ಸುರೇಶ ಸರ್ ಗೆ ಅವರು ನನ್ನನ್ನು ಪರಿಚಯಿಸಿದರು. ನಾನು ಸೂಕ್ಷ್ಮ ಗ್ರಾಹಿಯಾಗಿ ಅವರ ಮಾತುಗಳನ್ನೇ ಆಲಿಸಿದೆ. ಸುರೇಶ ನಾಯ್ಕರದು ಒಂದು ತರಹ ಕ್ರೈಂ ಸ್ಟೋರಿ voice. ಖಡಕ್ ಮಾತು. ಬಹಳ ಇಷ್ಟವಾಯಿತು. ಅವರು ಹೇಳುತ್ತಿರುವ ಮಾತುಗಳನ್ನಾಲಿಸುತ್ತಿದ್ದಾಗ ಇವರು ಒಳಗೊಂದು ಹೊರಗೊಂದು ಇಲ್ಲದ pure heart ಎಂಬುದು ಪಕ್ಕಾ ಆಗಿತ್ತು. ಅಲ್ಲಿಂದ ಶುರುವಾದದ್ದು ನಮ್ಮ ಸ್ನೇಹ.
ಸುರೇಶ ನಾಯ್ಕ ಸರ್ ಪ್ರಸ್ತುತ ಹೊದಿಕೆ ಶಿರೂರಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ. ಪ್ರಾಮಾಣಿಕ ಶಿಕ್ಷಕ. ಅತ್ಯುತ್ತಮ ಸಂಘಟಕ. ನಿರೂಪಕ. ನನಗೆ ಅವರ ನಿರೂಪಣೆಗಿಂತ ಭಾಷಣ ಸಖತ್ ಇಷ್ಟವಾಗುತ್ತದೆ. ಅವರಿಗೆ ಅನಿಸಿಕೆ ಹೇಳಲು ಕೊಡುವುದಕ್ಕೆ ಎಲ್ಲರೂ ಹೆದರುತ್ತಾರೆ. ಯಾಕೆಂದರೆ ಇದ್ದದ್ದನ್ನು ಇದ್ದ ಹಾಗೆ ಬುಲೆಟ್ ಹೊಡೆದ ಹಾಗೆ ಹೇಳುವ ಸ್ವಭಾವ ಅವರದ್ದು. ಮೇಲಧಿಕಾರಿಗಳೇ ಆಗಿರಲಿ, ಯಾರೇ ಆಗಿರಲಿ ಸತ್ಯ ಹೇಳುವುದಕ್ಕೆ ಅಂಜದ ವ್ಯಕ್ತಿ ನಮ್ಮ ಸುರೇಶ ಸರ್. ಎದುರಿಗಿರುವ ವ್ಯಕ್ತಿ ಬಹಳ ಹೊತ್ತು ಮಾತನಾಡಿ ನನ್ನ ಪಕ್ಕವಿರುವ ಸುರೇಶ ಸರ್ ಸುಮ್ಮನಿದ್ದಾರೆಂದರೆ ನನಗೆ ಪಕ್ಕಾ ಗೊತ್ತಿರುತ್ತದೆ ಈಗೊಂದು ಗುಂಡು ಬಿತ್ತು ಅಂತ. ಪಕ್ಕಾ ಸಾತ್ವಿಕ ಉಗ್ರಗಾಮಿ ಅವರು.

RELATED ARTICLES  ಕಳೆದುಹೋಗುವ ಭಾವನೆಗಳು: ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು(ಭಾಗ - 2).

‌‌‌‌‌‌‌‌ ಸುರೇಶ ಸರ್ ಸುಮ್ಮನೆ ಸೋಮಾರಿಯಾಗಿ ಕುಳಿತುಕೊಂಡಿರುವವರಲ್ಲ. ಅವರದು ಹಲವು ಯೋಚನೆ. ಹಲವು ಯೋಜನೆ. ಮಡದಿಯೂ ಆದರ್ಶ ಶಿಕ್ಷಕಿ. ಸಂದೀಪನೆಂದರೆ ಪ್ರೀತಿಯಿಂದ ಕಾಣುವ ಅವರಲ್ಲಿ ಹುಳುಕೆಂಬುದನ್ನು ಕಂಡೇ ಇಲ್ಲ ನಾನು. ಕಿವಿ ಚುಚ್ಚುವ, ಜಾತಿಯ ಕಿಡಿ ಹೊತ್ತಿಸುವ, ಸುಮ್ಮನೆ ಆರೋಪಿಸುವ, ಯಶಸ್ಸನ್ನು ಸಹಿಸದ ಸಂಕ್ಷಿಪ್ತ ಮನಸ್ಸುಗಳನ್ನು ನೋಡುವಾಗೆಲ್ಲ ಸುರೇಶ ಸರ್ ಅವರಂಥವರು… ಮಾದರಿಯಾಗುತ್ತಾರೆ. ಯಾರೋ ಹೇಳಿದರೆಂದು ಸುಮ್ಮನೆ ಗೋಣು ಅಲ್ಲಾಡಿಸುವ ವ್ಯಕ್ಯಿಯಲ್ಲ ಅವರು.
ಸುರೇಶ ನಾಯ್ಕರದು ದಿಟ್ಟ ನಡೆ. ದಿಟ್ಟ ನುಡಿ. ಪ್ರಶಸ್ತಿ, ಪ್ರತಿಷ್ಠೆಗಳಿಗೆ ಅಲೆದಾಡುವವರಲ್ಲ ಅವರು. ಹಾಗಂತ ಅವರಿಗೊಂದು ಜವಾಬ್ದಾರಿ ಕೊಟ್ಟಾಗ ನುಣುಚಿಕೊಳ್ಳುವ ಜಾಯಮಾನದವರೂ ಅಲ್ಲ. ನನಗೆ ಅತ್ಯಂತ ಪ್ರಿಯವಾಗುವ ಜನ ಅವರು. ಜೀವಕ್ಕೆ ಜೀವ ಕೊಡಬಲ್ಲ ಗೆಳೆಯ.
ಹೊಗಳಿದವರು ಮಾತ್ರ ಹತ್ತಿರವಾಗುವುದಿಲ್ಲ….ಕೆಲವೊಮ್ಮೆ ಸಾತ್ವಿಕವಾಗಿ ತೆಗಳುವವರೂ ಹತ್ತಿರವಾಗುತ್ತಾರೆ. ಸುರೇಶ ಸರ್ ಬೇಕಾಬಿಟ್ಟಿ ಯಾರ ಯಾರನ್ನೋ ಮೆಚ್ಚಿಸುವುದಕ್ಕಾಗಿ ಬಣ್ಣದ ಮಾತಾಡುವವರಲ್ಲ. ಪ್ರತಿಷ್ಠಿತ ವ್ಯಕ್ತಿಗಳ ಹಿಂದೆ ನಿಂತು ಫೋಟೋ ಹೊಡೆಸಿಕೊಳ್ಳುವವರಲ್ಲ. ಒಣ ಜಂಭ ತೋರುವವರೂ ಅಲ್ಲ. ಹೀಗಾಗಿ ನನಗೆ ಅವರು ಆಪ್ತರಾಗುತ್ತಾರೆ.
‌‌‌‌ ನನ್ನ ಬದುಕಿನ ಸ್ನೇಹಿತ ಬಳಗದಲ್ಲಿ ಪರಮಾಪ್ತತೆ ತೋರಿದ ಅವರದು ನನ್ನದು ತೀರಾ ವೈರುಧ್ಯದ ಭಾವ. ನನಗೆ ಹೆದರಿಕೆ. ಅವರಿಗೆ ಹುಂಭ ಧೈರ್ಯ. ನನ್ನದು ಮೃದು ಮಾತು. ಅವರದು ಪ್ರಖರ ನುಡಿ. ನನ್ನದು ಸಾಹಿತ್ಯದ ಬದುಕು. ಅವರದ್ದು ವ್ಯಾವಹಾರಿಕ ನಡೆ. ಬೇಸರವಾಗುತ್ತದೆಂದು ನಾನು ಹೇಳಬೇಕಾದ್ದನ್ನೂ ಮರೆ ಮಾಚುತ್ತೇನೆ. ಬೇಸರವಾದರೆ ಗಂಟೇನು ಹೋದೀತು ಎಂದು ಸಾವಿರ ಜನರೆದುರಿಗೂ ಅವರು ಹೇಳುತ್ತಾರೆ. ನಾನು ಮಂದಗಾಮಿ. ಅವರು ಉಗ್ರಗಾಮಿ. ? ಹೀಗಿದ್ದೂ ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಅವರೂ ಕೂಡ.
ಸಂತೋಷಕ್ಕೆ ನಾವಿಬ್ಬರೂ ದಿನಾ ಮಾತಾಡುತ್ತೇವೆಂದಲ್ಲ. ಕೆಲಸವೇ ಪ್ರಧಾನವಾದ ನಮಗೆ ಒಮ್ಮೊಮ್ಮೆ ಮಾತನಾಡುವುದಕ್ಕೂ ಪುರುಸೊತ್ತಿರುವುದಿಲ್ಲ. ಪುರುಸೊತ್ತಿದ್ದರೂ ಏನು ತಿಂಡಿ ತಿಂದೆ? ಎಷ್ಟು ಸಲ ನೀರು ಕುಡಿದೆ? ಊಟ ಮಾಡಿದೆಯೋ ಬಿಟ್ಟೆಯೋ? ಮಕ್ಕಳೇಕೆ ಹೀಗೆ?ಶಾಲೆಯೇಕೆ ಹಾಗೆ? ಈ ಥರದ ವಿಷಯಗಳ ಮಾತುಕತೆಯೇ ಅಲ್ಲ ನಮ್ಮದು. ಖುಷಿ ಕೊಡುವ ನಾಲ್ಕು ಮಾತಾಡಿದರೆ ಸಾಕು ಎನ್ನುವವರು ನಾವು.
ಸುರೇಶ ಸರ್ ಅವರಲ್ಲಿ ನಾಯಕತ್ವ ಗುಣ ಪ್ರಧಾನವಾಗಿ ಇದೆ. ಅವರು ನಮ್ಮ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರು ಕೂಡ. ಸಾವಿರ ಜನ ಸೇರಿದ್ದ ಸಭೆಯಲ್ಲೂ ನಾನು ಸುರೇಶ ಸರ್ ಹುಡುಕುತ್ತೇನೆ. ಯಾಕೆಂದರೆ ಅವರು ಕಿವಿಯಲ್ಲಿ ಹೇಳುವ ಮಾತುಗಳು ಸಖತ್ ಮಜಾ ಕೊಡುತ್ತದೆ. ಮುದ್ದಾದ ಮಗ, ಚೂಟಿಯಾದ ಮಗಳು ಸಂತೃಪ್ತ ಸಂಸಾರಿ ಅವರು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಸುರೇಶ ನಾಯ್ಕ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ತಂಪಿನಲ್ಲೂ ತಂಪು ಯಾವುದು…?

ಸುರೇಶ ಸರ್ ಅವರಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ