ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀಮತಿ ಮಹಾಲಕ್ಷ್ಮಿ ವಿಲಾಸ್
ಓದುವಾಗಷ್ಟೇ ಜೊತೆಯಾದವರು ಬದುಕಿನಲ್ಲಿ ಛಿದ್ರ ಛಿದ್ರವಾಗಿ ಹರಿದು ಹಂಚಿ ಹೋಗುತ್ತಾರೆ. ಯಾರ ಬದುಕು ಎಲ್ಲೆಲ್ಲಿ ಬರೆದಿರುತ್ತದೋ ಯಾರಿಗೆ ಗೊತ್ತು?! ನನಗೆ ಅವಳಿಗಿಂತ ಹೆಚ್ಚು ಅಂಕ….. ಅವನು ನನಗಿಂತ ಆಟದಲ್ಲಿ ಮುಂದು……. ಹೀಗೆ ಸಣ್ಣ ಪುಟ್ಟ ಮತ್ಸರ ತೋರಿದವರೆಲ್ಲಾ ಒಮ್ಮೊಮ್ಮೆ ಮತ್ತೆ ಜೀವನದಲ್ಲಿ ಮುಖಾಮುಖಿ ಆಗುವುದೇ ಇಲ್ಲ. ಇದು ಆ ಕಾಲಕ್ಕೆ ಅರಿವಿಗೇ ಬರದೇ ಅಂಕ ಗಳಿಕೆಯೊಂದೇ ಹೆಚ್ಚಾಗಿ ತೋರಿ ಬಿಡುತ್ತದೆ. ಓದು ಮುಗಿದ ಮೇಲೆ ಮರೆತೂ ಹೋಗುತ್ತದೆ. ( ವರ್ತಮಾನದ ಹುಡುಗರಿಗೆ ಇದು ಅನ್ವಯಿಸುವುದಿಲ್ಲ ಬಿಡಿ. ) ಅವನಿಗೆ ಉತ್ತರ ಹೇಳಿಕೊಡಲಿಕ್ಕಿಲ್ಲ….ಇವಳು ನನ್ನ answer paper ನೋಡಿ ಕದ್ದು ಬರೆಯುತ್ತಾಳೆ….ಎಂದು ಕೈಮುಚ್ಚಿ ಬರೆದ ದಿನಗಳನ್ನು ನೆನೆಸಿಕೊಂಡರೆ ಕನಸಿನಲ್ಲೂ ನಗು ಬರುತ್ತದೆ. ಸೋಲಿಸಲಾಗದ ಸಹಪಾಠಿ ಮಹಾಲಕ್ಷ್ಮಿ ನನ್ನ ಬದುಕಿನ ಮಾಸದ ಬಣ್ಣ.
ಮಹಾಲಕ್ಷ್ಮಿ ಬೆಂಗಳೂರು ನಿವಾಸಿ. ಅವಳ ತಾಯಿಯ ಮನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿದೆ. ಅವಳು ಕ್ಲಾಸಿಗೂ ನಂ 1. ಬದುಕಿಗೂ ನಂ 1. software engineer ಆಗಿ ಕಾರ್ಯನಿರ್ವಹಿಸುವ ನನ್ನೊಲವಿನ ಸಹಪಾಠಿ soft hearted person. ಮಹಾಲಕ್ಷ್ಮಿಯ ಬಗ್ಗೆ ನನಗೆ ಎಲ್ಲಿಲ್ಲದ ಅಭಿಮಾನ. ಅವಳು ಅಪ್ರತಿಮ ಪ್ರತಿಭಾವಂತೆ.
ನನ್ನ ಮನೆಯ ಪಕ್ಕದಲ್ಲೇ ಮಹಾಲಕ್ಷ್ಮಿಯ ಅತ್ತೆಯ ಮನೆ ಇದೆ. ನಾನು ಸಣ್ಣವನಿರುವಾಗ ಅಕ್ಕಂದಿರ ಸಂಗಡ ಆಗಾಗ ಮಹಾಲಕ್ಷ್ಮಿಯ ಮನೆಗೆ ಹೋಗುತ್ತಿದ್ದೆ. ಅವರ ಮನೆಯಲ್ಲಿ ಆಗ ಅವಿಭಕ್ತ ಕುಟುಂಬ. ಮಹಾಲಕ್ಷ್ಮಿ, ಅವರ ಅಕ್ಕ ಶುಭಾ, ಶಾಂತಿ, ಅವಳ ಅಣ್ಣ ಗಜಾನನ, ದಿವ್ಯಾ ಹೀಗೆ ಅನೇಕರು ಆಡುವುದಕ್ಕೆ ಸಿಗುತ್ತಿದ್ದರಷ್ಟೇ ಅಲ್ಲ….ಅವರು ಕಲಿಕೆಯಲ್ಲೂ ತುಂಬಾ ಮುಂದಿದ್ದರು. ಅವರ ಮನೆಯಲ್ಲಿ ಆಗ ಬಾಲಮಂಗಳ, ಚಂಪಕಾ, ಸುಧಾ, ತರಂಗ, ಕರ್ಮವೀರ ಮುಂತಾದ ಪತ್ರಿಕೆಗಳನ್ನು ತರಿಸುತ್ತಿದ್ದರು. ಮಹಾಲಕ್ಷ್ಮಿ ಅವುಗಳನ್ನೆಲ್ಲಾ ನನಗೆ ಪ್ರೀತಿಯಿಂದ ಓದಲು ಕೊಡುತ್ತಿದ್ದಳು. ಅವಳು ಕೆರೆಕೋಣ ಶಾಲೆಯಲ್ಲಿ ಓದುತ್ತಿದ್ದಳು. ನಾನು ಸಂತೇಗುಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದೆ.
ಪ್ರೌಢ ಹಂತಕ್ಕೆ ಬಂದ ಕಾಲಕ್ಕೆ ನಾವು ಅರೆಅಂಗಡಿ ಹೈಸ್ಕೂಲಿನಲ್ಲಿ ಪರಸ್ಪರ ಭೇಟಿಯಾದೆವು. ನಾನೇ ಬುದ್ಧಿವಂತ ಎಂದುಕೊಂಡಿದ್ದ ನನಗೆ ನನಗಿಂತ ಅದಾಗಲೇ ಇಪ್ಪತ್ತು ಹೆಜ್ಜೆ ಮುಂದಿದ್ದ ಮಹಾಲಕ್ಷ್ಮಿಯ ಚಾಣಾಕ್ಷತೆಯ ಪರಿಚಯವಾಗಿತ್ತು. ಇಂಗ್ಲೀಷಿನಲ್ಲಂತೂ ನಾನು ಶತದಡ್ಡ. ನಾನು ABCD ಕಲಿಯುವುದಕ್ಕೆ ಪ್ರಾರಂಭಿಸಿದ ಕಾಲಕ್ಕೆ ಮಹಾಲಕ್ಷ್ಮಿ ಇಂಗ್ಲೀಷಿನಲ್ಲೇ ಭಾಷಣ ಮಾಡುತ್ತಿದ್ದಳು. ದಂಗಾಗಿ ಹೋದೆ ನಾನು. “ನೀನೇನೂ ಅಲ್ಲ…..ನೀನಿನ್ನೂ ಕಲಿಯುವುದು ಬಹಳಷ್ಟಿದೆ” ಎಂದು ತನ್ನ ಸತ್ವಾತಿಶಯದಿಂದಲೇ ತೋರಿಸಿಕೊಟ್ಟ ಗುರು ಅವಳು. ಅವತ್ತೇ ಒಂದು ಛಲ ಬಂದು ಹೋಯ್ತು. ಮಹಾಲಕ್ಷ್ಮಿಗೆ ನಾನೊಬ್ಬ ಆರೋಗ್ಯಕರ ಸ್ಪರ್ಧಾಳುವಾದರೂ ಆಗಬೇಕು……. ಎಂದು. ಕೊನೆಗೆ ಅವಳು ಅತ್ತೆಯ ಮನೆಗೆ ಬಂದಾಗ……ನಮ್ಮವರು…………”ನಮ್ಮ ಸಂದೀಪ ಹೇಗೆ?!” ಎಂದು ಕೇಳಿ ಅವಳು ಏನಾದರೂ…… ಎಂದು ಬಿಟ್ಟರೆ ಎನ್ನುವ ಭಯ ನನ್ನನ್ನು ಸದಾ ಕಾಡುತ್ತಿತ್ತು. ನಿಜ ಹೇಳ ಬೇಕೆನಿಸಿದರೆ ದಿನಾಲೂ ದೇವರ ಹತ್ತಿರ ಮಹಾಲಕ್ಷ್ಮಿಯಷ್ಟೇ ಅಂಕ ಬೀಳಲಿ ಎಂದು ಪ್ರಾರ್ಥಿಸುತ್ತಿದ್ದೆ. ಅವಳ ಮೇಲೆ ನನಗೆಂದೂ ಮತ್ಸರ ಹುಟ್ಟಿದ್ದಿಲ್ಲ. ಆದರೆ ಅವಳ ಭಾಷಣ, ಅಭ್ಯಾಸದ ಪರಿ ಕಂಡು ನನಗೆ ನನ್ನ ಮೇಲೇ ನಾಚಿಕೆ ಹುಟ್ಟಿ ಹೋಗಿತ್ತು.
ಪರೀಕ್ಷೆಯಲ್ಲಿ ವಿಪರೀತ ಅಭ್ಯಾಸ ಮಾಡುತ್ತಿದ್ದೆ. 1/2 ಅಂಕ ಕಡಿಮೆ ಬಿದ್ದರೂ ಒಂದೋ ಅವಳು ಅಳುತ್ತಿದ್ದಳು. ಇಲ್ಲಾ ನನಗೆ ಬೇಸರವಾಗುತ್ತಿತ್ತು. ಅದರಲ್ಲೂ ನಮ್ಮ ಎಲ್. ಎಂ ಹೆಗಡೆ ಸರ್ ಎನ್ನುವವರು ಆಗಾಗ ನಮ್ಮಿಬ್ಬರ ನಡುವೆ ಸ್ಪರ್ಧೆಯ ಕಿಡಿ ಹೊತ್ತಿಸುತ್ತಿದ್ದರು. ಏನೇ ಹೇಳಲಿ ಮಹಾಲಕ್ಷ್ಮಿ ನಂ 1…..ಎಂಬುದು ನನಗೆ ಸದಾ ಪಕ್ಕಾ ಆಗಿರುತ್ತಿತ್ತು.
ಮಹಾಲಕ್ಷ್ಮಿಯ ಅಪ್ಪ ಶಂಕರ ಹೆಗಡೆಯವರು ಆಗ ಅರೆಅಂಗಡಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಅವಳ ಸಹಪಾಠಿಯಾದ ನನಗೆ ಅಲ್ಲಿ ಹೋದಾಗೆಲ್ಲ ಒಂದು ಚಾಕಲೇಟ್ ಫ್ರೀ ಆಗಿ ಸಿಗುತ್ತಿತ್ತು. ಅಮ್ಮ ಕಲಾವತಿ ಬಹಳ ಸಾತ್ವಿಕ ಮನುಷ್ಯ. ಮಹಾಲಕ್ಷ್ಮಿ ನನ್ನ ಅಚ್ಚುಮೆಚ್ಚಿನ ಸ್ನೇಹಿತೆ. ಅವಳು ಎಷ್ಟು ಚುರುಕೆಂದರೆ ನಾವು ಅವಳಿಗೆ ಸಣ್ಣ ಮೆಣಸು ಅಂತ ಕರೆಯುತ್ತಿದ್ದೆವು. ಊಸಿದರೆ ಹಾರಿ ಹೋಗುವಂತಿದ್ದ ಮಹಾಲಕ್ಷ್ಮಿ ಎಲ್ಲಾ ಗುರುಗಳಿಗೂ ಅಚ್ಚುಮೆಚ್ಚು. ಅವಳು ಪ್ರತಿಭಾವಂತೆ ಆದುದರಿಂದ ಎಲ್ಲರೂ ಅವಳನ್ನು ಹೊಗಳುತ್ತಿದ್ದರು. ಆ ಹೊಗಳಿಕೆಯ ಸ್ವಲ್ಪ ಪಾಲು ನನಗೂ ಸಿಗಲೆಂದು ನಾನು ಪಟ್ಟ ಪರಿಪಾಟು ಅಷ್ಟಿಟ್ಟಲ್ಲ. ಹುಟ್ಟು ಪ್ರತಿಭೆಗೆ ಸವಾಲೊಡ್ಡುವ ಬಾವಿಯ ಒಳಗಿನ ಕಪ್ಪೆ ನಾನಾಗಿದ್ದೆ. ಎಲ್ಲರೂ ನನ್ನನ್ನು ಬಹಳ ಚುರುಕು ಎಂದರೂ ನನಗೆಷ್ಟು ಗೊತ್ತಿದೆ ಎಂಬುದು ನನಗೆ ಮಾತ್ರ ಗೊತ್ತಿತ್ತು.?.
ಮಹಾಲಕ್ಷ್ಮಿ ಎಸ್ ಎಸ್ ಎಲ್ ಸಿ ಯಲ್ಲಿ ತೊಂಭತ್ತರ ಗಡಿ ದಾಟಿದಳು……ಹೊನ್ನಾವರ ಬಸ್ ಹತ್ತಿದಳು…science ಮಾಡುವುದಕ್ಕೆ. ನಾನು ಕಾಲ್ನಡಿಗೆಯಲ್ಲಿ ಮತ್ತದೇ ಕಾಲೇಜಿಗೆ ಪ್ರಯಾಣ. ಮೂರುವರ್ಷ ಜೊತೆಯಾದವಳು ಮೂವತ್ತು ವರ್ಷ ಕಳೆದರೂ ಇಂದಿಗೂ ಜೊತೆಗೇ ಇದ್ದಾಳೆ ಒಳ್ಳೆಯ ಸ್ನೇಹಿತೆ ಆಗಿ.
ಆಗ ಭಾಷಣದಲ್ಲಿ ಪ್ರಥಮ ಬರುತ್ತಿದ್ದ ಆಕೆ ಈಗ ಮೌಸು, ಕೀಬೋರ್ಡ್ ಹಿಡಿದು ಕುಳಿತಿದ್ದಾಳೆ. ಆಗ ಬ್ಯಾಟು, ಬಾಲು ಹಿಡಿದ ನಾನು ಈಗ ಭಾಷಣ ಮಾಡುತ್ತಾ ಊರೂರು ತಿರುಗುತ್ತೇನೆ. ಜೀವನ ನಾವಂದುಕೊಂಡಂತೆ ಇರುವುದಿಲ್ಲ. ಇವತ್ತಿಗೂ ನಾವಿಬ್ಬರು ಪರಸ್ಪರ ಗೌರವಿಸುತ್ತೇವೆ. ಮಹಾಲಕ್ಷ್ಮಿ ತಾಯಿಯ ಮನೆಗೆ ಬಂದಾಗ ಅವಳ ಕೈಯಡುಗೆ ಉಣ್ಣುವುದಕ್ಕೆ ಬರುತ್ತೇನೆಂದು ಉದ್ದೇಶಪೂರ್ವಕವಾಗಿ ಹೋಗಿ ಊಟ ಮಾಡಿ ಬಂದಿದ್ದೇನೆ. ಅವಳು ಕಲಿತ ಶಾಲೆಯಲ್ಲೇ ಮಾಸ್ತರನಾಗಿ ಮಕ್ಕಳಿಗೆ ನಾಲ್ಕಕ್ಷರ ಕಲಿಸುತ್ತೇನೆ.
ಪದೇ ಪದೇ ಭಾಷಣ ಬರೆದುಕೊಡಿ ಎಂದು ಮಕ್ಕಳು ಪಾಲಕರೂ ನನ್ನನ್ನು ಕಾಡುವಾಗ ನನಗೊಂದು ಭಾಷಣ ಬರೆದು ಕೊಡ್ತೀರಾ ಪ್ಲೀಸ್ ಪುಸ್ತಕ ಬರೆಯ ಬೇಕೆನಿಸಿತು. ಆಗ ಮಹಾಲಕ್ಷ್ಮಿ ಥಟ್ಟನೇ ನೆನಪಾದಳು. “ನೋಡು….ಮಹಾಲಕ್ಷ್ಮಿ ನೀನು ಕಲಿತ ಶಾಲೆಯಲ್ಲಿ ನಿನ್ನಂತಹ 60 ಮಕ್ಕಳು ಕಲಿಯುತ್ತಿದ್ದಾರೆ. ಅವರಿಗೆ ನೀನು ಪುಸ್ತಕ ಕೊಡಿಸಬೇಕು….” ಎಂದು ಪ್ರೀತಿಯ ಅಧಿಕಾರದಿಂದ ಹೇಳಿದೆ. ಮರು ಮಾತಾಡದ ಮಹಾಲಕ್ಷ್ಮಿ ಎಲ್ಲರ ಕೈಯಲ್ಲೂ ಪುಸ್ತಕ ಹಿಡಿಸಿದಳು. ಮತ್ತೇನಾಗಬೇಕೆಂದು ಕೇಳಿದಳು. ಹೃದಯವಂತ ನಮ್ಮ ಮಹಾಲಕ್ಷ್ಮಿ. ಲಕ್ಷಾಂತರ ಗಳಿಸಿದರೂ ಸ್ವಲ್ಪವೂ ಗರ್ವ ಪಡದ ಗುಣಸುಂದರಿ.
ಗುಣ ಮೆಚ್ಚಿದ ಪತಿ, ಮುದ್ದಾದ ಸುತ, ಸ್ವರ್ಗಕ್ಕೆ ಕಿಚ್ಚು ಹಚ್ಚಬಲ್ಲಂಥ ಬದುಕು…….ಮಹಾಲಕ್ಷ್ಮಿ ನಿಜಕ್ಕೂ ನಂ 1. ಈಗಲೂ ಅವಳ ಎರಡು ಜಡೆಯ ಯೂನಿಫಾರಂ ಮಹಾಲಕ್ಷ್ಮಿಯೇ ನನ್ನ ಕಣ್ಮುಂದೆ ಬರುತ್ತಾಳೆ. ದೇಶ ವಿದೇಶದಲ್ಲಿ ಸಾಧನೆ ಮಾಡಿದ ಮಹಾಲಕ್ಷ್ಮಿ ತನ್ನ ಬಗ್ಗೆ ಜಾಸ್ತಿ ಹೊಗಳುವುದನ್ನು ಇಷ್ಟಪಡುವುದಿಲ್ಲ. ತಮ್ಮ ರಾಮ ಲಕ್ಷ್ಮಣರೂ ಅಸಾಮಾನ್ಯ ಪ್ರತಿಭಾ ಸಂಪನ್ನರು. ನನ್ನ ಸಹಪಾಠಿ ಸ್ನೇಹಿತೆಯಾಗಿ ಸಿಕ್ಕ ಮಹಾಲಕ್ಷ್ಮಿಯ ಬಗ್ಗೆ ಜೀವನದ ಕೊನೆಯುಸಿರು ಇರುವವರೆಗೂ ಅಭಿಮಾನ ಪ್ರೀತಿ ಇರುತ್ತದೆ. ದೇವರೇ ಕೊಟ್ಟ ಬಾಲ್ಯದ ಗೆಳತಿ ಅವಳು. ಸರಳತೆಯನ್ನೇ ಮೈಗೂಡಿಸಿಕೊಂಡ ಮಹಾಲಕ್ಷ್ಮಿ ಆಧುನಿಕತೆಯ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಅಪ್ಪಟ ಕನ್ನಡತಿಯಾಗಿಯೇ ಇದ್ದಾಳೆ. ಸ್ವಚ್ಛ ಸುಂದರ ಉದ್ಯಾನವನ ಅವಳ ಜೀವನ. ಚುರುಕಿನ ಮಾತು, ಚುರುಕಿನ ನಡೆಯ ಮಾ…..ಕಿ ಮೂಕ ವಿಸ್ಮಿತವಾಗಿಸುವಷ್ಟು ಬೆಳೆದು ನಿಂತಿದ್ದಾಳೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಮಹಾಲಕ್ಷ್ಮಿ ಹಾಗೂ ಅವಳ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಮಹಾಲಕ್ಷ್ಮಿಗೆ ಸಂದೀಪನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ