ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಡಾ|| ಪ್ರಕಾಶ ನಾಯ್ಕ ( ಖ್ಯಾತ ಹೃದಯರೋಗ ತಜ್ಞ)
ಹೃದಯವಂತ ಹೃದಯ ರೋಗ ತಜ್ಞ, ಕಲೆಯನ್ನೇ ಉಸಿರಾಡುವ ಅಸಾಮಾನ್ಯ ಕಲಾಭಿಮಾನಿ, ಯಕ್ಷಗಾನ ಕಲಾವಿದರಾಗಿಯೂ ಅಭಿಮಾನಿಗಳ ಮನಸೂರೆಗೊಂಡ ಸಜ್ಜನಿಕೆಯ ಸಾಕಾರ ಮೂರ್ತಿ ಸಾವಿರ ಸಾವಿರ ಜನರ ನಾಡಿ ಮಿಡಿತ ಉಳಿಸಿದ ಡಾ|| ಪ್ರಕಾಶ ನಾಯ್ಕ ಹಲವರ ಪಾಲಿಗೆ ದೇವ ಮಾನವ.
2005 ರಲ್ಲಿ ನಮ್ಮ ತಂದೆಯವರು ಮಕರ ಸಂಕ್ರಾಂತಿ ದಿನ ನಮ್ಮೂರ ದೇವಾಲಯಕ್ಕೆ ಪೂಜೆಗೆಂದು ತೆರಳಿದ್ದರು. ಅವರಿಗೆ ಆ ದಿನ ಎದೆ ನೋವು ಕಾಣಿಸಿಕೊಂಡಿತು. ರಾತ್ರಿ 10 ರ ಸಮಯ. ಆಗಿನ್ನೂ ನಾನು ನೌಕರಿ ಸೇರಿರಲಿಲ್ಲ. ಆ ಸಮಯದಲ್ಲಿ ತಂದೆಯವರನ್ನು ಕರೆದುಕೊಂಡು ನಾನು ತಕ್ಷಣ ಖಾಸಗಿ ವಾಹನ ಮಾಡಿಕೊಂಡು ಹೊನ್ನಾವರದ ಶ್ರೀದೇವಿ ಆಸ್ಪತ್ರೆಗೆ ಹೋದೆ. ಡಾ|| ಪ್ರಕಾಶ ನಾಯ್ಕರಿಗೆ emergency call ಹೋಯ್ತು. ಇಡೀ ರಾತ್ರಿ ನಮ್ಮ ಜೊತೆಯಲ್ಲಿ ಇದ್ದು…ನಮ್ಮ ತಂದೆಯವರ ಪ್ರಾಣ ಉಳಿಸಿದ ಪುಣ್ಯಾತ್ಮ ನಮಗೆ ದೇವರಾದರು. ದೇವರೇ ದೇವರನ್ನುಳಿಸಿದರು.
ಹಾಗೆ ಹತ್ತು ವರ್ಷ ಅವರ ಚಿಕಿತ್ಸೆಯಲ್ಲೇ ಅದೂ ಇದೂ ಕೃಷಿ ಮಾಡಿಕೊಂಡಿದ್ದ ನಮ್ಮ ತಂದೆಯವರಿಗೆ ಮತ್ತೆ 2015ರಲ್ಲಿ ಮತ್ತೆ heart attack ಆಯ್ತು. ಈ ಸಲ ನಮ್ಮ ತಂದೆಯವರನ್ನು ಉಳಿಸಿಕೊಳ್ಳುವ ಯಾವ ಆಸೆಯೂ ನನ್ನ ಬಳಿಯಲ್ಲಿ ಉಳಿದಿರಲಿಲ್ಲ. ಆ ಕ್ಷಣಕ್ಕೆ ಡಾಕ್ಟರಿಗೆ ಫೋನಾಯಿಸಿದೆ. ಅವರಿಗೆ ಕೈಮುಗಿದು ನಮ್ಮ ತಂದೆಯವರನ್ನು ಹೇಗಾದರೂ ಬದುಕಿಸೆಂದು ಬೇಡಿಕೊಂಡೆ. ನಮ್ಮ ತಂದೆಯವರಿಗೆ ಮಕ್ಕಳ ಮದುವೆ ಮಾಡಿ ಆಗಿದೆ. ನಾನು ನಮ್ಮ ಅಕ್ಕ ಇಬ್ಬರೂ ಸುಖವಾಗಿದ್ದೇವೆ. ಮೊಮ್ಮಕ್ಕಳನ್ನೂ ಕಂಡು ಆಗಿದೆ. ಆದರೆ ಕಷ್ಟಪಟ್ಟು ನಮ್ಮನ್ನು ಸೈಕಲ್ಲಿನ ಮೇಲೆ ಕರೆದುಕೊಂಡು ಹೋಗುತ್ತಿದ್ದ ನಮ್ಮ ತಂದೆಯವರನ್ನು ಸ್ವಂತ ಕಾರಿನ ಮೇಲೆ ಕೂರಿಸಿಕೊಂಡು ಹೋಗುವ ಕೊನೆಯ ಆಸೆ ಇದೆ ಎಂದು ಕಣ್ಣೀರು ಹಾಕಿದೆ. ಡಾ|| ಪ್ರಕಾಶ ನಾಯ್ಕ ಎರಡನೇ ಬಾರಿಯೂ ನಮ್ಮ ತಂದೆಯನ್ನು ಬದುಕಿಸಿಕೊಟ್ಟರು. ಮಂಗಳೂರಿಗೆ ಕಳುಹಿಸಿ ನಮ್ಮ ತಂದೆಯವರಿಗೆ ಹೆಚ್ಚಿನ ಚಿಕಿತ್ಸೆಯನ್ನು ಜವಾಬ್ದಾರಿಯುತವಾಗಿ ಕೊಡಿಸಿದರು. ಎಷ್ಟು ಜನ್ಮ ಎತ್ತಿ ಬಂದರೂ ತೀರಿಸಲಾಗದ ಋಣ….ನನ್ನ ಮೇಲಿದೆ. ಡಾಕ್ಟರ್ ನಮ್ಮ ಮೇಲಿಟ್ಟ ಕಾಳಜಿ ಪ್ರೀತಿಗೆ ಕೋಟಿ ಪ್ರಣಾಮಗಳು. ನಮ್ಮ ತಂದೆಯವರು ಈಗಲೂ ಅವರ ದಯದಿಂದ ಆರೋಗ್ಯವಾಗಿದ್ದಾರೆ.
ಡಾ|| ಪ್ರಕಾಶ ನಾಯ್ಕ ನಾಡಿನ ಪ್ರಖ್ಯಾತ ಹೃದಯರೋಗ ತಜ್ಞರಾಗಿಯೂ ಹಣದ ಆಸೆಗೆ ಮುಗಿ ಬೀಳುವ ಮನುಷ್ಯರಲ್ಲ. ನೂರಾರು ಅವಕಾಶಗಳು ಅವರನ್ನು ಅರಿಸಿಕೊಂಡು ಬಂದಾಗಿಯೂ ಅವರು ಹೊನ್ನಾವರದಲ್ಲಿ ಸರ್ಕಾರಿ ವೈದ್ಯರಾಗಿದ್ದು ಬಡವರ ಸೇವೆ ಮಾಡುತ್ತಾರೆ. ಅವರು ಮಾತನಾಡಿಸಿದರೆ ಸಾಕು ಅರ್ಧ ರೋಗ ಗುಣವಾದಂತೆಯೆ. ಡಾ|| ಪ್ರಕಾಶ ನಾಯ್ಕರ ಕೈಗುಣ ಎಂಥದ್ದೆಂದರೆ ಹಲವಾರು ಜನ ಊರೂರು ತಿರುಗಿದರೂ ವಾಸಿಯಾಗದ ಕಾಯಿಲೆ ಡಾ|| ಪ್ರಕಾಶ ನಾಯ್ಕರಿಂದ ವಾಸಿಯಾದ ನೂರಾರು ಉದಾಹರಣೆಗಳಿವೆ. ರೋಗಿಗಳನ್ನು ಸ್ವಲ್ಪವೂ ಗದರದೇ, ಉಡಾಫೆ ಮಾಡದೇ, ಹೇಗಾದರೂ ಸಂಬಳ ಬರುವುದು ಬರುತ್ತದೆಂದು ರೋಗಿಗಳನ್ನು ನಿಷ್ಕಾಳಜಿ ಮಾಡದೇ ತನ್ನ ವೃತ್ತಿ ನಿಷ್ಠೆಯನ್ನು ಚಾಚೂ ತಪ್ಪದೇ ಪಾಲಿಸುವ ಡಾಕ್ಟರ್ ನನ್ನ ನಿತ್ಯ ಪ್ರಾರ್ಥನೆಯಲ್ಲಿ ಇರುತ್ತಾರೆ.
ಡಾ|| ಪ್ರಕಾಶ ನಾಯ್ಕರಿಗೆ ಯಕ್ಷಗಾನವೆಂದರೆ ಪಂಚಪ್ರಾಣ. ಶ್ರೀ ಗಣಪತಿ ಭಟ್ಟ ಕಣ್ಣಿಮನೆ ಅವರ favorite ಕಲಾವಿದ. ಕಣ್ಣೀಮನೆಯವರು ಅಕಾಲಿಕ ನಿಧನ ಹೊಂದಿದಾಗ ಒಬ್ಬ ಕಲಾವಿದನಿಗಾಗಿ ಯಕ್ಷಗಾನ ಮಾಡಿಸಿ ಲಕ್ಷಾಂತರ ರೂಪಾಯಿಗಳನ್ನು ಅವರ ಕುಟುಂಬ ನಿರ್ವಹಣೆಗೆ ಒದಗಿಸಿಕೊಡುವಲ್ಲಿ ಡಾಕ್ಟರ್ ಮುಂಚೂಣಿಯಲ್ಲಿ ನಿಂತರು. ಕಲಾವಿದನಾಗಿಯೂ ಬಣ್ಣ ಹಚ್ಚಿ ಸುಧನ್ವ, ಹಂಸಧ್ವಜ, ಅರ್ಜುನ, ಕೌರವ ಮುಂತಾದ ಪಾತ್ರಗಳಿಂದ ಜನಮನ ಸೂರೆಗೊಂಡರು. ಹೃದಯರೋಗ ತಜ್ಞನೊಬ್ಬ ಕಲಾವಿದನಾಗಿಯೂ ಹೃದಯಗೆದ್ದ ಇತಿಹಾಸ ಸೃಷ್ಟಿಸಿದ್ದು ಇದೇ ಮೊದಲು. ಸ್ವಲ್ಪ ಸಮಯ ಸಿಕ್ಕರೆ ಸಾಕು ಡಾಕ್ಟರ್ ಯಕ್ಷಗಾನ ಟೆಂಟಲ್ಲಿ ಹಾಜರ್. ಅವರ ಈ ಯಕ್ಷಾಭಿಮಾನಕ್ಕೆ ನೂರೆಂಟು ಪ್ರಣಾಮಗಳು. ಕಲಾವಿದರನ್ನು ಅವರು ಗೌರವಿಸುವ ಪರಿ ಅನನ್ಯವಾದದ್ದು.
ಅವರ ಸಹಧರ್ಮಿಣಿಯೂ ಪ್ರಖ್ಯಾತ ವೈದ್ಯೆ. ಈ ವೈದ್ಯ ದಂಪತಿಯ ಕಾರ್ಯ ಜಿಲ್ಲೆಯ ಮನೆ ಮನಗಳಲ್ಲಿ ಈಗಾಗಲೇ ಸುದ್ದಿಯಾಗಿದ್ದರೂ ನಾನು ಒಬ್ಬ ಬರಹಗಾರನಾಗಿ ನನ್ನ ನೆಚ್ಚಿನ ಡಾಕ್ಟರರಿಗೆ ಕೃತಜ್ಞತೆ ಹೇಳಬೇಕೆನಿಸಿತು.
ಡಾ|| ಪ್ರಕಾಶ ನಾಯ್ಕ ಕುಟುಂಬಕ್ಕೆ ಸಮಯ ನೀಡುವುದೇ ಕಡಿಮೆ. ಎಷ್ಟು ಹೊತ್ತಿಗೂ ಅವರ ಬಳಿ ಕಿಕ್ಕಿರಿದು ರೋಗಿಗಳು ಸಾಲುಗಟ್ಟಿ ನಿಂತಿರುತ್ತಾರೆ.ಆದರೂ ತಾಳ್ಮೆ ಕಳೆದುಕೊಳ್ಳದ ನಿಜವಾದ ಸೇವಾ ಭಾವ ಆದರ್ಶವಾದದ್ದು.
ನನ್ನ ತಂದೆಯವರಿಗೆ ಮರು ಜನ್ಮ ನೀಡಿದ ಪ್ರಕಾಶ ಡಾಕ್ಟರ್ ನನಗೆ ಧೈರ್ಯ ತುಂಬಿದ ಕ್ಷಣಗಳನ್ನು ನಾನೆಂದಿಗೂ ಜೀವನದಲ್ಲಿ ಮರೆಯಲಾರೆ. ಕೈಯಲ್ಲಿ ಕಾಸಿಲ್ಲದ ಕಾಲದಲ್ಲಿ ಲಕ್ಷ ಲಕ್ಷ ಖರ್ಚಾಗುತ್ತದೆಂದು ಹೇಳಿದಾಗ ಹೆಂಡತಿ ಮತ್ತು ತಾಯಿಯವರ ಬಂಗಾರ ಅಡವಿಡುವುದೊಂದೇ ನನ್ನ ಮುಂದಿರುವ ದಾರಿಯಾಗಿತ್ತು. ಆದರೆ ಡಾಕ್ಟರ್ ಅದಕ್ಕೂ ನನಗೆ ದೇವರಂತೆ ಪರಿಹಾರ ಸೂಚಿಸಿದರು. ನಮ್ಮಿಂದ ಆಗಬೇಕಾದ್ದು ಅವರಿಗೆ ಏನಿದೆ ಹೇಳಿ? ವಾತ್ಸಲ್ಯ, ಮಮತೆ, ಮಾನವೀಯತೆಯ ಜೀವಂತ ಸಾಕ್ಷಿ ನಮ್ಮ ಡಾ|| ಪ್ರಕಾಶ ನಾಯ್ಕ. ಮುದ್ದಾದ ಅವರ ಎರಡು ಮಕ್ಕಳೂ ಮುಂದೊಂದು ದಿನ ಹೃದಯ ರೋಗ ತಜ್ಞರಾಗಿ ನಾಡಿನ ನಾಡಿ ಮಿಡಿತ ಉಳಿಸಲಿ. ಡಾಕ್ಟರ್ ಯಾವಾಗ ನಿದ್ದೆ ಮಾಡುತ್ತಾರೋ? ಎಷ್ಟು ಹೊತ್ತು ನಿದ್ರಿಸುತ್ತಾರೋ ಅರಿಯೆ….ಆದರೆ ನಿದ್ದೆಗಣ್ಣಿನಲ್ಲೂ ತನ್ನ ಬಳಿ ನಂಬಿ ಬಂದವರನ್ನು ಕೈ ಹಿಡಿವ ಭಗವಂತ ರೂಪಿ. ತನ್ನ ಪ್ರತಿಭೆ ಹಾಗೂ ಸತ್ವಾತಿಶಯದಿಂದ ಗುರುತಿಸಬಹುದಾದ ಈ ವ್ಯಕ್ತಿತ್ವಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಅರ್ಹವಾಗಿ ಸಂದಾಯವಾಗಬೇಕು. ದೇವರು ಮೆಚ್ಚುವ ರೀತಿ ಕೆಲಸ ಮಾಡುವ ಡಾಕ್ಟರ್ ಪ್ರಕಾಶ ನಾಯ್ಕ ಅಪರೂಪದ ಸದ್ಗುಣಗಳ ಗಣಿ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಡಾ|| ಪ್ರಕಾಶ ನಾಯ್ಕ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಡಾ|| ಪ್ರಕಾಶ ನಾಯ್ಕರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದೊಮ್ಮೆ ಅವರನ್ನು ಅಭಿನಂದಿಸೋಣ.
??????⚫⚪???????⚫⚪?????