ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ಜಿ.ಜಿ.ಭಟ್ಟ ಕರ್ಕಿ
ನನ್ನ ಜೀವನದಲ್ಲಿ ಅಪಾರ ಪ್ರಭಾವ ಬೀರಿದ, ನಾನು ಇಷ್ಟಾದರೂ ಆಗುವುದಕ್ಕೆ ಶ್ರೀಕಾರ ಹಾಕಿದ, ನನ್ನೊಲವಿನ ಗುರು ಶ್ರೀಯುತ ಜಿ.ಜಿ.ಭಟ್ಟ ತೆಂಗಿನಕಟ್ಟೆ ಇವರ ಬಗ್ಗೆ ಬರೆಯುವುದಕ್ಕೆ ಅಕ್ಷರಗಳು ಸೋಲುತ್ತವೆಂಬುದು ಗೊತ್ತಿದ್ದೂ ಕಣ್ಣೀರೇ ಸಾಕ್ಷಿಯಾಗಿ ಅವರನ್ನು ನೆನೆಸಿಕೊಳ್ಳುತ್ತಿದ್ದೇನೆ.
ದೇವರ ದಯೆಯಿಂದ ನನಗೆ ನನ್ನ 6 ವರ್ಷಗಳ ನಂತರದ ಬಹುತೇಕ ನೋವು ನಲಿವಿನ ಮಹತ್ವದ ಘಟನೆಗಳು ಸ್ಮೃತಿಯಲ್ಲಿ ಭದ್ರವಾಗಿ ಉಳಿದುಬಿಟ್ಟಿವೆ ಅಳಿಸಿಹೋಗದಂತೆ. ಮುಂದೊಂದು ದಿನ ಬರಹಗಾರನಾಗಿ ಇವುಗಳನ್ನೆಲ್ಲ ಬರೆಯಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಇದ್ದವುಗಳಲ್ಲ ಅವು. ಹಾಗೆ ನೋಡಿದರೆ ಹೆಂಡತಿ ತರಲೇ ಬೇಕೆಂದು ಹೇಳಿದ ಸಾಮಾನು ಕೂಡ ಮರೆತು ಹೋಗಿ ಬಿಡುತ್ತದೆ. ನಾನೇ ಅವಳಿಗೆ ತಂದ ಸೀರೆಯನ್ನು ಇದ್ಯಾವಾಗ ತಂದದ್ದು? ಯಾರು ತೆಗೆಸಿಕೊಟ್ಟಿದ್ದು ಅಂತ ಕೇಳಿ ಆಗಾಗ ಬಯ್ಯಿಸಿಕೊಳ್ಳುತ್ತೇನೆ. ಅವರ ನಂತರ ಸಿಕ್ಕ ಅನೇಕ ಘಟನೆಗಳೂ ಮರೆವಿನ ಪ್ರಪಾತಕ್ಕೆ ಹೋಗಿದ್ದಿದೆ.ಆದರೆ ನನಗೊಂದು ವ್ಯಕ್ತಿತ್ವದ ಮೆರುಗು ನೀಡಿದ ಗುರೂಜಿಯನ್ನು ಪ್ರತಿನಿತ್ಯ ನಾನು ನೆನೆಸಿಕೊಳ್ಳದೇ ಇರಲಿಕ್ಕಿಲ್ಲ.
ಸಂತೇಗುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದು ನಾನು. ಆಗ ನಮ್ಮೂರಿಗೆ ಗುರೂಜಿಗಳು ದೂರದ ಊರುಗಳಿಂದ ಬರುತ್ತಿದ್ದರು. ಅದರಲ್ಲಿ ಜಿ.ಜಿ.ಭಟ್ಟ ಸರ್ ನಮ್ಮ ವರ್ಗ ಶಿಕ್ಷಕರು. ಅವರು ಮತ್ತು ಎನ್.ಎಲ್ ಭಟ್ಟ ಸರ್ ಸುಮಾರು 12 ಕಿ.ಮೀ ದೂರದಿಂದ ಸೈಕಲ್ ತೆಗೆದುಕೊಂಡು ನಮ್ಮೂರಿನ ಶಾಲೆಗೆ ಕಲಿಸಲು ಬರುತ್ತಿದ್ದರು. ಆಗ ಸರ್…..ಎಂಬ ಪದ ಪ್ರಚಲಿತದಲ್ಲಿರಲಿಲ್ಲ. ಗುರೂಜಿ…..ಗುರೂಜಿ ಎಂದೇ ನಾವು ಅವರನ್ನು ಕರೆಯುತ್ತಿದ್ದೆವು. ಗುರೂಜಿ ತುಂಬಾ ಸರಳ ಜೀವಿ. ಅವರದ್ದೊಂದು ಸೈಕಲ್, ಸೈಕಲ್ಲಿಗೊಂದು ಊಟದ ಚೀಲ. ಆದರೆ ನಮ್ಮ ಗುರೂಜಿ ಸಿಕ್ಕಾಪಟ್ಟೆ strict. ಜಿ.ಜಿ.ಭಟ್ಟರು ಬಂದರೆ ಇಡೀ ಶಾಲೆಯೇ ಗಡಗಡ ನಡುಗುತ್ತಿತ್ತು. ಒಂದು ದಿನ ಅವರು ರಜೆ ಹಾಕಿದರೂ ಅದು ನಮಗೆ ಯುಗಾದಿ ಹಬ್ಬವಾಗಿತ್ತು.
ನಮ್ಮ ಗುರೂಜಿ ಕಲಿಸಲು ಪ್ರಾರಂಭಿಸಿದರೆಂದರೆ ನಾವು ತುಟಿಕ್ ಪಿಟಿಕ್ ಮಾತನಾಡುತ್ತಿರಲಿಲ್ಲ. ಧರಣಿಮಂಡಲ ಮಧ್ಯದೊಳಗೆ….ಗೋವಿನ ಹಾಡನ್ನು ವಿವರಿಸಿ ಹೇಳುವಾಗ ಗೋಪಾಲ ಮೇಷ್ಟ್ರ ಕಣ್ಣುಗಳಲ್ಲೂ ನಮ್ಮ ಕಣ್ಣುಗಳಲ್ಲೂ ನೀರು ಜಿನುಗುತ್ತಿತ್ತು. ಅವರು ಚಿತ್ರ ಬಿಡಿಸುವುದರಲ್ಲಿ expert. ಪ್ರತಿ ವಿಷಯವನ್ನೂ ಅವರು ಅಷ್ಟೇ ಆಸಕ್ತಿ, ಹಾಗೂ ಕಾಳಜಿಯಿಂದ ಭೋದಿಸುತ್ತಿದ್ದರು. ಆದರೆ ಅವರು ತಮಾಷೆ ಮಾಡುತ್ತಾರೆಂದು ನಾವು ಬಹಳ ಹೊತ್ತು ನಗುವಂತಿರಲಿಲ್ಲ. ಯಾಕೆಂದರೆ ಕೆಲವೇ ಕ್ಷಣಗಳಲ್ಲಿ ಅವರು ಗಂಭೀರವಾಗುತ್ತಿದ್ದರು.
ಅವರ ಕಲಿಕಾ ತಂತ್ರಗಳೇ ವಿಭಿನ್ನ. ನಾನು ತಪ್ಪು ಮಾಡಿದ್ದರೆ… ನನ್ನ ಪಕ್ಕ ಕುಳಿತವನಿಗೆ ಹಿಗ್ಗಾ ಮುಗ್ಗಾ ಬಯ್ಯುತ್ತಿದ್ದರು. ಆಗ ನನಗೆ ಪಕ್ಕಾ ಗೊತ್ತಿರುತ್ತಿತ್ತು ಇದು ಆತ ಮಾಡಿದ ತಪ್ಪಲ್ಲ…….ಇದು ನಾನೇ ಮಾಡಿದ ತಪ್ಪು ಎಂದು. ಗದರಿಸುವುದು ಆತನಿಗೆ. ಕೊನೆಗೆ ಪೆಟ್ಟು ಬೀಳುವುದು ನನಗೆ. ಒಂದು ಸಲ ಪೆಟ್ಟು ತಿಂದವನು ಜೀವನದಲ್ಲಿ ಆ ತಪ್ಪನ್ನು ಪುನಃ ಮಾಡುತ್ತಿರಲಿಲ್ಲ. ಹಾಗಂತ ಕಾರಣವೇ ಇಲ್ಲದೇ ಗದರಿಸುವ, ಕಾರಣವೇ ಇಲ್ಲದೇ ತದಕುವವರಲ್ಲ ಅವರು. ಗುರೂಜಿ ಬೇಕೂಂತಲೇ ಮಧ್ಯ ಮಧ್ಯ ತಪ್ಪಾಗಿ ಓದುತ್ತಿದ್ದರು. ನಾವದನ್ನು ಲಕ್ಷ್ಯಗೊಟ್ಟು ಸರಿಯಾಗಿ ಓದಬೇಕಿತ್ತು. ಪರೀಕ್ಷೆಯಲ್ಲಂತೂ ಪುಸ್ತಕದ ತುದಿಯಲ್ಲಿ ಕೊಡುವ ಒಂದೂ ಪ್ರಶ್ನೆಗಳನ್ನು ಅವರು ಕೇಳುತ್ತಿರಲಿಲ್ಲ. ಹೀಗಾಗಿ ಒಂದು ತರಹ ಅವರೆಂದರೇ ಭಯ ನಮ್ಮನ್ನು ಆವರಿಸಿತ್ತು.
ದಿನಕ್ಕೊಂದು ಸಲ ನನ್ನ ತಲೆಯ ಮೇಲೆ ಕೈಯಾಡಿಸುವುದು ಬಿಟ್ಟರೆ ಇಡೀ ದಿನ ನಾನು ಅವರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಂಡು ಓಡಾಡಲು ಪ್ರಯತ್ನಿಸುತ್ತಿದ್ದೆ. ಎಲ್ಲರಿಗೂ ಒಂದು ತರಹದ home work ಆದರೆ ನನಗೇ ಪ್ರತ್ಯೇಕವಾದ home work note book ಇತ್ತು. ಅದರಲ್ಲಿ ಪ್ರತಿದಿನ ನಾನು 3 ಪಾಠಗಳನ್ನು ಅಮ್ಮನಿಗಾಗಲೀ ಅಪ್ಪನಿಗಾಗಲೀ ಓದಿ ತೋರಿಸಿ ಅವರ ಸಹಿ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿತ್ತು. ಯಾರಿಗೂ ಇಲ್ಲದ ಶಿಕ್ಷೆಯನ್ನು ನೆನೆದು ನನಗೆ ಆಗಾಗ ಬೇಸರ ಆಗುತ್ತಿತ್ತು. ನಾನೂ ಅಸಾಮಾನ್ಯ ಚಾಣಾಕ್ಷ ಆಗಿದ್ದರಿಂದ ಕನ್ನಡದ ಅತಿ ಚಿಕ್ಕ ‘ಸಿಂಹ’ ಎನ್ನುವ ಪಾಠವನ್ನು ತಿಂಗಳಿಗೆ 21 ಸಲ ಓದಿ ಸಹಿ ತೆಗೆದುಕೊಂಡು ಹೋಗುತ್ತಿದ್ದೆ. ಮೂರು ಪಾಠಗಳಲ್ಲಿ ಅದೊಂದು ಖಾಯಂ ಆಗಿತ್ತು.?? ಅದನ್ನು ಕಂಡು ಹಿಡಿಯುವುದಕ್ಕೆ ನಮ್ಮ ಗುರೂಜಿಗೆ ಬಹಳ ದಿನ ಹಿಡಿಯಲೇ ಇಲ್ಲ. ಏನೋ ಎಂದು ಗದರಿಸುವುದರೊಳಗೇ ನನಗೆ ಇದು ಸಿಂಹದ ಬಗ್ಗೇ ಎನ್ನುವುದು ಪಕ್ಕಾ ಆಗಿ ಹೋಗಿತ್ತು. ಅವರು ಕೊಟ್ಟ ಪೆಟ್ಟಿಗೆ ಮೃಗರಾಜ ಸಿಂಹ ಮತ್ತೆ ಕಾಣದಂತೆ ಓಡಿಹೋಗಿದ್ದ.?
ಹೈಸ್ಕೂಲ್, ಕಾಲೇಜು ಮುಗಿಸಿದ ಕಾಲದಲ್ಲಿ ನಾನು ಅವರನ್ನು ಮತ್ತೆ ಭೇಟಿಯಾಗುವ ಅವಕಾಶ ಸಿಗಲೇ ಇಲ್ಲ. ನನಗೆ ಸರಕಾರಿ ನೌಕರಿಯ order ಸಿಕ್ಕಾಗ ಬೆಳಗಾವಿಯಲ್ಲಿ ಇದ್ದುಕೊಂಡೇ ನಮ್ಮ ಗುರೂಜಿಗೆ ನಾಳೆ ನಾನು ನಿಮ್ಮನ್ನು ನೆನಪಿಸಿಕೊಂಡು ಮೇಷ್ಟ್ರು ಕೆಲಸಕ್ಕೆ ಸೇರುತ್ತಿದ್ದೇನೆಂದು 50 ಪೈಸೆ ಪೋಸ್ಟ್ ಕಾರ್ಡಿನಲ್ಲಿ ಪತ್ರ ಬರೆದಿದ್ದೆ. ಅವರಿಂದ ಮರಳಿ ಉತ್ತರವೂ ಬಂತು.
2009 ರಲ್ಲಿ ನನ್ನ ಮದುವೆಯಾಗುವ ಹೊತ್ತಿಗೆ ಗುರೂಜಿಯವರನ್ನು ಕಂಡು ಅವರನ್ನು ನಮ್ಮ ಮನೆಗೆ ಕರೆದು ಪ್ರೀತಿಯಿಂದ ಸನ್ಮಾನಿಸ ಬೇಕೆನಿಸಿತು. ಗುರೂಜಿಯವರ ಮನೆಯ ದಾರಿ ಹುಡುಕಿ ಹೊರಟೆ. ಸಂಜೆ ಸುಮಾರು ಆರರ ಸಮಯ. ಗೋಪಾಲ ಮೇಷ್ಟ್ರ ಮನೆಯನ್ನು ಒಬ್ಬರು ತೋರಿಸಿ ಹೋದರು. ನಾನು ನಿಧಾನವಾಗಿ ಹೋಗಿ ಅವರ ಮನೆಯಂಗಳದಲ್ಲಿ ನಿಂತೆ. After 20 years….. 20 ವರ್ಷಗಳ ನಂತರ ನನ್ನ ಗುರೂಜಿಯನ್ನು ನೋಡುವ ಕಾತುರ ಕಣ್ಣುಗಳಲ್ಲಿತ್ತು. ನಮ್ಮ ಗುರೂಜಿಯ back side ಮಾತ್ರ ಕಂಡಿತು. ಮನೆಯೊಳಗೆ ಹೊಕ್ಕೆ. ಸರ್…..ಎಂದು ಕರೆಯಲಿಲ್ಲ. ಅವರೇ ಕಂಡು ಹಿಡಿಯಬೇಕು ಎನ್ನುವ ಆಸೆ ನನ್ನದಾಗಿತ್ತು. ತಿರುಗಿದರು. ಅರೇ……ಆರಾಮಾ….ಎಂದರು.ಹೌದು ಎಂದೆ. ಅವರ ಕಣ್ಣುಗಳು ಅದಾಗಲೇ ನಾನು ಯಾರೆಂಬುದನ್ನು ಗುರುತಿಸ ಹೊರಟಿದ್ದುದು ನನಗೆ ಪಕ್ಕಾ ಆಗಿತ್ತು. ನಾನು ಯಾರು ಅಂತ ಗೊತ್ತಾಯ್ತಾ? ಅಂದೆ. ತಕ್ಷಣಕ್ಕೆ ಅವರು ನೀನು ಹೊಸಾಕುಳಿಯವನು ಅಂದೇ ಬಿಟ್ಟರು. ಮರು ಕ್ಷಣಕ್ಕೇ ಶಂಭಟ್ರ ಮಗ ಸಂದೀಪ ಅಂದರು. ದಂಗಾಗಿ ಹೋದೆ ನಾನು. ಒಬ್ಬ ನಿಜವಾದ ಗುರುವಿಗೆ ಶಿಷ್ಯನ ನೆನಪು ಹೀಗೂ ಇರುತ್ತದೆ ಎನ್ನುವುದು ನನಗೆ ಮೂಕ ವಿಸ್ಮಿತನಾಗುವಂತೆ ಮಾಡಿತ್ತು. ಕಾಲು ಹಿಡಿದು ನಮಸ್ಕರಿಸಿದೆ. ಕಾಲು ಬಿಡುವುದಕ್ಕೇ ಮನಸ್ಸಾಗಲಿಲ್ಲ. ಕಣ್ಣೀರು ಧಳಧಳನೇ ಸುರಿದು ಹೋಯಿತು. ಮತ್ತೆ ಕೈ ಹಿಡಿದು ನಿಲ್ಲುವುದಾದರೆ ನಿಲ್ಲುತ್ತೇನೆ……. ನೀವು ಬೆತ್ತ ಹಿಡಿಯುವುದಾದರೆ…..ಎಂದೆ. ನಮ್ಮ ಗುರೂಜಿ ಪ್ರಪ್ರಥಮ ಬಾರಿಗೆ ನನ್ನನ್ನು ತಬ್ಬಿಕೊಂಡು ಬೆನ್ನು ತಟ್ಟಿದರು. ನೋಡೇ ನಮ್ಮ ಪ್ರೀತಿಯ ಶಿಷ್ಯ ಎಷ್ಟು ಬೆಳೆದಿದ್ದಾನೆ ನೋಡು ಎಂದು ಮನೆಯವರಿಗೆ ಪರಿಚಯಿಸಿದರು.
ನಮ್ಮ ಗುರೂಜಿಯವರು ನಮ್ಮ ಮನೆಗೆ ಬಂದು ನನ್ನ ಪ್ರೀತಿಯ ಸನ್ಮಾನ ಸ್ವೀಕರಿಸಿದರು. ಸಂಬಳಕ್ಕಾಗಿಯೇ ದುಡಿದವರಲ್ಲ ಅವರು. ಅವರ ಕಾಳಜಿ ನನಗೀಗ ಅರ್ಥವಾಗುತ್ತದೆ. ಅವರ ಬೆತ್ತದೇಟುಗಳು ಬದುಕು ಕೊಟ್ಟಿವೆ. ಕನ್ನಡಕದೊಳಗಿಂದಲೇ ಇಣುಕಿ ನೋಡುವ ಅವರ ಕಣ್ಣುಗಳನ್ನು ನೋಡಿದರೆ ಈಗಲೂ ಭಯಭಕ್ತಿ ಮೂಡುತ್ತದೆ. ನನ್ನ ಪ್ರೀತಿಯ ಗುರೂಜಿಯಂಥವರು ಅನೇಕರ ಬದುಕಿನಲ್ಲಿ ಸಿಕ್ಕಿರಬಹುದು. ಆದರೆ ನಮ್ಮ ಗುರೂಜಿ ನನ್ನ ಪಾಲಿನ ದೇವರು. ಅವರ ಹೆಸರನ್ನೇ ನನ್ನ TVS ಬೈಕಿನ ಹಿಂದೆ ಬರೆಸಿದ್ದೇನೆ. ‘ ಗುರೂಜಿ’ ಎಂದು. ಪ್ರತಿದಿನವೂ ಗಾಡಿ ಏರುವಾಗ ಗುರೂಜಿ ನೆನಪಾಗದಿರುತ್ತಾರಾ? ಹಲವರು ಈಗ ನನಗೇ ಗುರೂಜಿ ಹೇಳುತ್ತಾರೆ. ಅದು ಅವರಿಗೇ ಸಲ್ಲಬೇಕು.
ನನ್ನನ್ನು ಕಾಳಜಿಯಿಂದ ಬೆಳೆಸಿದ ನಿಮ್ಮ ಅರ್ಥವಾಗದ ವ್ಯಕ್ತಿತ್ವಕ್ಕೆ ಕೋಟಿ ಕೋಟಿ ನಮಸ್ಕಾರಗಳು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಶ್ರೀ ಜಿ.ಜಿ. ಭಟ್ಟ ಕರ್ಕಿ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಗುರೂಜಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ