ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ಚಂದ್ರಹಾಸ ಗೌಡ ಹೊಸಪಟ್ಟಣ

ನನ್ನೊಲವಿನ ಕಲಾವಿದ ಯಕ್ಷರಂಗದ ಸಿಡಿಲ ಮರಿ, ನೋಡುವ ನಮ್ಮ ಕಣ್ಣುಗಳೇ ಗಿರ ಗಿರ ತಿರುಗಿ ತಲೆ ತಿರುಗುವಷ್ಟು ಗಿರುಕಿ ಹೊಡೆವ ಅಸಾಮಾನ್ಯ ಅದ್ವಿತೀಯ. ಬಡತನದಲ್ಲೂ ಸಾವಿರಾರು ಅಭಿಮಾನಿಗಳ ಮನ ಸೂರೆಗೊಂಡ ಶ್ರೀಮಂತ… ಚಂದ್ರಹಾಸ ಗೌಡರು ನನ್ನ ಇಂದಿನ ಅಕ್ಷರ ಅತಿಥಿ.
ದುಂಬಾಲು ಬಿದ್ದು ಮಾತನಾಡಿಸುವ ಸ್ವಭಾವದವನು ಅಲ್ಲದಿದ್ದುದರಿಂದ ಚಂದ್ರಹಾಸ ಗೌಡರನ್ನು ಚೌಕಿ ಮನೆಗೆ ಹೋಗಿ ಈವರೆಗೂ ಮಾತನಾಡಿಸಿದವನಲ್ಲ ನಾನು. ಅವರಿಗೊಂದು ಚಹಾ ಕುಡಿಸಲೂ ಇಲ್ಲ. ಆದರೆ ಅವರು ರಂಗಸ್ಥಳದಲ್ಲಿ ಕುಣಿವಾಗ ಸಿಳ್ಳೆ ಹೊಡೆಯಲು ಬರದ ನಾನು ಮಾಸ್ತರ ಎಂಬುದನ್ನೂ ಮರೆತು ಕೂ ಕೂ ಎಂದು ಹತ್ತಾರು ಬಾರಿ ಕೂಗಿ ಪಕ್ಕದಲ್ಲಿರುವ ಮನೆಯವರ ಹತ್ತಿರ ಬಯ್ಯಿಸಿಕೊಂಡಿದ್ದೇನೆ. ನನ್ನ ಮೆಚ್ಚಿನ ಕಲಾವಿದನಿಗೆ ನಾನು ಚಪ್ಪಾಳೆ ತಟ್ಟಿ ಮನಸಾರೆ ಹಾರೈಸಿದ್ದೇನೆ. ಈ ಲೇಖನ ಬರೆವ ಕಾಲಕ್ಕೂ ನಾನವರಿಗೆ ಮುಖತಃ ಭೇಟಿ ಆಗಲಿಲ್ಲ. ಅವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ನಿಮ್ಮ ಅಭಿಮಾನಿಯಾಗಿ ನಾಲ್ಕಕ್ಷರ ಬರೆಯಲು ಅನುಮತಿ ಕೇಳಿದೆನಷ್ಟೇ. ಖಂಡಿತ ಮುಂದೊಮ್ಮೆ ಅವರನ್ನು ಮನೆಗೇ ಕರೆಸಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಬೇಕು. ಅವರಿಗೊಂದು ನಮ್ಮ ಮನೆಯ ಮಜ್ಜಿಗೆ ತಂಬಳಿಯ ಊಟ ಹಾಕಬೇಕು.
ಕಣ್ಣಿಮನೆಯವರು ರಂಗಸ್ಥಳದ ಮಿಂಚಾಗಿ ಮಿಂಚಿ ಮರೆಯಾಗಿ ಹೋದ ಕಾಲಕ್ಕೆ ಹೋದ ಹೋದಲೆಲ್ಲ ಅವರ ಬಿಟ್ಟ ಸ್ಥಳ ಎದ್ದು ಕಾಣುತ್ತಿತ್ತು. ಆದರೆ ಚಂದ್ರಹಾಸ ಗೌಡ, ರಾಜೇಶ ಭಂಡಾರಿ, ಕಾರ್ತಿಕ ಚಿಟ್ಟಾಣಿ, ಕಡಬಾಳ ಉದಯ, ವಿಶ್ವನಾಥ ಆಚಾರ್ಯ, ವಿನಯ ಬೇರೊಳ್ಳಿಯಂಥವರು ನಮ್ಮ ಕನಸಿಗೆ ಬಣ್ಣ ತುಂಬಿದರು.
ಹೊಸಪಟ್ಟಣ ಹೊನ್ನಾವರ ಗುಣವಂತೆಯ ಸಮೀಪದ ಒಂದು ಊರು. ಗುಣವಂತೆ……ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಶಿವಾನಂದ ಹೆಗಡೆಯವರಂತ ಪ್ರತಿಷ್ಠಿತರು ಹುಟ್ಟಿ ಬೆಳೆದ ಪುಣ್ಯಸ್ಥಳ. ಯಕ್ಷಗಾನ ಕ್ಷೇತ್ರದಲ್ಲಿ ಗುಣವಂತೆಯ ಗುಣವಂತರ ಕೊಡುಗೆ ಅಪಾರ. ಅಂತಹ ನೆಲದಲ್ಲಿ ಹುಟ್ಟಿ ಬೆಳೆದ ಚಂದ್ರಹಾಸರು ಪ್ರಸ್ತುತ ಸಾಲಿಗ್ರಾಮ ಮೇಳದ ಜನಪ್ರಿಯ ಕಲಾವಿದರು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

‌ ನನ್ನ ಪ್ರೀತಿಯ ಕಲಾವಿದ ಚಂದ್ರಹಾಸರು ರಂಗಸ್ಥಳದಲ್ಲಿ ಸೋಮಾರಿಯಾದ ಒಂದೇ ಒಂದು ಉದಾಹರಣೆ ಇಲ್ಲ. ಇಂದು ಯಕ್ಷಗಾನ ಬೋರೆನಿಸಿತು ಎನ್ನುವ ಕಾಲಕ್ಕೆ ಸಿಡಿಲಿನಂತೆ ನುಗ್ಗಿ ಅದನ್ನು ಎತ್ತರಿಸುವ ತಾಕತ್ತು ನನ್ನ ಪ್ರೀತಿಯ ಚಂದ್ರಹಾಸರಿಗಿದೆ. ಯುವರಾಜಸಿಂಗ್ ಕ್ರಿಕೆಟಿನಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಹೊಡೆದಂತೆ….ಸಿಕ್ಕ ಆರೂ ಪದ್ಯಕ್ಕೂ ಆರೂ ಸಿಕ್ಸರನ್ನು ತನ್ನ ಕುಣಿತದಿಂದ ರಂಗಸ್ಥಳದಲ್ಲಿ ಮಾಡಿ ತೋರಿಸುವವರು ಚಂದ್ರಹಾಸರು.
ಕನ್ನಡಿಯ ಮುಂದೆ ನಿಂತು ಯಕ್ಷಗಾನದ ಹೆಜ್ಜೆಗಳನ್ನು ಕಲಿಯುತ್ತಿದ್ದವರು ಅವರು ಎಂಬುದನ್ನು ಕೇಳಿದ ನನಗೆ ಅವರು ಪಟ್ಟ ಶ್ರಮದ ಅರಿವಾಗುತ್ತದೆ. ಅವರು ಅವರ ಸಮುದಾಯಕ್ಕೇ ಹೆಸರು ತಂದ ಯುವಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಹೊನ್ನಾವರದ ಈ ಹೆಮ್ಮೆಯ ಕಲಾವಿದನ ಬಗ್ಗೆ ನಾವೂ ಆತ್ಮಶಃ ಅಭಿಮಾನ ಪಡುತ್ತೇವೆ.
ನಾಯಕನ ಪಾತ್ರವಿರಲಿ, ಖಳನಾಯಕನ ಪಾತ್ರವೇ ಇರಲಿ ಅದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವ ಚಂದ್ರಹಾಸರ ಅಭಿಮನ್ಯುವಿನ ಪಾತ್ರವಂತೂ ಮೈಯಲ್ಲಿ ರೋಮಾಂಚನ ಎಬ್ಬಿಸುತ್ತದೆ. ಚಿಕ್ಕ ಪಾತ್ರವನ್ನೇ ಮಾಡಿದರೂ ಚೊಕ್ಕದಾಗಿ ಅರ್ಥ ತುಂಬುವ ಚಂದ್ರಹಾಸರಿಗೆ ಗುಣವಂತೆಯ ಶ್ರೀ ರಾಜೇಶ ಭಂಡಾರಿಯವರು ಭಲೇ ಜೋಡಿ. ಅವರ ಜೋಡಿ ನೃತ್ಯಗಳು ಜನ ಮನ ಸೂರೆಗೊಂಡಿದ್ದು ನಿಸ್ಸಂಶಯ. ಯಕ್ಷರಂಗದ ಲವಕುಶರು ಅವರು.
‌‌‌‌ ಚಂದ್ರಹಾಸ ಗೌಡರು ಯಕ್ಷಗಾನದ ಬಡಗು ತಿಟ್ಟಿನಲ್ಲಿ ಅತಿಹೆಚ್ಚು ಗಿರಕಿ ಹೊಡೆದು ದಾಖಲೆ ನಿರ್ಮಿಸಿದವರು. 100, 150, 200 ಎಂದು ನಮ್ಮ ಲೆಕ್ಕವೇ ತಪ್ಪಿ ಹೋಗುವಷ್ಟು ಗಿರ ಗಿರನೆ ತಿರುಗುವ ಅವರು ಆರೋಗ್ಯದ ಬಗ್ಗೂ ಗಮನ ವಹಿಸಬೇಕು. ಅವರಿಂದ ನಮ್ಮ ಅಭಿಮಾನಿಗಳಿಗೆ ಮತ್ತಷ್ಟು ರಸದೌತಣದ ನಿರೀಕ್ಷೆಯಿದೆ. ಚಂದ್ರಹಾಸರು ಯಕ್ಷರಾತ್ರಿಗೆ ನಿಜವಾದ ಚಂದ್ರರಾಗಬೇಕೆಂಬುದೇ ಅಭಿಮಾನಿಯಾಗಿ ನನ್ನ ನಿತ್ಯ ಪ್ರಾರ್ಥನೆ. ನಾಡಿನ ಹಲವಾರು ಕಲಾಭಿಮಾನಿಗಳ ಹೃದಯ ಗೆದ್ದಿರುವ ಚಂದ್ರಹಾಸ ಗೌಡರು ಯಾರನ್ನೋ ಅನುಕರಿಸಲಿಲ್ಲ…ಅವರದ್ದೇ ಆದ ಸತ್ವಾತಿಶಯದಿಂದ ತಾನೇ ತಾನಾಗಿ ಮೇಲೆ ಬಂದವರು. ಬರೀ ಗಿರಕಿ ಹೊಡೆಯುವುದಕ್ಕೊಂದು ಅಡ್ಡಿಯಿಲ್ಲ…. ಎಂದು ಅಸಡ್ಡೆ ಮಾಡುವವರಿಗೆ ಮಾತು ಹಾಗೂ ನೃತ್ಯದ ಮೂಲಕವೂ ಪ್ರತಿಭೆ ತೋರಿದವರು. ನಾನಂತೂ ಅವರ ಪಕ್ಕಾ ಅಭಿಮಾನಿ. ಅವರು ನೂರ್ಕಾಲ ಜನರನ್ನು ರಂಜಿಸಬೇಕು. ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಅವರಿಗೆ ಅರ್ಹವಾಗಿಯೇ ಸಂದಾಯವಾಗಬೇಕು. ವಯಸ್ಸಾದ ಮೇಲೆ ನೂರಾರು ಶಾಲು ಹೊದೆಸಿ ಬಣ್ಣದ ಮಾತುಗಳಿಂದ ಅವರನ್ನು ಹೊಗಳಿದರೆ ಕೃತಜ್ಞತೆಯ ಭಾವವೊಂದು ಅವರ ಬಳಿ ಉಳಿಯುತ್ತದೆ. ಕೆಲಸ ಮಾಡುತ್ತಿರುವಾಗಲೇ ಅವರಿಗೆ ಸ್ಫೂರ್ತಿ ತುಂಬುವ ಮಾತಾಡಿದರೆ ಅವರಿಗೂ ಮತ್ತಷ್ಟು ಇನ್ನಷ್ಟು ಮಾಡುವ ಉತ್ಸಾಹ ಬರುತ್ತದೆ.
‌‌‌‌ ನಮ್ಮ ಪ್ರೀತಿಯ ಚಂದ್ರಹಾಸ ಗೌಡರು ಪ್ರಖ್ಯಾತಿಯ ಶಿಖರಕ್ಕೇರಲಿ. ಅನವಶ್ಯಕ ಸ್ಪರ್ಧೆಗೆ ತನ್ನನ್ನು ತಾನು ಒಡ್ಡದೇ, ಅನವಶ್ಯಕ ಮಾತುಗಳಿಂದ ವ್ಯಕ್ತಿತ್ವ ಕೆಡಿಸಿಕೊಳ್ಳದೇ ಸಮಾಧಾನಿಯಾಗಿ ಸಾಧನೆ ಗೈಯ ಬೇಕೆಂಬುದು ನನ್ನ ಉದಾತ್ತ ಬಯಕೆ. ಸಹ ಕಲಾವಿದರ ಮೇಲಿನ ಗೌರವ ಮತ್ತು ವಿನಯ ನಿಮ್ಮನ್ನು ಕೀರ್ತಿ ಶಿಖರಕ್ಕೇರಿಸುವುದು ನಿಸ್ಸಂದೇಹ. ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ದಾರಿ ಮುಂದೆ ಸಾಗಲಿ. ಕಲಿಯುವ ಮನಸ್ಸಿದ್ದವಗೆ ಇರುವೆಯೂ ಸ್ಫೂರ್ತಿ ಆಗುತ್ತದೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಚಂದ್ರಹಾಸ ಗೌಡ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಕೂಜಳ್ಳಿ: ಮೂವರು ಸಂಗೀತ-ಯಕ್ಷ ಸಾಧಕರಿಗೆ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ, ಷಡಕ್ಷರಿ ಗವಾಯಿಗಳ ಪುತ್ಥಳಿ ನಿರ್ಮಿಸಿ ಎಂದ ಪ್ರಶಸ್ತಿ ಪುರಸ್ಕೃತ ಪಂ.ಮರಡೂರ

ಚಂದ್ರಹಾಸ ಗೌಡರಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ