ವ್ಯಥೆಗಳನ್ನೇ ಬರೆದು ಬರೆದು ಬಳಲಿ ಕೂತಿದ್ದ ಪೆನ್ನಿಗೆ, ಹೀಗೇ ಮುಂದುವರಿದರೆ ತನ್ನೊಳಗಿನ ಶಾಯಿ ಯಾವುದೋ ಸೋಂಕಿನಿಂದ ಸಾಯಬಹುದು ಅನಿಸಿತ್ತು. ಅಥವಾ ಸತ್ವದ ಸ್ಪರ್ಶ ಕಳೆದುಕೊಂಡು ಒಣಗಿ ಮರೆಯಾಗಬಹುದು ಅನಿಸಿತ್ತು.
ಅದರ ಮನಸ್ಸಿನ ಇನ್ನೊಂದು ಭಾಗವನ್ನು ತಪ್ಪಿತಸ್ಥ ಭಾವನೆಯೊಂದು ಬಣ್ಣ ಬಳಿಯೋಕೆ ಶುರು ಮಾಡಿತ್ತು.

“ನನ್ನನ್ನ ಬಳಸುವವರಿಗೆ ಸುಖವಿಲ್ಲ. ನನ್ನನ್ನು ಕೈಯಲ್ಲಿ ಹಿಡಿದವರ ಮೊಗದಲ್ಲಿ ಮಂದಹಾಸಕ್ಕಿಂತ ಉದ್ವೇಗವನ್ನೇ ಜಾಸ್ತಿ ಕಂಡಿದ್ದೇನೆ. ಪ್ರೀತಿಯ ಪರಾಕಾಷ್ಠೆಗಿಂತ ಹೆಚ್ಚಾಗಿ ನೋವಿನ ಚೀತ್ಕಾರದ ಸದ್ದು ಮೌನದ ಕಂಬನಿಯೊಂದಿಗೆ ಹೊರಬಂದಿದೆ. ಭಾವನೆಗಳ ಕೋಡಿಯೇ ಹರಿದಿದೆ ಘಾಸಿಗೊಂಡ ರೂಪದಲ್ಲಿ. ಗೆಲುವಿನ ಸಂಭ್ರಮಕ್ಕಿಂತ ವೈಫಲ್ಯಗಳ ದೊಡ್ಡ ಅಭಿಯಾನವೇ ನಡೆದಿದೆ”

RELATED ARTICLES  ಶ್ವಾಸ ಪ್ರಕ್ರಿಯೆಯ ಬಗ್ಗೆ ಶ್ರೀಧರರು ಪತ್ರದ ಮೂಲಕ ಹೇಳಿದ್ದೇನು ಗೊತ್ತಾ?

ಹೀಗೆ ಮಳೆಗಾಲದ ಹೊಳೆಯಂತೆ ಪಟ್ಟಿ ದೊಡ್ಡದಾಗತೊಡಗಿತ್ತು.

ಇಂಥ ಯೋಚನೆ ಆ ಪೆನ್ನನ್ನು ಮಂದವಾಗುವಂತೆ ಮಾಡಲಿಲ್ಲ. ಬದಲಾಗಿ ಸಕಾರಾತ್ಮಕ ಉತ್ತರವೊಂದನ್ನ ಬ್ಯಾಟರಿ ಹಿಡಿದು ಹುಡುಕುವಂತೆ ಮಾಡಿತು. ಕೆಲವೇ ದಿನಗಳಲ್ಲಿ “ತಾನು ಅಪಶಕುನವಲ್ಲ” ಎಂಬ ಸಮಾಧಾನ, ಅದರೊಳಗೆ ಯುಗಾದಿ ಆಚರಿಸುವಂತೆ ಮಾಡಿಬಿಟ್ಟಿತು.

RELATED ARTICLES  ಆಸ್ಕರ್ ಸ್ಪರ್ಧೆಯ ಪಟ್ಟಿಯಲ್ಲಿ ಕಾಂತಾರ

“ನೋವುಣ್ಣುವವರಿಗಿಂತ ಚೆನ್ನಾಗಿ, ಪರಿಣಾಮಕಾರಿಯಾಗಿ, ಭಾವನಾತ್ಮಕ ಆಕರ್ಷಣೆಯಿಂದ ಸೆಳೆದುಕೊಳ್ಳುವಂಥ ಬರವಣಿಗೆಯನ್ನು ಮತ್ಯಾರಿಂದಲೂ ಬರೆಯಲು ಸಾಧ್ಯವಿಲ್ಲ. ಕೋಟಿ ಮನುಜರ ಮನಸ್ಸಿಗೆ ಹಾಗೂ ಮನಸ್ಸೊಳಗಿನ ಭಾರ ಇಳಿಸುವ ಹಾಳೆಗೆ ಸಂಪರ್ಕ ಕೊಂಡಿಯಾಗಿ ನಾನಿದ್ದೇನೆ. ನನ್ನ ಹಿಡಿದವನ ಕಣ್ಣೀರು ಇಂಗಿದೆ. ಸತ್ತ ಭಾವಗಳಲ್ಲಿ ಹೊಸ ಟೊಂಗೆ ಚಿಗುರಿದೆ” ಎಂಬ ಹೆಮ್ಮೆ ಮೂಡಿತು.

  • ಬ್ರಹ್ಮ