ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ಸುಬ್ರಹ್ಮಣ್ಯ ಹೆಗಡೆ ನೀಲಕೋಡ
ನನ್ನೊಲವಿನ ಜೀವದ ಗೆಳೆಯ, ಗ್ರಾಮ್ಯ ಭಾಷೆಯಲ್ಲಿ ಹೇಳುವುದಾದರೆ ಚಡ್ಡಿ ದೋಸ್ತ, ನನ್ನ ಪ್ರತಿದಿನದ ನೋವು ನಲಿವಿನ ಭಾಗೀದಾರ, ಎ.ಟಿ.ಎಂ secret code ಒಂದು ಬಿಟ್ಟು ನನ್ನೆಲ್ಲಾ ವಿವರಗಳು ಗೊತ್ತಿರುವ ನನ್ನ ಪರಮಾಪ್ತ ಗೆಳೆಯ ಸುಬ್ಬುವಿನ ಪರಿಚಯ ಮಾಡಿ ಕೊಡಬೇಕು ಇಂದು. ಸುಬ್ರಹ್ಮಣ್ಯ ಹೆಗಡೆ ಹೊನ್ನಾವರ ತಾಲೂಕಿನ ನೀಲಕೋಡದವರು.
ನಾನು, ಸುಬ್ರಹ್ಮಣ್ಯ ಹೈಸ್ಕೂಲಿನಿಂದ 7 ವರ್ಷ ಒಟ್ಟಿಗೆ ಓದಿದವರು. ಅವರ ಮನೆಯಿರುವ ಕೇರಿಗೆ ಕುಂಬ್ರಿಗುಡ್ಡೆ ಅಂತ ಹೆಸರು. ಹೀಗಾಗಿ ಕುಂಬ್ರಿ ಎನ್ನುವ ಅಡ್ಡ ಹೆಸರಿನಿಂದಲೇ ಪ್ರಖ್ಯಾತನಾದವನು ಆತ. ನಾನು ಆತನಿಗೆ ಎಲ್ಲಾದರೂ ಸಿಟ್ಟು ಬಂದೀತೆಂದು ಸುಬ್ಬು ಎಂದು ಕರೆಯುವ ರೂಢಿ ಇಟ್ಟುಕೊಂಡಿದ್ದೆ. ಹೈಸ್ಕೂಲಿಗೆ ಬಂದಾಗ ಈ ಸುಬ್ಬು ಎಲ್ಲರಿಗಿಂತ ಎತ್ತರದ ಮನುಷ್ಯ. ಹೀಗಾಗಿ ಅವನನ್ನು last ಬೆಂಚಿನಲ್ಲಿರಿಸಿದ್ದರು. ನನಗಿಂತ ಎರಡು desk ಹಿಂದೆ ಆತ. ಆದರೆ ಹೈಸ್ಕೂಲ್ ನಂತರ ಆತ ಎರಡು ಇಂಚು ಕೂಡ ಎತ್ತರವಾಗೇ ಇಲ್ಲ. ಅವನಿಗಿಂತ ಕುಳ್ಳಗಿದ್ದವರೆಲ್ಲ ಅವನಿಗಿಂತ ಎತ್ತರ ಆಗಿ ಬಿಟ್ಟಿದ್ದಾರೆ.??
ಸುಬ್ಬು ತೀರಾ ಸಿಂಪಲ್ ಮನುಷ್ಯ. ತೀರಾ ಫ್ಯಾಷನ್ ಮಾಡಿ ಆತನಿಗಭ್ಯಾಸವೇ ಇಲ್ಲ. ಮದುವೆ ಆಗುವವರೆಗೂ in shirt ಕೂಡ ಮಾಡದವನಾತ. ಲೆಕ್ಕ ಮಾಡಿ ಐದಾರು ಅಂಗಿಗಳು….ಇದ್ದವು ಆತನ ಹತ್ತಿರ. ಸುಖಾ ಸುಮ್ಮನೆ ಒಂದು ಪೈಸಾ ಹಾಳು ಮಾಡುವವನಲ್ಲ ನಮ್ಮ ಸುಬ್ಬು. ನಾನು ಆಗಾಗ ಅವರ ಮನೆಗೆ ಹೋದಾಗ ಅವರ ಅಕ್ಕ, ಅಣ್ಣ ಸೇರಿ ಸ್ವಲ್ಪ modern ಆಗು ಸಂದೀಪನ ಹಾಗೆ ಅಂತ ಬಯ್ಯುತ್ತಿದ್ದರು. ಯಾರಾದರೂ ಹೇಳುತ್ತಾರೆ ಅಂತ ಬದಲಾಗುವವನೇ ಅಲ್ಲ ನಮ್ಮ ಸುಬ್ಬು.
ಕಾಲೇಜಿನ ದಿನಗಳಲ್ಲಾದರೂ ಅಷ್ಟೇ…ನಾವು ಹುಡುಗಿಯರಿಗೆ ಚುಡಾಯಿಸಿದವರಲ್ಲ. ತಲೆ ಬಗ್ಗಿಸಿಕೊಂಡು ಹೋದರೆ ತಿರುಗಿ ಮನೆಗೇ ಬರುವುದು. ಬಡತನ ಮತ್ತು ಸಾಮಾಜಿಕ ಜವಾಬ್ದಾರಿ ನಮಗೆ ಅದಾಗಲೇ ಸ್ವಂತ ಕಾಲಿನ ಮೇಲೆ ನಿಲ್ಲುವ ಆತುರ ತೋರಿತ್ತು. ಹೀಗಾಗಿ ಬೇಗನೇ ನೌಕರಿ ಹಿಡಿಯುವ ತವಕದಲ್ಲಿದ್ದ ನಾವು ಟಿ.ಸಿ.ಹೆಚ್ ಮಾಡಿ ಮಾಸ್ತರರಾಗಲು ಹೊರಟಿದ್ದು.
ಸುಬ್ಬು, ನಾನು, ಮತ್ತು ಲಕ್ಷ್ಮೀನಾರಾಯಣ ಎಂಬ ಮೂವರು ಪ್ರತಿದಿನ ಕುಮಟಾಕ್ಕೆ ಬಸ್ ಪ್ರಯಾಣ ಮಾಡಿ ತರಬೇತಿ ಮುಗಿಸಿದೆವು. ಒಮ್ಮೆ N.S.S. camp ನಡೆದ ಸಂದರ್ಭ. ನಾನು ಪ್ರೇತ ನೃತ್ಯ ಮಾಡುವುದಕ್ಕಾಗಿ ಸುಬ್ಬುವಿನ 1/4 ಚಡ್ಡಿಯೊಂದನ್ನು ಎರವಲು ಪಡೆದಿದ್ದೆ. ರಾತ್ರಿ ಅದ್ಭುತವಾಗಿ ಪ್ರದರ್ಶನ ನೀಡಿ ಮಾರನೆಯ ದಿನ ನಾನು ಮತ್ತು ಸುಬ್ಬು ಅಲ್ಲಿಯೇ ಹತ್ತಿರದ ಸಾರ್ವಜನಿಕ ಬಾವಿ ಕಟ್ಟೆಗೆ ಸ್ನಾನಕ್ಕೆ ಹೋಗಿದ್ದೆವು. ಅವನ ಚಡ್ಡಿಯನ್ನು ಸ್ವಚ್ಛವಾಗಿ ತೊಳೆದ ನಾನು ಅಲ್ಲಿಯೇ ಬಾವಿ ಕಟ್ಟೆಯ ಮೇಲೆ ಬಿಸಿಲಿಗೆ ಒಣಗಿಸಿಟ್ಟು ಸ್ನಾನ ಮಾಡುತ್ತಿದ್ದೆ. ಅದೆಲ್ಲಿಂದ ಗಾಳಿ ಬಂದು ಒಕ್ಕರಿಸಿತೋ ಸುಬ್ಬುವಿನ ಚಡ್ಡಿ ಆಳವಾದ ಬಾವಿಯ ಒಳಗೆ ಬಿದ್ದು ಬಿಟ್ಟಿತು. ಇಂತಹ ಗಂಭೀರ ಪರಿಸ್ಥಿಯಲ್ಲೂ ಸುಬ್ಬು ನನಗೆ ಹಿಗ್ಗಾಮುಗ್ಗಾ ಬಯ್ಯದೇ ತಮಾಷೆಯಾಗಿಯೇ ಗದರಿದ. ಅವನ ಸಾತ್ವಿಕ ಸಿಟ್ಟನ್ನು ನೋಡಿ ನನಗೇ ನಗು ತಡೆದು ಕೊಳ್ಳಲಿಕ್ಕಾಗಲಿಲ್ಲ. ಇಂದಿಗೂ ಆ ಘಟನೆ ನೆನೆಸಿಕೊಂಡಾಗ ಬೇಸರವಿದ್ದರೂ ಓಡಿ ಹೋಗಿ ಬಿಡುತ್ತದೆ.
ಅದೇ ಕ್ಯಾಂಪಿನಲ್ಲಿ ನಾವು ಪಂಚ ಪಾಂಡವರು ( ಐದು ಜನ ಸ್ನೇಹಿತರು ) ಒಂದೇ ರೂಮಿನಲ್ಲಿ ಪೇಪರ್ ಹಾಸಿಕೊಂಡು ಮಲಗುತ್ತಿದ್ದೆವು. ಒಂದು ದಿನ ನನ್ನ ಪರ್ಸಿನಲ್ಲಿದ್ದ ಸಂಪೂರ್ಣ ಹಣ ಕಳುವಾಗಿ ಬಿಟ್ಟಿತ್ತು. ಎಲ್ಲರ ಹಣವೂ ಕಳುವಾಗಿತ್ತು. ಆದರೆ ನಮ್ಮ ಸುಬ್ಬು ಎಷ್ಟು ಬುದ್ಧಿವಂತ ಎಂದರೆ ಆತ ಮೂರು ಕಡೆಯಲ್ಲಿ ಹಣ ಇಟ್ಟಿದ್ದ. ಅವನದ್ದು ಮಾತ್ರ ಸ್ವಲ್ಪ ಉಳಿದು ಕೊಂಡಿತು. ಆತ ತರಬೇತಿಯ ದಿನಗಳಲ್ಲಿ ನಾಟಕದಲ್ಲೊಂದು ಸ್ತ್ರೀ ವೇಷ ಮಾಡಿದ್ದ.??. ಅದನ್ನು ವಿವರಿಸಲಿಕ್ಕೆ ನನಗೆ ಶಬ್ದಗಳೇ ಸಾಲವು.
ಸುಬ್ಬು ಬಾಗಲಕೋಟೆಯಲ್ಲಿ ಸಿ.ಇ.ಟಿ ಪರೀಕ್ಷೆ ಬರೆದ. ನಾನು ಉತ್ತರ ಕನ್ನಡದಲ್ಲೇ ಬರೆದೆ. ಹೀಗಾಗಿ ಹತ್ತು ವರ್ಷ ನಾವು ದೂರ ದೂರ ಉಳಿದೆವು. ಈಗ ಆತ ಕುಮಟಾದ ಬಂಗಣಿಯಲ್ಲೇ ಶಿಕ್ಷಕನಾಗಿ ಕೆಲಸ ಮಾಡುತ್ತಾನೆ. ಸುಬ್ಬು ನನ್ನ ತಾಂತ್ರಿಕ ಸಲಹೆಗಾರ. ಕಂಪ್ಯೂಟರ್, ಮೊಬೈಲ್ ನ ಯಾವುದೇ ಸಮಸ್ಯೆಗಳಿರಲಿ ಸಲೀಸಾಗಿ ಕ್ಷಣಾರ್ಧದಲ್ಲಿ ಆತ ಬಗೆ ಹರಿಸುತ್ತಾನೆ. ನಾನೂ ಅವನೂ ನಮ್ಮ ವೈಯಕ್ತಿಕ, ಶೈಕ್ಷಣಿಕ, ಸಾಮಾಜಿಕ ವಿಷಯಗಳನ್ನೆಲ್ಲಾ ಪರಸ್ಪರ ಹಂಚಿಕೊಳ್ಳುತ್ತೇವೆ. ನಮ್ಮೊಳಗೆ ಸಿಟ್ಟು, ಹುಳುಕು, ಕೊಳಕು, ಮತ್ಸರದ ಮಾತೇ ಇಲ್ಲ.
ಯಾವುದೇ ಉಪನ್ಯಾಸ ಇರಲಿ, ಸಾಹಿತ್ಯ ಕೃತಿ ಇರಲಿ, ನಾನು ಮೊದಲು ಸುಬ್ಬುವಿನ ಹತ್ತಿರವೇ ಚರ್ಚಿಸುವುದು. ಆತ ನೀಡುವ ಸಲಹೆ ನನಗೆ ತುಂಬಾ ಆಪ್ತವಾಗಿರುತ್ತದೆ. ನನ್ನದಲ್ಲದ ಸಾಧನೆಯ ಅರ್ಧಕ್ಕಿಂತ ಹೆಚ್ಚು ಅವನದ್ದೇ. ನಾವು ಸುಮಾರು 4-5 ಗಂಟೆ ಪರಸ್ಪರ ಹರಟುತ್ತೇವೆ. ನನ್ನ ಜೀವ ಆತ.
ಸುಬ್ರಹ್ಮಣ್ಯನನ್ನು ಆಗಾಗ ನೋಡಲು ಅವನ ಮನೆಗೆ ಹೋಗುತ್ತಿದ್ದೆ. ಹೀಗಾಗಿ ಅವನ ಮನೆಯ ಹತ್ತಿರದ ಸರಸ್ವತಿಯೇ ನನಗೆ ಸತಿಯಾದಳು.?? ಅವನಿಗೇ ಈ ಸಂಗತಿ ಗೊತ್ತಿರಲಿಲ್ಲ. Engagement ಆಗುವ ಕಾಲಕ್ಕೆ ನನಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ.?? ನಮ್ಮ ಸುಬ್ರಹ್ಮಣ್ಯನಿಗೂ ನಯನಾ ಎನ್ನುವ ಮನದಿಂಗಿತ ಅರಿಯುವ ಮಡದಿಯಿದ್ದಾಳೆ. ಮುದ್ದಾದ ಸುನೈನಾ ಎನ್ನುವ ಮಗಳಿದ್ದಾಳೆ. ಅಪ್ಪ, ಅಮ್ಮನ ಜೊತೆಯಲ್ಲಿದ್ದುಕೊಂಡೇ ಸುಖೀ ಸಂಸಾರ ಸಾಗಿಸುತ್ತಿರುವ ಸುಬ್ರಹ್ಮಣ್ಯ ಅಸಾಮಾನ್ಯ ಪ್ರತಿಭಾವಂತ.
ಸಂಪನ್ಮೂಲ ವ್ಯಕ್ತಿಯಾಗಿ ಕೂಡ ಕೆಲಸ ಮಾಡಿದ ನಮ್ಮ ಸುಬ್ರಹ್ಮಣ್ಯ ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಕೃಷಿ ಆತನಿಗೆ ತುಂಬಾ ಪ್ರೀತಿ. ಸಭ್ಯ ಸಹಜ ನಡೆ ನುಡಿಯ ಚಾಣಾಕ್ಷ ನಮ್ಮ ಸುಬ್ಬು. ಹತ್ತು ಕಡೆ ಕೇಳಿ, ಹತ್ತಾರು ಬಾರಿ ಯೋಚಿಸಿ ಹೆಜ್ಜೆಯಿಡುವ ಸುಬ್ರಹ್ಮಣ್ಯ ನನ್ನ back bone. ಅತಿಯಾದ ಆಸೆಗಳಿಲ್ಲದ ಮನುಷ್ಯನಾತ. ನನ್ನನ್ನು ನಿಷ್ಕಲ್ಮಷವಾಗಿ ಪ್ರೀತಿಸುವ ಗೆಳೆಯನ ಬಗ್ಗೆ ಬರೆದು ಮನಸ್ಸು ಉಲ್ಲಾಸಗೊಂಡಿತು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಸುಬ್ರಹ್ಮಣ್ಯ ಹಾಗೂ ಅವನ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಸುಬ್ರಹ್ಮಣ್ಯನಿಗೆ ಸಂದೀಪನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ