ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ಕಾರ್ತಿಕ ಚಿಟ್ಟಾಣಿ
ಮುದ್ದು ಮೊಗದ ಮೋಡಿಗಾರ, ಹೆಜ್ಜೆ ಸೋಲದ ಹೆಮ್ಮೆಯ ರಂಗ ಯುವ ರಾಜ, ಅಭಿಮಾನಿಗಳ ಮನಸೂರೆಗೊಳ್ಳುವ ಕನಸುಗಾರ, ಯಕ್ಷ ರಂಗದ ಕಣ್ಮಣಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕಲಾಭಿಜಾತ ಮೊಮ್ಮಗ, ಮೇರು ನಟ ಸುಬ್ರಹ್ಮಣ್ಯ ಚಿಟ್ಟಾಣಿಯವರ ಮಗ, ಶ್ರೀ ಕಾರ್ತಿಕ ಚಿಟ್ಟಾಣಿ ನನ್ನೂರಿನ ಕೀರ್ತಿ. ಕಾರ್ತಿಕ ನನಗಿಂತ ಕಿರಿಯನೂ ಹಾಗೂ ಬಂಧುವೂ ಆಗಿರುವುದರಿಂದ ಆಪ್ತತೆ ಹೆಚ್ಚು ಎನ್ನುವ ಕಾರಣಕ್ಕಾಗಿ ಏಕವಚನದಲ್ಲಿಯೇ ಆತನನ್ನು ಸಂಬೋಧಿಸುತ್ತೇನೆ…. ಕ್ಷಮೆಯಿರಲಿ.
ಕೆಲವರು ತಮ್ಮ ಕ್ಷೇತ್ರವನ್ನು ತಾವೇ ಬದುಕಿನಲ್ಲಿ ಆಯ್ದು ಕೊಳ್ಳುತ್ತಾರೆ. ಕೆಲವರಿಗೆ ಕೆಲವು ಕ್ಷೇತ್ರ ಬದುಕಿನಲ್ಲಿ ಭಗವಂತನ ದಯೆ ಹಾಗೂ ಪ್ರೇರಣೆಯಿಂದಲೇ ದೊರಕಿರುತ್ತದೆ. ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆಂಬ ಮಾತು ನಿಜವಾದರೂ ಶಿಕ್ಷಕರ ಮಕ್ಕಳು ಶಿಕ್ಷಕರೇ ಆಗಬೇಕೆಂಬ, ಡಾಕ್ಟರ್ ಮಕ್ಕಳು ಡಾಕ್ಟರರೇ ಆಗಬೇಕೆಂಬ, ಅಥವಾ ಕಲಾವಿದರ ಮಕ್ಕಳು ಕಲಾವಿದರೇ ಆಗಬೇಕೆಂಬ ನಿಯಮವೇನೂ ಇಲ್ಲ. ಕಲಾವಿದ ಅಪ್ಪನಿಗೆ ಕಲಾವಿದನೇ ಹುಟ್ಟುತ್ತಿರುವುದು ಚಿಟ್ಟಾಣಿ ಮನೆತನದ ಹೆಮ್ಮೆ.
ಒಬ್ಬ ಎವರೆಸ್ಟ ಶಿಖರ ಏರಿದ್ದಾನೆಂದರೆ ಅದಕ್ಕಿಂತ 10 feet ಕಡಿಮೆ ಇರುವ ಇನ್ನೊಂದು ಶಿಖರ ಏರಿದವನ ಹೆಸರು ಪ್ರಾಜ್ವಲ್ಯಮಾನಕ್ಕೆ ಬರುವುದೇ ಇಲ್ಲ. 625/625 ಅಂಕ ಬಿದ್ದ ಒಬ್ಬರ ಮುಂದೆ 624 ಪಡೆದ ಮತ್ತೆ ಹತ್ತು ಜನರು ನಗಣ್ಯವಾಗಿ ಬಿಡುತ್ತಾರೆ.?. ರಾಮಚಂದ್ರ ಹೆಗಡೆಯವರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಮೇರು ನಟರಾದಾಗ ಅವರ ಮಕ್ಕಳಾದ ಸುಬ್ರಹ್ಮಣ್ಯ, ನರಸಿಂಹ ಚಿಟ್ಟಾಣಿಯವರು ಏನೇ ಮಾಡಿದರೂ ಅದನ್ನು ಅಪ್ಪನಿಗೆ ಹೋಲಿಸಿಕೊಂಡೇ ಅಭಿಮಾನಿಯೊಬ್ಬ ವಿಮರ್ಶೆಯ ಅಳತೆಗೋಲಿಗೆ ಹಚ್ಚುತ್ತಾನೆ. ಕಾರ್ತಿಕನಿಗೂ ಇದು ಅನ್ವಯವಾಗುತ್ತದೆ. ಆದರೆ ಅಜ್ಜನನ್ನು ಅನುಕರಿಸದೇ ಅನುಸರಿಸಿದ ಸ್ವ ಸತ್ವಾತಿಶಯದ ಪ್ರತಿಭಾವಂತ ನಮ್ಮ ಕಾರ್ತಿಕ.
ಪ್ರಸ್ತುತ ಪೆರ್ಡೂರು ಮೇಳದ star ಕಲಾವಿದನಾಗಿರುವ ಕಾರ್ತಿಕ ತನ್ನ ನೃತ್ಯ, ಅಭಿನಯ, ಅಭಿವ್ಯಕ್ತಿ, ವೇಷ, ಔಚಿತ್ಯ, ಮಾತುಗಾರಿಕೆ, ಸಂವಾದ ಹೀಗೆ ಪ್ರತಿಯೊಂದರಲ್ಲೂ ಅಭಿಮಾನಿಗಳಿಗೆ ಇಷ್ಟವಾಗುತ್ತಾನೆ. ತನಗೆ ಯಕ್ಷರಂಗದ ಗುರುವಾದ ಯಕ್ಷ ಋಷಿ ದಿವಂಗತ ಹೊಸ್ತೋಟ ಮಂಜುನಾಥ ಭಾಗವತರನ್ನು ಮನಸಾರೆ ಸ್ಮರಿಸಿಕೊಳ್ಳುವ ಕಾರ್ತಿಕ ತನ್ನ ಈ ಏಳ್ಗೆಗೆ ತುಂಬು ಹೃದಯದ ಪ್ರೋತ್ಸಾಹ ನೀಡಿದ ವಿದೂಷಕ ಶ್ರೀ ಶ್ರೀಧರ ಹೆಗಡೆ ಕಾಸರಕೋಡರವರನ್ನೂ ಶೃದ್ಧೆಯಿಂದ ನೆನೆಯುತ್ತಾನೆ. ಯಕ್ಷಗಾನದ ಪದ್ಯವನ್ನು ತಾನೇ ಪ್ರಾರಂಭಿಸಿ ಭಾಗವತರಿಗೆ ನೀಡುವ ಕಾರ್ತಿಕನ ಪರಿ ನನಗೆ ತೀರಾ ಮೆಚ್ಚುಗೆಯಾಗುತ್ತದೆ.
ನಾನೂ ಮಾಡುತ್ತಿದ್ದೆ…..ಆದರೆ….., ನಾನೂ ಬರೆಯುತ್ತಿದ್ದೆ…….ಆದರೆ….., ನಾನೂ ಏರುತ್ತಿದ್ದೆ……ಆದರೆ….., ನಾನೂ ಪಡೆಯುತ್ತಿದ್ದೆ ಆದರೆ…….. ಎನ್ನುವ ಕನಸುಗಳು ಬಹಳಷ್ಟು ಜನಕ್ಕೆ ಇರುವುದಾದರೂ ದೇವರ ದಯವೂ ಒಬ್ಬನ ಪಾಲಿಗೆ ಬೇಕಾಗುತ್ತದೆ. ಬೊಗಸೆ ಕಂಗಳ ಈ ಚೆಲುವ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಮೋಡಿಗಾರ. ಅವನ ಮುದ್ದು ಮುಖ ನಿದ್ದೆಗಣ್ಣಿನಲ್ಲಿದ್ದವನನ್ನೂ ಎದ್ದು ಕುಳ್ಳಿರಿಸುತ್ತದೆ. ಪ್ರವೇಶವೇ ಬೆರಗು ಹುಟ್ಟಿಸುತ್ತದೆ.
ಸುಧನ್ವನಾಗಿ, ಕಾರ್ತಿವೀರ್ಯನಾಗಿ, ಕೃಷ್ಣನಾಗಿ, ಅಭಿಮನ್ಯುವಾಗಿ, ಧರ್ಮಾಂಗದನಾಗಿ, ಲವನಾಗಿ, ಕುಶನಾಗಿ, ಕಲಾಧರನಾಗಿ ಈಗಾಗಲೇ ಬಾಕ್ಸ ಆಫೀಸನ್ನು ಕೊಳ್ಳೆ ಹೊಡೆದಿರುವ ಅಸಾಮಾನ್ಯ ಕಲಾವಿದ ಕಾರ್ತಿಕ. ಯಕ್ಷಗಾನದ ಪಾತ್ರವನ್ನು ಔಚಿತ್ಯ ಮೀರದಂತೆ, ಎಲ್ಲಿಯೂ ಅತಿಯಾಗದಂತೆ ತೂಗಿಸಿಕೊಂಡು ಹೋಗುವುದೂ ಒಂದು ಜಾಣ್ಮೆ. ಸಹ ಕಲಾವಿದನಿಗೂ ಗೌರವ ಕೊಡುತ್ತಾ ಅವರ ಮಾತುಗಳನ್ನೂ ಶೃದ್ಧೆಯಿಂದ ಆಲಿಸಿದಾಗ ಮಾತ್ರ ಕಲಾವಿದನೊಬ್ಬ ತಾನೂ ಬೆಳೆಯುತ್ತಾನೆ. ಪ್ರೇಕ್ಷಕನಿಗೂ ಅದು ಇಷ್ಟವಾಗುತ್ತದೆ. ಕಾರ್ತಿಕ ಈ ನಿಟ್ಟಿನಲ್ಲಿ ಅತ್ಯುತ್ತಮ ವ್ಯಕ್ತಿ.
ಸೌಹಾರ್ದದ ಜೀವನ, ನಿಸ್ವಾರ್ಥ ಸ್ನೇಹ, ಹಿರಿಯರಲ್ಲಿ ಗೌರವ, ಬಂಧುಗಳಲ್ಲಿ ಪ್ರೀತಿ, ಇವೆಲ್ಲ ಕಾರ್ತಿಕನಿಗೆ ಕುಟುಂಬ ನೀಡಿದ ಸಂಸ್ಕಾರ. ನಮ್ಮ ಕಾರ್ತಿಕ ಮತ್ತೂ ಬೆಳೆಯಬೇಕು. ಅವನಿಗೆ ಮತ್ತಷ್ಟು ಇನ್ನಷ್ಟು ಅವಕಾಶಗಳು ಸಿಗಬೇಕು. ಹೊಸ ಪ್ರಸಂಗವಿರಲಿ, ಹಳೆಯ ಪೌರಾಣಿಕ ಪ್ರಸಂಗವೇ ಇರಲಿ ಕಾರ್ತಿಕ ಎರಡಕ್ಕೂ ಹೊಂದುವ ಕಲಾವಿದ. ಅವನು ನಮ್ಮೂರಿನ ಹೆಮ್ಮೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಸಜ್ಜನರ ಸನ್ಮಾನಗಳು ಅವನ ಪ್ರತಿಭೆಯನ್ನರಸಿಕೊಂಡು ಬಂದೇ ಬರುತ್ತವೆ.
ಪ್ರತಿಯೊಬ್ಬನಲ್ಲೂ ಗುಣಗಳಿರುತ್ತವೆ. ದೋಷಗಳೂ ಇರಬಹುದು. ನಾವು ಗುಣ ಗ್ರಾಹಿಯಾಗಬೇಕು ಮತ್ತು ದೋಷಗಳನ್ನು ಅವರ ವೈಯಕ್ತಿಕವಾಗಿ ಸೂಚಿಸಬೇಕು. ಕಾರ್ತಿಕನ ಮೇಲೆ ಅಪಾರ ಅಭಿಮಾನ ಹಾಗೂ ವಿಶ್ವಾಸ ಹೊಂದಿರುವ ನಾನು ಅವನಿಗೆ ಸದಾ ನನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸುತ್ತೇನೆ ಮತ್ತು ಅವನೂ ಅದನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸುತ್ತಾನೆ. ಕಾರ್ತಿಕ ಚಿಟ್ಟಾಣಿ….. ಚಿಟ್ಟಾಣಿಯ ಹೆಸರನ್ನು ಉಳಿಸುತ್ತಾನೆ ಎನ್ನುವುದು ನಿಸ್ಸಂಶಯ.
ಕಾರ್ತಿಕ ಚಿಟ್ಟಾಣಿ ಹಾಗೂ ಕಾರ್ತಿಕ ಕಣ್ಣಿ ಇವರಿಬ್ಬರೂ ಯಕ್ಷರಂಗದ ಕಣ್ಣುಗಳಾಗಿ ಶೋಭಾಯಮಾನರಾಗಲಿ ಎಂಬುದೇ ನನ್ನ ಅಪೇಕ್ಷೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಕಾರ್ತಿಕ ಹಾಗೂ ಅವನ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಕಾರ್ತಿಕನಿಗೆ ಸಂದೀಪಣ್ಣನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ