ಚಳಿಗಾಲದ ಮುಂಜಾನೆಯ ಮಂಜಿನಂಥೆ ಸಹಜತೆಯ ಸಂಕೇತವಾ? ಮೌನ ವ್ರತಾಧಾರಿಯಾಗಿ ನಲ್ಲಿಯಿಂದ ಬೀಳುವ ಕೊನೆ ಹನಿಯಂತೆ, ತಾನು ಶಾಂತ ಮೂರ್ತಿಯೆಂಬ ಸೂಚ್ಯಕವಾ? ಬಣ್ಣಗಳನ್ನು ಮೆತ್ತಿಕೊಂಡು, ಆಸೆಗಳ ಮಕರಂದ ತುಂಬಿಕೊಂಡು ಜೇನಿಗಾಗಿ ಕಾಯುವ ಸುಂದರ ಹೂವಲ್ಲಿರುವ ಮೋಹದ ಸೆಳೆತವಾ? ನೋಡಿದ ಮೂರು ಕ್ಷಣದೊಳಗೆ ಮೈಮರೆತು ಕನಸಿನ ಲೋಕದಲ್ಲಿ 20ಕಿಲೋಮೀಟರ್ ಗಳಷ್ಟು ಸುತ್ತಾಡುವ ಹುಚ್ಚನ್ನು ಹಿಡಿಸುವ ಆಕರ್ಷಣೆಯಾ?

ಆ ನೋಟ ಅರ್ಥವಾಗದ ಒಗಟಾ? ಅರ್ಥವಾದರೂ ಬಿಡಿಸಲಾಗದ ಕಗ್ಗಂಟಾ?

ಶಾಂತ ಸರೋವರದಲ್ಲಿ ದಿಢೀರ್ ಅಲೆಯೆದ್ದಂತೆಯೋ, ದಂಡು, ದಾಳಿಗೆ ಹೆದರದ ಹ್ರದಯ ಹಠಾತ್ ಮೊದಲ ನಾಚಿಕೆ ಕಂಡಂತೆಯೋ, ಒಲವಿನ ನಗೆ ಮೂಡಿ ಮರೆಯಾದಂತೆಯೋ, ಏಕಾಗ್ರತೆಯನ್ನು ಕಿತ್ತೆಸೆದು ಹೋದಂತೆಯೋ, ಮಂಡಿಯೂರಿ ಕುಳಿತು ಕಣ್ಮುಚ್ಚಿಕೊಂಡು ನೆನೆಸಿಕೊಳ್ಳುವಂತೆಯೋ, ಉನ್ಮಾದವೊಂದು ತೇಲಿ ಹೋದಂತೆಯೋ, ಗೊಂದಲದ ಕೇರಿಯಲ್ಲಿ ಸಿಕ್ಕ ಎರಡು ಮಂಡೆಯ ಹಾವಿಡಿದಂತೆಯೋ, ತಕ್ಕಡಿಯ ಒಂದೆಡೆ ಅದನ್ನಿಟ್ಟು ಮತ್ತೊಂದೆಡೆ ನಾ ಕುಳಿತು ಗಾಳಿಯಲ್ಲಿ ತೇಲಿದಂತೆಯೋ ಅನಿಸಿಬಿಟ್ಟಿತು ಆ ಕಂಗಳ ನೋಟದಿಂದ.

RELATED ARTICLES  ಕಳೆದು ಹೋದ ಎಳೆಯ ದಿನಗಳು (ಭಾಗ ೨೫)

ಯಸ್. ಅವಳ ಕಣ್ಣು!
ಅದೊಂದು ಮಾಯೆ. ನಿಂತಲ್ಲೇ ಕುಣಿಸುವುದು, ಕುಂತಲ್ಲೇ ತಣಿಸುವುದು, ಒಮ್ಮೊಮ್ಮೆ ನಲಿಸುವುದು, ಕೆಲವೊಮ್ಮೆ ಅಳಿಸುವುದು. ಎಲ್ಲವೂ ಸಿಗುವ ಸೂಪರ್ ಮಾರ್ಕೆಟ್ ಅಂದ್ರೆ ಅದು ಕಣ್ಣು. ಪ್ರೇಮದ ಅನುಭೂತಿಗೆ ಮಣೆ ಹಾಕಿ ಕೂರಿಸಬಲ್ಲುದು, ಭಾರ ಹೊರಲಾಗದಷ್ಟು ಕನಸಿನ ಮೂಟೆಗಳನ್ನು ಮನಸ್ಸಿಗೆ ಹೇರಬಲ್ಲುದು. ಕಾರಣವಿಲ್ಲದೇ ಮುಗುಳ್ನಗೆ ಮೂಡಬಹುದು. ಬೇಸರಕ್ಕೆ, ನೋವಿಗೆ ಇರುವಂಥ ಸಾವಿರ ಕಾರಣಗಳಿಗೆ ಎದುರಾಗಿ ನಿಂತು ನೆಮ್ಮದಿ ನೀಡಬಹುದು.

RELATED ARTICLES  ಕಾವ್ಯಾವಲೋಕನ-೬ ಕಾವ್ಯದೋಷಗಳು

ಸಮುದ್ರದ ಅಲೆಗಳ ಮುಖ ತೀರದೆಡೆಗಿರುವುದೇಕೆ ಎಂಬಷ್ಟೇ ವಿಚಿತ್ರವಾದುದು ಹಾಗೂ ನಿರುತ್ತರವಾದುದು ಆ ನೋಟ. ಡಿಕ್ಷನರಿ ಹಿಡಿದರೂ ಪರಿಹಾರ ಸಿಗದಂಥ ಸಂಗತಿ “ಅವಳ ಕಣ್ಣು”.

-ಬ್ರಹ್ಮ