ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ಹಳದೀಪುರ ಸಹೋದರರು

ಅವಿಭಕ್ತವಾಗಿರುವ ಶ್ರೀಯುತ ಆರ್ ಎನ್ ಹಳದೀಪುರ ಮತ್ತು ಗಣೇಶ ಹಳದೀಪುರ ಎಂಬ ಶಿಕ್ಷಕ ಮಿತ್ರ ದ್ವಯರನ್ನು ವಿಭಕ್ತ ಮಾಡದೇ ನಾನಿಂದು ಬರೆಯಬೇಕು. ವಾದ-ವಿವಾದಗಳಿಗೆ ಸಿಲುಕದ ಸೌಜನ್ಯ ಭರಿತ ಅಣ್ಣ ತಮ್ಮಂದಿರು ಇಂದಿಗೂ ರಾಮ-ಲಕ್ಷ್ಮಣರಂತೆ ಬದುಕುತ್ತಾರೆ. ಸಮಾಜಕ್ಕೆ ಮಾದರಿಯಾಗುತ್ತಾರೆ.
ಹಳದೀಪುರದಲ್ಲಿ ನನಗೆ ಯಾವ ನೆಂಟರ ಮನೆಯೂ ಇಲ್ಲ. ಆದರೆ ನನಗೆ ಅತ್ಯಂತ ಇಷ್ಟರಾದ ಅವರ ಮನೆಯೇ ನನಗೆ ಬಂಧುಗಳ ಮನೆ. ಹಾಗೆ ಹೀಗೆ ಹೋಗುವಾಗ ಆಗಾಗ ಅವರ ಮನೆಗೆ ಹೊಕ್ಕು ಮಾತನಾಡಿಸಿಕೊಂಡು ಹೋಗುವುದು ನನ್ನ ರೂಢಿ. ಅವರ ಮನೆಯಲ್ಲಿ ಕೊಡುವ ಚಹಾಕ್ಕೆ ವಿಶೇಷ ಸ್ವಾದವಿದೆ….? ಯಾಕೆಂದರೆ ಅದು ಪ್ರೀತಿಯೆಂಬ ಸಕ್ಕರೆ ಮತ್ತು ಗೌರವವೆಂಬ ಚಹಾಪುಡಿಯಿಂದ ಮಾಡಿದ ಪೇಯ.
ಗಣೇಶ ನನಗೆ ಸಿಕ್ಕ ಮೊದಲಿಗ. ಅದೊಂದು ಟೆಲಿಕಾನ್ಫರೆನ್ಸನಲ್ಲಿ ರಾಜೇಶ, ಗಣೇಶ ಭೇಟಿಯಾಗಿದ್ದರು. ಎಷ್ಟೋ ಕಣ್ಣುಗಳು ಪರಸ್ಪರ ಕೂಡುತ್ತವೆ. ಆದರೆ ಕೆಲವು ಪರಸ್ಪರ ಕಾಡುತ್ತವೆ. ಇಂತಹ ನೂರಾರು ಟೆಲಿಕಾನ್ಫರನ್ಸಗಳು ಆಗುತ್ತವೆ…ಹೋಗುತ್ತವೆ. ಆದರೆ ಈ ರಾಜೇಶ ಮತ್ತು ಗಣೇಶ ನನ್ನ ಆಪ್ತರಾಗಿ ಬಿಟ್ಟರು. ಹೊನ್ನಾವರಕ್ಕೆ ನಾನು ವರ್ಗಾವಣೆ ಆಗಿ ಬಂದ ಕಾಲಕ್ಕೆ ಮತ್ತಷ್ಟು ಹತ್ತಿರವಾದೆವು ನಾವು. ಗಣೇಶ ನನ್ನ ಆತ್ಮೀಯ ಗೆಳೆಯ.
‘ ನಮ್ಮ ಸಂದೀಪ ‘ಎಂದೇ ಹೇಳುವ ಗಣೇಶನ ಮಾತುಗಳು ಬಾಯಿಯಿಂದಷ್ಟೇ ಉಚ್ಛರಿಸಲ್ಪಡುವುದಲ್ಲ. ಹೃದಯದಿಂದ ಬರುವಂತಹುದು. ನಮ್ಮ ಮಧ್ಯೆ ಹಣಕಾಸು, ಬಂಗಾರ, ಆಸ್ತಿ, ಇತ್ಯಾದಿ ವ್ಯವಹಾರಗಳಿಲ್ಲ..ಆತ್ಮೀಯತೆಯೊಂದೇ ನಾವು ಹಂಚಿಕೊಂಡ ಸಂಪತ್ತು.
‌‌ ‌ಗಣೇಶ ಕರ್ಕಿಯ ಸಮೀಪ ಮಂಗಟನಕೇರಿ ಎನ್ನುವಲ್ಲಿ ಕೆಲಸ ಮಾಡುತ್ತಾರೆ. ಮಡದಿಯೂ ಸೌಜನ್ಯಪೂರಿತ ಶಿಕ್ಷಕಿ. ಪ್ರತಿಭಾ ಸಂಪನ್ನ ಮಗಳು. ನಗುವೇ ಇವರೆಲ್ಲರ ಆಭರಣ.
ಗಣೇಶ ಪ್ರಾಮಾಣಿಕ ಶಿಕ್ಷಕ. ತಾನಾಯ್ತು ತನ್ನ ಕೆಲಸವಾಯ್ತು. ಅಲ್ಲಿಲ್ಲಿ ಅಡ್ಡಾಡುವುದು, ಹಾಗೆ ಹೀಗೆ ಇಲ್ಲಸಲ್ಲದ್ದನ್ನು ಬೇರೆಯವರ ಬಗ್ಗೆ ಹೇಳುವುದು…..ಆತನಿಗೆ ಒಗ್ಗದ ವಿಷಯ. ಅದಕ್ಕಾಗಿಯೇ ಗಣೇಶನೆಂದರೆ ನನಗೆ ತುಂಬಾ ಪ್ರೀತಿ. ನಾನಿಷ್ಟು ಪುಸ್ತಕ ಬರೆದಾಗಲೂ ನನ್ನನ್ನು ಅತ್ಯಂತ ಪ್ರೀತಿಯಿಂದ ಪ್ರೋತ್ಸಾಹಿಸಿದ ಗಣೇಶ….ನನ್ನ ಪುಸ್ತಕಗಳನ್ನು ಕೊಂಡು ಓದಿದ ಮನುಷ್ಯ. ಹಣ ಬೇಡ ಗಣೇಶ..ಎಂದರೂ ಪುಸ್ತಕ ಪುಗಸಟ್ಟೆ ಬರತದೇನೋ…. ಅಂತ ನನಗೇ ಗದರಿಸುತ್ತಿದ್ದ. ಗಣೇಶನ ತಮಾಷೆ, ನಗು, ಎಲ್ಲಕ್ಕಿಂತ ಹೆಚ್ಚು ಅವನ ಸರಳತನ ನನಗೆ ತುಂಬಾ ಇಷ್ಟವಾಗುತ್ತದೆ. ಒಳಗೊಂದು ಹೊರಗೊಂದು ಇಲ್ಲದ ವ್ಯಕ್ತಿ ಆತ. ಅಂತಸ್ತಿನ ಮೇಲೆ ಗೆಳೆತನ ಹುಡುಕುವವರಲ್ಲ ನಾವು. ನಿಜ ಹೇಳ ಬೇಕೆಂದರೆ ಹೊಟೆಲ್ಲಿಗೆ ಹೋಗೋಣ…ಚಹಾ ಕುಡಿಯೋಣ…ಸಿನಿಮಾ ನೋಡೋಣ…ಕ್ರಿಕೆಟ್‌ ಆಡೋಣ…ಈ ಗೆಳೆತನವೂ ಅಲ್ಲ…ನಮ್ಮದು. ನಾ ಮುಂದು….ತಾ ಮುಂದು ಎಂದು ಹೋಗದ ಗಣೇಶ ಎಂದೆಂದೂ ನಮ್ಮವ. ನಡುರಾತ್ರಿಯಲ್ಲಿ ನನ್ನನ್ನು ಕರೆದರೂ ನನ್ನ ಗಾಡಿ ಅವನ ಮನೆಯ ಮುಂದೆ ನಿಂತಿರುತ್ತದೆ. ಕಷ್ಟವೆಂದಾಗ ಅವನೂ ಅಷ್ಟೇ. ಗೆಳೆಯರು ಕೆಲವೇ ಕೆಲವರಿದ್ದರೂ ಸಾಕಂತೆ. ಆದರೆ ಒಳ್ಳೆಯವರಿರಬೇಕಂತೆ. ಗಣೇಶನಂತಹ ಸ್ನೇಹಿತರನ್ನು ನನಗೆ ಕಲ್ಪಿಸಿದ ಭಗವಂತನಿಗೆ ನಾನು ಸದಾ ಋಣಿ.
ಇನ್ನು ರಾಮಚಂದ್ರ ಹಳದೀಪುರ. ಹೊನ್ನಾವರದಲ್ಲಿ B.I.E.R.T ಆಗಿ ಕೆಲಸ ಮಾಡುತ್ತಾರೆ. ಗಣೇಶನಿಗೆ ಇವರು ಅಣ್ಣನಾದ್ದರಿಂದ ಗಣೇಶನ ಮೂಲ ಸ್ವಭಾವಗಳೇ ಅಣ್ಣನದೂ. ಆದರೆ ಆರ್.ಎನ್. ಹಳದೀಪುರ ಸಂಪನ್ಮೂಲ ವ್ಯಕ್ತಿಯಾಗಿ ಕೂಡ ಕೆಲಸ ಮಾಡುತ್ತಾರೆ. ಎದುರುಗಿರುವವರು ಯಾರೇ ಪ್ರಶ್ನೆ ಕೇಳಲಿ, ಎಂತಹುದೇ ಪ್ರಶ್ನೆ ಕೇಳಲಿ ಸಿಟ್ಟಿಗೇಳುವ ಸ್ವಭಾವದವರಲ್ಲ ಅವರು. ಗೊತ್ತಿದ್ದುದನ್ನು ಸರಳವಾಗಿ ಹೇಳುತ್ತಾರೆ. ಗೊತ್ತಿಲ್ಲದ್ದನ್ನು ಕೇಳಿ ಹೇಳುತ್ತಾರೆ. ಆರ್.ಎನ್ ಹಳದೀಪುರ ಅವರು ಹೊನ್ನಾವರದ ಪ್ರತಿಭಾವಂತ ಶಿಕ್ಷಕ ಮಿತ್ರರು. ಮಡದಿ ಕೂಡ ಸಾತ್ವಿಕ ಕ್ರಿಯಾಶೀಲ ಶಿಕ್ಷಕಿ. ಮಗ ಈಗಷ್ಟೇ ಬೆಳಕಿಗೆ ಬರುತ್ತಿರುವ ಯುವ ಯಕ್ಷಗಾನ ಕಲಾವಿದ. ವಿದ್ಯಾರ್ಥಿ. ಮುದ್ದಿನ ಪ್ರತಿಭಾಶೀಲ ಮಗಳು ಅಪ್ಪನ ಪಡಿಯಚ್ಚು. ಸಮೃದ್ಧ ಸಂಸಾರ ಅದು.
ಆರ್.ಎನ್. ಹಳದೀಪುರ ಶೈಕ್ಷಣಿಕವಾಗಷ್ಟೇ ಅಲ್ಲ ಆಡಳಿತಾತ್ಮಕವಾಗಿ ಕೂಡ ಅನುಭವವಿದ್ದವರು. School inspection ಇದ್ದಾಗೆಲ್ಲ ಬಹುತೇಕ ಅವರೂ ಒಬ್ಬ ಸದಸ್ಯರಾಗಿ ಇರುತ್ತಾರೆ. ತಾನೇ ಶ್ರೇಷ್ಠ.‌ ತಾನು ಇನ್ನೊಬ್ಬರಿಗೆ ಹೇಳುವುದಕ್ಕಾಗಿಯೇ ಹುಟ್ಟಿ ಬಂದವನೆಂಬ ಯಾವ ಅಹಂಕಾರವೂ ಇಲ್ಲದ ಮನುಷ್ಯ. ಯಾರನ್ನೂ ನೋಯಿಸುವವರಲ್ಲ ಅವರು.
‌ ಈ ಸಹೋದರರು ಇಂದಿಗೂ ಅವಿಭಕ್ತವಾಗಿ ಒಂದೇ ಮನೆಯಲ್ಲಿ ಬಾಳ್ವೆ ಮಾಡುತ್ತಾರೆ. ನನ್ನ ಕಾರ್ಯಕ್ರಮ ನಡೆದಾಗೆಲ್ಲಾ ಅಣ್ಣನಾಗಲೀ ತಮ್ಮನಾಗಲೀ ಖಂಡಿತ ಹಾಜರಿರುತ್ತಾರೆ. ಅಭಿಮಾನ ದೊಡ್ಡದು ಅನುಮಾನಕ್ಕಿಂತ. ಇದ್ದಷ್ಟೂ ಕಾಲ ಪ್ರೀತಿಸುವ ಮನಸ್ಸುಗಳಿಗಾಗಿ ಮನಸ್ಸು ಮಿಡಿಯುತ್ತದೆ. ನೀವೆಂದರೆ ನನಗೆ ಬಹಳ ಪ್ರೀತಿಯೆಂದು ಬಾಯ್ಮಾತಿನಲ್ಲಿ ಹೇಳಿದರೆ ಸಾಲದೆಂಬುದಕ್ಕೆ ಬರೆದೆ. ಅಣ್ಣ ತಮ್ಮಂದಿರ ಕಣ್ಣು ಹುಬ್ಬು ಎಲ್ಲರಿಗಿಂತ ವಿಭಿನ್ನವಾಗಿದೆ.? ಉಳಿದಂತೆ ಇಬ್ಬರೂ ಒಬ್ಬರನ್ನೊಬ್ಬರು ಹೋಲುತ್ತಾರೆ. ಹೀಗಾಗಿ ಅಣ್ಣ ಯಾರು? ತಮ್ಮ ಯಾರು? ಎಂದು ಕಂಡು ಹಿಡಿಯುವುದಕ್ಕೆ ಹೊಸಬರಿಗೆ ಸ್ವಲ್ಪ ಸಮಯ ಹಿಡಿಯುತ್ತದೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಹಳದೀಪುರ ಸಹೋದರರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಜನರ ಆಶೀರ್ವಾದದಿಂದ ಅತೀ ಹೆಚ್ಚು ಅಂತರದ ಗೆಲುವು ನನ್ನದಾಗುವ ವಿಶ್ವಾಸವಿದೆ : ದಿನಕರ ಶೆಟ್ಟಿ

ಶ್ರೀ ರಾಮಚಂದ್ರ ಹಾಗೂ ಗಣೇಶ ಹಳದೀಪುರ ಸರ್ ಅವರಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ