ಮಾಯೆಯೊಂದು ಉರಿಯುವ ದೀಪ.
ಮನುಜನೇ ಪತಂಗ.
ಪತಂಗ ದೀಪದಿ ಬೀಳುವ ತೆರದಿ.
ಮನುಜ ಮಾಯೆಯೊಳಗೆ-ಕಬೀರ.
ಮಾಯಾ ಜಗತ್ತಿನಲ್ಲಿ ನಾವಿದ್ದೇವೆ. ಅದಕ್ಕೇ ಕವಿವಾಣಿಯೊಂದು ಹೇಳಿದ್ದು “ಎಲ್ಲಾ ಮಾಯ ಇಲ್ಲಿ ಎಲ್ಲಾ ಮಾಯಾ” ಅಂತಾ. ಮಾಯೆ ನಮ್ಮನ್ನು ಮುಸುಕಿದೆ. ಮಾಯಾಜಾಲದ ಬಲೆಯೊಳಗೆ ಸಿಕ್ಕು ಹೊರಬರಲಾರದೇ ನಾವು ಒದ್ದಾಡುತ್ತಿದ್ದೇವೆ. ಅಂತಿಮವಾಗಿ ಅಲ್ಲೇ ನಮ್ಮ ಅಂತ್ಯವಾಗುತ್ತದೆ. ಅದನ್ನೇ ಸಂತ ಕಬೀರರು ಈ ದೋಹೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಮಾಯೆಯೆನ್ನುವುದು ಉರಿಯುತ್ತಿರುವ ದೀಪ ಇದ್ದ ಹಾಗೇ…ಮನುಷ್ಯ ಪತಂಗದಂತೆ. ಪತಂಗ ಹೇಗೆ ಉರಿಯುತ್ತಿರುವ ದೀಪದ ಬಳಿ ಹೋಗಿ ತನ್ನನ್ನು ತಾನು ಸುಟ್ಟುಕೊಳ್ಳುತ್ತದೆಯೋ ಹಾಗೆಯೇ ಮನುಷ್ಯ ಮಾಯೆಯೆಂಬ ದೀಪವನ್ನು ಮುತ್ತಿಕ್ಕಲು ಹೋಗಿ ತನ್ನನ್ನು ತಾನು ಸುಟ್ಟುಕೊಳ್ಳುತ್ತಾನೆ ಎಂಬುದು ಕಬೀರರ ಅಭಿಮತ.
ಅದನ್ನೇ ಅಲ್ಲಮ ಪ್ರಭುಗಳು ಹೇಳಿದ್ದು ….. “ಆಸೆಗೆ ಸತ್ತುದು ಕೋಟಿ ಕೋಟಿ.
ಆಮಿಷಕ್ಕೆ ಸತ್ತುದು ಕೋಟಿ ಕೋಟಿ.
ಹೊನ್ನು-ಹೆಣ್ಣು-ಮಣ್ಣಿಂಗೆ ಸತ್ತುದು ಕೋಟಿ ಕೋಟಿ.
ನಿಮಗಾಗಿ ಸತ್ತವರನಾರನೂ ಕಾಣೆ.
.
ಹೊನ್ನು ಮಾಯೆಯೆಂಬರು.
ಹೆಣ್ಣು ಮಾಯೆಯೆಂಬರು.
ಮಣ್ಣು ಮಾಯೆಯೆಂಬರು.
ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ- ಗುಹೇಶ್ವರ.”
ಡಾ.ರವೀಂದ್ರ ಭಟ್ಟ ಸೂರಿ.