ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ರೀಟಾ ಫರ್ನಾಂಡೀಸ್

ಈಗೊಂದು ಎರಡು ಮೂರು ವರ್ಷಗಳ ಹಿಂದೆ ನನಗೆ Facebook ನಲ್ಲಿ ಒಂದು friend request ಬಂತು. Rita Fernandis ಅನ್ನುವವರದಾಗಿತ್ತು ಅದು. ನಾನು ನಾಲ್ಕೈದು ದಿನ confirm ಮಾಡದೇ ಅದನ್ನು ಹಾಗೆಯೇ ಇಟ್ಟಿದ್ದೆ. ಸೋಷಿಯಲ್ ಮಿಡಿಯಾಗಳಿಂದ ಅನೇಕ ಜನ ನಮ್ಮ personal information ಕದಿಯುತ್ತಾರೆಂದು ಕೇಳಿದ್ದ ನನಗೆ ಈ ತರದ ವ್ಯಕ್ತಿಗಳ friendship ಬೇಡವೆನಿಸಿತ್ತು. ( ಕದ್ದರೂ ನನ್ನದೇನಿದೆ ಮಣ್ಣಂಗಟ್ಟಿ ) ಆಗಿಂದಾಗ್ಗೆ delete ಮಾಡುವವನು… ಯಾಕೋ ಗೊತ್ತಿಲ್ಲ ಅದನ್ನು ಹಾಗೆಯೇ ಬಿಟ್ಟಿದ್ದೆ. ಆದರೂ ಈ ‘ರೀಟಾ’ ಎನ್ನುವ ಹೆಸರು ನನಗೆ ಮೊದಲೇ ಪರಿಚಿತವಿತ್ತು. ಆದರೆ ನನಗೆ ಪರಿಚಿತವಿದ್ದವಳು ‘ರೀಟಾ ಡುಮಿಂಗ್ ಡಿಸೋಜಾ’… ಹೀಗಾಗಿ ಈ ‘ರೀಟಾ ಫರ್ನಾಂಡೀಸ್’ ನನಗೆ ಅಪರಿಚಿತಳಾಗಿದ್ದಳು. ಆದರೂ ಅವಳ profile photo ಒತ್ತಿ ನೋಡಿದೆ. ನಮ್ಮ ರೀಟನ ಯಾವ ಲಕ್ಷಣಗಳೂ ನನಗೆ ಕಾಣಲಿಲ್ಲ. ನಮ್ಮದೇ ‘ರೀಟಾ’ ಅಂತ sixth sense ಹೇಳಿದ ಹಾಗಾಯ್ತು. o.k ಅಂತ confirm ಕೊಟ್ಟೆ. ತಕ್ಷಣ ನನಗೆ messenger ನಲ್ಲಿ ಒಂದು ಮೆಸೇಜ್ ಬಂತು.
“Hai Sandeep…How are you?” ಅಂತ.
“ನಾನು ರೀಟಾ classmate” ಅಂದಳು. ಅಯ್ಯೋ! ಅವಳು ನಮ್ಮದೇ ‘ರೀಟಾ’ ನನ್ನ ಜೊತೆಯಲ್ಲಿ 12 ವರ್ಷ ಪುಸ್ತಕ ಹೊತ್ತ ‘ರೀಟಾ ಡುಮಿಂಗ್ ಡಿಸೋಜಾ’.
ರೀಟಾಳ ಅಪ್ಪನಮನೆ ಇಲ್ಲೇ ಹೊನ್ನಾವರ ತಾಲೂಕಿನ ಅರೆ ಅಂಗಡಿ. ಅವಳು ನಾನು ಒಟ್ಟಿಗೆ ಸಂತೇಗುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದವರು. ರೀಟಾಳ ಅಪ್ಪ ಡುಮಿಂಗ್. ನಾವು ಅವನಿಗೆ ‘ದುಮಗ’…. ‘ದುಮಗ’… ಅಂತ ಕರೆಯುತ್ತೇವೆ.?. ಕಲ್ಲು ಮತ್ತು ಗಾರೆ ಕೆಲಸ ಮಾಡುವ ದುಮಗ ನಮ್ಮ ಮನೆಯನ್ನು 1995 ರಲ್ಲಿ ಸಂಪೂರ್ಣವಾಗಿ ಕಟ್ಟಿ ಕೊಟ್ಟಿದ್ದಾನೆ. ಅತ್ಯುತ್ತಮ ಕೆಲಸಗಾರನಾದ ‘ದುಮಗ’ ನಮ್ಮ ಮನೆಯಲ್ಲೊಂದು ತುಳಸಿ ಕಟ್ಟೆ ಮಾಡಿದ್ದಾನೆ. ಅದು ಬಹಳ ಚಂದ ಹಾಗೂ ಮಾದರಿ. ರೀಟಾ ದುಮಗನ ಮಗಳು. ರೀಟಾ ಡುಮಿಂಗ್ ಡಿಸೋಜಾ ಅಂದರೆ….ಹರಕು.. ಮಣ್ಣು ಹಿಡಿದ ಸ್ಕರ್ಟ…., ಪ್ಲಾಸ್ಟಿಕ್‌ ಕೊಟ್ಟೆಯಲ್ಲಿ ಹರಿದ ನಾಲ್ಕಾರು ನೋಟ್ ಬುಕ್ ಮತ್ತು ಪುಸ್ತಕಗಳು, ತುಕ್ಕು ಹಿಡಿದ ಹಳೇ ಲಟಕಾ ಕಂಪಾಸು ಪೆಟ್ಟಿಗೆ ಇಷ್ಟು ನನ್ನ ಕಣ್ಮುಂದೆ ಕಟ್ಟುತ್ತದೆ. ‘ಕಡು ಬಡವರು’ ಎಂಬ ಪದಕ್ಕೆ ವ್ಯಾಖ್ಯಾನವೇ ನಮ್ಮ ರೀಟಾ. ದುಮಗ ದುಡಿದದ್ದನ್ನೆಲ್ಲಾ ಕುಡಿದು ಕಳೆಯುವವನು. ಅವರು ಹೇಗೆ ಬೆಳೆದು ದೊಡ್ಡವರಾದರೋ…?! ಏಸುವಿನ ಲೀಲೆ.
‌ಈ ರೀಟಾಳಿಗೆ ಶಾಲೆಯಲ್ಲಿ ಅಷ್ಟೇನೂ ಬರುತ್ತಿರಲಿಲ್ಲ. ಅದಾಗಲೇ A.B.C.D ಕಲಿತು ನಾಲ್ಕು ಲೆಕ್ಕಗಳನ್ನು ಕಲಿತಿದ್ದ ನಾನು ಇಂಥವರಿಗೆಲ್ಲಾ ಲೀಡರ್. ಅವರ ಶುದ್ಧಬರಹ ಪಟ್ಟಿಗಳನ್ನು ನೋಡುವುದು, ಲೆಕ್ಕ ಹಾಕುವುದು, ಓದಿಸುವುದು, ಬರೆಸುವುದು, spelling ಕೇಳುವುದು, ಮಾತಾಡಿದವರ ಹೆಸರನ್ನು ಬೋರ್ಡಿನ ಮೇಲೆ ಬರೆಯುವುದು…ಒಂದು ಲೆಕ್ಕಕ್ಕೆ ನಾನು ರೀಟಾಳಿಗೆ class mate ಹೇಳುವುದಕ್ಕಿಂತ ನಾನೇ ಒಬ್ಬ ಟೀಚರ್. ? ಅಂತಹ ರೀಟಾ ಡುಮಿಂಗ್ ಡಿಸೋಜಾ ನನ್ನ ಜೊತೆಯಲ್ಲಿ ಪಿ.ಯು.ಸಿ ವರೆಗೂ ಕಲಿತಳು. ಸಿಂಬಳ ಸುರಿಸಿಕೊಂಡು, ಒರೆಸಿಕೊಂಡು ಬರುತ್ತಿದ್ದ ಹುಡುಗಿ ಸುಮಾರು 15 ವರ್ಷ ಕಳೆದ ಮೇಲೆ ಹೀಗೆ ಏಕಾಏಕಿ ಹಿರೋಯಿನ್ ಹಾಗೆ ಪ್ರತ್ಯಕ್ಷವಾದರೆ ಯಾರಿಗೆ ತಾನೆ ಆಶ್ಚರ್ಯ ಆಗುವುದಿಲ್ಲ ಹೇಳಿ?!
Friend request ಕಳಿಸಿದ ದಿನವೇ ರಾತ್ರಿ ನನಗೊಂದು abroad call ಬಂತು.
” ಹಲೋ ಸಂದೀಪ್….ನಾನೋ ರೀಟಾ….”

RELATED ARTICLES  ಬದುಕಿಗೆ ಬಣ್ಣ ತುಂಬಿದವರು

“ಓ ರೀಟಾ ಹೆಂಗಿದಿಯಾ?!”

“ನಾನು ಚೆನ್ನಾಗಿ ಇದೀನೋ ನೀ ಹೇಗಿದೀಯಾ?”

“ಅಯ್ಯೋ ನಾ ಚೆನ್ನಾಗಿ ಇದೀನೇ….ಎಲಿದ್ದೀ ಈಗ?!”

“ಇಸ್ರೇಲ್!”??

ಕಂಗಾಲಾಗಿ ಹೋದೆ ನಾನು. ಸುಮಾರು ಅರ್ಧ ಗಂಟೆ ನಾನು ನಮ್ಮ ರೀಟಾ ಮಾತನಾಡಿದೆವು. ಸಂತೋಷದಿಂದ ಬಾಲ್ಯದ ದಿನಗಳನ್ನು ನೆನೆಸಿಕೊಂಡೆವು.
ನಮ್ಮ ರೀಟಾ ಇಸ್ರೇಲಿನಲ್ಲಿ care taker ಆಗಿ work ಮಾಡತಾಳೆ. ಗಂಡನ ಮನೆ ಇಲ್ಲೇ ಕರ್ಕಿ ಹತ್ತಿರ ತೊಪ್ಪಲಕೇರಿ. ಎರಡು ಮುದ್ದಾದ ಗಂಡು ಮಕ್ಕಳು ಕಲಿಯುತ್ತಿದ್ದಾರೆ. ನಾನು ಇನ್ನೂ ಇದೇ ಊರಿನಲ್ಲಿ ಎ.ಬಿ.ಸಿ.ಡಿ ಕಲಿಸುತ್ತಲೇ ಇದ್ದೇನೆ..???? ಅವಳು ವಿದೇಶಕ್ಕೆ ಹೋಗಿ ಹಿಬ್ರೂ English ಮಾತನಾಡುತ್ತಾಳೆ.
ನಮ್ಮ ರೀಟಾಳ ಬಗ್ಗೆ ಬಹಳ ಅಭಿಮಾನ ಹಾಗೂ ಅತ್ಯಂತ ಅಕ್ಕರೆಯಿಂದ ಈ ಲೇಖನ ಬರೆಯುತ್ತಿದ್ದೇನೆ. ಇಲ್ಲಿನ ಅಕ್ಷರಕ್ಷರಗಳೂ ಸತ್ಯ.ಸತ್ಯ.ಸತ್ಯ. ಇದು ಯಾವುದೇ ಕಟ್ಟು ಕಥೆಗಳ ಕಲ್ಪನಾ ಲೋಕವಲ್ಲ. ನನ್ನ ನೆನಪಿನ ಹೂರಣಗಳಷ್ಟೇ.
ನಮ್ಮ ರೀಟಾ ಇಸ್ರೇಲಿನಿಂದ ಬರುವಾಗ “ಸಂದೀಪ ಏನು ತರಲಿ?” ಎಂದು ಕೇಳಿದಳು. ನಾನು ಅವಳಿಗೆ “ಒಂದು ಪೆನ್ನನ್ನೂ ಮತ್ತು ಅಲ್ಲಿನ ನಾಣ್ಯಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದ್ದೆ. ರೀಟಾ ಇಸ್ರೇಲಿನಿಂದ ಬಂದವಳೇ ಗಂಡನ ಸಮೇತ ನನ್ನನ್ನರಿಸಿಕೊಂಡು ನಮ್ಮನೆಗೇ ಬಂದು ನನಗೆ ನಾಣ್ಯಗಳನ್ನು ಅತ್ಯಂತ ಪ್ರೀತಿಯಿಂದ ಕೊಟ್ಟಳು. ಒಂದು ನೋಟನ್ನೂ ನೀಡಿದಳು. ನಾನು ತಕ್ಷಣಕ್ಕೆ ಅದರ ಭಾರತೀಯ ಬೆಲೆ ಎಷ್ಟೆಂದು ಕೇಳಿದೆ? ಅದು ಸರಿ ಸುಮಾರು 2000 ರೂ ಬೆಲೆ ಬಾಳುವಂತಹುದು. ಪಾ….ಪ. ಅವಳ ಸ್ನೇಹ ಎಷ್ಟು ಪವಿತ್ರವಾದದ್ದು ಎಂದರೆ ಕಷ್ಟದ ಪರಿಸ್ಥಿತಿಯಲ್ಲೂ ಅವಳು ನನಗೆ ಪ್ರೀತಿಯಿಂದ ಆ ನೋಟನ್ನು ನೀಡಿದಳು. ನಾನು ನೋಡಿ ನಯವಾಗಿ ತಿರಸ್ಕರಿಸಿದೆ. ನಾಣ್ಯಗಳನ್ನು ಮಾತ್ರ ಸ್ವೀಕರಿಸಿದೆ. ಇಸ್ರೇಲಿನ ಸಂಪೂರ್ಣ ವಿವರ ನೀಡಿದಳು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವಳನ್ನು ನಾನು ಸಂದರ್ಶನ ಮಾಡಿದೆ. ಪ್ರೀತಿಯಿಂದ ಅವಳಿಗೆ ಆತಿಥ್ಯ ಮಾಡಿದೆ. ನಮ್ಮ ‘ರೀಟಾ ಡುಮಿಂಗ್ ಡಿಸೋಜಾ’ ‘ರೀಟಾ ಫರ್ನಾಂಡೀಸ್’ ಆದ journey ಅದ್ಭುತ….ಅಮೋಘ.
ಗೆಳೆತನ ಎಂದರೆ ಹೀಗೆಲ್ಲಾ…..ಇರುತ್ತದೆ. ಭಗವಂತ ನನಗೆ ಎಂತಹ ಅದ್ಭುತ ಸ್ನೇಹಿತರನ್ನು ಕೊಟ್ಟ. ಅವನಿಗೆ ನಾನು ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ. ರೀಟಾಳ ಬಗ್ಗೆ ಬರೆದು ನನ್ನ ಲೇಖನಿಯೂ ಧನ್ಯವಾಯಿತು. ಲೇಖನವೂ ಶ್ರೀಮಂತವಾಯಿತು.
ಬದುಕಿನಲ್ಲಿ ಯಾರು ಏನಾಗುತ್ತಾರೆ? ಯಾರ ಜೀವನದಲ್ಲಿ ಏನು ಸಂಭವಿಸುತ್ತದೆ? ಎಂಬುದನ್ನು ಊಹಿಸಲಾಗದು. ನಮ್ಮ ರೀಟಾ ಬದುಕಿನ ಬಂಡಿ ಸಾಗಿಸಲು ವಿದೇಶದಲ್ಲಿದ್ದು ಮಕ್ಕಳನ್ನು ಓದಿಸುತ್ತಿದ್ದಾಳೆ. ಅವಳ ಜೀವನ ಖುಷಿಯಾಗಿರಬೇಕು. ಏಸುವಿನ ಕೃಪೆ ಅವಳನ್ನು ಸದಾ ಕಾಯಬೇಕು.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ರೀಟಾ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಏಕೋಹಂ ಬಹುಸ್ಯಾಮ್ (ಸದ್ಗುರು ಶ್ರೀಧರ ಸಂದೇಶ)

ರೀಟಾಳಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ