ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ಹೆಚ್.ಪಿ.ಕಲ್ಲಂಭಟ್
ನನ್ನ 25 ನೇ ಸಂಚಿಕೆಯನ್ನು ಇಂತಹ ಒಬ್ಬ ಸರ್ವಶ್ರೇಷ್ಠ ವ್ಯಕ್ತಿಯೋರ್ವರಿಗೆ ಅರ್ಪಿಸುತ್ತಿರುವುದು ನನಗೆ ಎಲ್ಲಿಲ್ಲದ ಹೆಮ್ಮೆಯ ವಿಷಯ. ಹೊಸಪೇಟೆಯ ‘ಚಿನ್ನದ ಚೂರು’ ಎಂದೇ ಕರೆಸಿಕೊಂಡ, ನೂರಾರು ಸಾರ್ವಜನಿಕ ಸನ್ಮಾನಗಳಿಗೆ ಅರ್ಹವಾಗಿಯೇ ಕೊರಳೊಡ್ಡಿದ, ಶೃಂಗೇರಿ ಜಗದ್ಗುರುಗಳಾದಿಯಾಗಿ ಹಲವಾರು ಮಠಾಧೀಶರುಗಳಿಂದ ಶುಭಾಶೀರ್ವಾದ ಹೊಂದಿದ, ಡಾ|| ಶಿವರಾಮ ಕಾರಂತ, ಡಾ|| ಪಿ.ಬಿ.ಶ್ರೀನಿವಾಸ, ಡಾ|| ಎಂ.ಪಿ.ಶಂಕರರಂತಹ ಅತಿರಥ, ಮಹಾರಥರನೇಕರಿಂದ ಪ್ರಶಂಸೆಗೆ ಪಾತ್ರರಾದ ಸಂಗೀತ ಭಾರತಿ ಸಂಸ್ಥೆಯ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ, ಕಲಾವಿದ, ಹಾಡುಗಾರ, ವಕೀಲ, ನಾಡಿನ ಅತ್ಯುತ್ತಮ ಸಂಘಟಕ ಶ್ರೀ ಹೆಚ್.ಪಿ.ಕಲ್ಲಂಭಟ್ಟರು ನನ್ನ ಇಂದಿನ ಅಕ್ಷರ ಅತಿಥಿ.
ಅವತ್ತೊಂದಿನ ನಾನು ನನ್ನ ಕಂಪ್ಯೂಟರ್ ಎದುರಿಗೆ ಕುಳಿತು ಏನೋ ಬರೆಯುತ್ತಿದ್ದೆ. ಅಷ್ಟು ಹೊತ್ತಿಗೆ ಹೊಸಪೇಟೆಯಿಂದ ಒಂದು call ಬಂತು. “ಸಂದೀಪ ಭಟ್ಟ ಅವರಾ…… ನಾನು ಹೊಸಪೇಟೆಯ ನೋಟರಿ ವಕೀಲರಾದ ಹೆಚ್.ಪಿ.ಕಲ್ಲಂಭಟ್ ಅಂತ. ಇಂದು ನಿಮ್ಮ ಕರಗಿಹೋದ ಕ್ಷಣ ಕವನ ಸಂಕಲನ ಓದಿದೆ….ಸಂದೀಪ್…..ನೀವು ನಿಜವಾಗಿ ನಿಮ್ಮ ಸಣ್ಣ ವಯಸ್ಸಿಗೇ ಮಹತ್ಸಾಧನೆ ಮಾಡುತ್ತಿದ್ದೀರಿ.” ಎಂದು ಬಾಯ್ತುಂಬ ಹೊಗಳಿದರು. ಅವರು ಹೊಸಪೇಟೆಯಿಂದ call ಮಾಡಿ ಶ್ಲಾಘಿಸುತ್ತಿರುವಾಗ ಸಹಜವಾಗಿ ನಾನು ಆರಡಿ ಇದ್ದವ ಎಂಟಡಿ ಆದೆ. ಅವರ ಮಾತುಗಳನ್ನು ಶೃದ್ಧೆಯಿಂದ ಆಲಿಸಿ ಅಭಿಮಾನಕ್ಕೆ ಕೃತಜ್ಞತೆ ಅರ್ಪಿಸಿದೆ.
ನಿಜ ಹೇಳಲಾ…..ಇತ್ತೀಚೆಗೆ ಕವನ ಬರೆಯುವವರು ವಿಪರೀತ ಆಗಿದ್ದಾರೆ. ಕವನ ಓದುವವರು ತುಂಬಾ ಕಡಿಮೆ ಆಗಿದ್ದಾರೆ. ಮನಸ್ಸಿಗೆ ತೋಚಿದಂತೆ ಯರ್ರಾಬಿರ್ರಿ ಬರೆದುಕೊಂಡು ಹೋಗುವವರ ನಡುವೆ ನಿಜವಾದ ಸತ್ವವಿರುವ ಕವಿಗಳೂ ಕಳೆದು ಹೋಗಿದ್ದಾರೆ. ಯಾವುದಾದರೂ ಪ್ರಕಾಶಕರ ಹತ್ತಿರ ನನ್ನದೊಂದು ಕವನ ಸಂಕಲನ ಮಾಡಿಕೊಡುತ್ತೀರಾ? ಎಂದು ಕೇಳಿದರೆ ದಯವಿಟ್ಟು ಅದನ್ನೊಂದು ಬಿಟ್ಟು ಬೇರೆ ಏನಾದರೂ ಇದ್ದರೆ ಕಳಿಸಿ ಎನ್ನುತ್ತಾರೆ.?? ಇದನ್ನು ಸ್ವತಃ ಅನುಭವಿಸಿರುವ ನಾನು ನನ್ನ ಆಪ್ತ ಶಿಕ್ಷಕ ಮಿತ್ರ ಡಿ.ಜಿ.ಪಂಡಿತರ ಸಲಹೆಯಂತೆ 21 ಪುಸ್ತಕಗಳಲ್ಲಿ ಒಂದೇ ಒಂದು ಕವನ ಸಂಕಲನ ಹೊರತಂದೆ. ಅದು ಸಾಹಿತಿಯಾದವ ಕವಿಯೆನಿಸಿಕೊಳ್ಳುವುದಕ್ಕಾಗಿ ಮಾತ್ರ. ಅದನ್ನು ಶ್ರೀ ಸೀತಾರಾಮ ಹೆಗಡೆಯವರು ನನ್ನ ಒತ್ತಾಯದ ಅಪೇಕ್ಷೆಗಾಗಿ ಪ್ರಕಟಿಸಿದರು. ಅದು ವಿಜಯ ನಗರ ಸಾಮ್ರಾಜ್ಯ ಸೇರಿ ಅಲ್ಲಿ ಕಲ್ಲಂಭಟ್ಟರಂತಹ ವ್ಯಕ್ತಿಗಳು ಓದಿ ನನಗೆ ದೂರವಾಣಿ ಕರೆ ಮಾಡುತ್ತಾರೆಂದರೆ ನಾನು ಎಷ್ಟು ಜನ್ಮಗಳ ಪುಣ್ಯವಂತ ಎಂದು ನನ್ನ ಮನಸ್ಸಿನೊಳಗೇ ನಗು ಬರುತ್ತಿತ್ತು. ಕಲ್ಲಂ ಭಟ್ಟರು ನನ್ನ ಕವನಗಳನ್ನು ಓದುತ್ತಿದ್ದರೆ ಅದು ನಾನೇ ಬರೆದಿದ್ದಾ?! ಎಂಬ ಸಂಶಯ ಮೂಡುತ್ತಿತ್ತು.??
ಇಷ್ಟಾದ ಮೇಲೆ ಸುಮಾರು ಮೂರ್ನಾಲ್ಕು ತಿಂಗಳು ಕಳೆದಿರಬಹುದು. ನಾನು ಮುರುಡೇಶ್ವರದ ಜನತಾ ವಿದ್ಯಾಲಯಕ್ಕೆ ಉಪನ್ಯಾಸಕನಾಗಿ ಹೋಗಿದ್ದೆ. ಉಪನ್ಯಾಸ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಹಲವು ಗಂಟೆಗಳಿಂದ ತಟಸ್ಥವಾಗಿದ್ದ ನನ್ನ Wats app open ಮಾಡಿದರೆ ಅದರಲ್ಲಿ ನನಗೆ ಅಭಿನಂದನೆಗಳ ಮಹಾಪೂರ ಹರಿದಿತ್ತು. ಹೀಗೆ ನೋಡಿದರೆ….. ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆ ಮತ್ತು ಆದಿಗುರು ಶಂಕರಾಚಾರ್ಯ ಸಾಹಿತ್ಯ ಪರಿಷತ್ತು ನನಗೆ ಸಾಹಿತ್ಯ ಸೇವಾ ದುರಂಧರ ಬಿರುದು ನೀಡಿ ರಾಜ್ಯ ಮಟ್ಟದ ಸಮಾಜಸೇವಾ ಭಾರ್ಗವ ಪ್ರಶಸ್ತಿ ನೀಡುವುದಾಗಿ ಕಲ್ಲಂಭಟ್ಟರಿಂದ ಒಂದು message ಬಂದಿತ್ತು. ಪರಮಾಶ್ಚರ್ಯವಾಗಿ ಹೋಯಿತು. ಸರ್ ನನಗೆ ನಿಮ್ಮ ಪ್ರೀತಿ ಅಭಿಮಾನ ಸಾಕೆಂದೂ ನಾನು ಶಾಲು ಹಾರಗಳ ಮೇಲೆ ಆಸೆ ನಂಬಿಕೆಗಳನ್ನು ಇಟ್ಟ ಮನುಷ್ಯನಲ್ಲವೆಂದರೂ ಕಲ್ಲಂಭಟ್ಟರ ಗೌರವಕ್ಕೆ ಮಣಿದೆ. ಹೊಸಪೇಟೆಗೆ ಹೋದೆ.
ಹೊಸಪೇಟೆಯ ಅನುಭವವಂತೂ ಅದು ಅಕ್ಷರಗಳಿಗೆ ನಿಲುಕದ್ದು. ಬೆಳಿಗ್ಗೆ ಗೆಳೆಯ ಕರಿಬಸಪ್ಪರೊಂದಿಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಅದ್ಭುತ ಐತಿಹಾಸಿಕ ನೆನಪುಗಳ ರಸವನ್ನುಂಡ ನನಗೆ ಸಂಜೆ ಸಂಗೀತ ನೃತ್ಯಗಳ ರಸದೌತಣ. ಪ್ರಪ್ರಥಮ ಬಾರಿಗೆ ಕಲ್ಲಂಭಟ್ಟರನ್ನು ಮುಖತಃ ಭೇಟಿಯಾದೆ. ನನ್ನನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ ತನ್ನ ಬಳಗಕ್ಕೆಲ್ಲಾ ನನ್ನನ್ನು ಪರಿಚಯಿಸಿದರು. ಶ್ವೇತ ವಸ್ತ್ರಧಾರಿಯಾಗಿ ಚಟುವಟಿಕೆಯಿಂದ ಇಡೀ ಕಾರ್ಯಕ್ರಮವನ್ನು ನಿರೂಪಿಸಿದ ಪರಿ ಅಮೋಘವಾದದ್ದು.
ಕಲ್ಲಂಭಟ್ಟರು ತಂದೆಯವರ ಅಪೇಕ್ಷೆಯಂತೆ ನಾಡಿನ ಅನೇಕ ಕಡೆಯಿಂದ ಪ್ರತಿಭಾವಂತರನ್ನು ಕರೆಸಿ ಸಂಗೀತ ಭಾರತಿ ಸಂಸ್ಥೆಯಿಂದ ಆತ್ಮೀಯವಾಗಿ ಗೌರವಿಸುವ ಪರಿಪಾಠ ಇಟ್ಟುಕೊಂಡಿದ್ದಾರೆಂದು ಕೇಳಪಟ್ಟೆ. ಕಲ್ಲಂಭಟ್ಟರು ಮತ್ತು ಅವರ ಮೂರು ಜನ ಸಹೋದರರು ತಮ್ಮ ಉತ್ಪಾದನೆಯ 1/4 ರಷ್ಟನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಎಂಬ ವಿಷಯ ತಿಳಿದು ರೋಮಾಂಚನವಾಯಿತು. ಹಿನ್ನಲೆ ಸಂಗೀತದ ಜೊತೆ ಕಲ್ಲಂಭಟ್ಟರು ಆಕಾಶವಾಣಿಯ ಧ್ವನಿಯಲ್ಲಿ ನಿರೂಪಿಸುತ್ತಿದ್ದರೆ ನನಗದು ಹೊಸ ಪ್ರೇರಣೆ ನೀಡಿತು. ನನ್ನನ್ನು ಗೌರವಿಸಿ ನೀವೊಬ್ಬ ಸಾಧಕರೆಂದು ಕಲ್ಲಂಭಟ್ಟರು ಹೇಳುವಾಗ ಅವರ ಆಶೀರ್ವಾದದ ಶ್ರೀರಕ್ಷೆಯೇ ನನಗೆ ಅತ್ಯುನ್ನತ ಪ್ರಶಸ್ತಿ ಎನಿಸಿತು.
ಅವರು ಎಷ್ಟೋ ಎಷ್ಟೋ ವಿ.ವಿ.ಐ.ಪಿ ಗಳ ಸಂಪರ್ಕ ಇರುವವರು. ಅವರ ಜೊತೆ ಅವರನ್ನು ನೆಚ್ಚಿಕೊಂಡ ಮೆಚ್ಚಿಕೊಂಡ ಅಭಿಮಾನಿ ಬಳಗವೇ ಇದೆ. ಇಷ್ಟಿದ್ದೂ ಅತ್ಯಂತ ಕಿರಿಯನಾದ, ಸಾಮಾನ್ಯನಾದ ನನ್ನನ್ನೂ ಕರೆದು ಗೌರವಿಸುತ್ತಾರೆ ಎಂದರೆ ಅದು ಅವರ ದೊಡ್ಡತನವಲ್ಲದೇ ಮತ್ತೇನು?!
ಶೃಂಗೇರಿ ಜಗದ್ಗುರುಗಳ ದಿವ್ಯಾನುಗ್ರಹದಿಂದ ನನಗೆ ಸಿಕ್ಕ ಧೀಮಂತ ವ್ಯಕ್ತಿ ಅವರು ಎಂದೇ ನಾನು ಪರಿಭಾವಿಸುತ್ತೇನೆ. ವ್ಯಕ್ತಿ ಎಷ್ಟೇ ಎತ್ತರಕ್ಕೇರಿದರೂ ವಿನಯವಂತನಾಗಿರಬೇಕು ಎಂಬುದನ್ನು ಅವರನ್ನು ನೋಡಿ ಕಲಿಯಬೇಕು. ಅವರಿಗೆ ನೀಡಿದ ಅಭಿನಂದನಾ ಗ್ರಂಥ ಓದಿ ಮುಗಿಸುವ ಹೊತ್ತಿಗೆ ಕಲ್ಲಂಭಟ್ಟರೆಂಬುದು ವ್ಯಕ್ತಿಯಲ್ಲ ಇದೊಂದು ಅದ್ಭುತ ಶಕ್ತಿ ಎಂಬುದರ ಅರಿವಾಯಿತು. ಅವರ ಬಗೆಗೆ ಅನೇಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ರೀತಿ ಅವರು ನಾಡಿನ ಒಬ್ಬ ಶ್ರೇಷ್ಠ ಹೃದಯವಂತ ಎಂಬುದನ್ನು ದೃಢೀಕರಿಸಿತು.
ನನ್ನ ಪುಸ್ತಕ ಓದಿ ವಿಶ್ಲೇಷಿಸಿ ನನ್ನನ್ನು ಹಾರೈಸಿ ಬೆನ್ನು ತಟ್ಟುವ ಕಲ್ಲಂ ಭಟ್ಟರಿಗೆ ಅಭಿನಂದನೆ ಹೇಳುವುದಕ್ಕೆ ನನ್ನ ಅಕ್ಷರಗಳು ಸೋಲುತ್ತವೆ. ನನಗೊಂದು ರಾಜ್ಯಪ್ರಶಸ್ತಿ ನೀಡಿದರೆಂಬ ಕಾರಣಕ್ಕೆ ನಾನು ಅವರನ್ನು ಉತ್ಪ್ರೇಕ್ಷೆಯಾಗಿ ಹೊಗಳುವುದರಲ್ಲಿ ಅರ್ಥವೂ ಇಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಯಾವ ವ್ಯಕ್ತಿಗಳಿಂದ ನಾನೇನು ಹೊಸತನ್ನು ಕಲಿಯಬಲ್ಲೆ ಎಂಬುದೇ ನನ್ನ ಆಕಾಂಕ್ಷೆಯಾಗಿರುತ್ತದೆ.
ಕಲ್ಲಂಭಟ್ಟರ ಈ ಸಮಾಜ ಸೇವೆಯನ್ನು ಸರ್ಕಾರ, ಸಂಘ ಸಂಸ್ಥೆಗಳು ಗುರುತಿಸಿ ಅವರಿಗೆ ಶ್ರೇಷ್ಠತಮ ಗೌರವವನ್ನಿತ್ತು ಸನ್ಮಾನಿಸಲೆಂಬ ಬಯಕೆ ನನ್ನದು. ಅದರಿಂದ ಅವರಿಗೇನಾಗುತ್ತದೆ ಎಂಬುದಕ್ಕಿಂತ ಸಮಾಜದ ನಿಜವಾದ ಸೇವೆ ಮಾಡುವವರಿಗೆ ಇದು ಮುಂದೆ ಸ್ಫೂರ್ತಿ ಆಗುತ್ತದೆ. ಕಲ್ಲಂ ಭಟ್ಟರ ಬಹುಮುಖ ಪ್ರತಿಭೆಗೆ ನನ್ನದೊಂದು ಸಲಾಂ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಕಲ್ಲಂಭಟ್ಟರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಶ್ರೀ ಕಲ್ಲಂ ಭಟ್ಟರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ