ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ತಿಗಣೇಶ ಮಾಗೋಡ

ತನ್ನೊಳಗೆ ಅಗಾಧ ಕವಿತ್ವವನ್ನು ಹುದುಗಿಸಿಕೊಂಡ ಅಪರೂಪದ ಶ್ರೇಷ್ಠ ಕವಿ, ತಕ್ಷಣಕ್ಕೆ ನೂರಾರು ಸಾಲುಗಳನ್ನು ಅರ್ಥಭರಿತವಾಗಿ ಗೀಚಬಲ್ಲ ಮೋಡಿಗಾರ, ವಾಕ್ಚತುರ, ಶ್ರಮ ಜೀವಿ, ಅಂಕಣಕಾರ, ಸುಸಂಸ್ಕೃತ ಮದ್ದಳೆಗಾರ ಮಾಗೋಡ ತಿಮ್ಮಣ್ಣ ಹೆಗಡೆಯವರ ಮಗರಾಯ ತಿಮ್ಮಣ್ಣ ಗಣೇಶ…..ತಿಗಣೇಶರಿಗೆ ಅಂತಃಕರಣದ ಅಭಿನಂದನೆ ಸಲ್ಲಬೇಕು.

‌‌‌‌‌ ಹೃದಯದೊಳಗಿರುವ ಮಾತನ್ನು ನುಂಗದೇ ಎದೆಗೊಡ್ಡಿ ಹೇಳುವ ತಿಗಣೇಶರು ನಮ್ಮ ನಾಡು ಮೆಚ್ಚುವ ಶ್ರೇಷ್ಠ ಕವಿ. ಅವರ ಕಲ್ಪನಾ ಲಹರಿ, ಅವರ ಭಾಷೆ, ಲಯ, ಸಂದೇಶ ನಿಜಕ್ಕೂ ಅವರು ಕವಿತೆಗಳ ಮಟ್ಟಿಗೆ ಕಾವ್ಯ ಸರಸ್ವತಿಯೇ ಒಲಿದು ನಿಂತ ಮನುಷ್ಯ. ಹಾಗಂತ ಅವರ ಲೇಖನಗಳೂ ಅಷ್ಟೇ ಮಜಾ ಕೊಡುತ್ತವೆ. ಅವರ ಪುಸ್ತಕಗಳ ತಲೆ ಬರಹವೇ ವಿಭಿನ್ನ. ನಾನು ಭ್ರಷ್ಟಾಚಾರಿ, ಕುರುಡುಮೃಗ, ನೂರುನುಚ್ಚು, ನೀರಲ್ಲಿ ಕಳೆದ ಮೀನು…ಈ ತರಹದ ವಿಭಿನ್ನ ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ತಿಗಣೇಶರು ಅನನ್ಯ….ಅಸಾಮಾನ್ಯ.
ಬದುಕಿನ ಬಂಡಿ ಸಾಗಿಸಲು ಕುಮಟಾ ಬಸ್ ಸ್ಟಾಂಡ ಸಮೀಪ ಸಂಚಾರಿ ಉಪಹಾರ ವಾಹನ ನಿಲ್ಲಿಸಿಕೊಂಡು ರಸ್ತೆ ಬದಿ ವ್ಯಾಪಾರ ನಡೆಸುವ ತಿಗಣೇಶರಿಗೆ ಅವರ ಅರ್ಧಾಂಗಿ ಕಷ್ಟ ಸುಖಗಳಲ್ಲಿ ಸಮಭಾಗಿಯಾಗಿ ಸಂತೋಷದಿಂದ ದುಡಿಯುತ್ತಾಳೆ. ಬೆಳಕು ಹರಿಯುವುದರೊಳಗೆ ತಿಂಡಿಗಳನ್ನು ಸಿದ್ಧಪಡಿಸಿಕೊಂಡು ಸೂರ್ಯ ಮೂಡುವುದರೊಳಗೆ ಕೆಲಸಕ್ಕೆ ಹಾಜರಾಗುವ ತಿಗಣೇಶಣ್ಣ ನೋವು ನುಂಗಿ ನಲಿವು ಹಂಚುವ ಮನುಷ್ಯ. ತಮ್ಮ ಮಗನ ಓದಿಗಾಗಿ ಶ್ರಮವಹಿಸಿ ದುಡಿಯುವ ದಂಪತಿಗಳಿಗೆ ಕೀರ್ತಿಶಾಲಿ ಮಗನೇ ಅವರ ಬದುಕಿನ ಆಶಾಕಿರಣ.
ಸಂದೇಶ ಮಂಟಪ ಎನ್ನುವ ಹರಟೆ ತಂಡ ಕಟ್ಟಿ ನಾಲಿಗೆ ಚಪ್ಪರ ಎನ್ನುವ ಹೆಸರಿನಲ್ಲಿ ನಮ್ಮನ್ನೆಲ್ಲಾ ಬೇರೆ ಬೇರೆ ಕಡೆ ಪರಿಚಯಿಸಿದ ತಿಗಣೇಶಣ್ಣ ಬಹುಮುಖ ಪ್ರತಿಭಾವಂತ. ಸುಂದರವಾಗಿ ಚಿತ್ರ ಬಿಡಿಸುವ ಈತ ಚಿತ್ರ ಕಲಾವಿದನಾಗಿಯೂ ಪರಿಚಿತನಾದವ. ಒಂದಿಷ್ಟು ಕಾಲ ಖಾಸಗಿ ವಾಹಿನಿಯೊಂದರ ವರದಿಗಾರನಾಗಿದ್ದ. ತಿಗಣೇಶಣ್ಣನ ಸಾಕ್ಷ್ಯ ಚಿತ್ರಗಳು, ಕೆಲವೊಂದು ಕವನಗಳು ಕಲ್ಲೆದೆಯವನಲ್ಲೂ ಕಣ್ಣೀರು ತರಿಸುತ್ತವೆ. ಯೋಚನೆಯೂ ವಿಭಿನ್ನ ಮತ್ತು ಅದರ ಅಭಿವ್ಯಕ್ತಿಯೂ ವಿಭಿನ್ನ.‌
‌‌ತುಪ್ಪದ ದೋಸೆಯಂಗಡಿಯಿಟ್ಟು ತಲೆಗೊಂದು ಮುಂಡಾಸು ಸುತ್ತಿ ಯಕ್ಷಗಾನದ ಭಾಗವತಿಕೆ ಮಾಡುತ್ತಾ ವ್ಯಾಪಾರ ಮಾಡುವ ತಿಗಣೇಶಣ್ಣನನ್ನು ಸಾಹಿತಿಯೆಂದು ಗುರುತಿಸುವುದೇ ಕಷ್ಟ. ಅಷ್ಟು ತಮಾಷೆಯ ಮನುಷ್ಯನಾತ. ನಾನೆಂದರೆ ಅವನಿಗೆ ತುಂಬಾ ಪ್ರೀತಿ. ನನ್ನ ಪುಸ್ತಕಕ್ಕೊಂದು ಮುನ್ನುಡಿ ಬರೆದುಕೊಟ್ಟ ಗಣೇಶಣ್ಣ ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೂ ಅತಿಥಿಯಾಗಿ ಬಂದು ಚಂದಗಾಣಿಸಿಕೊಟ್ಟ. ತನ್ನ ಕನಸುಗಳನ್ನು ನಿನ್ನೊಳಗೆ ಬಿತ್ತುವೆನೆಂಬ ಅವನ ಮಾತುಗಳು ನನಗಿಂದೂ ದುಃಖ ತರಿಸುತ್ತವೆ. ಅವನ ಕನಸುಗಳು ನನಸಾಗಬೇಕೆಂಬ ಮನದಾಳದ ಹಾರೈಕೆ ನನ್ನದು.
ಅವನ ಕವಿತೆಗಳನ್ನು ಓದಿ ಮೆಚ್ಚುವ ಸಾವಿರಾರು Face book friends ಇದ್ದಾರೆ. ನಿಮ್ಮ ಚಿತ್ರ ನನ್ನ ಚಿತ್ತ…ಎಂದು ತಕ್ಷಣಕ್ಕೆ ಮನ ಮುಟ್ಟುವ ಸಾಲು ಬರೆವ ಅವನ ಪ್ರತಿಭೆಗೆ ಯಾರಾದರೂ ತಲೆದೂಗಲೇ ಬೇಕು. ಹೊಟ್ಟೆ ಹಸಿವಿಗೆ ಅನ್ನದ ಗಾಡಿ….ಮನಸ್ಸಿನ ಹಸಿವಿಗೆ ಕವಿತೆಯ ಮೋಡಿ. ತಿಗಣೇಶಣ್ಣನಿಗೆ ತಿಗಣೇಶಣ್ಣನೇ ಸಾಟಿ.
‌‌‌ ಇವರ ತಂದೆ ಮಾಗೋಡಿನ ತಿಮ್ಮಣ್ಣ ಹೆಗಡೆಯವರು ತಮ್ಮ ಇಳಿ ವಯಸ್ಸಿನಲ್ಲೂ ರಾತ್ರಿ ಯಕ್ಷಗಾನದ ಭಾಗವತಿಕೆ ಮಾಡುತ್ತಾ ಮದ್ದಳೆ ಬಾರಿಸುತ್ತಾರೆ. ಅವರ ಉತ್ಸಾಹ ನೋಡಿದರೆ ನಾವೇ ಮುದುಕರಾದಂತೆ ಅನಿಸಿಬಿಡುತ್ತದೆ. ತುಂಬು ಕುಟುಂಬದ ಆತಿಥ್ಯ ಆಪ್ತತೆ ಹುಟ್ಟಿಸುತ್ತದೆ. ತಿಗಣೇಶಣ್ಣನ ಮಾತು, ಒಗಟು, ತಮಾಷೆ, ಹಾಡು, ವೇಷ, ಭಾಷೆ ಹೀಗೆ ಪ್ರತಿಯೊಂದೂ ಬೆರಗು ಹುಟ್ಟಿಸುತ್ತದೆ.
ಅಕ್ಷರಗಳ ಮಾಲೆ ಪೋಣಿಸುವ ಈ ಹೂಗಾರನಿಗೆ ಅರ್ಹವಾಗಿಯೇ ಸಾಹಿತ್ಯದ ಗೌರವ ಸಿಗಬೇಕು. ಅವನಿಂದ ಮತ್ತಷ್ಟು ಪುಸ್ತಕಗಳು ಲೋಕಾರ್ಪಣೆಗೊಳ್ಳುವಂತಾಗಬೇಕು. ನಮ್ಮೊಡನೆ ಒಡನಾಡಿಯಾಗಿ ಜೀವನದ ಗಳಿಗೆಗಳನ್ನು ಸಂತಸಗೊಳಿಸಿದ ಸ್ನೇಹಜೀವಿ ತಿಗಣೇಶರಿಗೆ ಜಯವಾಗಲಿ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ತಿಗಣೇಶಣ್ಣ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಶಿಕ್ಷಕಿ ರೀಟಾ ಗೆ ನ್ಯಾಶನಲ್ ಐಕಾನ್ ಅವಾರ್ಡ್

ತಿಗಣೇಶಣ್ಣನಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ