ನಾಭಿಯಲಿಹುದೈ ಕಸ್ತೂರಿ
ಮೃಗ ಅರಿಯದು ಅದನು.
ದೇಹ ದೇಹದಲಿ ರಾಮನಿಹನು ಜಗವರಿಯದು ಅದನು-ಕಬೀರ
ಕಸ್ತೂರಿ ಮೃಗ ತನ್ನ ನಾಭಿಯಲ್ಲಿ ಅತ್ಯಂತ ಸುವಾಸನೆಯನ್ನು ಹೊಂದಿದ ಕಸ್ತೂರಿಯನ್ನು ಹೊಂದಿರುತ್ತದೆ. ಆದರೆ ಆ ಮೃಗಕ್ಕೆ ಅದರ ಮಹತ್ವದ ಅರಿವಿರುವುದಿಲ್ಲ . ಹಾಗೆಯೇ ಪ್ರತಿಯೊಬ್ಬರ ದೇಹದಲ್ಲೂ ಆ ರಾಮನಿದ್ದರೂ ಅದರ ಅರಿವು ಈ ಜಗದ ಯಾರಿಗೂ ಇಲ್ಲ. ಎಂಬುದು ಸಂತ ಕಬೀರರ ಅಂಬೋಣ.
ದೇವರು ಎಲ್ಲರಲ್ಲೂ ಇದ್ದಾನೆ ಆದರೆ ಯಾರೂ ದೇವರಲ್ಲಿಲ್ಲ ಎಂಬ ಮಾತು ಹೇಳುವುದೂ ಇದನ್ನೇ. ನಮ್ಮೊಳಗಿನ ಆತ್ಮವೆಂಬ ಪರಮಾತ್ಮನನ್ನು ಅರಿಯದೆ ಹೊರಗೆಲ್ಲ ಆತನಿಗಾಗಿ ಹುಡುಕಾಡುತ್ತಿದ್ದೇವೆ. ಸತ್ಯದರ್ಶನ ಮಾಡಿಕೊಳ್ಳದೇ ದಿನವೂ ಸಾಯುತ್ತಿದ್ದೇವೆ. ಒಳಗಿನ ಸತ್ವವನ್ನರಿಯದೇ ಸತ್ವಹೀನರಾಗುತ್ತಿದ್ದೇವೆ.
ನಮ್ಮ ಅಂತರಂಗ ಚಕ್ಷುವನ್ನು ತೆರೆಯೋಣ. ಅಲ್ಲಿ ಅಂತರಾತ್ಮನ ದರ್ಶನವನ್ನು ಮಾಡೋಣ. ಜೀವನ ಪಾವನ ಮಾಡಿಕೊಳ್ಳೋಣ.
ಡಾ.ರವೀಂದ್ರ ಭಟ್ಟ ಸೂರಿ.