ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ಎಲ್ ಎಂ ಹೆಗಡೆ ಹೊಸಾಕುಳಿ

ಎಲ್ ಎಂ ಹೆಗಡೆ ಸರ್ ಬಗ್ಗೆ ನಾನು ಯಾವಾಗ ಬರೆಯುತ್ತೇನೆಂದು ಕುತೂಹಲದಿಂದಿರುವ ಅವರ ಸಾವಿರಾರು ಪ್ರೀತಿಯ ವಿದ್ಯಾರ್ಥಿಗಳು ಇದ್ದಾರೆ. ನನ್ನ ಹೃದಯ ಮಂದಿರದಲ್ಲಿ ಸದಾ ನೆಲೆಸಿರುವ ಗುರು ಶ್ರೇಷ್ಠ, ಗಣಿತ ತಜ್ಞ, ಮಿತ ಭಾಷಿ, ಸ್ನೇಹ ಜೀವಿ ಎಲ್ ಎಂ ಹೆಗಡೆ ಸರ್ ನನ್ನ ಇಂದಿನ ಅಕ್ಷರ ಅತಿಥಿ.
ನಾನು ಶ್ರೀ ಕರಿಕಾನ ಪರಮೇಶ್ವರಿ ವಿದ್ಯಾಸಂಸ್ಥೆ ಅರೆ ಅಂಗಡಿಯಲ್ಲಿ ಹೈಸ್ಕೂಲ್ ಕಲಿಯುವ ಹೊತ್ತಿಗೆ ನನಗೆ ವಿಜ್ಞಾನ ಹಾಗೂ ಗಣಿತ ಭೋದಿಸಿದ ಗುರುಗಳಿವರು. ಎಲ್ ಎಂ ಹೆಗಡೆ ಸರ್ ಆಗ ನಮಗೆ ಕಲಿಸುತ್ತಿದ್ದ ಗುರುಗಳ ಸಾಲಿನಲ್ಲಿ ಸುಂದರರಾದ ಹಾಗೂ ಅತ್ಯಂತ ಶಿಸ್ತಿನಿಂದ ಬರುತ್ತಿದ್ದ ವ್ಯಕ್ತಿ. ಅವರು ಅವರ ಬೈಕು neat and clean. ಎಲ್ ಎಂ ಹೆಗಡೆ ಸರ್ ಎಂದ ಕೂಡಲೇ ನನಗೆ ಮೊದಲು ನೆನಪಾಗುವುದು ಅವರ in shirt…ಅವರು ಹೊಟ್ಟೆಯ ಮೇಲೆ in shirt ಮಾಡುತ್ತಿದ್ದರು.?. ಅವರಿಗೆ ಹೀಗೆ ಬರೆಯುತ್ತಿರುವುದು ಬೇಸರ ತರುತ್ತದೋ… ಇಲ್ಲವೋ… ಗೊತ್ತಿಲ್ಲ…ನಮಗಂತೂ ಅದು trade mark. ನಾನೂ ಅವರನ್ನು ಅನುಕರಿಸಿ ಹೀಗೆ in shirt ಮಾಡುತ್ತಿದ್ದೆ.?
ಎಲ್ ಎಂ ಹೆಗಡೆ ಸರ್ ನನ್ನ ಅಚ್ಚು ಮೆಚ್ಚಿನ ಗುರುಗಳಾಗಿದ್ದರು. ಅವರ ಭೋದನಾ ಕ್ರಮ ನನಗೆ ತುಂಬಾ ಇಷ್ಟವಾಗುತ್ತಿತ್ತು. ಗಣಿತ ವಿಷಯವೇ ನನಗೆ ತುಂಬಾ ಖುಷಿ ಕೊಡುತ್ತಿದ್ದುದರಿಂದ ಅವರು ಯಾವಾಗ ಬರುತ್ತಾರೆಂದು ನಾನು ಕಾಯುತ್ತಿದ್ದೆ. ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ ಬಹುವಚನದಿಂದಲೇ ಮಾತನಾಡಿಸುತ್ತಿದ್ದರು. ‘ಮೇಲಿನಗಂಟಿಗೆ ಭಟ್ರೇ’…… ಅಂತಲೇ ಅವರು ನನ್ನನ್ನು ಸಂಭೋದಿಸುತ್ತಿದ್ದುದು. ಅವರು ನಗು ನಗುತ್ತಾ ಪಾಠ ಮಾಡುವವರು. ಬಹಳ ಚುರುಕಾದ ಪ್ರತಿಕ್ರಿಯೆ ಅವರದ್ದು. ಅವರು ಹೇಳಿದ್ದಕ್ಕೆ ಬಹಳ ಹೊತ್ತು ನಗು ಬಂದರೂ ನಾವು ನಗುತ್ತಿರಲಿಲ್ಲ. ಯಾಕೆಂದರೆ ಅವರು serious ಆಗಿ ಬಿಡುತ್ತಿದ್ದರು. ಅವರು ನಗುವಾಗ ಉಂಗುರದ ಬೆರಳು ಅವರ ಬಾಯಿಯ ಹತ್ತಿರ ಬರುತ್ತಿತ್ತು. ? ಅಷ್ಟು ಸೂಕ್ಷ್ಮವಾಗಿ ನಾವು ಅವರನ್ನು ಗಮನಿಸುತ್ತಿದ್ದೆವು. ಅವರು ಬುದ್ಧಿವಂತ ವಿದ್ಯಾರ್ಥಿಗಳ ನಡುವೆ fitting ಇಡುತ್ತಿದ್ದರು. ಒಬ್ಬರ ಮೇಲೊಬ್ಬರನ್ನು ಮಾತಿನಲ್ಲೇ ಎತ್ತಿ ಕಟ್ಟುತ್ತಿದ್ದರು. ಈ ಸಲ ನಾನು ಅವರಿಗಿಂತ ಹೆಚ್ಚು ಅಂಕ ತೆಗೆಯಲೇ ಬೇಕೆಂಬ ಛಲ ಹುಟ್ಟಿಸುತ್ತಿದ್ದರು. ಒಂದೊಂದು ಸಲ ಹೀಗೆ ಮಾಡುವಾಗ ತಾತ್ಕಾಲಿಕ ಬೇಸರವಾದರೂ ಶಾಶ್ವತ ಒಳಿತಿಗಾಗಿ ಅವರು ಹೀಗೆ ಮಾಡುತ್ತಾರೆಂಬುದು ನಮಗೆ ನಂತರ ಅರಿವಾದದ್ದು. ನನಗೆ ಅವರ ವಿಷಯಕ್ಕೆ 100/100 ಬಿದ್ದ marks card ಇವತ್ತಿಗೂ ಭದ್ರವಾಗಿ ನನ್ನ ಸೂಟಕೇಸಿನಲ್ಲಿದೆ.?
ನಾವು ಅವರು ನಡೆಯುವುದನ್ನು, ಅವರು ನಗುವುದನ್ನು ಅವರಿಲ್ಲದಿರುವಾಗ ಎಷ್ಟೋ ಸಲ ಮಿಮಿಕ್ರಿ ಮಾಡಿದ್ದಿದೆ. ಅಷ್ಟು ಗಾಢವಾಗಿ ಅವರು ನಮ್ಮ ಮೇಲೆ ಪ್ರಭಾವ ಬೀರಿದ್ದರು. ಹಾಗೇ ಅವರು ತರಗತಿಯಲ್ಲಿ ಅನವಶ್ಯಕ ಮಾತನಾಡುವುದು, ಕೀಟಲೆ ಮಾಡುವುದು ಇದ್ಯಾವುದಕ್ಕೂ ಅವಕಾಶ ಕೊಡುತ್ತಿರಲಿಲ್ಲ. ಹೀಗಾಗಿ ಅವರ ಮೇಲೆ ನಮಗೆ ಸದಾ ಭಯ ಭಕ್ತಿ ಇದೆ. ಈಗಲೂ ಸರ್ ಕಂಡರೆ ನನಗೆ ಇದೇ ಭಾವ.
ನನ್ನ 11 ನೇ ಪುಸ್ತಕವನ್ನು ಎಲ್ ಎಂ ಹೆಗಡೆ ಸರ್ ಗೆ ಅರ್ಪಣೆ ಮಾಡಿ ಅವರ ಮನೆಗೆ ಒಂದಿನ ಅದನ್ನು ಕೊಟ್ಟು ಕೈಮುಗಿದು ಬರಬೇಕೆಂದು ಹೋಗಿದ್ದೆ. ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುವ ಸರ್ ಗೆ ಪುಸ್ತಕ ಕೊಟ್ಟು ಕಾಲಿಗೆ ಬಿದ್ದು ನಮಸ್ಕಾರ ಮಾಡಿದೆ. ನಮ್ಮ ಸರ್ ಧಡಕ್ಕನೇ ಒಳಗೆ ಹೋದವರು ದೊಡ್ಡ ಶಾಲು ತಂದು ನನಗೆ ಹೊದಿಸಿದರು. ಸಾವಿರ ರೂಪಾಯಿ ಇರುವ ಬಿಳಿಯ ಕವರ್ ಒಂದನ್ನು ಕೊಟ್ಟರು. ಸರ್……….ಎಂದು ತಿರಸ್ಕರಿಸುವ ಒಳಗಾಗಿ ನನ್ನನ್ನು ತಬ್ಬಿಕೊಂಡು ಶಭಾಸ್ ನೀಡಿದರು. ನೀನು ಹೀಗೆ ಸಾಧನೆ ಮಾಡುತ್ತಿರುವುದು ನನಗೆ ತುಂಬಾ ಖುಷಿ ಎಂದಾಗ ನನ್ನ ಕಣ್ಣುಗಳಲ್ಲಿ ನೀರು ಧಳಧಳನೆ ಸುರಿಯಿತು. ಆದರೆ ನಮ್ಮ strict ಆದ ಸರ್ ಕಣ್ಣಲ್ಲೂ ನೀರಿರುವುದನ್ನು ಗಮನಿಸಿ ಸರ್ ನನ್ನ ಮೇಲೆ ಎಂಥ ಅಗಾಧವಾದ ಪ್ರೀತಿಯಿರಿಸಿದ್ದಾರೆಂಬುದರ ಅರಿವಾಯ್ತು.
ನಾನು P.U.C ಯಲ್ಲಿ science ಮಾಡಬೇಕೆಂದು ನಮ್ಮ ಸರ್ ಗೆ ತುಂಬಾ ಆಸೆಯಿತ್ತು. ಆದರೆ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮ ಇಲ್ಲದ ಕಾರಣ ಟಿ.ಸಿ.ಹೆಚ್. ಮಾಡಿದರೆ ಬಹುಬೇಗ ಮಾಸ್ತರ್ ಆಗಬಹುದೆನ್ನುವ ಉದ್ದೇಶ ನನ್ನದಾಗಿತ್ತು. ಮನೆಯವರ ಬಯಕೆಯೂ ಅದೇ. ಆದರೆ ಪುನಃ ಅದೇ ಕಾಲೇಜಿಗೆ ನಾನು ಹೋದಾಗ ಸರ್ ನನ್ನ ಹತ್ತಿರ ಮಾತು ಬಿಟ್ಟಿದ್ದರು. ಅದು ನನಗಿಂದಿಗೂ ಬೇಸರ ತರಿಸುತ್ತದೆ. ಕಾಲೇಜು ಹೋಗುವಾಗ ಸರ್ ಗೆ ಮುಖ ಕೊಟ್ಟು ಮಾತನಾಡಲೇ ಇಲ್ಲ ನಾನು. ಆದರೆ ನನ್ನ ಗೌರವ ಮಾತ್ರ ಕಿಂಚಿತ್ತೂ ಕಡಿಮೆ ಆಗಿರಲಿಲ್ಲ.
ಎಲ್. ಎಂ. ಹೆಗಡೆ ಸರ್ ಅಪ್ಪಟ ಕೃಷಿಕರು. ತೋಟದ ಕೆಲಸ ಅವರಿಗೆ ಪರಮ ಪ್ರೀತಿ. ಅವರ ಮನೆಯವರೂ ಉತ್ಸಾಹಿ, ಕ್ರಿಯಾಶೀಲರು. ಅವರು ಸದ್ಯ ನಮ್ಮ ಸಹಕಾರಿ ಸಂಘದ ಸದಸ್ಯರು ಕೂಡ. ನಮ್ಮ ಮನೆಯಲ್ಲಿ ನಾನು, ನನ್ನ ಮಡದಿ ಸರಸ್ವತಿ, ಅಕ್ಕ ಸಂಧ್ಯಾ ಮತ್ತು ಬಾವ ಗೌರೀಶ್ ನಾಲ್ವರೂ ಅವರ ಪರಮಾಪ್ತ ಶಿಷ್ಯರು. ಹೀಗಾಗಿ ನಾವು ಅವರ ಅಭಿಮಾನಿ ‌ಸಂಘವಿದ್ದಂತೆ.
ಸರ್ ನ್ನು ಅಗಾಧವಾಗಿ ಪ್ರೀತಿಸುವ ಶಿಷ್ಯ ವೃಂದವೇ ಇದೆ. ಅವರು ಸದ್ಯ ಅದೇ ಕಾಲೇಜಿನಲ್ಲಿ promotion ಆಗಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶಿಕ್ಷಣ ಶಾಸ್ತ್ರ ಭೋಧಿಸುತ್ತಾರೆ. ಸರ್ ಒಂದು ಕೆಲಸ ಹೇಳಿದರೆ ವಿದ್ಯಾರ್ಥಿಗಳ ವೃಂದ ಇಂದಿಗೂ ಶೃದ್ಧೆ ಹಾಗೂ ಶಿಸ್ತಿನಿಂದ ಮಾಡುತ್ತದೆ. ಅದೇ ಅವರ ಹೆಚ್ಚುಗಾರಿಕೆ.

RELATED ARTICLES  ಮಕ್ಕಳ ಅಟಗಳು ಅಂದು ಇಂದು

ಎಷ್ಟೋ ಸಲ ಕಲಿಸುವಾಗೆಲ್ಲ ನನಗರಿವಿಲ್ಲದಂತೆ ನಾನೇ ಅವರಾಗುತ್ತೇನೆ. ಇವತ್ತಿಗೂ ಅವರನ್ನು ಕಂಡು ತಲೆ ಎತ್ತಿ ಮಾತನಾಡುವುದಕ್ಕೆ ಭಯ ಪಡುತ್ತೇನೆ. ಒಂದು = ( ಸಮಚಿಹ್ನೆ) ನೆಟ್ಟಗೆ ಕೊಡದೇ ಹೋದರೂ ಅರ್ಧ ಅಂಕ cut ಮಾಡುತ್ತಿದ್ದ ಅವರ ಯಾವ ವಿಷಯವನ್ನೂ cut ಮಾಡದೇ ಬರೆದಿದ್ದೇನೆ…… ಕ್ಷಮೆಯಿರಲಿ.??
ಸರ್…… ನೀವು ನಿಜವಾಗಿ ನಮಗೆ ಬದುಕು ಕೊಟ್ಟವರು. ಹೀಗಾಗಿ ನಮ್ಮ ಮನೆಯ ಅಭಿಮಾನಿ ಸಂಘದ ಪರವಾಗಿ ನಾನು ಅತ್ಯಂತ ಗೌರವಾದರಗಳಿಂದ ಈ ಅಕ್ಷರ ಮಾಲೆಯನ್ನು ನಿಮಗರ್ಪಿಸುತ್ತಿದ್ದೇನೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಎಲ್.ಎಂ.ಹೆಗಡೆ ಸರ್ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ದೇವನಿಲ್ಲ ಎನ್ನಬೇಡ….!

ಎಲ್ ಎಂ ಹೆಗಡೆ ಸರ್ ಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ