ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ರಮೇಶ ಹೆಗಡೆ ಕೆರೆಕೋಣ
ನನ್ನ ಬಾಲ್ಯದಿಂದಲೂ ನನ್ನ ಮೇಲೆ ಪ್ರಭಾವ ಬೀರಿದ, ತಾನಾಯ್ತು ತನ್ನ ಕೆಲಸವಾಯ್ತು ಎಂದು ಸರಳ ಜೀವನ ನಡೆಸಿಯೇ ವಿಶೇಷವೆನಿಸಿಕೊಳ್ಳುವ, ಜಿಲ್ಲೆ ಕಂಡ ಅತ್ಯುತ್ತಮ ಶಿಕ್ಷಕ-ಸಾಹಿತಿಗಳಲ್ಲಿ ಓರ್ವರಾದ ಶ್ರೀಯುತ ರಮೇಶ ಹೆಗಡೆ ಕೆರೆಕೋಣ ಅವರು ನನ್ನ ಇಂದಿನ ಅಕ್ಷರ ಅತಿಥಿ.
ನಾನು ಚಿಕ್ಕವನಿರುವಾಗಿನಿಂದ ಅಲ್ಲಿ ಇಲ್ಲಿ ಇದ್ದ ಬಿದ್ದ ದಿನಪತ್ರಿಕೆಗಳನ್ನು ಓದಲು ಹಾತೊರೆಯುತಿದ್ದೆ. ನಮ್ಮ ಕೇರಿಯಲ್ಲಿ ಆಗ ನಮ್ಮ ಗುರುಗಳಾದ ಶ್ರೀಯುತ ಎನ್.ಎಲ್.ಹೆಗಡೆ ಸರ್ ಮನೆಯಲ್ಲಿ ಮಾತ್ರ ದಿನಪತ್ರಿಕೆಗಳು, ವಾರಪತ್ರಿಕೆಗಳು ಕಾಣ ಸಿಗುತ್ತಿದ್ದವು. ಹೀಗಾಗಿ ಅವರ ಮನೆಗೆ ಪ್ರತಿನಿತ್ಯ ಹೋಗಿ ಪತ್ರಿಕೆಗಳನ್ನು ಓದಿಕೊಂಡು ಬರುವುದು ನನ್ನ ರೂಢಿಯಾಗಿತ್ತು. ಹಾಗೆ ಪತ್ರಿಕೆಗಳನ್ನು ಓದುವಾಗ ರಮೇಶ ಹೆಗಡೆ ಕೆರೆಕೋಣ ಎಂಬ ಹೆಸರು ಪದೇ ಪದೇ ನನ್ನ ಕಣ್ಣಿಗೆ ಎಸೆಯುತ್ತಿತ್ತು. ಹತ್ತಿರದ ಒಬ್ಬರು ಚುಟುಕು, ಕವನ, ಲೇಖನ ಬರೆಯುವಾಗ ಸಹಜವಾಗಿಯೇ ಅದನ್ನು ಹೆಚ್ಚು ಓದಬೇಕೆನಿಸಿದ್ದು ನನಗೆ. ಹಾಗೆ ಓದುತ್ತಾ ಓದುತ್ತಾ ಅವರ ಭಾಷಾ ಶೈಲಿ, ವಿಷಯಗಳು ನನ್ನನ್ನು ಬಹಳ ಆಕರ್ಷಿಸಿದವು. ಎಲ್ಲಿ ಅವರ ಹೆಸರು ಕಂಡರೂ ಅದನ್ನು ಓದಿಯೇ ಮುಗಿಸುತ್ತಿದ್ದೆ ನಾನು.
ಹೀಗೆ ಎಷ್ಟೋ ವರ್ಷಗಳಿಂದ ಪತ್ರಿಕೆಗಳಿಗೆ ಬರೆಯುತ್ತಾ ಬಂದ ರಮೇಶ ಹೆಗಡೆಯವರು ಹೆಸರಿಗೆ ಮಾತ್ರ ಕೆರೆಕೋಣ ಎಂದು ಹಾಕುತ್ತಾರೆಂದೂ ಅವರು ಶಿರಸಿಯಲ್ಲಿ ವಾಸವಾಗಿದ್ದಾರೆಂದೂ ನಂತರ ತಿಳಿಯಿತು. ಒಮ್ಮೆ ನನ್ನನ್ನು ಶ್ರೀಯುತ ಜಿ.ವಿ.ಹೆಗಡೆ ಗುಮ್ಮೇಕೇರಿ ಅವರು ಸಾಹಿತ್ಯ ಸಮ್ಮೇಳನ ನೋಡಿಕೊಂಡು ಬರೋಣ ಎಂದು ಕರೆದುಕೊಂಡು ಹೋಗಿದ್ದರು. ಅಲ್ಲಿ ಮೊದಲ ಬಾರಿಗೆ ರಮೇಶ ಹೆಗಡೆಯವರ ಮುಖ ದರ್ಶನವಾಗಿತ್ತು. ರಮೇಶ ಹೆಗಡೆ ಕೆರೆಕೋಣ ಅವರು ಇದೀಗ ಇಷ್ಟು ಆಪ್ತರಾಗುತ್ತಾರೆಂದು ಕನಸು ಮನಸಿನಲ್ಲೂ ಅಂದುಕೊಂಡವನಲ್ಲ ನಾನು.
ರಮೇಶ ಹೆಗಡೆಯವರು ಪ್ರಸ್ತುತ ಶಿರಸಿಯ ತೆರಕನಹಳ್ಳಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಹಾಗೂ ಅವರ ಶ್ರೀಮತಿ ಇಬ್ಬರೂ ರೇವಣಕಟ್ಟದಲ್ಲಿ ಬಹುಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮಕ್ಕಳ ಮನ ಗೆದ್ದವರು. ಮಕ್ಕಳ ಹಾಡುಗಳನ್ನು ಬರೆದು ಅವುಗಳಿಗೆ ರಾಗ ಸಂಯೋಜಿಸಿ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತ, ಪ್ರಬಂಧ, ಭಾಷಣಗಳನ್ನು ಬರೆದು ಕೊಟ್ಟು ಅವರನ್ನು ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸುವ ಕ್ರಿಯಾಶೀಲತೆ ಬಹಳ ಅಪರೂಪವಾದದ್ದು. ತಾನೂ ಅನೇಕ ಪ್ರಬಂಧ, ಭಾಷಣ, ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರು. ರಮೇಶ ಹೆಗಡೆಯವರಿಗೆ ಅರ್ಹವಾಗಿಯೇ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಪಾಂಡುರಂಗ ಪ್ರಶಸ್ತಿಗಳು ದೊರಕಿವೆ. ಅನೇಕ ಸಾರ್ವಜನಿಕ ಸನ್ಮಾನಗಳಿಗೆ ಅವರು ಭಾಜನರಾಗಿದ್ದಾರೆ.
ಶೈಕ್ಷಣಿಕ ಚಿಂತನೆಗಳು, ಚಿಣ್ಣರ ಚಿತ್ತಾರ, ಭಾವ ಪ್ರಣತಿಯಂತಹ ಅತ್ಯಮೂಲ್ಯ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ ಶ್ರೀಯುತರು ನಾಡಿನ 20 ಕ್ಕೂ ಹೆಚ್ಚಿನ ಪ್ರಖ್ಯಾತ ಪತ್ರಿಕೆಗಳಲ್ಲಿ ನೂರಾರು ಲೇಖನ ಬರೆದಿದ್ದಾರೆ. ಮಗ ಶಶಾಂಕ ಮತ್ತು ಮಗಳು ಪ್ರಿಯಾಂಕ ಇಬ್ಬರೂ ಅತ್ಯಂತ ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳು.
ಒಬ್ಬ ವ್ಯಕ್ತಿ ತಾನು ಸಾಮಾನ್ಯರ ಜೊತೆಗೂ ಬೆರೆತಾಗ ಮಾತ್ರ ಅಸಾಮಾನ್ಯತೆಗೂ ಒಂದು ಅರ್ಥ ಬರುತ್ತದೆ. ಹಾಗೆ ನೋಡಿದರೆ ರಮೇಶ ಹೆಗಡೆಯವರದು ಅತ್ಯಂತ ಸೌಜನ್ಯಶೀಲ ವ್ಯಕ್ತಿತ್ವ. ನನ್ನ ಸಾಹಿತ್ಯಿಕ ಚಟುವಟಿಕೆಗಳನ್ನು ಮನದುಂಬಿ ಪ್ರೋತ್ಸಾಹಿಸುತ್ತಾ ನನ್ನ ಪ್ರತಿಯೊಂದು ಕಾರ್ಯಕ್ರಮಗಳಿಗೂ ಅವರು ಹಾಜರಾಗುತ್ತಾರೆ. ಒಳ್ಳೆಯ ಅಂಶಗಳು ಎಲ್ಲೇ ಕಾಣಲಿ ಅದನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ರಮೇಶ ಹೆಗಡೆಯವರು ಆದರ್ಶಜೀವಿ. ಒಳ್ಳೆಯ ಓದುಗರಾದ ಅವರು ಉತ್ತಮ ವಿಮರ್ಶಕರು ಕೂಡ. ನನಗೆ ಅವರ ಕವಿತೆಗಳು ತುಂಬಾ ಇಷ್ಟವಾಗುತ್ತವೆ. ಹಲವಾರು ಕಡೆ ಕಾರ್ಯಕ್ರಮ ನಿರೂಪಣೆ ಮಾಡುವಾಗ ನಾನು ಅವರ ಸಾಲುಗಳನ್ನು ಉದಾಹರಿಸುತ್ತೇನೆ.
ಬರವಣಿಗೆ ಒಂದು ಕಲೆ. ನನ್ನ ತಿಳುವಳಿಕೆಯಲ್ಲಿ ಬರೆಯುವವರೆಲ್ಲಾ ಬರಹಗಾರರಾಗಲಾರರು. ಬರೆದವನ ಮೇಲೆ ಒಳ್ಳೆಯ ಸಂಬಂಧದಿಂದ ಇಷ್ಟವಾಗುವುದೊಂದು. ಬರಹದ ವಿಷಯದ ಮೇಲೆ ಇಷ್ಟವಾಗುವುದು ಮತ್ತೊಂದು. ಈ ಎರಡೂ ಅಂಶಗಳಿಂದಲೂ ರಮೇಶ ಹೆಗಡೆಯವರನ್ನು ನಾನು ಗೌರವಿಸುತ್ತೇನೆ.
ಅಪ್ಪಟ ಹಳ್ಳಿ ಸೊಬಗಿನ ದೇಸೀ ಕವಿ ಇವರು. ಈಗ ಅವರು ಕಲಿತ ಕೆರೆಕೋಣ ಶಾಲೆಯಲ್ಲಿಯೇ ನಾನು ಕಲಿಸುವಂತಾಗಿದ್ದು ನನ್ನ ಭಾಗ್ಯ. ಒಬ್ಬ ಅತ್ಯುತ್ತಮ ವರದಿಗಾರ, ಅಂಕಣಕಾರ ಶ್ರೀಯುತ ರಮೇಶ ಹೆಗಡೆಯವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿ, ಪುರಸ್ಕಾರಗಳು ಅರ್ಹವಾಗಿಯೇ ಸಿಗುವಂತಾಗಲಿ ಎಂಬುದು ನನ್ನ ಬಯಕೆ. ಅವರ ವಿದ್ಯಾರ್ಥಿಗಳು ನಿಜಕ್ಕೂ ಅಂತಹ ಗುರುಗಳನ್ನು ಪಡೆಯುವುದಕ್ಕೆ ಪುಣ್ಯ ಮಾಡಿರಬೇಕು. ನನ್ನನ್ನು ಪ್ರೀತಿಸಿ ಪ್ರೋತ್ಸಾಹಿಸುವ ರಮೇಶ ಹೆಗಡೆಯವರ ಬದುಕು ಬಂಗಾರವಾಗಿರಲೆಂದೇ ನನ್ನ ನಿತ್ಯ ಪ್ರಾರ್ಥನೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ರಮೇಶ ಹೆಗಡೆಯವರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ರಮೇಶ ಹೆಗಡೆಯವರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ