ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ವಿದ್ವಾನ್ ಗಣಪತಿ ಶಾಸ್ತ್ರಿ ಹೊಸಾಕುಳಿ

ನಮ್ಮ ಕುಲದೇವರಾದ ಉಮಾಮಹೇಶ್ವರ ದೇವಾಲಯದ ಅರ್ಚಕರು, ನನಗೆ ವೇದಪಾಠ ಹೇಳಿಕೊಟ್ಟ ಗುರುಗಳು, ತಮ್ಮ ಇಡೀ ಜೀವಮಾನ ಶೃದ್ಧೆ ಹಾಗೂ ಕಟ್ಟುನಿಟ್ಟಿನ ಜೀವನ ಶಿಸ್ತನ್ನು ಪಾಲಿಸಿದವರು, ವೇದರತ್ನ ಪ್ರಶಸ್ತಿ ಪುರಸ್ಕೃತರು, ಯಜುರ್ವೇದದ ಪ್ರಕಾಂಡ ಪಂಡಿತರು, ವಿದ್ವಾನ್ ಗಣಪತಿ ಶಾಸ್ತ್ರಿಗಳು ನನ್ನ ಬದುಕಿಗೆ ನಿಜವಾದ ಬಣ್ಣ ತುಂಬಿದವರಲ್ಲೊಬ್ಬರು.
ನಮ್ಮ ಸಮಾಜದಲ್ಲಿ ಒಂದು ಲೆಕ್ಕಕ್ಕೆ ಮೂರೇ ರೀತಿಯ ಜನ ಇರುವವರು.‌ ಒಬ್ಬರು ಆಸ್ತಿಕರು, ಇನ್ನೊಬ್ಬರು ನಾಸ್ತಿಕರು, ಮತ್ತೊಬ್ಬರು ಆಕಡೆಗೆ ಎಂದರೆ ಆಕಡೆಗಲ್ಲ…ಈಕಡೆಗೆ ಎಂದರೆ ಈಕಡೆಗಲ್ಲ ಅಂಥವರು. ನಾವು ಆಸ್ತಿಕರಾಗಿ ಬದುಕುವ ಜನರಾದ್ದರಿಂದ ನಮ್ಮ ತಂದೆ ತಾಯಿಗಳು ದೇವರು ಹಾಗೂ ಅರ್ಚಕರ ಮೇಲೆ ಅಪಾರ ಶೃದ್ಧೆಯಿಡುವುದನ್ನೇ ನಮ್ಮ ಜೀವನ ಮಂತ್ರವಾಗಿಸಿದ್ದಾರೆ. ಅದರಲ್ಲೂ ಕುಲ ದೇವರ ಹತ್ತಿರ ಬೇಡಿಕೊಂಡರೆ ಸಕಲವೂ ಸಿದ್ಧಿಸುತ್ತದೆ ಎನ್ನುವ ನಂಬಿಕೆ ನಮ್ಮದು. ನಮ್ಮ ಕುಲ ದೇವರನ್ನು ಶೃದ್ಧೆಯಿಂದ ಕಳೆದ ನಾಲ್ಕೈದು ದಶಕಗಳಿಂದ ತ್ರಿಕಾಲ ಪೂಜಿಸಿಕೊಂಡು ಬರುತ್ತಿರುವ ಶಾಸ್ತ್ರಿಗಳು ನಮ್ಮ ನಡೆದಾಡುವ ದೇವರು.
ಬಾಲ್ಯದಲ್ಲಿ ಹುಡುಗಾಟಿಕೆ ಮಾಡಿಕೊಂಡು ಅಲ್ಲಿ ಇಲ್ಲಿ ಟಯ್ಯರ್ ಹೊಡೆದುಕೊಂಡಿದ್ದ ನನ್ನನ್ನು M A T ಗಾಡಿಯ ಮೇಲೆ ಬಂದ ನಮ್ಮ ಶಾಸ್ತ್ರಿಗಳು ಒಮ್ಮೆ ತಡೆದು ನಿಲ್ಲಿಸಿದರು. ನಾಳೆಯಿಂದ ಸಂಜೆ ದೇವಸ್ಥಾನಕ್ಕೆ ಬಾ ನಿನಗೆ ವೇದ ಪಾಠ ಹೇಳಿಕೊಡುತ್ತೇನೆ… ಎಂದರು. ನಮ್ಮ ತಾಯಿಯವರಿಗೆ ನಾನು ಮೊದಲೇ ವೇದ ಪಾಠ ಕಲಿಯಬೇಕೆಂಬ ಆಸೆ ಇದ್ದುದರಿಂದ ನಾನು ಮಾರನೆಯ ದಿನದಿಂದಲೇ ದೇವಸ್ಥಾನದ ದಾರಿ ಹಿಡಿದೆ. ವೇದ ಪಾಠ ಹೇಳಿಸಿಕೊಳ್ಳುವುದಕ್ಕೆ ಮಕ್ಕಳೇ ಗುರುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ನನ್ನ ಜೀವನದಲ್ಲಿ ಗುರುಗಳೇ ನನ್ನನ್ನು ಹುಡುಕಿಕೊಂಡು ಬಂದಾಗ ಇದು ನನಗೆ ನಿಜವಾಗಿಯೂ ಅದೃಷ್ಟವೆನಿಸಿತ್ತು. ನಾನು ಮತ್ತು ನಗರೆ ನಾಗರಾಜ ಎನ್ನುವವರಿಬ್ಬರು ದಿನಾಲೂ ಶಾಲು ಹೊದ್ದು ದೇವಸ್ಥಾನದಲ್ಲಿ ಸಂಜೆ ವೇದ ಪಾಠ ಹೇಳಿಸಿಕೊಳ್ಳುತ್ತಿದ್ದೆವು. ಶಾಸ್ತ್ರಿಗಳು ಎಲ್ಲಾದರೂ ಹೋಗಿ ಆಯಾಸವಾಗಿದ್ದರೂ ನಮಗೆ ವೇದ ಪಾಠ ಹೇಳಿಕೊಡುವುದನ್ನು ತಪ್ಪಿಸುತ್ತಿರಲಿಲ್ಲ. ಅವರಿಲ್ಲದಿರುವಾಗ ಮಗ ಜಗದೀಶನೂ ನಮಗೆ ಪಾಠ ಹೇಳಿಕೊಟ್ಟಿದ್ದಿದೆ.
ನಮ್ಮ ಮನೆಯಲ್ಲಿ ನನಗೇನಾದರೂ ಆರೋಗ್ಯದಲ್ಲಿ ವ್ಯತ್ಯಾಸ ಆದರೂ ನಮ್ಮ ತಂದೆಯವರು ಮೊದಲು ಶಾಸ್ತ್ರಿಗಳ ಹತ್ತಿರ ಓಡಿ ಹೋಗುತ್ತಿದ್ದರು. ಅವರ ಹತ್ತಿರ ಶಿವನಲ್ಲಿ ಪ್ರಾರ್ಥಿಸಿಕೊಂಡರೆ ಎಲ್ಲಾ ಸರಿ ಹೋಗುತ್ತದೆ ಎನ್ನುವ ನಂಬಿಕೆ ಅವರದ್ದು. ಈ ಕಾಲಕ್ಕೂ ನನಗೂ ನಮ್ಮ ತಂದೆಯವರಿಗೂ generation gap ನಿಂದ ಮಾತಿಗೆ ಮಾತಾದರೆ…..ಅರ್ಚಕರ ಹತ್ತಿರ ಹೇಳಿಸಿ ನನಗೆ ತೀರ್ಥ ಹೊಡೆಸುತ್ತಾರೆ . ? ನಮ್ಮ ಮನೆಯ ಯಾವುದೇ ದೈವಿಕ ಕಾರ್ಯಕ್ರಮ ಇರಲಿ ಶಾಸ್ತ್ರಿಗಳ ಹತ್ತಿರ ಮೊದಲು ಕೇಳುತ್ತೇವೆ. ಅವರೆಂದರೆ ನಮಗೆ ಭಕ್ತಿ ಭಾವ.
ಶಾಸ್ತ್ರಿಗಳು ಅತ್ಯಂತ ಸ್ಪಷ್ಟ ಹಾಗೂ ಶುದ್ಧವಾಗಿ ಮಂತ್ರೋಚ್ಛಾರಣೆ ಮಾಡುವವರು. ಅವರ ಆಚರಣೆಗಳೂ ಶುದ್ಧ. ಗರುಡ ಪುರಾಣವನ್ನು ಅರ್ಥ ಸಹಿತವಾಗಿ ಪ್ರವಚನ ಮಾಡುವುದರಲ್ಲಿ ಇವರು famous. ವೈದಿಕ ಕಾರ್ಯಗಳನ್ನು ಮಾಡಿದಾಗ ಅದನ್ನು ಆಚರಿಸುವುದರ ಮಹತ್ವವನ್ನು ಸರಳವಾಗಿ ಅರ್ಥವಾಗುವಂತೆ ವಿವರಿಸಿ ಹೇಳುತ್ತಾರವರು. ಶಾಸ್ತ್ರಿ ಅಂದರೆ ಪಂಡಿತ ಎಂದು ಅರ್ಥವಾದ್ದರಿಂದ ಅವರು ಅದಕ್ಕೆ ಅನ್ವರ್ಥವಾಗಿದ್ದಾರೆ.
‌ ಗಣಪತಿ ಶಾಸ್ತ್ರಿಗಳ ಬಗೆಗೆ ಊರಿನಲ್ಲಿ ತುಂಬಾ ಗೌರವ. ಎಲ್ಲರಿಗೂ ಬೇಕಾದವರಾಗಿ ಬದುಕುತ್ತಾರವರು. ತಮ್ಮ ಇಡೀ ಬದುಕಿನಲ್ಲೂ ಸ್ವಚ್ಛವಾಗಿ ಜೀವನ ನಡೆಸಿದವರು. ಬಡತನದ ನಡುವೆಯೂ ಮಕ್ಕಳನ್ನು ಓದಿಸಿ ಸಮಾಜದಲ್ಲಿ ತಲೆ ಎತ್ತಿ ಬದುಕುವಂತೆ ರೂಪಿಸಿದವರು. ಅವರ ಮಗಳು ಶ್ರೀಮತಿ ತ್ರಿವೇಣಿ ಶಾಸ್ತ್ರಿ ಆದರ್ಶ ಕ್ರಿಯಾಶೀಲ ಶಿಕ್ಷಕಿ. ಮಗ ಜಗದೀಶ ಕೆ.ಡಿ.ಸಿ.ಸಿ. ಬ್ಯಾಂಕಿನಲ್ಲಿ supervisor ಆಗಿ ಇದ್ದಾರೆ.
ನಮ್ಮ ಮನಸ್ಸಿಗಾದ ವೇದನೆಗೆ ಔಷಧ ಕೊಡುವ ವೈದ್ಯರವರು. ಅವರು ಭಗವಂತನ ಹತ್ತಿರ ಬೇಡಿಕೊಂಡರೆ ನಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಬಲವಾಗಿ ನಾವು ನಂಬಿದ್ದೇವೆ. ಇಲ್ಲಿಯವರೆಗೂ ನಾವು ಎಷ್ಟು ದಕ್ಷಿಣೆ ನೀಡಿದ್ದೇವೆ ಎಂದು ಕಣ್ಣೆತ್ತಿಯೂ ನೋಡಿದವರಲ್ಲ ಅವರು. ಬೇಸರಿಸಿದವರೂ ಅಲ್ಲ. ನನಗೆ ಅತ್ಯಂತ ಪ್ರೀತಿಯಿಂದ ಗಣಪತಿ ಉಪನಿಷತ್, ಪುರುಷಸೂಕ್ತ, ದುರ್ಗಾಸೂಕ್ತ, ದೇವಿಸೂಕ್ತ, ಶ್ರೀಸೂಕ್ತ, ರುದ್ರನಮಕಗಳನ್ನು ಹೇಳಿಕೊಟ್ಟ ಶಾಸ್ತ್ರಿಗಳು ನನಗೆ ಟಿ.ಸಿ.ಹೆಚ್ ಸಿಕ್ಕಿದಾಗ ನೀನು ಒಳ್ಳೆಯ ಶಿಕ್ಷಕನಾಗುವುದಕ್ಕೇ ಯೋಗ್ಯವೆಂದು ಆದರದಿಂದಲೇ ಬೀಳ್ಕೊಟ್ಟರು. ಆದರೆ ಅವರು ಹೇಳಿಕೊಟ್ಟ ವೇದ ಪಾಠಗಳನ್ನು ನಾನು ಇವತ್ತಿಗೂ ನಿತ್ಯಪಾಠವಾಗಿ ರೂಢಿಸಿಕೊಂಡಿದ್ದೇನೆ…..ಮತ್ತು ಅವು ನನಗೆ ಮಾನಸಿಕ ಸ್ಥೈರ್ಯ ತುಂಬುತ್ತವೆ.
ನಮ್ಮ ಶಾಸ್ತ್ರಿಗಳಿಗೆ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯವಿದೆ. ಧರ್ಮ ಶಾಸ್ತ್ರಗಳ ಮೇಲೆ ಅವರು ವ್ಯಾಖ್ಯಾನ ಮಾಡುತ್ತಾರೆ. ಅನೇಕರ ಪ್ರಶ್ನೆಗಳಿಗೆ ಸರಳವಾಗಿ ಮತ್ತು ಸಮರ್ಪಕವಾಗಿ ಉತ್ತರಿಸುತ್ತಾರೆ. ಪೌರಾಣಿಕ ವಿಷಯಗಳ ಮೇಲೆ ಅವರು ಅಂಕಣಗಳನ್ನೂ ಬರೆದದ್ದಿದೆ. ಅವರು ಶ್ಲೋಕಗಳನ್ನು ಹೇಳುವ ರೀತಿಯೇ ನಮ್ಮನ್ನು ಬಹುವಾಗಿ ಆಕರ್ಷಿಸುತ್ತದೆ. ಶಬ್ದಗಳನ್ನು ನುಂಗುವವರಲ್ಲ ಅವರು. ಮಡದಿ ಪಾರ್ವತಿಯವರೂ ನನ್ನನ್ನು ಮನೆ ಮಗನಂತೆ ಕಂಡಿದ್ದಾರೆ. ಹೀಗಾಗಿ ನನಗೆ ಅವರ ಮನೆ ಇಂದಿಗೂ ಗುರುಮಠವಿದ್ದಂತೆ.
‌‌‌‌‌‌ ಗಣಪತಿ ಶಾಸ್ತ್ರಿಗಳ ವಿದ್ವತ್ತನ್ನು ಗುರುತಿಸಿ ಅವರಿಗೆ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರು ವೇದರತ್ನ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಅನೇಕ ಸಾರ್ವಜನಿಕ ಸನ್ಮಾನಗಳು ಅವರಿಗೆ ಅರ್ಹವಾಗಿಯೇ ನೀಡಲ್ಪಟ್ಟಿವೆ. ನಿಗರ್ವಿಗಳೂ ನಿಸ್ವಾರ್ಥಿಗಳೂ ಆದ ಶಾಸ್ತ್ರಿಗಳು ದೈವ ಸನ್ನಿಧಾನವೇ ಶ್ರೇಷ್ಠ ಎಂದು ಕಾಯಾ ವಾಚಾ ಮನಸಾ ಪೂಜೆಗಳಲ್ಲಿ ಮಗ್ನರಾಗಿರುತ್ತಾರೆ. ದೇವಾಲಯದ ಆರಾಧನೆಗಳಲ್ಲಿ ಎಷ್ಟೇ ರಾತ್ರಿಯಾದರೂ ಭಕ್ತರ ಮನಸ್ಸಿಗೆ ನೋವು ಮಾಡುವವರಲ್ಲ ಅವರು. ಅವರು ನಮ್ಮೂರಿಗೇ ಒಂದು ಕೀರ್ತಿ ಕಳಶ. ಅಂಥವರು ಸಿಗುವುದೇ ಅಪರೂಪ. ನನ್ನನ್ನು ಇಂದಿಗೂ ಪ್ರೀತಿಯ ಶಿಷ್ಯನಾಗೇ ಕಾಣುವ ಶಾಸ್ತ್ರಿಗಳಿಗೆ ಇದೇ ನನ್ನ ಗುರು ದಕ್ಷಿಣೆ. ಅತ್ಯಂತ ಭಕ್ತಿ ಹಾಗೂ ಶೃದ್ಧೆಯಿಂದ ನನ್ನ ಅಕ್ಕರೆಯ ಅಕ್ಷರ ಪುಷ್ಪಗಳನ್ನು ಅವರಿಗರ್ಪಿಸುತ್ತಿದ್ದೇನೆ. ಅವರ ಆಶೀರ್ವಾದ ನನ್ನ ಮೇಲಿದ್ದಷ್ಟೂ ನನಗೆ ಗೆಲುವಾಗುತ್ತದೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಗಣಪತಿ ಶಾಸ್ತ್ರಿಗಳು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಗಣಪತಿ ಶಾಸ್ತ್ರಿಗಳಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ