ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಶ್ರೀ ವಿನಾಯಕ ಹೆಗಡೆ ಕಡತೋಕ

ನನ್ನ ಜೀವದ ಗೆಳೆಯನ ಜೀವನದ ಕ್ಷಣಗಳನ್ನು ಹಂಚಿಕೊಳ್ಳುವ ಮನಸ್ಸಾಯಿತು ಇಂದು. ಅವನ ಬಗೆಗೊಂದು ಕಾದಂಬರಿಯನ್ನೇ ಬರೆಯಬಹುದು. ಸಂಕ್ಷಿಪ್ತವಾಗಿ ಈ ವ್ಯಕ್ತಿತ್ವವನ್ನು ವಿಸ್ತಾರಗೊಳಿಸುವ ಪ್ರಯತ್ನ ಮಾಡುತ್ತೇನಷ್ಟೆ. ಸುಬ್ಬು ವಿನಾಯಕರಿಬ್ಬರೂ ನನ್ನ ಕೈಗಳಿದ್ದಂತೆ.
ನಾನಿಂದು ಪರಿಚಯಿಸುವ ವಿನಾಯಕ…. ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕಡತೋಕಾದವನು. ನಾನು ಟಿ.ಸಿ ಹೆಚ್ ಮಾಡಲು ಡಯೆಟ್ ಕುಮಟಾಕ್ಕೆ ಹೋದ ಕಾಲಕ್ಕೆ ನನಗೆ ಸಿಕ್ಕ ಡೆಸ್ಕ ಮೇಟ್. ಸಿಕ್ಕ ಮೊದಲನೇ ದಿನದಿಂದ ಈ ದಿನದವರೆಗೂ ನಾವು ಭಲೇ ಜೋಡಿಯಾಗಿಯೇ ಉಳಿದುಕೊಂಡಿದ್ದೇವೆ.
ನಾವು ಕ್ಲಾಸಿನಲ್ಲಿ ಬಹುತೇಕ ಹಿಂದಿನ ಸಾಲಿನಲ್ಲಿ ಕುಳಿತುಕೊಂಡವರು. ಹಾಗಂತ ಹಿಂದೆ ಬಿದ್ದವರಲ್ಲ. ನನ್ನ ಹಾಗೂ ವಿನಾಯಕನ ಮಧ್ಯೆ ಬಹಳ ಹೊಂದಾಣಿಕೆ ಇರುವದರಿಂದ ನಮ್ಮ ಗುರುಗಳು ಕಲಿಸುವಾಗ ನಾವು ಬಹಳ enjoy ಮಾಡುತ್ತಿದ್ದೆವು. ನನಗೆ ಅರಿವಾಗದ ಪ್ರಶ್ನೆ ಅವನಿಗೆ ಮೂಡಿದರೆ ಅವನಿಗರಿವಿಲ್ಲದ ಪ್ರಶ್ನೆ ನನಗೆ ಮೂಡುತ್ತಿತ್ತು. ನಾವು ಕಣ್ಣು ಸನ್ನೆ, ಕಾಲು ಸನ್ನೆಗಳಲ್ಲೇ ಪರಸ್ಪರ ಅರ್ಥ ಮಾಡಿಕೊಳ್ಳುತ್ತಿದ್ದೆವು. ಹೋಗುವಾಗ, ಬರುವಾಗ, ನಿಲ್ಲುವಾಗ, fevi quick ನಂತೆ ಅಂಟಿಕೊಂಡೇ ನಮ್ಮ ವ್ಯವಹಾರ ಸಾಗುತ್ತಿತ್ತು. ಕಾಲೇಜಿನಲ್ಲೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಬೇಕಾಗಿ ಬಂದಾಗ ವಿನಾಯಕನು ಯಯಾತಿಯಾಗಿಯೂ ನಾನು ಪುರುವಾಗಿಯೂ ಗಿರೀಶ ಕಾರ್ನಾಡರ ನಾಟಕವನ್ನು ಅಭಿನಯಿಸಿದ್ದೆವು. ಪ್ರತಿದಿನವೂ ಸಂತೋಷದಿಂದಲೇ ಪ್ರಾರಂಭವಾಗಿ ಸಂತೋಷದಿಂದಲೇ ಮುಕ್ತಾಯ ಕಾಣುತ್ತಿದ್ದ ದಿನಗಳು ಆಗ.
ಹೀಗಿರಲು ನಾನು ನನ್ನ ಸಂಸ್ಕೃತ ಅಧ್ಯಯನ ನಿಮಿತ್ತ ಕಾಲೇಜಿಗೆ ಎರಡು ದಿನ ರಜೆ ಹಾಕಿದ್ದೆ. ಆ ದಿನ ನಮ್ಮ ವಿನಾಯಕ ಕಡತೋಕಾದಲ್ಲಿ ಬಸ್ ಇಳಿದು ರಸ್ತೆ ದಾಟಬೇಕು ಎನ್ನುವಾಗ ಮತ್ತೊಂದು ಕಡೆಯಿಂದ ಬಂದ ಪ್ರಯಾಣಿಕರ ಟ್ಯಾಂಪೋವೊಂದು ವಿನಾಯಕನ ತಲೆಗೆ ಬಲವಾಗಿ ಹೊಡೆಯಿತಂತೆ. ರಕ್ತದ ಮಡುವಿನಲ್ಲಿ ಜೀವಂತ ಶವದಂತೆ ಬಿದ್ದ ವಿನಾಯಕನನ್ನು ನಮ್ಮದೇ ಗೆಳತಿ ಆಶಾ ಕುಮಟಾ ಆಸ್ಪತ್ರೆಗೆ ಒಯ್ದಳಂತೆ. ಕುಮಟಾದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ತಕ್ಷಣವೇ ಆತನನ್ನು ಮಂಗಳೂರಿನ Omegha hospital ಗೆ ಸೇರಿಸಲಾಯಿತಂತೆ. ಜೀವನ್ಮರಣ ಹೋರಾಟ ನಡೆಸುತ್ತಿದ್ದ ವಿನಾಯಕನ ಈ ಆಘಾತಕಾರಿ ಸುದ್ದಿಯನ್ನು ಅವನ ಆತ್ಮೀಯನಾದ ನನ್ನಿಂದ ಆತ್ಮೀಯರೆಲ್ಲರೂ ಎರಡು ದಿನಗಳ ಕಾಲ ಮುಚ್ಚಿಟ್ಟಿದ್ದರು. ಮೂರನೆಯ ದಿನ ಸ್ವತಃ ವಿನಾಯಕನ ಚಿಕ್ಕಪ್ಪನಿಂದ ನನಗೆ ದೂರವಾಣಿ ಕರೆಯೊಂದು ಬಂತು. ಸವಿವರ ನೀಡಿದ ಅವನ ಚಿಕ್ಕಪ್ಪ ಅವನಿನ್ನೂ ಅರೆ ಪ್ರಜ್ಞಾವಸ್ಥೆಯಲ್ಲೇ ಇರುವುದಾಗಿಯೂ ಅವನ ತಲೆಯ ಆಪರೇಷನ್ ಗಾಗಿ ತುರ್ತಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯ ಇರುವುದೆಂದೂ ತಿಳಿಸಿದರು. ದತ್ತು ಮಗನಾಗಿ ದೊಡ್ಡಪ್ಪ ದೊಡ್ಡಾಯಿಯ ಜೊತೆಗಿರುವ ವಿನಾಯಕನ ಬಗೆಗಾಗಿ ಬಡತನವನ್ನೇ ಹಾಸಿ ಹೊದ್ದುಕೊಳ್ಳುವ ನಾನಾದರೂ ಏನು ಮಾಡಬಲ್ಲೆ?! ಭಗವಂತನ ಮುಂದೆ ಕಣ್ಣೀರಿಟ್ಟು ಪ್ರಾರ್ಥಿಸುವುದನ್ನು ಬಿಟ್ಟರೆ ನನಗೇನೂ ತೋಚಲಿಲ್ಲ. ನಾನು ಮಂಗಳೂರಿಗೆ ತಕ್ಷಣ ಬರುವುದಾಗಿ ಆತನ ಚಿಕ್ಕಪ್ಪನಿಗೆ ಫೋನಾಯಿಸಿದೆ. ಆದರೆ ಅವನು ಮಾತನಾಡುವುದಿರಲಿ ಕಣ್ಣು ತೆರೆದು ನೋಡುವ ಪರಿಸ್ಥಿತಿಯಲ್ಲಿ ಕೂಡ ಇಲ್ಲವೆಂದಾಗ ಖೇದವಾಯಿತು. ಕಾಲೇಜಿಗೆ ಹೋದ ತಕ್ಷಣ ಪ್ರಾಂಶುಪಾಲರಿಂದ ಹಿಡಿದು ಪ್ರತಿಯೊಬ್ಬರೂ ನನ್ನನ್ನು ಆತನ ಕುರಿತಾಗಿ ವಿಚಾರಿಸುವವರೇ. ಉಕ್ಕಿ ಬಂದ ದುಃಖವನ್ನು ಬಿಗಿ ಹಿಡಿದು ವಾಸ್ತವ ವಿವರಿಸಿದೆ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ವಿನಾಯಕನ ಚಿಕಿತ್ಸೆಯ ಕುರಿತಾಗಿ ನಾನೂ ಏನಾದರೂ ಮಾಡಬೇಕೆನಿಸಿತು. ಮನವಿ ಪತ್ರವೊಂದನ್ನು ಬರೆದು ಕಾಲೇಜಿನ ಪ್ರತಿಯೊಬ್ಬರಲ್ಲೂ ಕೇಳಿಕೊಂಡೆ. ನನ್ನ ಗುರುಮಾತೆಯರಾದ ಶ್ರೀಮತಿ ಶುಭಾ ಮೇಡಂ, ರೇಖಾ ಮೇಡಂ ಜೊತೆಗೆ ನಾಲ್ಕಾರು ಪ್ರತಿಷ್ಠಿತರ ಮನೆ ತಿರುಗಿದೆ. ಪ್ರಾಂಶುಪಾಲರಾದ ಶ್ರೀಯುತ ಬಿ.ಎನ್.ಕೃಷ್ಣಮೂರ್ತಿಯವರು ಸುಮಾರು 70 000/- ರೂ ಗಳ cheque ನ್ನು ವಿನಾಯಕನ ಚಿಕ್ಕಪ್ಪನಿಗೆ ಎರಡೇ ದಿನದಲ್ಲಿ ಹಸ್ತಾಂತರಿಸುವ ಹಾಗಾಯಿತು. ದೇವರು ನನ್ನನ್ನು ಆ ಕ್ಷಣದಲ್ಲಿಯೂ ಕೈಬಿಡಲೇ ಇಲ್ಲ. ಅದೇ ಸಮಯಕ್ಕೆ ನನಗೆ ವಿದ್ಯಾರ್ಥಿ ವೇತನವಾಗಿ 1000/- ರೂಗಳ cheque ಬಂದಿತ್ತು. ಅದನ್ನು ಮನೆಯಲ್ಲಿ ಹೇಳದೇ ನನ್ನ ವಿನಾಯಕನಿಗಾಗಿ ಕಳುಹಿಸಿಬಿಟ್ಟೆ. ನಿದ್ರೆಯಿಲ್ಲದ ನಾಲ್ಕು ರಾತ್ರಿಗಳು ಕಳೆದ ಮೇಲೆ ಐದನೇ ದಿನ ವಿನಾಯಕನ ಯಶಸ್ವಿ ಆಪರೇಷನ್ ಆಗಿದೆಯೆಂಬ ಶುಭ ಸುದ್ದಿ ಬಂತು. ಆದರೆ ಅವನಿಗೆ ಯಾವ ಮೊದಲಿನ ನೆನಪುಗಳೂ ಇಲ್ಲವೆಂದೂ ಮತ್ತೂ ಅವನಿಗೆ ಮೊದಲಿನ ನೆನಪುಗಳು ಮರುಕಳಿಸುವುದಕ್ಕೆ ಸುಮಾರು 15 ರಿಂದ 30 ದಿನಗಳು ಬೇಕಾಗಬಹುದೆಂದೂ ಡಾಕ್ಟರ್ ಸೂಚಿಸಿದ್ದರು. ಅಲ್ಲಿನ ದಾದಿಯರು ಅವನ ನೆನಪುಗಳನ್ನು ಮರುಕಳಿಸುವುದಕ್ಕೆ ಅತ್ಯಂತ ಪ್ರೀತಿ ಹಾಗೂ ಕಾಳಜಿಯಿಂದ ಪ್ರಶ್ನಿಸಿದಾಗ ವಿನಾಯಕನ ಬಾಯಿಂದ ‘ಸಂದೀಪ’ ಎನ್ನುವ ಹೆಸರು ಬಂತು ಎನ್ನುವುದು ನನಗೆ ಈವರೆಗೆ ಸಿಕ್ಕ ಪರಮೋಚ್ಛ ಪ್ರಶಸ್ತಿ.
15 ದಿನಗಳ ನಂತರ ವಿನಾಯಕನನ್ನು ಆಸ್ಪತ್ರೆಯಿಂದ discharge ಮಾಡಿಕೊಂಡು ಮನೆಗೆ ಕರೆತರಲಾಗುವುದೆಂದು ತಿಳಿದು ಬಂತು. ಅವನನ್ನು ಸ್ವಾಗತಿಸುವ ಸಲುವಾಗಿ ನಾನು ಕಾಲೇಜಿನಿಂದ ಅವನ ಮನೆಗೇ ಹೋಗಿದ್ದೆ. ಸುಮಾರು ಸಂಜೆ 6 ಗಂಟೆಯ ಸಮಯ. ಅವನ ಮನೆಯವರು, ಬಂಧುಗಳು, ಅವನ ಅಣ್ಣಯ್ಯ, (ದೊಡ್ಡಪ್ಪ) ದೊಡ್ಡಾಯಿ, ಅಪ್ಪ, ಅವರ ಮನೆಯಲ್ಲಿದ್ದ ಚಿಕ್ಕ ಪುಟ್ಟ ಮಕ್ಕಳು, ಸುಮಾರು 20-25 ಜನ ಬಿಟ್ಟ ಕಣ್ಣು ಬಿಟ್ಟು ನೋಡುತ್ತಿದ್ದರು. ಅವರೆಲ್ಲರ ಕೊನೆಯಲ್ಲಿ ನಾನೂ ನನ್ನ ಜೀವದ ಗೆಳೆಯನ ಮುಖದರ್ಶನಕ್ಕೆ ಕಾಯುತ್ತಿದ್ದೆ. ಬಂದಿಳಿದ. ಸಂಪೂರ್ಣವಾಗಿ ತಲೆಯನ್ನು ಬೋಳಿಸಿ ಬ್ಯಾಂಡೇಜ್ ಸುತ್ತಲಾಗಿತ್ತು. ಪಕ್ಕಾ ಹುಚ್ಚಾ ಸಿನಿಮಾದ ಸುದೀಪನ ಹಾಗೆ ಕಾಣುತ್ತಿದ್ದ. ಅವನಿಗೆ ನೆನಪುಗಳು ಬರುವವರೆಗೂ ಯಾರೂ ಅವನಿಗೆ ಒತ್ತಾಯಿಸಬಾರದೆಂದು ಡಾಕ್ಟರ್ ಸೂಚಿಸಿದ್ದರೂ ಅಲ್ಲಿರುವ ಚಿಕ್ಕ ಮಕ್ಕಳ ಹೆಸರನ್ನು ಸೂಚಿಸುವಂತೆ ಅವನ ಬಂಧುಗಳು ಅವನನ್ನು ಒತ್ತಾಯಿಸಿದರು. ಅವನು ಎರಡು ಸುಳ್ಳು ಹೆಸರುಗಳನ್ನು ಹೇಳಿ ಮಳ್ಳು ನಗೆಯಾಡಿದಾಗ ಎಲ್ಲರ ಜಂಘಾಬಲವೂ ಒಮ್ಮೆಲೇ ಉಡುಗಿ ಹೋಗಿದ್ದು. ಸ್ವಲ್ಪ ಮುಂದೆ ಬಂದ ವಿನಾಯಕ ಹಿಂದೆ ನಿಂತಿದ್ದ ನನ್ನತ್ತ ದೃಷ್ಟಿ ಹಾಯಿಸಿ ‘ಸಂದೀಪ’ ಎಂದ. ಅಬ್ಭಾ ಸ್ನೇಹವೇ! ಆಗಲೇ ನನಗೆ ಗೆಳೆತನದ ನಿಜವಾದ ಅರ್ಥ ಗೊತ್ತಾಗಿದ್ದು. ಅವನ ದೊಡ್ಡಾಯಿಯ ಅಪೇಕ್ಷೆಯಂತೆ ಆ ದಿನ ರಾತ್ರಿ ಅಲ್ಲೇ ಉಳಿದು ಅವನ ಪಕ್ಕದಲ್ಲೇ ಮಲಗಿ…..ಅವನೆದ್ದಾಗೆಲ್ಲಾ ನಾನೂ ಎದ್ದು ಬಂದೆ. ಇದು ಯಾವ ಸಿನಿಮಾ ಕಥೆಯೂ ಅಲ್ಲ. ಮತ್ತು ಶಬ್ದಗಳ ಅಲಂಕಾರ ನಮ್ಮ ಗೆಳೆತನಕ್ಕೆ ಬೇಕಾಗಿಯೂ ಇಲ್ಲ. ಮರು ಜನ್ಮ ಪಡೆದ ವಿನಾಯಕನನ್ನು ಹೀಗೆ ನೋಡುತ್ತಿದ್ದರೆ….. ಅದು ದೇವರಿದ್ದಾನೆ ಎಂಬುದನ್ನು ನನಗೆ ಮತ್ತೆ ಮತ್ತೆ ನೆನಪಿಸುತ್ತದೆ. ನಾವು ಪರಸ್ಪರರು ಒಬ್ಬರ ಮನೆಯಲ್ಲಿ ಒಬ್ಬರು ಉಳಿದು ರಾತ್ರಿ ಸರಿಸುಮಾರು ಎರಡು ಗಂಟೆಯವರೆಗೂ ಸುದ್ದಿ ಹೇಳುತ್ತಿದ್ದೆವು.
‌‌‌‌‌ ಮತ್ತೆ ಮರಳಿದವು ನೆನಪುಗಳು. ಇದೊಂದು miracle. ಪರೀಕ್ಷೆ ಬರೆದ. ಪಾಸಾದ. ಸಿ.ಇ.ಟಿ. ಪರೀಕ್ಷೆ ಬರೆದು ಜಮಖಂಡಿಯಲ್ಲಿ ಶಿಕ್ಷಕ ವೃತ್ತಿ ಸೇರಿದ. ಈಗ ನನ್ನದೇ ಕ್ಲಸ್ಟರ್ ನ ಸಿ.ಆರ್.ಪಿ ಆಗಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕೆರೆಕೋಣದಲ್ಲಿ ಕೆಲಸ ಮಾಡುತ್ತಾನೆ. ತಲೆಯನ್ನು ಸೀಳಿದ ಗುರುತೊಂದು ಬಿಟ್ಟರೆ ನಮ್ಮ ವಿನಾಯಕ ಮೊದಲಿನಂತೆ ಆಗಿದ್ದಾನೀಗ. ಸಂಪನ್ಮೂಲ ವ್ಯಕ್ತಿಯಾಗಿ ಕೂಡ ಕೆಲಸ ಮಾಡುವ ವಿನಾಯಕನಿಗೆ ಆ ತೊಂದರೆಯಿಂದ ವಾಕ್ಯಗಳ ಸರಣಿ ಆಗಾಗ ತುಂಡರಿಸುತ್ತದೆ. ಅವನ ಮೆದುಳು ಆಗಾಗ blank ಆಗುವುದನ್ನು ನಾನು ಗಮನಿಸುತ್ತೇನೆ. ತಕ್ಷಣಕ್ಕೆ ಅದು reboot ಅಗುತ್ತದೆ.
ವಿನಾಯಕನ ಮಡದಿ ಸುನೀತಾ ಕೂಡ ಸಿ.ಆರ್.ಪಿ ಆಗಿ ಕೆಲಸ ಮಾಡುತ್ತಾಳೆ. ಅವನ ಅಣ್ಣಯ್ಯ ತೀರಿಕೊಂಡರು. ದೊಡ್ಡಾಯಿ ಪ್ರೀತಿಯ ಹೊಳೆಯನ್ನೇ ಹರಿಸುತ್ತಾಳೆ ಅವನ ಮೇಲೆ. ಅವನ ದೊಡ್ಡಾಯಿಗೆ ಈಗಲೂ ಆತ ಚಿಕ್ಕ ಮಗುವಿದ್ದಂತೆ. ಮಗಳು ಹುಟ್ಟಿದ ತಕ್ಷಣ ಏನು ಹೆಸರಿಡಲಿ? ಎಂದು ಕೇಳಿದ. ನಿಮ್ಮಿಬ್ಬರ ಹೆಸರನ್ನೇ ಸೇರಿಸಿ ವಿನೀತಾ ಎಂದು ಹೆಸರಿಡೆಂದು ಸುಮ್ಮನೆ ಸೂಚಿಸಿದೆ. ಅದನ್ನೇ ತನ್ನ ಮಗಳ ಹೆಸರಾಗಿ ಇಟ್ಟ. ಇದು ಗೆಳೆಯನೊಬ್ಬ ನನಗೆ ಕೊಟ್ಟ ಗೌರವದ ಸ್ಥಾನ.
ತಮಾಷೆ, ನಗು, ಕಥೆ, ಸಂಭಾಷಣೆಗಳಿಂದ ನಮ್ಮ ದಿನವನ್ನು ಇಂದಿಗೂ ದೇವರು ಸ್ನೇಹಮಯವಾಗಿಸಿಯೇ ಇಟ್ಟಿದ್ದಾನೆ. ನನ್ನ ನೋವು ನಲಿವುಗಳೆರಡಕ್ಕೂ ಸಮಭಾಗಿ ಆತ. ಅವನೊಬ್ಬ ಅತ್ಯಂತ ಕ್ರಿಯಾಶೀಲ ಶಿಕ್ಷಕ. ಅವನನ್ನು ತಿಳಿದ ಅನೇಕರಿಗೆ ಈ ಜೀವನದ ನೈಜ ಕಥೆ ಆಶ್ಚರ್ಯ ತರಿಸಬಹುದು. ಮತ್ತೆ ಹುಟ್ಟಿಬಂದ ವಿನಾಯಕನ ಬದುಕಿನಲ್ಲಿ ಈಗ ಸಂತಸವೇ ತುಂಬಿಕೊಂಡಿದೆ. ಅದು ಯಾವಾಗಲೂ ಇರಲಿ ಕೂಡ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ವಿನಾಯಕ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ವಿಶ್ವ ಪರಿಸರ ದಿನವೆಂದು ಹೆಮ್ಮೆಪಡಲು ನಾವೇನು ಮಾಡಬಹುದು?

ವಿನಾಯಕನಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ