ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀ ಚಿದಾನಂದ ಭಂಡಾರಿ ಕಾಗಾಲ
ಮನಸ್ಸಿಗೆ ಸದಾ ಆನಂದ ತುಂಬುವ ಚಿದಾನಂದ. ಚಿದಾನಂದ ಭಂಡಾರಿಯವರು ತಮ್ಮ ಮಾತು ಹಾಗೂ ಬರಹಗಳಿಂದ ಈಗಾಗಲೇ ಜನ ಮಾನಸದಲ್ಲಿ ಪ್ರಚಲಿತದಲ್ಲಿರುವವರು. ಕೊಂಕಣ ಎಜ್ಯಕೇಶನ್ ಟ್ರಸ್ಟ ಕುಮಟಾದಲ್ಲಿ ಕಾರ್ಯ ನಿರ್ವಹಿಸುವ ಅಪರೂಪದ ಕ್ರಿಯಾಶೀಲ ಶಿಕ್ಷಕರು. ಸಾವಿರ ಜನರನ್ನೂ ಹಿಡಿದಿಟ್ಟುಕೊಳ್ಳಬಲ್ಲ ಅದ್ಭುತ ವಾಗ್ಮಿಗಳು. ರಾಜ್ಯ ಕೊಂಕಣಿ ಅಕಾಡೆಮಿಯ ಸದಸ್ಯರು, ರಾಜ್ಯ ಮಟ್ಟದ ಪ್ರೌಢಶಾಲಾ ಶಿಕ್ಷಕರ ಆಶುಭಾಷಣದಲ್ಲಿ ಪ್ರಥಮ ಸ್ಥಾನ ಪಡೆದವರು. ಕುಮಟಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳು, ಯಕ್ಷಗಾನ ಕಲಾವಿದರು, ಎಲ್ಲಕ್ಕಿಂತ ಹೆಚ್ಚಾಗಿ ತಮಾಷೆಯ ಬುಗ್ಗೆ ಅವರು. ನನ್ನ ನೆಚ್ಚಿನ ಸ್ನೇಹಿತ ಚಿದಾನಂದರ ಬಗೆಗಿಂದು ಮನದುಂಬಿ ಬರೆಯಬೇಕೆನಿಸಿತು.
2006 ರಲ್ಲಿ ನಾನು ಶಿಕ್ಷಕರ ಭಾಷಣ ಸ್ಪರ್ಧೆಯೊಂದಕ್ಕೆ ಗಿಬ್ ಹೈಸ್ಕೂಲ್ ಕುಮಟಾಕ್ಕೆ ಹೋಗಿದ್ದೆ ಆ ಸಮಯಕ್ಕೆ ನಾನು ಮೊಟ್ಟ ಮೊದಲ ಬಾರಿಗೆ ಚಿದಾನಂದ ಭಂಡಾರಿಯವರನ್ನು ನೋಡಿದೆ ಮತ್ತು ಅವರ ಮಾತುಗಳನ್ನು ಕೇಳಿದೆ. ನಿಜವಾಗಿಯೂ ಅದ್ಭುತ ಎನಿಸಿತು. ನಾನೂ ಒಬ್ಬ ಭಾಷಣಕಾರನಾಗಿ ಅವರ ಮಾತುಗಳಿಗೆ ಎದ್ದು ನಿಂತು ಚಪ್ಪಾಳೆ ತಟ್ಟ ಬೇಕೆನಿಸಿತು. ಅವರು ಹೈಸ್ಕೂಲ್ ವಿಭಾಗದಿಂದ ಪ್ರಥಮ ಸ್ಥಾನ ಪಡೆದರೆ ನಾನು ಪ್ರಾಥಮಿಕ ವಿಭಾಗದಿಂದ ಪ್ರಥಮ ಸ್ಥಾನ ಪಡೆದಿದ್ದೆ. ಅವರ ಮಾತುಗಳನ್ನು ಕೇಳಿದಾಗ ನಾನು ಇನ್ನೂ ಓದಬೇಕಾದ್ದು ಕಲಿಯಬೇಕಾದ್ದು ಬಹಳಷ್ಟಿದೆ ಎಂಬ ಭಾವ ನನ್ನನ್ನು ಆವರಿಸಿದ್ದು. ಅವರ ಹತ್ತಿರ ಸೌಜನ್ಯದಿಂದ ಮಾತನಾಡಿಸಿ ಅವರ ಫೋನ್ ನಂಬರ್ ಪಡೆದುಕೊಂಡೆ. ನಂತರ ಸಂದೇಶ ಮಂಟಪದ ಹರಟೆ ತಂಡದಲ್ಲಿ ಒಟ್ಟೊಟ್ಟಾಗಿ ನಾವು ಮಾತಿಗಿಳಿದೆವು.
ಚಿದಾನಂದ ಭಂಡಾರಿಯವರು ಬಹಳ ಉತ್ಸಾಹಿ ಮನುಷ್ಯರು. ಅವರಾಡುವ ಮಾತು, ವಿಮರ್ಶೆಗಳು ಎಂಥವರನ್ನೂ ಆಕರ್ಷಿಸುತ್ತವೆ. ತನ್ನನ್ನು ತಾನು ಕೊಚ್ಚಿಕೊಳ್ಳುವ ವ್ಯಕ್ತಿ ಅವರಲ್ಲ. ಹೀಗಾಗಿ ಅವರು ಮತ್ತೂ ಹತ್ತಿರವಾದರು ನನಗೆ. ವಿಭಿನ್ನ ಅಲೋಚನೆಗಳಿಂದ ಅವರು ವಿಶೇಷವೆನಿಸಿಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ ಸ್ನೇಹಿತ ಚಿದಾನಂದ ಭಂಡಾರಿಯವರ ಕ್ಲಾಸಿನಲ್ಲಿ ವಿದ್ಯಾರ್ಥಿಗಳ ಜೊತೆಗೆ ಪಾಠ ಕೇಳಬೇಕೆನಿಸುವಷ್ಟು ಖುಷಿ ನನಗೆ. ಅವರನ್ನು ಹೃದಯದಿಂದ ಪ್ರೀತಿಸುವ ವಿದ್ಯಾರ್ಥಿ ವೃಂದವೇ ಇದೆ.
ಚಿದಾನಂದ ಭಂಡಾರಿಯವರು ಅತ್ಯುತ್ತಮ ಕಾರ್ಯಕ್ರಮ ಸಂಘಟಕರು. ಕೊಂಕಣಿ ಅಕಾಡೆಮಿಯ ಸದಸ್ಯರಾಗಿ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷರು ಖ್ಯಾತ ಚಲನಚಿತ್ರ ನಟ ನಿರ್ದೇಶಕರಾದ ಕಾಸರಗೋಡು ಚಿನ್ನಾ ಅವರ ಕನಸಿನ ಕೂಸಾದ ಘರ್ ಘರ್ ಕೊಂಕಣಿ ಅಭಿಯಾನವನ್ನು ಉತ್ತರಕನ್ನಡದಲ್ಲಿ ಯಶಸ್ವಿಯಾಗಿ ಸಂಘಟಿಸಿ ಹೆಸರಾದವರು . ನೇರ ನಡೆ ನುಡಿಯ ತೀಕ್ಷ್ಣ ಮತಿಯಾದ ಚಿದಾನಂದ ಭಂಡಾರಿಯವರು ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುತ್ತಾ ಮತ್ತೊಬ್ಬರ ಧ್ವನಿಯನ್ನೂ ಮಿಮಿಕ್ರಿ ಮಾಡಬಲ್ಲರು. ಹೀಗಾಗಿ ಅವರೊಬ್ಬ ಬಹುಮುಖ ಪ್ರತಿಭಾವಂತ ವ್ಯಕ್ತಿ.
ನನ್ನ ಬಣ್ಣ ಆಕಾರಗಳು ಯಕ್ಷಗಾನದ ಅಸುರ ವೇಷಗಳಿಗೆ ಬಹಳ ಹೊಂದಿಕೆಯಾಗುತ್ತವೆ ಎಂದು ನಗುತ್ತಲೇ ಅದ್ಭುತ ಪಾತ್ರ ನಿರ್ವಹಣೆ ಮಾಡುತ್ತಾರವರು. ಅತ್ಯುತ್ತಮ ನಿರೂಪಕರಾಗಿ ಕೂಡ ಹೆಸರು ಮಾಡಿದವರು.
ಅವರ ಕ್ರಿಯಾಶೀಲ ಬರಹಗಳು ನನಗೆ ತುಂಬಾ ಇಷ್ಟವಾಗುತ್ತವೆ. ಅರ್ಥಪೂರ್ಣವಾಗಿ ವಾಸ್ತವದ ನೆಲೆಗಟ್ಟಿನಲ್ಲಿ ವಸ್ತು ವಿಷಯಗಳನ್ನು ಅಕ್ಷರ ರೂಪದಲ್ಲಿ ಇಳಿಸುವ ಕಲೆ ಅವರಿಗೆ ಸಿದ್ಧಿಸಿದೆ. ಹರಟೆ ತಂಡದ ಸದಸ್ಯರಾಗಿ ನಾನಿಟ್ಟ ವಿಷಯಗಳನ್ನು ದಿಟ್ಟವಾಗಿ ವಿರೋಧಿಸುವ…ಚಿದಾನಂದ ಭಂಡಾರಿಯವರು ವ್ಯಕ್ತಿ ವಿರೋಧಿಯಲ್ಲ.
ಸ್ನೇಹಮಯಿ ಚಿದಾನಂದರು ನಮ್ಮ ಮನೆಯಂಗಳಕ್ಕೆ ಬಂದು ನನ್ನ ಕುರಿತಾಗಿ ಸವಿ ನುಡಿಗಳನ್ನಾಡಿದರು. ಹೊಗಳಿಕೆಗೆ ಏರದ ತೆಗಳಿದರೆ ಕುಗ್ಗದ ಸಮದರ್ಶಿ ವ್ಯಕ್ತಿತ್ವ ಅವರದ್ದು. ಮುದ್ದಾದ ಎರಡು ಮಕ್ಕಳು….ಮನ ಮೆಚ್ಚಿದ ಮಡದಿ ತುಂಬು ಸಂಸಾರ, ಖುಷೀ ಜೀವನ.
ಬಡತನದಲ್ಲಿ ಬೆಳೆದು ದೊಡ್ಡವರಾದ ಚಿದಾನಂದ ಭಂಡಾರಿಯವರು ಇಂದು ಸಮಾಜ ಗುರುತಿಸುವಂತಹ ವ್ಯಕ್ತಿಯಾಗಿ ಬೆಳೆದದ್ದು ಕಡಿಮೆ ಸಾಧನೆಯಲ್ಲ. ಧರ್ಮ, ಜಾತಿ, ಮತಗಳ ಭೇದ ಭಾವವಿಲ್ಲದೇ ಎಲ್ಲರ ಜೊತೆಗೂ ಬೆರೆಯುವ ಚಿದು ಭಂಡಾರಿಯವರಿಗೆ ಸ್ನೇಹಿತರ ದೊಡ್ಡ ಬಳಗವೇ ಇದೆ. ಸುಸ್ಪಷ್ಟ ಭಾಷೆ, ತೀಕ್ಷ್ಣ ಪ್ರತಿಕ್ರಿಯೆ, ಸಮಯೋಚಿತ ಗುಣಗಳಿಂದ ಅವರು ಅನನ್ಯರಾಗುತ್ತಾರೆ.
ಸ್ನೇಹಿತ ಚಿದಾನಂದರ ಕೀರ್ತಿ ದಿಗ್ದಿಗಂತ ಹರಡಲಿ. ಅವರ ಶ್ರೇಯಸ್ಸು ಪ್ರೇಯಸ್ಸುಗಳು ದ್ವಿಗುಣವಾಗಲಿ. ಅವರ ಆತ್ಮೀಯನಾಗಿ ಅವರೂ ನನ್ನ ಸ್ನೇಹಿತರೆಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆಯಿದೆ. ನಮ್ಮ ಚಿದಾನಂದರು ಸಮಾಜ ಮುಖಿಯಾಗಿ ಇನ್ನೂ ಹೆಚ್ಚಿನ ಕಾರ್ಯವೆಸಗುವಂತಾಗಲಿ. ಅವರಿಂದ ಇದಕ್ಕೂ ಹೆಚ್ಚಿನ ನಿರೀಕ್ಷೆಗಳಿವೆ…ನನಗೆ.
ಒಬ್ಬ ಪ್ರಾಮಾಣಿಕ ವಿದ್ಯಾರ್ಥಿ ಸ್ನೇಹಿ ಶಿಕ್ಷಕ ಬೋಧನೆಯ ಯಾವೆಲ್ಲಾ ತಂತ್ರಗಳಿಂದ ಯಶಸ್ವಿ ಆಗಬಲ್ಲ ಎನ್ನುವದನ್ನು ಅವರ ಹತ್ತಿರ ಕೇಳಿ ತಿಳಿಯಬೇಕು. ಅಂತಹ ಮನ ಮೆಚ್ಚುವ ಗುರು ಅವರು. ಅವರ ತರಗತಿಗಳು ನಿಜಕ್ಕೂ ಜೀವಂತವಾಗಿರುತ್ತವೆ ಎಂಬುದು ನಿಸ್ಸಂದೇಹ. ಗಂಟೆಗಟ್ಟಲೆ ನಿರರ್ಗಳವಾಗಿ ಮಾತನಾಡಬಲ್ಲ ಚಿದಾನಂದ ಭಂಡಾರಿಯವರು ಅತ್ಯುತ್ತಮ ಉಪನ್ಯಾಸಕರು. ಇಂತಹ ಉದಯೋನ್ಮುಖ ಯುವ ಶಕ್ತಿಯನ್ನು ಗೌರವಿಸುವ, ಪ್ರೋತ್ಸಾಹಿಸುವ ಕೆಲಸ ನಮ್ಮವರಿಂದಾಗಲಿ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಚಿದಾನಂದರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.
ಚಿದಾನಂದ ಭಂಡಾರಿಯವರಿಗೆ ಸಂದೀಪನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ