ಹೃದಯದಿ ಅರಳಿದ ಕಮಲದಲಿ
ಬ್ರಹ್ಮ ವಾಸಿಪನಲ್ಲಿ .
ಮನ ಭೃಮರವು ಮಧು ಹೀರುತಲಿ
ಝೇಂಕರಿಸುವದಲ್ಲಿ-ಕಬೀರ.
ಹೃದಯದಲ್ಲಿ ಅರಳಿದ ಕಮಲದಲ್ಲಿ ಬ್ರಹ್ಮ ವಾಸಿಸುತ್ತಾನೆ. ನಮ್ಮ ಮನಸ್ಸು ಎನ್ನುವ ಭೃಮರ ಅಲ್ಲಿ ಜೇನನ್ನು ಹೀರುತ್ತ ಝೇಂಕರಿಸುತ್ತದೆ. ಎಂಬುದು ಕಬೀರರ ಈ ದೋಹೆಯ ಭಾವಾರ್ಥ.
ನಾವು ಹೃದಯವಂತರಾಗಬೇಕು. ನಮ್ಮ ಹೃದಯವನ್ನು ಕಮಲದಂತೆ ಅರಳಲು ಬಿಟ್ಟರೆ ಅಂದರೆ ಹೃದಯ ವೈಶಾಲ್ಯತೆಯನ್ನು ನಾವು ಹೊಂದಿದರೆ ಅಲ್ಲಿ ಸದ್ಗುಣ , ಸದಾಚಾರ, ಸನ್ನಡತೆ ಮುಂತಾದವು ಬ್ರಹ್ಮನ ರೂಪದಲ್ಲಿ ವಾಸಿಸುತ್ತವೆ. ನಮ್ಮ ಮನಸ್ಸು ಆ ಅರಳಿದ ಹೃದಯವೆಂಬ ಕಮಲದಲ್ಲಿನ ಮಧುವನ್ನು ಅಂದರೆ ಒಳ್ಳೆಯ ಅಂಶಗಳನ್ನು ಹೀರಿ ಪ್ರಫುಲ್ಲಗೊಳ್ಳುತ್ತದೆ. ಎಂಬುದು ಸಂತ ಕಬೀರರ ಅನಿಸಿಕೆ.
ನಮ್ಮ ಹೃದಯದಲ್ಲಿ ಸಂಕುಚಿತತೆ ಇರಬಾರದು. ವಿಶಾಲತೆ ಇರಬೇಕು. ವಿಶಾಲತೆ ಹೊಂದಿದ ಹೃದಯ ಶುಭ್ರ , ವಿಶಾಲ , ಆಳವಾದ ಮನಸ್ಸಿಗೆ ಪೂರಕವಾಗುತ್ತದೆ. ಅಂತಹ ಮನಸ್ಸನ್ನು ಹೊಂದಿರುವವರ ವ್ಯಕ್ತಿತ್ವ ಉತ್ತಮವಾಗುತ್ತದೆ. ಮನೆಯೇ ಮಂತ್ರಾಲಯ, ಮನಸೇ ದೇವಾಲಯ ಎಂಬ ಮಾತು ಸತ್ಯವಾಗುತ್ತದೆ.
ಡಾ.ರವೀಂದ್ರ ಭಟ್ಟ ಸೂರಿ