ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಡಾ|| ಶ್ರೀಧರ ಗೌಡ ಉಪ್ಪಿನಗಣಪತಿ

ಒಬ್ಬ ವ್ಯಕ್ತಿ ತನಗಾಗಿ ಒಂದಿಷ್ಟು ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಾನೆ. ತನ್ನ ಮನೆ ಸಂಸಾರಕ್ಕಾಗಿ ಒಂದಿಷ್ಟು ದುಡಿಯುತ್ತಾನೆ. ಕೆಲವೇ ಕೆಲವರು ಇದರ ಹೊರತಾಗಿಯೂ ಸಮಾಜ ಮುಖಿಯಾಗಿ ಹಲವಾರು ಸತ್ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ. ಅಂತಹ ಒಬ್ಬ ಅತ್ಯುತ್ತಮ ಶಿಕ್ಷಕ ಮಿತ್ರನನ್ನು ನನ್ನ ಅಕ್ಷರ ಕುಂಚದಿಂದ ಚಿತ್ರಿಸುವ ಪ್ರಯತ್ನ ಮಾಡುತ್ತಿದ್ದೇನೆ ಇಂದು.
ಡಾ|| ಶ್ರೀಧರ ಗೌಡ ಉಪ್ಪಿನಗಣಪತಿ ಹಾಲಕ್ಕಿ ಸಮಾಜದಲ್ಲಿ ಡಾಕ್ಟರೇಟ್ ಹೊಂದಿನ ನಾಡಿನ ಕೆಲವೇ ಕೆಲವು ಸಾಧಕರಲ್ಲಿ ಒಬ್ಬರು. ಇದೀಗ ಕುಮಟಾ ತಾಲೂಕಿನ ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಮಟಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯವನ್ನು ಸಾಧ್ಯವಾದಷ್ಟೂ ಜನರ ಹತ್ತಿರಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವ ಸಜ್ಜನ ಸ್ನೇಹಿತ.
ಡಾ|| ಶ್ರೀಧರ ಗೌಡರು ಒಬ್ಬ ಕ್ರಿಯಾಶೀಲ ಶಿಕ್ಷಕರು. ನಾನು ಸೇವೆಗೆ ಸೇರುವ ಹೊತ್ತಿಗೆ ಮೂರೂರಿನ ಮಂಜುಮನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಆಗಾಗ ಸಭೆ, ಸಮಾರಂಭದಲ್ಲಿ ಭೇಟಿಯಾಗುತ್ತಿದ್ದರು. ತೀರಾ ಸಂಕ್ಷಿಪ್ತ ಮನಸ್ಸಿನವರಿಂದ ಸಾಧ್ಯವಾದಷ್ಟೂ ದೂರ ಇರುವ ನಾನು ಶ್ರೀಧರ ಗೌಡರ ಮಾತು ಮತ್ತು ಅವರ ನಡವಳಿಕೆಯಿಂದ ತುಂಬಾ ಹತ್ತಿರವಾದೆ. ಅವರೂ ನನ್ನನ್ನು ಕಾಳಜಿಯ ಕಣ್ಣುಗಳಲ್ಲೇ ನೋಡುತ್ತಿದ್ದರು. ಮಂಜುಮನೆ ಶಾಲೆಯ ಮಕ್ಕಳಿಗೂ ಹಾಗೂ ಅಲ್ಲಿನ ಪಾಲಕರಿಗೂ ಶ್ರೀಧರ ಗೌಡರೆಂದರೆ ಅಪಾರ ಪ್ರೀತಿ ಗೌರವ. ತಾವು ಹೋದಲೆಲ್ಲ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿಯೇ ಬರುತ್ತಾರವರು.
‌‌‌‌ ಕಡಲ ತಡಿಯ ಮೀನುಗಾರರ ಬಗೆಗೆ ಅವರು ಮಂಡಿಸಿದ ‘ಕಡಲಿಗರ ಸಂಸ್ಕೃತಿ’ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಬಂದಾಗ ಡಾ|| ಶ್ರೀಧರ ಗೌಡ ಉಪ್ಪಿನ ಗಣಪತಿ ಬಹು ಜನಾಪೇಕ್ಷಿ ಆದರು. ಆದರೆ ಆ ಕಾಲಕ್ಕೂ ಅವರು ನನ್ನಂತಹ ಕಿರಿಯನ ಸ್ನೇಹವನ್ನು ಬಿಟ್ಟುಕೊಡಲಿಲ್ಲ. ಅವರ ಈ ಕ್ರಿಯಾಶೀಲತೆ ನಮ್ಮ ಕುಮಟಾ- ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಎಂ ಎಲ್ ಎ ಆದ ಶ್ರೀಯುತ ದಿನಕರ ಶೆಟ್ಟಿಯವರಿಗೂ ಇಷ್ಟವಾಗಿ ಅವರನ್ನು ತಮ್ಮ Personal Assistant ಆಗಿ ನೇಮಕ ಮಾಡಿಕೊಂಡಿದ್ದರು. ಆ ಕಾಲದಲ್ಲೂ ಅವರು ಜನರ ಅಹವಾಲುಗಳನ್ನು ಬೇಡಿಕೆಗಳನ್ನು ಶಾಸಕರಿಗೆ ಮನವರಿಕೆ ಮಾಡಿ ಸಕಾರಾತ್ಮಕವಾಗಿ ಸ್ಪಂದಿಸಿದರು.
ಡಾ|| ಶ್ರೀಧರ ಗೌಡ ಕುಮಟಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕವಾದಾಗ ಅದಕ್ಕೆ ಜೀವ ಕಳೆ ತುಂಬುವುದಕ್ಕೆ ಹಗಲಿರುಳೂ ಶ್ರಮಿಸಿದರು. ಸಮಾಜದ ಎಲ್ಲಾ ಧರ್ಮ ಜಾತಿಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಹಿತ್ಯ ಸಮ್ಮೇಳನ ನಡೆಸಿದ ಪರಿ ರಾಜ್ಯಕ್ಕೇ ಮಾದರಿ. ನನ್ನನ್ನು ಗೌರವಯುತವಾಗಿ ಕುಮಟಾಕ್ಕೆ ಕರೆಸಿಕೊಂಡು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಿದರು. ಅವರ ಶಾಲೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಬಹಳ ಮೆಚ್ಚುಗೆಗೆ ಪಾತ್ರವಾಯಿತು. ಅವನು ಬೇಡ….ಇವನು ಯಾಕೆ?! ಅವನು ಉಪಯೋಗ ಇಲ್ಲ…. ಇವನು ನಮಗೆ ಆಗಿ ಬರುವವನಲ್ಲ….. ಈ ಥರದ ಜನರೇ ಅಲ್ಲ… ಅವರು. ಎಲ್ಲರನ್ನೂ ಒಳಗೊಂಡು ಹೋಗುವ ನಾಯಕತ್ವ ಗುಣ ಅವರಿಗೆ ಅಪರೂಪವಾಗಿ ಸಿದ್ಧಿಸಿದೆ.
‌ ‌ ಪ್ರಸ್ತುತ ಹೆಗಡೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಅವರು ಪ್ರತಿವರ್ಷ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ನೃತ್ಯ ಸ್ಪರ್ಧೆಗಳಲ್ಲಿ ಮಕ್ಕಳು ವಿಜೇತರಾಗುವದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜದ ಅತಿ ಹಿಂದುಳಿದ ಪರಿಶಿಷ್ಟ ಜಾತಿಯ ಓರ್ವ ಹೆಣ್ಣುಮಗಳು ಈಗ inspire award ಗಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಇದು ಗುರುವಾಗಿ ಅವರು ತೋರುವ ಶೃದ್ಧೆ, ಕಾಳಜಿ.
ಸಂದೇಶ ಮಂಟಪ‌ ಹರಟೆ ತಂಡದ ಸದಸ್ಯರಾಗಿ ನಮ್ಮ ಜೊತೆ ತಿರುಗಾಟ ಮಾಡಿದ ಡಾ|| ಶ್ರೀಧರ ಗೌಡ ಒಳ್ಳೆಯ ಮಾತುಗಾರರೂ ಕೂಡ. ಕೆಲವೊಮ್ಮೆ ಒಳ್ಳೆಯ ಬರಹಗಾರರೆಲ್ಲ ಒಳ್ಳೆಯ ಮಾತುಗಾರರಾಗಿರುವುದಿಲ್ಲ. ಆದರೆ ಅವರಿಗೆ ಈ ಎರಡೂ ಸಹಜವಾಗಿಯೇ ಒಲಿದಿದೆ.
ಶ್ರೀಧರ ಸ್ವಾಮಿಗಳ ಭಕ್ತರಾದ ನಮಗೆ ಈ ಶ್ರೀಧರ ಎನ್ನುವ ಹೆಸರಿನವರೇ ಬಹಳ ಇಷ್ಟವಾಗುತ್ತಾರೆ. ಅದರಲ್ಲಿ ನಮ್ಮ ಶ್ರೀಧರ ಗೌಡರೂ ಒಬ್ಬರು. ಅವರು ತೋರಿದ ಪ್ರೋತ್ಸಾಹ, ಪ್ರೀತಿ ಸಾಹಿತ್ಯದಲ್ಲಿ ನಾನು ಇಷ್ಟಾದರೂ ಸಾಧಿಸುವುದಕ್ಕೆ ಪ್ರೇರಣೆ ನೀಡಿದೆ. ಅವರು ಅರ್ಹವಾಗಿಯೇ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾದರು. ರಾಜ್ಯ ಹಾಗೂ ರಾಷ್ಟ್ರ ಗುರುತಿಸಬಹುದಾದ ಅತ್ಯುತ್ತಮ ಶಿಕ್ಷಕರಲ್ಲಿ ಅವರೊಬ್ಬರು ಎನ್ನುವುದು ನಿಸ್ಸಂದೇಹ.
ಎಲ್ಲರಿಗೂ ಎಲ್ಲರೂ ಇಷ್ಟವಾಗಬೇಕೆಂಬ ನಿಯಮವಿಲ್ಲ. ಹಾಗೂ ಎಲ್ಲರಲ್ಲೂ ನಮಗಿಷ್ಟವಾಗುವಂತಹ ಎಲ್ಲಾ ಗುಣಗಳೂ ಇರುತ್ತವೆಂಬುದೂ ಅಲ್ಲ. ಅಷ್ಟಕ್ಕೂ ನಾವೇ ಎಷ್ಟೋ ಜನರಿಗೆ ಸಮಾಜದಲ್ಲಿ ಬೇಡವಾಗಿ ಬದುಕುತ್ತಿರುತ್ತೇವೆ. ಆದರೂ ನಮ್ಮ ಬಗೆಗೆ ಗೌರವ,ಪ್ರೀತಿ, ಸ್ನೇಹ ಹೊಂದಿದವರ ಬಗೆಗಾದರೂ ಸಂತೋಷದಿಂದ ಬರೆದರೆ, ಸಂತೋಷವಾಗುವಂತೆ ವ್ಯವಹರಿಸಿದರೆ ದೇವರು ಮೆಚ್ಚುತ್ತಾನೆನ್ನುವ ನೆಲೆಯಲ್ಲಿ ನನ್ನ ಈ ನುಡಿಗಳನ್ನು ಸ್ನೇಹಿತ ಶ್ರೀಧರ ಗೌಡರಿಗೆ ಅರ್ಪಿಸುತ್ತಿದ್ದೇನೆ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಡಾ|| ಶ್ರೀಧರ ಗೌಡ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

RELATED ARTICLES  ಕಳೆದು ಹೋದ ಎಳೆಯ ದಿನಗಳು (ಭಾಗ 28)

ಡಾ|| ಶ್ರೀಧರ ಗೌಡರಿಗೆ ಸಂದೀಪನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ