ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀಮತಿ ಸಾಧನಾ ಪೈ

ಜೀವನವೇ ಹೀಗೆ ಅಂದುಕೊಂಡಿದ್ದೇನೆ. ಮರಳುಗಾಡಿನಲ್ಲಿ ಸಾಗಿ ಸಾಗಿ ಇನ್ನೇನು ಸುಸ್ತಾಯಿತು ಎನ್ನುವಷ್ಟರಲ್ಲಿ ಅದೆಲ್ಲೊ ಒಂದು ನೀರಿನ ಸೆಲೆ ಕಾಣಿಸುತ್ತದೆ. ನೀರು ಕುಡಿದು ದಣಿವಾರುವ ಹೊತ್ತಿಗೆ ಮತ್ತೆ ನಡೆಯುವ ಚೈತನ್ಯ ಚಿಮ್ಮುತ್ತದೆ. ಮತ್ತೂ ದೂರ ಸಾಗೋಣ ಎಂಬ ಲವಲವಿಕೆ ಹೊಮ್ಮುತ್ತದೆ. ನನ್ನನ್ನು ಸ್ವಂತ ಮಗನಂತೆ ನೋಡಿಕೊಳ್ಳುವ ಸಾಧನಾ ಬಾಯೋರೊಂದಿಗೆ ನನ್ನ ಬದುಕಿಗೆ ಬಣ್ಣ ತುಂಬಿದವರು ಎರಡನೇ ಹಂತದ ಸಂಚಿಕೆಯನ್ನು ಪ್ರಾರಂಭಿಸುತ್ತಿದ್ದೇನೆ.
ಹೀಗೊಂದು ದಿನ ತರಬೇತಿಗೆ ಹೋಗಿದ್ದೆ. ಅಲ್ಲೊಬ್ಬ ಶಿಕ್ಷಕಿ ಜಮಖಾನಾದ ಮೇಲೆ ಅದಾಗಲೇ ಕುಳಿತುಕೊಂಡಿದ್ದರು. ನಾನೂ ಹೋಗಿ ಅವರ ಪಕ್ಕ ಕುಳಿತೆ. ಅವರು ಯಾರು ಅಂತ ನನಗೆ ಗೊತ್ತಿರಲಿಲ್ಲ. ಮೊದಲು ಯಾರೂ ಯಾರಿಗೂ ಗೊತ್ತಿರುವುದಿಲ್ಲ ಬಿಡಿ. ನಾನು ಆಗಾಗ ಎಸೆಯುವ ಪ್ರಶ್ನೆಗಳ ಬಾಂಬಿಗೆ ಅವರು ನನ್ನೆಡೆಗೆ ತಿರುಗಿ ನೋಡುತ್ತಿದ್ದರು. ನನ್ನನ್ನು ತೀರಾ ಮಮತೆಯ ಕಣ್ಣುಗಳಿಂದ ಅವರು ನೋಡಲು ಪ್ರಾರಂಭಿಸಿದ್ದಾರೆ ಎನ್ನುವುದು ನನಗೆ ಪಕ್ಕಾ ಆಗಿತ್ತು. ಮಾರನೆಯ ಅವರೇ ನನ್ನ ಪಕ್ಕ ಬಂದು ಕುಳಿತಿದ್ದರು. ಐದು ದಿನಗಳ ಆ ತರಬೇತಿಯನ್ನು ನಾವು ನಗು ನಗುತ್ತಾ ಕಳೆದೆವು. ಅನೇಕ ಜನ ನಾನು ಸಿಕ್ಕಾಗಲೆಲ್ಲ ಭಾಷಣ, ಪ್ರಬಂಧ ಅದೂ ಇದೂ ಬರೆಸಿಕೊಳ್ಳುತ್ತಿದ್ದರು. ಕೆಲವರಂತೂ ಅದನ್ನೇ ಜೆರಾಕ್ಸ ಮಾಡಿಕೊಂಡು ಪರಸ್ಪರ ಹಂಚಿಕೊಂಡದ್ದೂ ಉಂಟು. ಇದನ್ನು ಗಮನಿಸಿದ ಸಾಧನಾ ಬಾಯೋರು ನನ್ನನ್ನು ಒಂದಿನ ತಮ್ಮ ಮನೆಗೆ ಬರುವಂತೆ ಒತ್ತಾಯಿಸಿದರು. ನನಗೆ ಬೇರೆಯವರ ಮನೆಗೆ ಹೋಗುವುದೆಲ್ಲಾ ಒಂಥರದ ಮುಜುಗರವಾದರೂ ಅವರ ಆತ್ಮೀಯ ಕರೆಗೆ ಕಟ್ಟು ಬಿದ್ದು ಒಂದು ದಿನ ಅವಶ್ಯವಾಗಿ ಬರುವುದಾಗಿ ಮಾತು ಕೊಟ್ಟೆ. ಅವರ ಮಮತೆ ತುಂಬಿದ ಕಣ್ಣುಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ ನನಗೆ. ತರಬೇತಿಯ ಕೊನೆಯ ದಿನ ತಪ್ಪದೇ ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರವರು. ನನಗೆ ಕುಡಿಯಲು ತಿನ್ನಲು ಎಲ್ಲಾ ಕೊಟ್ಟು ಮನೆಯ ಮಹಡಿಗೆ ನನ್ನನ್ನು ಕರೆದುಕೊಂಡು ಹೋದರು. ಬಾಗಿಲು ತೆರೆದರೆ ಅಲ್ಲಿ ಪುಸ್ತಕಗಳದ್ದೇ ರಾಶಿ. ನನ್ನ ಕೈ ಹಿಡಿದು ಕಣ್ಣೀರು ತುಂಬಿದ ಕಣ್ಣುಗಳಿಂದ ನನ್ನನ್ನೇ ನೋಡುತ್ತಾ ” ಸಂದೀಪ್ ಇದು ನಮ್ಮ ತಂದೆಯವರು ಬಿಟ್ಟು ಹೋದ ಆಸ್ತಿ. ಈ ಪುಸ್ತಕಗಳಿಗೆ ನೀನೇ ವಾರಸುದಾರ. ನಮ್ಮ ತಂದೆ ಶ್ರೀಯುತ ಎಲ್.ವಿ.ಪೈ ಯವರು ಬಾಳಿಗಾ ಕಾಲೇಜು ಕುಮಟಾದಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದರು. ಒಂದು ದಿನ ಲಾರಿ ತಂದು ಈ ಪುಸ್ತಕಗಳನ್ನು ಒಯ್ದು ಬಿಡು. ಅವರಿಗೂ ನನ್ನ ಪುಸ್ತಕಗಳು ಸಜ್ಜನನೊಬ್ಬನ ಕೈ ಸೇರಿತೆಂದು ಆತ್ಮಾನಂದವಾಗಬಹುದು. ಸತ್ಪಾತ್ರರಿಗೆ ದಾನ ಮಾಡಿದರೆ ಮಾಡಿದವರಿಗೂ ಪುಣ್ಯ ಬರುತ್ತಂತೆ.” ಎಂದರು. ಒಂದಲ್ಲ ಎರಡಲ್ಲ ಸಾವಿರಾರು ಪುಸ್ತಕಗಳು. ದಂಗಾಗಿ ಹೋದೆ ನಾನು. ಹಾಗಂತ ಅವರ ಅಪೇಕ್ಷೆಯನ್ನು ಗೌರವಪೂರ್ವಕವಾಗಿ ತಿರಸ್ಕರಿಸಿ ” ನಿಮ್ಮ ತಂದೆಯವರ ಆಸ್ತಿ ಅದು ನಿಮ್ಮ ಬಳಿಯೇ ಉಳಿಯಲಿ. ನನಗೆ ಓದುವ ಮನಸ್ಸಾದಾಗ ನಾನೇ ನಿಮ್ಮ ಬಳಿ ಪುಸ್ತಕವನ್ನು ಕೇಳಿ ಪಡೆದು ಹಿಂದಿರುಗಿಸುತ್ತೇನೆ.” ಎಂದೆ. ಅವರ ಮಾತುಗಳಿಗೊಮ್ಮೆ ಅವಾಕ್ಕಾಗಿದ್ದೆ ನಾನು. ಅಷ್ಟೇ ಹೇಳಿ ನಿಲ್ಲಿಸಲಿಲ್ಲ ಅವರು. ಸಂದೀಪ್ ನೀನು ಹೀಗೆ ಬರೆದು ಯಾರ್ಯಾರಿಗೋ ಹಂಚಬೇಡ. ಅದು ಇದ್ದ ಮೌಲ್ಯವನ್ನೂ ಕಳೆದುಕೊಂಡು ಬಿಡುತ್ತದೆ. ಅಷ್ಟೇ ಅಲ್ಲ ನೀನು ಬರೆದಿದ್ದಕ್ಕೆ ತಮ್ಮ ಹೆಸರನ್ನು ಹಾಕಿಕೊಂಡು ತಾವೇ ಬರೆದಿದ್ದೆಂದು ಹೇಳುವವರೂ ಇರುತ್ತಾರೆ…..ಎಂದು ಎಚ್ಚರಿಸಿದರು. ಬರೆದಿದ್ದನ್ನೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡಿಬಿಡು. ಅದರ ಸಂಪೂರ್ಣ ವೆಚ್ಚ ನಾನೇ ಭರಿಸುತ್ತೇನೆ…. ಎಂದು ಹೃದಯ ತುಂಬಿ ಹೇಳುವಾಗ ಜಗತ್ತಿನಲ್ಲಿ ಇಂಥವರೂ ಇರುತ್ತಾರಾ ಎಂದು ಮೂಕ ವಿಸ್ಮಿತನಾದೆ ನಾನು. ಯಾವ ಜನ್ಮದಲ್ಲಿ ತಾಯಿಯಾಗಿದ್ದರೋ ಇವರು ಎಂದು ಅಭಿಮಾನದ ಕಣ್ಣೀರು ಜಿನುಗಿತು.
ಅದಾದ ನಂತರ ನಾವು ಫೋನ್ ಮಾಡದ ದಿನಗಳಿಲ್ಲ. ಒಂದು ದಿನ ನಾನು ಅಥವಾ ಅವರು. ನಾನೆಷ್ಟು ಅವರನ್ನು ಗೌರವಾದರಗಳಿಂದ ನೋಡಿಕೊಳ್ಳುತ್ತಿದ್ದೆನೊ ನಮ್ಮ ಮನೆಯವರೆಲ್ಲರೂ ಅವರನ್ನು ಹಾಗೆಯೇ ನಡೆಸಿಕೊಂಡರು. ಹೀಗೆ ಬೆಳೆದ ನಮ್ಮ ಬಾಂಧವ್ಯ ಹತ್ತು ವರ್ಷಗಳಾದರೂ ಅಷ್ಟೇ ಗಟ್ಟಿ. ನನ್ನ ಪ್ರತಿ ಹೆಜ್ಜೆಯ ಹಿಂದೂ ಅವರ ನೆರಳು ಇದ್ದೇ ಇರುತ್ತದೆ.
ದಿನ ಹೋದಂತೆ ನಮ್ಮ ಪ್ರೀತಿ ಹೆಚ್ಚಾಯಿತೇ ವಿನಹ ಇಳಿಮುಖವಾದದ್ದಿಲ್ಲ. ಮೊನ್ನೆ ಫೆಬ್ರವರಿ 7 ಕ್ಕೆ ನಮ್ಮ ಸಾಧನಾ ಬಾಯೋರಿಗೆ 56 ವರ್ಷಗಳಾದವು. ಮುಖದ ಮೇಲೆ ಒಂದೇ ಒಂದು ಮೊಡವೆಯೆದ್ದರೂ ನೂರಾರು ಬಾರಿ ನೋಡಿಕೊಳ್ಳುವವರು ನಾವು. ನಮ್ಮ ಸಾಧನಾ ಬಾಯೋರಿಗೆ ಮೈತುಂಬಾ ಬೊಬ್ಬೆಗಳು. ಇದಕ್ಕೆ ವೈದ್ಯ ವಿಜ್ಞಾನದಲ್ಲಿ ನ್ಯೂರೋ ಫೈಬ್ರೊಮಾ ಅಂತ ಹೆಸರು. ಗುಳ್ಳೆಗಳು ಅವರ ಕಣ್ಣು ರೆಪ್ಪೆಗಳನ್ನೂ ಬಿಟ್ಟಿಲ್ಲ. ಹಲವರು ಇದು ಸಾಂಕ್ರಾಮಿಕವಾಗಿ ತಮಗೂ ಬರಬಹುದೆಂಬ ಆಷಾಢಭೂತಿತನ ತೋರಿದರೆ ಮತ್ತೆ ಕೆಲವರು ದೂರದಿಂದಲೇ ಗುರಿ ಗುರಿ ಗುರಾಯಿಸುತ್ತಾರೆ. ಮಾತಿನಿಂದ ತಿವಿದವರೂ ಇಲ್ಲದಿಲ್ಲ. ಅಸ್ಪ್ರಷ್ಯರಂತೆ ಕಂಡವರೆಲ್ಲಾ ಮಾಮೂಲು ಅವರಿಗೆ. ಹಿಂಸೆಗಳನ್ನೇ ಅರಗಿಸಿಕೊಂಡ ಮಾನವೀಯ ಅಂತಃಕರಣ ಅದು. ಆತ್ಮವಿಶ್ವಾಸದ ಜೀವಂತ ಉದಾಹರಣೆ ಅವರು.
ನನ್ನ ಎರಡನೇ ತಾಯಿ ಅವರು. ಪ್ರತಿ ಹುಟ್ಟಿದ ಹಬ್ಬಕ್ಕೂ ಅವರಿಗೊಂದು ಸೀರೆ ತರುವುದನ್ನು ನಾನು ಮರೆಯುವುದಿಲ್ಲ. ಹಾಗೆಯೇ ಪ್ರತಿ ವರ್ಷವೂ ಒಂದು ಡೈರಿಯಲ್ಲಿ ಆ ವರ್ಷದ ನನ್ನೆಲ್ಲಾ ಭಾವಪೂರ್ಣ ಅನಿಸಿಕೆಗಳನ್ನು ಬರಹ ರೂಪದಲ್ಲಿ ಇಳಿಸಿ ಅವರಿಗೆ ನೀಡುತ್ತೇನೆ ನಾನು. ಆಕರ್ಷಣೆಯೂ ಅಲ್ಲ, ಅವಶ್ಯಕತೆಯೂ ಅಲ್ಲ, ಅನಿವಾರ್ಯತೆಯೂ ಅಲ್ಲ. ಸ್ನೇಹ, ಪ್ರೀತಿಗೆ ಜಾತಿ ಮತವಿಲ್ಲ. ವಯಸ್ಸಿನ ಅಂತರವೂ ಇಲ್ಲ. ಹಾಗೆ ನೋಡಿದರೆ ನನಗೆ ಎಪ್ಪತ್ತು ವರ್ಷಗಳ ಸ್ನೇಹಿತರೇ ಹೆಚ್ಚಿದ್ದಾರೆ.?
ನಾನು ಹೊಸ ಕಾರು ಖರೀದಿಸಿದಾಗ ಮೊದಲ ಆರತಿ ಮಾಡಿ ಪೂಜೆ ಮಾಡಿದವರೇ ಅವರು. ಮೊದಲ ಪುಸ್ತಕ ಅವರದೇ ಹಾರೈಕೆಯಿಂದ ಮೂರು ಮುದ್ರಣ ಕಂಡಿತು. ಸರಸ್ವತಿಯನ್ನೂ ಸ್ವಂತ ಮಗಳಂತೆ ನೋಡಿಕೊಳ್ಳುವ ಅವರು ನಮಗಾಗಿ veg ಸಾಧನಾ ಬಾಯೋರಾದರು.
ಆಗಾಗ ಒಮ್ಮೊಮ್ಮೆ ನನಗೆ ಹೀಗನಿಸುತ್ತದೆ. ಒಂದು ವೇಳೆ ಅವರು ಸ್ಫುರದ್ರೂಪಿ ಸಾಧನಾ ಬಾಯೋರಾಗಿದ್ದರೆ ನಾನು ಅವರನ್ನು ಇಷ್ಟು ಪ್ರೀತಿಯಿಂದ ಕಾಣುವುದನ್ನು ಸಮಾಜ ಏನೇನೋ ಆಗಿ ಬಿಂಬಿಸುತ್ತಿತ್ತು. ಗಾಡಿಯ ಮೇಲೆ ತಿರುಗಿಸಿದರಂತೂ ಮುಗಿದೇ ಹೋಯಿತು ಕಥೆ…? ಸರಸ್ವತಿಗೆ ಬಂದು ಕಿವಿಯೂದುವವರೂ ಇರುತ್ತಿದ್ದರೋ ಏನೋ…..ಆದರೆ ನಮ್ಮ ಬಾಂಧವ್ಯಕ್ಕೆ ಯಾವ ಕಳಂಕವೂ ಇಲ್ಲ. ಭಗವಂತನ ಕರುಣೆ ಒಂದು ಇದ್ದರೆ ಸಾಕು.
ಸಾವಿರಾರು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುಮಾತೆ ಅವರು. ಕಷ್ಟ ಎಂದು ಕಂಡರೆ ಸಾಕು ಕೈಯೆತ್ತಿ ಕೊಡುವ ಮಹಾದಾನಿ ಅವರು. ಪಾ……….ಪ ಎಂದು ಮಾತ್ರ ಹೇಳಬೇಡಿ ಅದು ಅವರಿಗೆ ಇಷ್ಟವಾಗುವುದಿಲ್ಲ. ಪಾಪ ಎಂಬ ಅನುಕಂಪ ಗಿಟ್ಟಿಸಿ ಅವರು ಯಾರಿಂದಲೂ ಏನನ್ನೂ ಬಯಸುವುದಿಲ್ಲ. ದಿಟ್ಟ ನಡೆ, ಸ್ಪಷ್ಟ ಮಾತು, ಪಾರದರ್ಶಕ ಜೀವನ, ನೋವು ನುಂಗಿ ನಲಿವು ಹಂಚುವ ನಮ್ಮ ಸಾಧನಾ ಬಾಯೋರು ನನ್ನ ಪಾಲಿಗಂತೂ ನಿಜವಾದ ದೇವತೆ.
ನನ್ನನ್ನೆಂದೂ ಕೈಬಿಡದ ಅವರಿಗೆ ನನ್ನ ಹೃದಯ ಮಿಡಿಯುತ್ತಿರುತ್ತದೆ. ನನ್ನ ತೊಡೆ ನಿಮ್ಮ ತಲೆಗೆ ತಲೆದಿಂಬಾಗಿರುತ್ತದೆ…..ನೀವು ಭೂಮಿಗೆ ಒರಗುವ ಸಮಯದಲ್ಲೂ……ಎಂಬ ಮಾತು ಕೊಟ್ಟಿದ್ದೇನೆ. ಬರೀ ಮಾತಾಡಿದರೆ ಸಾಲದು ಮಣ ಮಾತಿಗಿಂತ ಕಣ ಕೃತಿ ಲೇಸು.
‌‌‌‌‌‌‌ ನಿಷ್ಠೆ ಬಿಡದ ಶಿಕ್ಷಕಿ, ದೂರದರ್ಶಿತ್ವದ ಮಹಾನ್ ಚಿಂತಕಿ, ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸಾಧ್ವಿ ಸಾಧನಾ ಪೈ ಬದುಕಿನ ಆದರ್ಶ. ಸಾಕು ನನಗೆ ಬದುಕು….ಇಂದು ಆತ್ಮಹತ್ಯೆ ಮಾಡಿಕೊಂಡು ಬಿಡಬೇಕು ಎಂದು ಎಷ್ಟೋ ಬಾರಿ ಅನಿಸಬಹುದು ಅವಮಾನವಾದಾಗ. ಆದರೆ ಅವಮಾನವನ್ನೇ ಜೀವಮಾನವಿಡೀ ಉಂಡ ಸಾಧನಾ ಬಾಯೋರನ್ನು ಒಮ್ಮೆ ನೆನೆಸಿಕೊಂಡರೆ ಛಲದ ಸಣ್ಣ ಬೆಳಕೊಂದು ಕಣ್ಣಲ್ಲಿ ಮೂಡಬಹುದು. ಹಾಗಾದಲ್ಲಿ ಬರೆದ ಬರಹಕ್ಕೂ ಒಂದು ಸಾರ್ಥಕ್ಯ. ಗುರು-ಮಾತೆ ಸಾಧನಾ ಬಾಯೋರು ತನ್ನ ದೈಹಿಕ ನ್ಯೂನತೆಯಿಂದ ಅನುಕಂಪ ಗಿಟ್ಟಿಸಿಕೊಂಡ ಸೋಮಾರಿಯಲ್ಲ. ವೃತ್ತಿಯನ್ನು ಗೌರವಿಸಿ ಯಾವ ಕೆಲಸವೂ ಇದು ನನ್ನಿಂದಾಗದು ಎನ್ನದ ಅವಿರತ ಪರಿಶ್ರಮಿ. ಅವರ ಕಾಲಿಗೆ ಬಿದ್ದು ಕೈಮುಗಿದರೆ ನನಗೆ ನೂರಾನೆ ಬಲ ಬಂದಂತೆ.
ಸದ್ಗುರು ಶ್ರೀಧರರ ಆಶೀರ್ವಾದ ಶ್ರೀಮತಿ ಸಾಧನಾ ಪೈ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಲಾಕ್ ಡೌನ್ ನಿಂದ ಬೆಲೆಯೇರಿಕೆ ಬಿಸಿ ಜನರಿಗೆ ತಟ್ಟುತ್ತಾ…

ಸಂದೀಪ ಭಟ್ಟ