ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ಹಾಲಪ್ಪಣ್ಣ ಕಂಕಣವಾಡಿ
ವಿಭಿನ್ನ ವ್ಯಕ್ತಿತ್ವಗಳು ನಮಗೆ ವಿಭಿನ್ನ ಜೀವನಾನುಭವ ತುಂಬುತ್ತವೆ. ಬರೆಯುವವನಿಗೆ ಏನೂ ಕೆಲಸವಿಲ್ಲ ಎಂದು ಬರೆಯುವುದೂ ಅಲ್ಲ.? ಓದುವವನಿಗೆ ಇದೇ ಒಂದು ಕೆಲಸ ಎಂದೂ ಅಲ್ಲ. ಎಲ್ಲರ ಜೀವನದಲ್ಲೂ ಸಿಹಿ ಕಹಿಯ ಅನುಭವ ನೀಡಿದ ಸಾವಿರಾರು ಜನ ಸಿಗುತ್ತಾರೆ. ನಾನು ಬರೆದದ್ದನ್ನು ಓದುವಾಗ ಒಮ್ಮೊಮ್ಮೆ ಹೀಗೂ ಇರುತ್ತಾರಾ ಜನ! ಎಂದನಿಸಬಹುದು. ಆದರೆ ಉಪ್ಪು, ಖಾರ ಹಾಕದೆ ಅವರನ್ನು ಯಥಾವತ್ತಾಗಿ ನನ್ನ ಅರಿವಿನ ಪರಿಧಿಯಲ್ಲಿ ಬಟ್ಟಿ ಇಳಿಸುವ ಪ್ರಯತ್ನ ಮಾಡುತ್ತೇನಷ್ಟೇ. ಅವರಿಂದ ಒಂದಂಶ ಸ್ಫೂರ್ತಿಗೊಂಡರೂ ನನ್ನ ಸಮಯ ಸಾರ್ಥಕತೆ ಕಂಡುಕೊಳ್ಳುತ್ತದೆ.
ಮೀಸೆ ನೋಡಿ ಹೆದರಿದಿರೆ?! ನಾನು ಹೆದರಿದ್ದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿಯ ಹಾಲಪ್ಪ ಕರಣಿ ಎಂದರೆ ಇವರೆ. ನಾನು ಅಕ್ಕನ body guard ಆಗಿ 2003 ರಲ್ಲಿ ಕಂಕಣವಾಡಿ ಸೇರಿದ ಮೇಲೆ ಅಕ್ಕನ ಜೊತೆಗೆ ಉಳಿಯುವುದಷ್ಟೇ ಅಲ್ಲ ನನಗೂ ಅಲ್ಲಿ private school ನಲ್ಲಿ ಒಂದು ಕೆಲಸ ಸಿಕ್ಕಿತು. ದಿನಾ ನಮ್ಮಕ್ಕನನ್ನು ಜೀಪಿಗೆ ಸ್ವಾಮಿತೋಟಕ್ಕೆ ಕಳುಹಿಸಿ ಅಲ್ಲಿಯೇ ಹತ್ತಿರದಲ್ಲಿದ್ದ ಶಾಲೆಗೆ ನಾನು ಪಾದ ಬೆಳೆಸುತ್ತಿದ್ದೆ.
ಪ್ರತಿದಿನ ನಾನು ಶಾಲೆಗೆ ಹೋಗುವಾಗಲೂ ಇದೊಂದು ಆಸಾಮಿ ನನ್ನ ಕಡೆಗೆ ಗುರಾಯಿಸುತ್ತಿತ್ತು. ಬಿಳಿ ಅಂಗಿ, ಬಿಳಿ ಪಾಯಿಜಾಮ, ಹಾಕಿಕೊಂಡಿದ್ದ ಅವರು ನಾನು ರಸ್ತೆಯಲ್ಲಿ ಈಚೆಯಿಂದ ಆಚೆ ಹೋಗುವವರೆಗೂ ತಲೆಯಿಂದ ಕಾಲಿನವರೆಗೂ ಕಣ್ಣು ಹಾಯಿಸುವ ತನಕ ನೋಡುತ್ತಿದ್ದರು. ನನಗೆ ಒಮ್ಮೆ ಗಾಬರಿಯಾದದ್ದು. ಮೊದಲೇ ಗುರುತು ಪರಿಚಯವಿಲ್ಲದ ಊರು. ನನ್ನನ್ನು ಹೊತ್ತುಕೊಂಡು ಹೋದರೂ ಉಡಿದಾರ ಬಿಟ್ಟರೆ ಮತ್ತೇನೂ ಸಿಗುತ್ತಿರಲಿಲ್ಲ.? ಆದರೆ ಅಕ್ಕನ body guard ನಾನು. ಹೀಗಾಗಿ ಅಕ್ಕನ ಬಗ್ಗೇ ಸದಾ ಚಿಂತೆ ನನಗೆ. ಎಷ್ಟು boost, born vita ಕುಡಿದರೂ body ಬೆಳೆಸಲು ಸಾಧ್ಯವಾಗದ ನನ್ನನ್ನು ಹೀಗೆ ಅವರು ಗುರಾಯಿಸುತ್ತಿದ್ದರೆ ನನ್ನ ಹೃದಯದಲ್ಲಿ ಸ್ವಲ್ಪ ಅಂಜಿಕೆ ಹುಟ್ಟಿದ್ದು ಸಹಜವೇ. ತಿಂಗಳುಗಳ ಕಾಲ ಅವರನ್ನು ಗಮನಿಸಿದೆ. ಆ ಮನುಷ್ಯ ಒಂದೂ ನಗೆಯಾಡುತ್ತಿರಲಿಲ್ಲ. ಆದರೆ ಗುರಿ ಗುರಿ ಗುರಿ ನೋಡುತ್ತಿದ್ದ.?
ಒಂದು ದಿನ ಹೀಗೆ ದಾರಿಯಲ್ಲಿ ಹೋಗುವಾಗ ಅವರು ಕರೆದೇ ಬಿಟ್ಟರು. ಭಟ್ಟ ಸರ್ ಅಂದರೆ ನೀವೆ ಏನ್ರೀ…..
ಹೌದ್ರೀ ಸರ….ಅಂದೆ.
ನಾನೂ ಸ್ವಲ್ಪ ಎದೆ ಸೆಟೆದುಕೊಂಡು ನಿಂತೆ.?? ನಾನು ಹಾಲಪ್ಪ ಕರಣಿರಿ. ನಿಮ್ಮ school ಗೆ ನಮ್ಮ ಹುಡುಗರು ಬರ್ತಾರಲ್ರಿ….ಅಂದರು. 400-500 ಹುಡುಗರ ಮಧ್ಯೆ ಅವರ ಹುಡುಗರು ಯಾರು ಅಂತ ನನಗೆ ಗೊತ್ತಾಗಲಿಲ್ಲ. ಅವರು ಗದರಿಸಿದ ಹಾಗೆ ಮಾತನಾಡುತ್ತಿದ್ದರು. “ನಾನು ಹೊಸದಾಗಿ room ಕಟ್ಟಸಾಕ ಹತ್ತೀನ್ರಿ….. ನಿಮ್ಮ ಟೀಚರಗೊಳ ಬಾಳ ದೂರದಿಂದ ನಮ್ಮೂರಿಗೆ ಬಂದಿರ್ತೀರಿ…..ನಿಮಗ ಒಂದು ವ್ಯವಸ್ಥೆ ಮಾಡ ಕೊಡದು ನಮ್ಮ ಧರ್ಮ ಐತಿ” ಅಂದರು. ನಾವು ಈಗಾಗಲೇ ಯರಗಟ್ಟಿ ಸರ್ ಎಮ್ಮೆ shed ನಲ್ಲಿ ವಾಸ್ತವ್ಯ ಹೂಡಿರುವುದು ಅವರಿಗೆ ಗೊತ್ತಿತ್ತು. ನಾನು “ಹೌದೇನ್ರೀ…..ಪಾಡಾಯತು ಬಿಡ್ರೀ….” ಅಂತ ಅವರದೇ ಭಾಷೆಯಲ್ಲಿ ಗಟ್ಟಿಯಾಗಿ ಹೇಳಿ ನಮ್ಮಪ್ಪ ಬಂದಾಗ ಕೇಳತೀನ್ರಿ…… ಅಂದೆ. ಬಹುಕಾಲದಿಂದ ನನ್ನನ್ನು ಅವರು ಯಾಕೆ ಗುರಾಯಿಸುತ್ತಿದ್ದಾರೆ ಎನ್ನುವುದಕ್ಕೆ ನನಗೊಂದು ಉತ್ತರ ಸಿಕ್ಕಿತ್ತು. ಅಕ್ಕನ ಹತ್ತಿರ ಮನೆಗೆ ಹೋದ ತಕ್ಷಣ ಅಂದೆ. ಮೀಸೆ ಮಾಮ room ಕಟ್ಟಿಸ್ತಿದಾರಂತೆ ಇಂದು ಕರೆದು ಹೇಳಿದರು….ಅಂತ. ಆದರೆ ಅವರ ಮೀಸೆ ಮತ್ತು ಧ್ವನಿಗೆ ನನಗ್ಯಾಕೋ ಸ್ವಲ್ಪ ಅಂಜಿಕೆ ಹಾಗೇ ಉಳಿದಿತ್ತು.
ನಾನೂ ಅವರ ಬಗ್ಗೆ ವಿಚಾರಿಸಿದೆ. ಅವರ ಮೂವರು ಮಕ್ಕಳು ನನ್ನದೇ ವಿದ್ಯಾರ್ಥಿಗಳೆಂಬುದು ತಿಳಿಯಿತು. ಚೈತನ್ಯ, ಬಸವರಾಜ, ರಾಘವೇಂದ್ರ. ಹಾಲಪ್ಪ ಕರಣಿಯವರು ಕಂಕಣವಾಡಿ ಗ್ರಾಮದ ತಲಾಟೆ ಆಗಿದ್ದಾರೆಂಬುದು ನಮ್ಮ Headmaster ವಗ್ಗಾರ ಸರ್ ಮುಖಾಂತರ ತಿಳಿಯಿತು. ಸ್ವಲ್ಪ ದಿನಗಳ ಮೇಲೆ ನಮ್ಮ ತಂದೆಯವರು ನಮ್ಮನ್ನು ನೋಡಿಕೊಂಡು ಹೋಗಲು ಕಂಕಣವಾಡಿಗೆ ಬಂದರು. ಬಂದವರೇ ಹಾಲಪ್ಪ ಕರಣಿಯವರನ್ನು ಭೇಟಿ ಆದರು. ಹಾಲಪ್ಪ ಕರಣಿಯವರು ತಮ್ಮ ಸ್ವಂತ ಜಾಗದಲ್ಲಿ ಚೈತನ್ಯ ಆಶ್ರಮ ಕಟ್ಟಿಸಿ ಅಪ್ಪಟ ಆಸ್ತಿಕರಾಗಿ ಬದುಕುತ್ತಾರೆ ಎಂಬ ಸತ್ಯ ಗೊತ್ತಾಯಿತು. ಬಂದವರೇ ನೀವು ಅಲ್ಲಿಗೆ ಹೋಗಿಬಿಡಿ ಎಂಬ ಸಂಜ್ಞೆ ನೀಡಿದರು. ನಾವು ಚೈತನ್ಯ ಆಶ್ರಮದ ಪಕ್ಕವಿರುವ ಹಾಲಪ್ಪ ಕರಣಿಯವರ ಮನೆಗೆ shift ಆದೆವು.
ಹಾಲಪ್ಪಣ್ಣನವರು ಲಗಮವ್ವನ ಹಿರಿಯ ಮಗ. ಅವರಿಗೆ ಮೂವರು ಗಂಡು ಮಕ್ಕಳು…. ಮತ್ತು ಶಾಂತವ್ವ, ಮಲ್ಲವ್ವ ಎಂಬ ಇಬ್ಬರು ಹೆಣ್ಣು ಮಕ್ಕಳು. ಅಣ್ಣ ತಮ್ಮಂದಿರು ಒಟ್ಟಿಗೆ ಬದುಕುವ ತುಂಬು ಕುಟುಂಬ ಅದು. ಇದ್ದ ಸಣ್ಣ ಪುಟ್ಟ ಕಿರಿ ಕಿರಿಯೂ ಕಳೆದು ನಾವು ಒಳ್ಳೆಯ ಜಾಗ ಸೇರಿದೆವೆಂಬ ಸಾರ್ಥಕ ಭಾವ ಮೂಡಿದ್ದು ನಮ್ಮಲ್ಲಿ.
ಹಾಲಪ್ಪಣ್ಣ ಕರಣಿಯವರಿಗೆ ನಾವು ಬಾಡಿಗೆ ಇಂತಿಷ್ಟು ಅಂತ ಮಾತಾಡಿದ್ದೇ ಇಲ್ಲ. ಹೋಗಿ ಉಳಿದ ಮೇಲೆ ಕೇಳಿದೆ….. ಎಷ್ಟು ಕೊಡಲಿ?! ಅಂತ. ಗಪ್ಪರಿ ಅಂದರು. ನಮಗೆ ಹಾಗೆಲ್ಲಾ ಪುಗಸಟ್ಟೆ ಉಳಿಯುವ ಮನಸ್ಸಿಲ್ಲವಾದ್ದರಿಂದ ಹೇಳಲೇ ಬೇಕೆಂದು ಪಟ್ಟು ಹಿಡಿದೆ. ಅವರು ತಮ್ಮ ಸಹೋದರ ವಿಟ್ಠಲನಿಗೆ 350 /- ರೂ ಕೊಡಿ ಎಂದಾಗ ಸಮಾಧಾನವಾಯಿತು. ಅದೂ ಎಂದೂ ಅವರಾಗಿ ಅವರು ಹಣ ಕೇಳಿದ್ದೇ ಇಲ್ಲ. ಪ್ರತಿದಿನ ಸಂಜೆ ನಾನು ಅವರ ಮಕ್ಕಳಾದ ಚೈತ್ಯು, ಬಸು, ರಾಘು, ಹಾಗೇ ಅವರ ತಮ್ಮನ ಮಗ ವಿರೂಪಾಕ್ಷ, ರಮಾನಂದ ಎಲ್ಲರೂ ಸೇರಿ ಗಂಟೆಗಟ್ಟಲೆ ಕ್ರಿಕೆಟ್ ಆಡುತ್ತಿದ್ದೆವು. ಎಲ್ಲರೂ ವರಾಂಡಾದ ಮೇಲೆ ಕುಳಿತು ಸುದ್ದಿ ಹೇಳುತ್ತಿದ್ದೆವು. ನಮ್ಮ ಹಾಲಪ್ಪಣ್ಣನವರು ತಮ್ಮ Victor bike ಮೇಲೆ ಬಂದರೆ ಸಾಕು…..ಮಕ್ಕಳು ನಿಧಾನವಾಗಿ ತಮ್ಮ ತಮ್ಮ ಕೋಣೆ ಸೇರುತ್ತಿದ್ದರು. ಅವರೆಂದರೆ ಎಲ್ಲರಿಗೂ ಭಯ ಭಕ್ತಿ. ಹಾಗಂತ ಅವರು ಅಷ್ಟು ಹಿರಿಯವರಾದರೂ ನನಗೆ ಭಟ್ಟ ಸರ್…. ಎಂದೇ ಸಂಭೋದಿಸುತ್ತಿದ್ದರು.
ಹಾಲಪ್ಪಣ್ಣನವರು ಅತ್ಯಂತ ಗಂಭೀರ ವ್ಯಕ್ತಿ ಆದುದರಿಂದ ಯಾರೊಬ್ಬರೂ ಕಂಪೌಂಡಿನೊಳಗೆ ಸುಖಾಸುಮ್ಮನೆ ಬರುವ ಹಾಗಿರಲಿಲ್ಲ. ಅಕಸ್ಮಾತ್ ಯಾರಾದರೊಬ್ಬರು ಯಾವುದೋ ಕೆಲಸಕ್ಕಾಗಿ ನನ್ನ ಅಥವಾ ಅಕ್ಕನ ಬಳಿಗೆ ಬಂದರೂ…. ಹತ್ತು ನಿಮಿಷ ಮಾತಾಡುತ್ತಾ ಕುಳಿತರೆ ಹಾಲಪ್ಪಣ್ಣನವರು ಅಲ್ಲಿಗೇ ಹಾಜರ್…. ಅವರು ಏನೂ ಮಾತನಾಡುತ್ತಿರಲಿಲ್ಲ.ಆದರೆ ನಮಗೆ ಯಾರಿಂದಲೂ ಯಾವುದೇ ರೀತಿಯ ಅಪಾಯ ಆಗದಂತೆ ಅವರು ನಮ್ಮನ್ನು ಕಾಯುತ್ತಿದ್ದರು. ಅವರ ಜೊತೆಗೆ ಅವರ ಪ್ರೀತಿಯ ನಾಯಿ ಮೋತಿ ಸದಾ ನಮ್ಮ ಬೆಂಗಾವಲಾಗಿತ್ತು. ಒಮ್ಮೆ ನಾವು ಬಾಗಿಲು ಹಾಕಿದರೆ ಸಾಕು. ಮೋತಿ ಬಂದು ಢಬ್ ಅಂತ ಬಾಗಿಲು ತೆರೆಯುತ್ತಿತ್ತು. ನನಗೂ ನಾಯಿಯನ್ನು ಕಂಡರೆ ಬಹಳ ಪ್ರೀತಿಯಾದುದರಿಂದ ಮೋತಿ ನನ್ನ ಆಪ್ತನಾಗಿದ್ದ.
ಹಾಲಪ್ಪಣ್ಣನವರು ತಮ್ಮ ಮಕ್ಕಳನ್ನು ಬಹಳ ಶಿಸ್ತಿನಿಂದ ಬೆಳೆಸಿದ್ದರು. ಮಕ್ಕಳಿಗೂ ಅಷ್ಟೇ ನನ್ನನ್ನು ಕಂಡರೆ ಅಪಾರ ಗೌರವ. ಮನೆಯಲ್ಲಿ ಒಂದೇ ಒಂದು ಗುಲಾಬಿ ಹೂವು ಬಿಟ್ಟರೂ ಹೋಗು ಟೀಚರವ್ವಂಗೆ ಕೊಟ್ಟು ಬಾ ಎನ್ನುತ್ತಿದ್ದರು ಮಕ್ಕಳ ಹತ್ತಿರ. ಹಾಲಪ್ಪಣ್ಣನವರು ಊರಿಗೆ ತಲಾಟೆ ಆದುದದರಿಂದ ಊರಿನ ಅನೇಕ ಜನ ಅವರಲ್ಲಿ ಮಾಹಿತಿ ಪಡೆದುಕೊಂಡು ಹೋಗಲು ಬರುತ್ತಿದ್ದರು. ಊರಿನ ಜಗಳ ಜಾಪತ್ತುಗಳನ್ನು ಬಗೆಹರಿಸಲು ಹಾಲಪ್ಪಣ್ಣನವರು ಮುಂದಾಗಿ ಹೋಗುತ್ತಿದ್ದರು. ಮಕ್ಕಳಿಗೆ ಏನಾದರೂ ತಿಂಡಿ ತರುವುದಾದರೆ ನಮಗೂ ತರುತ್ತಿದ್ದರು. ಹೇಳಿದರೆ ಯಾರೂ ನಂಬಲಾರರು. ನಾವು ಅವರಿಗೆ ಕೊಡುವುದು 350/-ರೂ ಅವರು ನಮಗೆ ಖರ್ಚು ಮಾಡುವುದು 1500/-ರೂ ಒಂದೇ ಒಂದು ದಿನ ವ್ಯಂಗ್ಯ ಮಾತುಗಳನ್ನು ಆಡಿದ್ದಾಗಲೀ, ವಕ್ರ ದೃಷ್ಟಿಯಿಂದ ನಮ್ಮನ್ನು ನೋಡಿದ್ದಾಗಲೀ ಇಲ್ಲವೇ ಇಲ್ಲ. ಎಲ್ಲೇ ದೇವಸ್ಥಾನ ಹೋಗುವುದಿದ್ದರೂ ಭಟ್ಟ ಸರ್ ಬರ್ತೀರೇನ್ರೀ ಅಂತ ನನ್ನನ್ನು ಕರೆಯುತ್ತಿದ್ದರು.
ಹಾಲಪ್ಪಣ್ಣನವರು ನೋಡಲು ಹಾಗಿದ್ದರೂ ಹೃದಯವಂತ ವ್ಯಕ್ತಿ. ಇಡೀ ದಿನ ಬಿಡುವಾದಾಗೆಲ್ಲ ಕೈಯಲ್ಲಿ ಸರ ಹಿಡಿದುಕೊಂಡು ರಾಮ ನಾಮ ಜಪಿಸುವ ಹಾಲಪ್ಪಣ್ಣನವರು ನಮ್ಮನ್ನು ಮಕ್ಕಳಿಗೂ ಹೆಚ್ಚಾಗಿ ನೋಡಿಕೊಂಡ ಸಹೃದಯಿ. ನಾನು CET ಪರೀಕ್ಷೆ ಬರೆಯುವ ಹೊತ್ತಿಗೆ ಇಲ್ಲೇ ಪರೀಕ್ಷೆ ಬರೆದುಬಿಡಿ ಎಂದು ನನ್ನನ್ನು ಒತ್ತಾಯಿಸಿದರು. ಚೈತನ್ಯ ಆಶ್ರಮದಲ್ಲಿ ಪ್ರತಿ ಸಂಜೆ ಭಜನೆ, ಶ್ಲೋಕಗಳ ಪಠಣ. ಪ್ರಶಾಂತ ವಾತಾವರಣ. ಮನೆಯವರ ಪ್ರೀತಿ, ಪರಸ್ಪರ ಹಂಚಿಕೊಂಡು ತಿನ್ನುವ ಊಟ…ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎನ್ನುವಂತಾಗಿತ್ತು ನಮಗೆ.
ನಮ್ಮಕ್ಕನಿಗೆ transfer ಆದ ಸಂದರ್ಭದಲ್ಲಿ ಕೂಡ ತಾವೇ ಸ್ವತಃ ಗಾಡಿ ಮಾಡಿಸಿ ಎಲ್ಲಾ ಸಾಮಾನುಗಳನ್ನು ತುಂಬಿಸಿ ಅದರ ಮೇಲೆ ತಾವೂ ಬಂದು ಹೊನ್ನಾವರ ತಾಲೂಕಿನ ಆನೇಗದ್ದೆ ಶಾಲೆಗೆ ತಾವೇ ಹೋಗಿ ಅವಳನ್ನು join ಮಾಡಿಸಿ…..ತಮ್ಮ ಕರ್ತವ್ಯ ಮುಗಿಯಿತು ಎಂದು ನಿಟ್ಟುಸಿರು ಬಿಡುವಾಗ ನಮ್ಮ ಕಣ್ಣಾಲಿಗಳು ಒದ್ದೆಯಾಗಿದ್ದವು. ಯಾವ ವ್ಯಕ್ತಿಯ ಮೇಲೆ ನಾನೊಂದು ಸಂಶಯದ ಕಣ್ಣನ್ನಿರಿಸಿದ್ದನೋ ಆ ವ್ಯಕ್ತಿ ಭಗವಂತನೇ ಆಗಿ ನಮ್ಮನ್ನು ಕಾಪಾಡಿದ. ದೇವರನ್ನು ನಾನು ನೋಡಿಲ್ಲ. ನೋಡಿದ್ದೇ ಆದರೆ ಅದನ್ನು ಹಾಲಪ್ಪಣ್ಣನವರ ರೂಪದಲ್ಲಿ ನೋಡಿದ್ದೇನೆ.
ಶಾಂತವ್ವ, ಮಲ್ಲವ್ವ, ಆಂಟಿ ನಮ್ಮನ್ನು ಅತ್ಯಂತ ಪ್ರೀತಿಯಿಂದ ಕಂಡಿದ್ದಾರೆ. ರೊಟ್ಟಿ ಬಡಿಸಿದ್ದಾರೆ. ಗೌರವಿಸಿ ಬೀಳ್ಕೊಟ್ಟಿದ್ದಾರೆ. ಯಾವ ಜನ್ಮದ ಋಣವೋ ಗೊತ್ತಿಲ್ಲ. ಇಂದಿಗೂ ನಾವು ಬಿಟ್ಟು ಬಂದು 15 ವರ್ಷಗಳೇ ಸಂದರೂ ಪ್ರೀತಿಗೆ ಕಿಂಚಿತ್ತೂ ಕೊರತೆ ಆಗಿಲ್ಲ.
ಇಂದು ನನ್ನ ಲೇಖನ ಓದುವುದಕ್ಕೆ, ನನ್ನ ಧ್ವನಿ ಕೇಳುವುದಕ್ಕೆ ಹಾಲಪ್ಪಣ್ಣನವರು ಇಲ್ಲ. ಅವರ ಮಕ್ಕಳು ಅವರಿಗೆ ಕಡಿಮೆಯಿಲ್ಲದಂತೆ ನನ್ನನ್ನು ಆದರಿಸುತ್ತಾರೆ. ನಾನು ಅಕ್ಕ ಪ್ರತಿ ದಿನ ಅವರನ್ನು ನೆನೆಸಿಕೊಳ್ಳುತ್ತೇವೆ. ಹಾಲಪ್ಪಣ್ಣನಂತವರಿಂದಲೇ ನಿಸ್ವಾರ್ಥ ಎನ್ನುವ ಪದ ಇವತ್ತಿಗೂ ಅರ್ಥ ಕಂಡುಕೊಂಡಿದೆ.
ಒಂದು ದಿನ ನಾವೂ ಫೋಟೋ ಫ್ರೇಮಿನ ಒಳಗೆ ಸೇರುವವರಿದ್ದೇವೆ. ಆ ಸಮಯಕ್ಕೆ ಕೆಲವರಾದರೂ ನಮ್ಮನ್ನು ನೆನೆಸಿಕೊಳ್ಳುವಂಥ ಕೆಲಸ ಮಾಡಿ ಹೋಗಬೇಕು. ಬರೀ ಲಾಭವನ್ನೇ ನೋಡುತ್ತಾ ಹೋದವರ ಪರಿಸ್ಥಿತಿ ಯಾರಿಗೂ ಬೇಡವಾಗಿ ಹೋದೀತು…. ಏನೂ ಇಲ್ಲದವನೂ ಒಂದಿನ ಏನಿಲ್ಲ ಎನಿಸಿಕೊಳ್ಳುವಷ್ಟು ದೊಡ್ಡವನಾದಾನು. ಬಾಹ್ಯ ರೂಪಕ್ಕಿಂತ ಅಂತರಂಗದ ರೂಪ ನಮ್ಮನ್ನು ಬಹಳಕಾಲ ಜನ ನೋಡುವಂತೆ ಮಾಡುತ್ತದೆ. ಒಳ್ಳೆಯವರೇ ಇಲ್ಲವೇನೋ ಎನ್ನುವ ಕಾಲಕ್ಕೆ ದೇವರು ಪರಿಚಯಿಸಿದ ವ್ಯಕ್ತಿ ನಮ್ಮ ಹಾಲಪ್ಪಣ್ಣನವರು. ಹಾಲಿನಷ್ಟೇ ಶುದ್ಧವಾಗಿ ಬದುಕಿ ಹೋದ ಹಾಲಪ್ಪಣ್ಣನವರಿಗೆ ನನ್ನ ಭಾಷ್ಪಾಂಜಲಿ ಇದು….
ಮತ್ತದೇ ಬಿಳಿ ಪಾಯಿಜಾಮ, ಬಿಳಿ ಜುಬ್ಬ, ತಲೆಗೊಂದು ಗಾಂಧಿ ಟೋಪಿ, ತಿರುಗಿಸಿದ ಜಬ್ಬರ್ ದಸ್ತ ಮೀಸೆ T.V.S. Victor ಗಾಡಿ…..ಹಾಲಪ್ಪಣ್ಣನವರು ಇಂದು ಕಣ್ಣೆದುರಿಗೆ ಇಲ್ಲದಿದ್ದರೂ ಹೃದಯದೊಳಗೆ ಸದಾ ನೆಲೆಸೇ ಇರುತ್ತಾರೆ. ಹೋದವರ್ಷ ಮರಳಿ ಹೋಗಿ ಅವರ ಫೋಟೋದ ಎದುರಿಗೆ ಹತ್ತು ನಿಮಿಷ ಮೌನವಾಗಿ ನಿಂತೆ. ಮತ್ತೆ ನನ್ನನ್ನು ಗುರಿ ಗುರಿ ಗುರಿ ಗುರಿ ನೋಡುತ್ತಿದ್ದಂತೆ ಭಾಸವಾಯಿತು.?? ??????????
ಸದ್ಗುರು ಶ್ರೀಧರರ ಆಶೀರ್ವಾದ ದಿ|| ಹಾಲಪ್ಪಣ್ಣನವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ದಿ|| ಹಾಲಪ್ಪಣ್ಣನವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ