ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ಎನ್ ಆರ್ ಶ್ರೀನಿವಾಸ್
ಬರೀ ಮಾಸ್ತರನಾಗಿದ್ದರೆ ನಾನು ನನ್ನ ವರ್ಗಕೋಣೆಗಷ್ಟೇ ಸೀಮಿತವಾಗಿಬಿಡುತ್ತಿದ್ದೆ. ನನ್ನ ಉಪನ್ಯಾಸಗಳು ಆ ಪುಟ್ಟ ಮಕ್ಕಳಿಗೆ ಅರ್ಥವಾಗದೇ ಬಿಟ್ಟ ಕಣ್ಣು ಬಿಟ್ಟು ಕುಳಿತು ಕೇಳುತ್ತಿದ್ದವು.?? ಕೆಲವೊಂದು ಅಲ್ಲೇ ಕಣ್ಣು ಮುಚ್ಚುತ್ತಿದ್ದವು.? ಅವರು ಕೇಳುತ್ತಾರೋ ಬಿಡುತ್ತಾರೋ ನಾನಂತೂ ಹೇಳುವವನೇ ಎಂಬ ತೀರ್ಮಾನಕ್ಕೆ ಬಂದಾಗ ದೇವರು ನನಗೆ Facebook Wats app ಗಳನ್ನು ಪರಿಚಯಿಸಿ ಕೈಗೊಂದು ಮೊಬೈಲ್ ಕೊಟ್ಟು ಹಾದಿ ಬದಲಿಸಿದ. ಮಕ್ಕಳನ್ನು ಉಳಿಸಿದ.? ಕೆಲವರು ನೀನು ಇಲ್ಲಿರುವವನಲ್ಲಾಗಿತ್ತು ಎನ್ನುತ್ತಾರೆ. ಎಲ್ಲೋ ಇರಬೇಕಾಗಿತ್ತು ಎಂದೂ ಹೇಳುತ್ತಾರೆ. ??? ಅಪಾರ್ಥ ಮಾಡುವುದಿಲ್ಲ ನಾನು. ನನ್ನ ಸುದ್ದಿಯ ಸುನಾಮಿಯಲ್ಲಿ ಮಕ್ಕಳು ಕೊಚ್ಚಿ ಹೋಗುತ್ತಿದ್ದರೋ ಏನೊ?! ಈಗ ಹೋದಲ್ಲೆಲ್ಲ ನನ್ನನ್ನು ದೂರದಿಂದಲೇ ಗುರಾಯಿಸಿ ನೋಡು ನೋಡು ಬಣ್ಣ ತುಂಬುವವ ಬಂದ…..ಎಂದು ಕರೆಯಲು ಶುರು ಮಾಡಿದ್ದಾರೆ.???. ಕೆಲವರು ಬಣ್ಣ ಹಚ್ಚಿದವರು ಎನ್ನುತ್ತಾರೆ. ಕೆಲವರು “ನಿನ್ನ ಆ ಬಣ್ಣ ಚೊಲೋ ಬರತದ್ಯೋ” ಎನ್ನುತ್ತಾರೆ. ಒಟ್ಟಾರೆ ಬಣ್ಣ ಕೆಡಿಸಿದವರು ಎಂದು ಹೇಳದಿದ್ದರೆ ಸಾಕು. ?? ನಗುವವನ ಹೃದಯದೊಳಗೂ ನೋವಿನ ಪ್ರವಾಹವಿದ್ದೇ ಇರುತ್ತದೆ.
ಬಣ್ಣ ತುಂಬುವ ಮೊದಲೇ ನನ್ನ ಬಣ್ಣವೊಂದು ಮಾಸಿ ಹೋಯಿತು ನಿನ್ನೆ. ಹೇಗೆ ಬರೆಯಲಿ ಎಂಬುದೇ ಅರ್ಥವಾಗುತ್ತಿಲ್ಲ. ಬರೆದಿದ್ದನ್ನೆಲ್ಲಾ ಸತ್ಯವೆಂದು ನಂಬಿಸುವುದಕ್ಕೆ ನಾನು ಸುಳ್ಳು ಮಾರುವವನಲ್ಲ. ಆದರೂ ಕೆಲವೊಮ್ಮೆ ದೊಡ್ಡದಾಗಿ ಹೇಳಿದರೆ ನಂಬದವರು ಕಿವಿಯಲ್ಲಿ ಪಿಸುಗುಟ್ಟಿ ಹೇಳಿದರೆ ನಂಬುತ್ತಾರೆ. ನನ್ನ ಧ್ವನಿಗೆ ಅದು ಹೊಂದುವುದಿಲ್ಲ. ದೇವರಾಣೆ ನಾನು ಹಾಕುವುದಿಲ್ಲ. ಪಾಪ….ದೇವರಿಗ್ಯಾಕೆ ಕಷ್ಟ. ದೊಡ್ಡದಾಗೇ ಹೇಳಬೇಕು. ನನ್ನ ಪ್ರೀತಿಯ ಅಭಿಮಾನಿ ಓದುಗರಿಗೆ ನಾನು ದೊಡ್ಡದಾಗೆ ಹೇಳಬೇಕು.
2012 ರ ಸಮಯವಿರಬಹುದು. ನನ್ನ ನಾಲ್ಕನೇ ಪುಸ್ತಕ ಸಂದೇಶ ಸನ್ನಿಧಿ ಪ್ರಕಟವಾಗಿತ್ತು. ಅದು ಬರೀ ಚಿಂತನಗಳ ಮಾಲಿಕೆ. ಹೋದಹೋದಲ್ಲೆಲ್ಲ ಭಾಷಣ ಬಿಗಿಯುವ ನಾನು ಅದನ್ನೇ ಬರಹ ರೂಪಕ್ಕೆ ಇಳಿಸಿ 1000 ಪುಸ್ತಕ ಮಾಡಿಸಿದ್ದೆ. ಕೊಳ್ಳುವವರೇ ಇಲ್ಲದೇ ಅದು ನನ್ನ ಕಪಾಟಿನೊಳಗೇ ಕೊಳೆತು ಹೋಗುವುದನ್ನು ನನ್ನ ಹತ್ತಿರ ನೋಡಲಿಕ್ಕಾಗಲಿಲ್ಲ. ಸಾಕು ಎನಿಸಿತ್ತು. ಅಷ್ಟು ಹೊತ್ತಿಗೆ ಆಂಜನೇಯ ನನ್ನ ಕೈಬಿಡಲಿಲ್ಲ. ನಮ್ಮ ವಿದ್ಯಾರ್ಥಿ ಮೋರಿಗಂಡಿ ಆಂಜನೇಯ ಅಲ್ಲ.? ಬಂಗಾರಮಕ್ಕಿ ಆಂಜನೇಯ.? ಗೇರಸೊಪ್ಪಾ ಬಂಗಾರಮಕ್ಕಿಯಿಂದ ನನಗೊಂದು phone call ಬಂತು. ಮಾರುತಿ ಗುರೂಜಿಯವರ ಹೇಮಪುರ ಪತ್ರಿಕೆಯಲ್ಲಿ ನಿಮ್ಮ ಸಂದೇಶ ಸನ್ನಿಧಿ ಪುಸ್ತಕದ ಲೇಖನಗಳನ್ನು ಅಂಕಣವಾಗಿ ಪ್ರಕಟಿಸಬಹುದಾ?! ಎಂಬುದಾಗಿ. ನಾನಂದೆ ಖಂಡಿತ. ಓದುಗರೇ ನನ್ನ ಬದುಕಿನ ಆಸ್ತಿ ಜನರು ಓದಲಿ. ಪ್ರಕಟವಾಯಿತು. ಪ್ರತಿ ಹೇಮಪುರ ಪತ್ರಿಕೆಯಲ್ಲೂ ಒಂದೊಂದು ಸಂಚಿಕೆ ಬರತೊಡಗಿತು. ಅದರಲ್ಲಿ ಸಂದೀಪ ಎಸ್ ಭಟ್ಟ ಎಂದು ಬರೆದು 9480460035 ಎಂದು ಫೋನ್ ನಂ ಹಾಕುತ್ತಿದ್ದರು. ಓದುವವರೇ ಕಡಿಮೆ.?? ಓದಿದರೂ ಬರೆದ ಪುಣ್ಯಾತ್ಮನಿಗೆ ಕರೆನ್ಸಿ ಖರ್ಚು ಮಾಡಿ ಯಾರು ಫೋನು ಮಾಡುತ್ತಾರೆ?! ಹೇಳಿ. ಮಾಡುವವರೂ ಇದ್ದಾರೆ……ಇದ್ದಾರೆ. ಬಂತು ನೋಡಿ ಒಂದಿನ call ಚಿತ್ರದುರ್ಗದಿಂದ.
“ಸಂದೀಪ ಭಟ್ ಅವರೇ ನಾನು ಎನ್. ಆರ್. ಶ್ರೀನಿವಾಸ್ ಅಂತ ಚಿತ್ರದುರ್ಗದಿಂದ. ನಾನು ಚಾರ್ಟರ್ಡ್ ಅಕೌಂಟೆಂಟ್. ನಿಮ್ಮ ‘ಬಟ್ಟೆ ನೋಡಿ ಕೆಟ್ಟ’ ಎನ್ನುವ ಲೇಖನ ಓದಿದೆ.” ಎಂದರು. ಇಷ್ಟು ಹೇಳಿದ್ದೆ ನನಗೊಂದು ರೀತಿಯ ಅವ್ಯಕ್ತ ಭಯ ಆವರಿಸಿದ್ದು. ಲೇಖನದಲ್ಲಿ ಎಲ್ಲೋ ನನ್ನಿಂದ ಬರವಣಿಗೆಯ ದೋಷವಾಗಿರಬಹುದು ಅಂತ. ಆದರೆ ಅವರು ಮತ್ತೆ ಮಾತು ಮುಂದುವರಿಸಿ “ನನ್ನ ಮನದ ಭಾವಗಳನ್ನು ಅಕ್ಷರಗಳ ರೂಪದಲ್ಲಿ ಮತ್ಯಾರೂ ಬರೆಯದ ಶೈಲಿಯಲ್ಲಿ ಅತ್ಯುತ್ತಮವಾಗಿ ನಿರೂಪಿಸಿದ್ದೀರಿ.” ಎಂದರು. ನನ್ನ ಪುಸ್ತಕಗಳನ್ನು ಚಿತ್ರದುರ್ಗಕ್ಕೆ ತರಿಸಿಕೊಂಡರು. ತಾನೂ ಓದಿ ತನ್ನ ಮಿತ್ರರನೇಕರಿಗೆ ಓದಲು ತಿಳಿಸಿ ಅವರನ್ನೂ ನನ್ನ ಮಿತ್ರರಾಗಿಸಿದರು.
ಅದಾಗಲೇ ನಿವೃತ್ತ ಜೀವನದಲ್ಲಿದ್ದ ಎನ್.ಆರ್. ಶ್ರೀನಿವಾಸ ಸರ್….ಆಗಾಗ ನನಗೆ ಫೋನಾಯಿಸುವವರು. ವಯಸ್ಸಿನಲ್ಲಿ, ಹುದ್ದೆಯಲ್ಲಿ ಅಷ್ಟು ಹಿರಿಯವರಾದರೂ ನನ್ನನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುವ ಶ್ರೀನಿವಾಸ್ ಸರ್ ಅಪಾರ ಅನುಭವವುಳ್ಳವರು. ಓದಿನ ಕಣಜ ಅದು. ಪ್ರತಿ ಸಲ ಪುಸ್ತಕ ಕೊಂಡು ಓದಿ ಅದರಲ್ಲಿರುವ ವಿಷಯಗಳನ್ನು ನನ್ನ ಜೊತೆ ಚರ್ಚಿಸಿ ಅವರಿಗದು ಇಷ್ಟವಾದರೆ ಆಗಿಂದಾಗ್ಗೆ ನನಗೆ ಕೊರಿಯರ್ ಮಾಡುತ್ತಿದ್ದರು. ಎಷ್ಟೋ ಪೇಪರ್ ಕಟಿಂಗ್ಸಗಳನ್ನು ನಾನು ಓದಬೇಕೆಂಬ ಉದ್ದೇಶದಿಂದ ಅವರದೇ ಕರ್ಚಿನಲ್ಲಿ ಪಾರ್ಸಲ್ ಮಾಡಿ ಕಳಿಸುವವರು. ನೂರಾರು wisdom ಪತ್ರಿಕೆಗಳು, ಪುಸ್ತಕಗಳು ಅವರಿಂದ ಕಳುಹಿಸಲ್ಪಟ್ಟಿವೆ. ಅದರ ಜೊತೆಗೆ ಅವರದ್ದೊಂದು letter ಇರುತ್ತಿತ್ತು. ಓದಾದ ಮೇಲೆ ಮತ್ತೆ ಫೋನಾಯಿಸಿ ಚರ್ಚಿಸುವವರು. ಎನ್ ಆರ್ ಶ್ರೀನಿವಾಸ್ ಸರ್ ಮಾತನಾಡುತ್ತಿದ್ದರೆ ನನಗೊಂದು ಪುಸ್ತಕ ಓದಿದ ಅನುಭವವಾಗುತ್ತಿತ್ತು.
ಶ್ರೀನಿವಾಸ್ ಸರ್ ಕಳೆದ ಎಂಟು ವರ್ಷಗಳಿಂದ ಪರಿಚಿತವಾದರೂ ನಾನೊಮ್ಮೆಯೂ ಅವರ ಮುಖ ನೋಡಿಲ್ಲ. ಅವರು wats app, Facebook ಈ ಥರದ ವಿರೋಧಿಗಳು. ಚಿಕ್ಕದೊಂದು ಫೋನ್ ಹಿಡಿದು ನನ್ನ ಜೊತೆ ಮಾತನಾಡುತ್ತಿದ್ದರು. ಅವರ ಮಗ ಶ್ಯಾಮ್ ಅವರನ್ನು ನನಗೆ ಪರಿಚಯಿಸಿ ಮಾತಾಡಿಸಿದರು. ನಾನು ಶ್ಯಾಮ್ ಅವರಿಗೆ ತಂದೆಯವರಿಗೆ ಒಂದು ಅಂಡ್ರಾಯ್ಡ ಫೋನ್ ಕೊಡಿಸಿ ಎಂದೆ. ಶ್ರೀನಿವಾಸ್ ಸರ್ ಸುತರಾಂ ಒಪ್ಪಲಿಲ್ಲ. ನಾನು ಪುಸ್ತಕ ಓದುವುದರಲ್ಲೇ ಖುಷಿ ಪಡುತ್ತೇನೆಂದರು.
ಶ್ರೀನಿವಾಸ್ ಸರ್ ನನ್ನ ಸಾಹಿತ್ಯವನ್ನು ತುಂಬು ಹೃದಯದಿಂದ ಪ್ರೋತ್ಸಾಹಿಸುವವರು. ಅವರೆಷ್ಟು ಶಿಸ್ತಿನ ಜೀವಿಗಳೆಂಬುದು ಅವರ ಮಾತುಗಳಲ್ಲೇ ವ್ಯಕ್ತವಾಗುತ್ತಿತ್ತು. ನನಗೂ ಚಿತ್ರದುರ್ಗಕ್ಕೆ ಹೋಗಲಾಗಲಿಲ್ಲ. ಅವರಿಗೂ ಬರಲಾಗಲಿಲ್ಲ. ಪರಸ್ಪರ ನೋಡದೆಯೇ ಬರಲಾರದ ಜಾಗಕ್ಕೆ ಹೋಗಿಬಿಟ್ಟರೆಂಬ ಸುದ್ದಿ ಬಂತು ನಿನ್ನೆ.? ಹೃದಯಾಘಾತವಾಯಿತಂತೆ. ಬಸವರಾಜ ಸರ್, ಸ್ವಾಮಿ, ಶ್ಯಾಮ ಸರ್ ಹೀಗೆ ತನ್ನವರಿಗೆಲ್ಲಾ ನನ್ನನ್ನು ಪರಿಚಯಿಸಿದ ವ್ಯಕ್ತಿ ನನ್ನಿಂದ ದೂರಾದರೆಂಬ ಸುದ್ದಿ ತೀರಾ ಬೇಸರವುಂಟುಮಾಡಿತು.
ಅವರು ಬರೆದ ಪತ್ರಗಳು, ವಾರ, ಹದಿನೈದು ದಿನಕ್ಕೊಮ್ಮೆ ಅವರು ಮಾಡುತ್ತಿದ್ದ ದೂರವಾಣಿ ಕರೆಗಳು ಇನ್ನು ನೆನಪು ಮಾತ್ರ. ಸಂದೀಪ್ ನಾನು ಮನೆಗೆ ಬಂದವರನ್ನು ಬಹಳ ಹೊತ್ತು ಕುಳ್ಳಿರಿಸಿ ಹರಟೆ ಹೊಡೆಯುವುದಿಲ್ಲ. ಏನು ಬಂದಿದ್ದು? ಅಂತ ವಿಚಾರಿಸುತ್ತೇನೆ. ನನ್ನಿಂದ ಏನಾಗಬೇಕೆಂದು ಕೇಳುತ್ತೇನೆ. ಕಳುಹಿಸಿ ಬಿಡುತ್ತೇನೆ. ವಿನಾಕಾರಣ ಇನ್ನೊಬ್ಬರ ಕುರಿತಾಗಿ ಮಾತನಾಡುವುದು ನನಗೆ ಆಗಿ ಬರದು. ಆ ವೇಳೆಯಲ್ಲಿ ಮತ್ತೊಂದು ಪುಸ್ತಕ ಓದಬಹುದು ಎನ್ನುತ್ತಿದ್ದರು.
ಇಂತಹ ಹಿರಿಯರ ಅಭಿಮಾನವೂ ಸಿಕ್ಕಿದ್ದು ನನ್ನ ಜನ್ಮ ಜನ್ಮಾಂತರದ ಪುಣ್ಯ. ಎನ್.ಆರ್.ಶ್ರೀನಿವಾಸರನ್ನು ನೋಡದೆಯೇ ಕಳೆದೆಂಟು ವರ್ಷಗಳಿಂದ ಅವರ ಒಡನಾಟದಲ್ಲಿರುವೆ ಎಂದರೆ ನಿಮಗೆ ಬೆಳದಿಂಗಳ ಬಾಲೆ, ಯಾರೆ ನೀನು ಚೆಲುವೆ ಸಿನೆಮಾ ನೆನಪಾಗಿರಲಿಕ್ಕೆ ಸಾಕು.
ಗೊತ್ತಿಲ್ಲ ನನಗೆ. ಗೊತ್ತಾಗುವುದೂ ಇಲ್ಲ. ಬರೆಯುವವನ ಜೊತೆ ನೂರಾರು ಜನ ಸೇರಿಕೊಳ್ಳುತ್ತಲೇ ಇದ್ದಾರೆ. ಅಭಿಮಾನಕ್ಕೆ ಕಣ್ಣೀರಾಗುವದಷ್ಟೇ ಗೊತ್ತು ನನಗೆ. ಭಗವಂತನ ದಯದಿಂದ ಅಹಂಕಾರವೊಂದು ಮನಸ್ಸೊಳಗೆ ಮೂಡದಿರಲಿ. ಅಭಿಮಾನಿ ಓದುಗರಿಗಾಗಿ ಸಮಯ ಕೊಡಬೇಕು. ನಾನು ಸ್ವಲ್ಪ ಹೊತ್ತಾದರೂ……ಮತ್ತೆ ಶ್ರೀನಿವಾಸ್ ಸರ್ ಹುಟ್ಟಿ ಬಂದು ನನಗೆ ಮುಂದೊಮ್ಮೆ ಫೋನ್ ಮಾಡಬಹುದು….???
ಸದ್ಗುರು ಶ್ರೀಧರರ ಆಶೀರ್ವಾದ ದಿ|| ಶ್ರೀನಿವಾಸ್ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ. ಅವರ ಮಕ್ಕಳಿಗೆ ತಂದೆಯ ಸಾವಿನ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
ದಿ|| ಎನ್ ಆರ್ ಶ್ರೀನಿವಾಸರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಎನ್.ಆರ್. ಶ್ರೀನಿವಾಸ ಸರ್ ಗೆ ನನ್ನ ಅಕ್ಷರ ಭಾಷ್ಪಾಂಜಲಿ.
??????⚫⚪???????⚫⚪?????