ಎಲ್ಲದಕ್ಕೂ ಮುಪ್ಪಿದೆ. ಚಿಗುರೆಲೆ ಹಣ್ಣೆಲೆಯಾಗುತ್ತದೆ. ಹೊಸಮನೆ ಹಳೆ ಮನೆಯಾಗುತ್ತದೆ. ಮನುಷ್ಯ ಶರೀರಕ್ಕೆ ಮುಪ್ಪು ಬರುತ್ತದೆ. ಶರೀರಕ್ಕೆ ಮುಪ್ಪು ಬಂದಾಗ ಕೂದಲು ಬಿಳಿಯಾಗುತ್ತದೆ. ಚರ್ಮ ಸುಕ್ಕುಗಟ್ಟುತ್ತದೆ. ಹಲ್ಲು ಬಿದ್ದುಹೋಗುತ್ತದೆ. ಇಡೀ ಶರೀರಕ್ಕೆ ಮುಪ್ಪು ಆವರಿಸುತ್ತದೆ. ಆದರೆ ಒಳಗಿರುವ ಆಸೆಗೆ ಮಾತ್ರ ಮುಪ್ಪು ಆವರಿಸುವುದಿಲ್ಲ. ಈಗಲೋ ಇನ್ನೊಂದು ಗಳಿಗೆಯಲ್ಲೋ ಸಾಯುವ ವ್ಯಕ್ತಿಯೂ ಕೂಡ ಆಸೆಯನ್ನು ಬಿಡುವುದಿಲ್ಲ. ಆಸೆಗೆ ಮುಪ್ಪಿಲ್ಲ.
ಗಂಡ ಹಾಗೂ ಹೆಂಡತಿ ಒಂದು ಊರಿನಲ್ಲಿ ವಾಸವಾಗಿದ್ದರಂತೆ. ಗಂಡ ಕೂಲಿನಾಲಿ ಮಾಡುತ್ತಿದ್ದರೆ ಹೆಂಡತಿ ಬೆಣ್ಣೆ ತುಪ್ಪ ಮಾಡಿ ಮಾರುತ್ತಿದ್ದಳು. ಯಾವುದೇ ಕಾರಣಕ್ಕೂ ಗಂಡನಿಗೆ ತನ್ನ ದುಡ್ಡು ಕೊಡುತ್ತಿರಲಿಲ್ಲ. ಒಂದು ಬಾರಿ ಅನಿವಾರ್ಯ ಪ್ರಸಂಗ ಗಂಡ ಕಾಡಿಬೇಡಿ ಹೆಂಡತಿಯಿಂದ ಸಾಲವಾಗಿ ಸ್ವಲ್ಪ ಹಣ ಪಡೆದ. ಕೆಲವೇ ಸಮಯದಲ್ಲಿ ಆಕಸ್ಮಿಕವಾಗಿ ಹೆಂಡತಿ ಕಾಯಿಲೆ ಬಿದ್ದಳು. ಸಾವು ಸಮೀಪಿಸುತ್ತಿದೆ ಎನ್ನುವಂತಿತ್ತು ಅವಳ ಪರಿಸ್ಥಿತಿ. ಗಂಡ ನೆಂಟರಿಷ್ಟರಿಗೆ ಹೇಳಿ ಕಳುಹಿಸಿದ. ಎಲ್ಲರೂ ಬಂದರು. ಮನೆ ತುಂಬಾ ಜನ ಆದರೆ ಹೆಂಡತಿ ಸಾಯಲಿಲ್ಲ. ಎಂಟು ದಿನ ಕಳೆಯಿತು ಬಂದವರಿಗೆ ಊಟ ತಿಂಡಿ ವ್ಯವಸ್ಥೆ ಮಾಡಿ ಗಂಡನ ಹತ್ತಿರವಿದ್ದ ಹಣವೆಲ್ಲ ಖಾಲಿಯಾಯ್ತು. ತಾಳ್ಮೆ ಕೆಟ್ಟು ಹೋಯ್ತು ಹೆಂಡತಿ ಬಳಿ ಹೋಗಿ ಕೇಳಿಯೇ ಬಿಟ್ಟ “ನೀನು ಸಾಯುವುದು ಯಾವಾಗ?” ಎಂದು ಆಗ ಅವಳು ಹೇಳಿದಳಂತೆ “ನನ್ನ ಬೆಣ್ಣೆ ಕಾಸು ಕೊಡು ಸಾಯ್ತೇನೆ” ಎಂದು. ಗಂಡ ಸಾಲ ತೆಗೆದುಕೊಂಡಿದ್ದ ಹಣ ಮರಳಿಸಿದ ತಕ್ಷಣ ಹೆಂಡತಿ ಪ್ರಾಣ ಬಿಟ್ಟಳಂತೆ. ಈ ಕಥೆ ಸಾಯುವವರನ್ನು ಆಸೆ ಬಿಟ್ಟಿಲ್ಲ ಎಂಬುದನ್ನು ತೋರಿಸುತ್ತದೆ.
ಹಾಗಾದ್ರೆ ಆಸೆ ಒಳ್ಳೆಯದೋ, ಕೆಟ್ಟದ್ದೋ…? ಭಗವಾನ್ ಬುದ್ಧ ಆಸೆಯೇ ದುಃಖಕ್ಕೆ ಮೂಲ ವೆಂದ. ಶಂಕರಾಚಾರ್ಯರು ಕಾಲ ಆಟವಾಡುತ್ತಾನೆ ಆಯಸ್ಸು ಕಳೆದರೂ ಆಸೆ ಬಿಡುವುದಿಲ್ಲ ಎಂದರು. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಧರ್ಮಕ್ಕೆ ವಿರುದ್ಧವಲ್ಲದ ಕಾಮ ನಾನು ಎಂದ. ಒಟ್ಟಿನಲ್ಲಿ ಸಲ್ಲದ ಆಸೆ ಅನಾಹುತವನ್ನು ಉಂಟು ಮಾಡಿದರೆ . ಸಾತ್ವಿಕ ಆಸೆ ಉಪಕಾರವನ್ನುಂಟು ಮಾಡುತ್ತದೆ ಎಂಬುದು ಸ್ಪಷ್ಟ. ಎಲ್ಲಿ ಯಾವುದೇ ದುಷ್ಕೃತ್ಯ ನಡೆದರೂ ಅಲ್ಲಿ ಒಂದು ಆಸೆ ಇದ್ದೇ ಇದೆ. ಕಳ್ಳತನ, ದರೋಡೆ, ಯುದ್ಧ, ಕೊಲೆ, ಸುಲಿಗೆ ,ವ್ಯಾಜ್ಯ ಹೀಗೆ ಎಲ್ಲದರ ಹಿಂದೆ ಆಸೆಯಿದೆ.
ವಿಶ್ವಾಮಿತ್ರರ ಜೀವನದಲ್ಲಿ ನಮಗೆ ಎರಡು ಉದಾಹರಣೆ ಸಿಗುತ್ತದೆ ರಾಜನಾಗಿದ್ದ ವಿಶ್ವಾಮಿತ್ರ ರಾಜ್ಯಗಳನ್ನು ಗೆಲ್ಲುತ್ತಾ ಗೆಲ್ಲುತ್ತಾ ಒಮ್ಮೆ ವಸಿಷ್ಠರ ಆಶ್ರಮಕ್ಕೆ ಬಂದ. ಆಶ್ರಮದಲ್ಲಿ ಶಬಲೆ ಎನ್ನುವ ಹೆಸರಿನ ಹಸುವಿತ್ತು. ಅದು ಕಾಮಧೇನು, ಕೇಳಿದ್ದೆಲ್ಲವನ್ನೂ ನೀಡುತ್ತಿತ್ತು. ಅದರ ಸಹಾಯದಿಂದ ವಸಿಷ್ಠರು ವಿಶ್ವಾಮಿತ್ರನ ಅಪಾರ ಸೈನ್ಯಕ್ಕೆ ಉಪಚಾರ ಮಾಡಿದರು. ಶಬಲೆಯನ್ನು ನೋಡಿದ ವಿಶ್ವಾಮಿತ್ರರಿಗೆ ಆಸೆಯಾಯಿತು. ಇದು ನನ್ನ ಅರಮನೆಯಲ್ಲಿದ್ದರೆ ಚೆಂದ ಎಂದು ವಸಿಷ್ಠರಲ್ಲಿ ಶಬಲೆಯನ್ನು ನೀಡುವಂತೆ ಕೇಳಿದ. ಅವರು ನಿರಾಕರಿಸಿದರು. ಕೋಪಗೊಂಡ ವಿಶ್ವಾಮಿತ್ರ ತನ್ನ ಸೈನ್ಯದ ಮೂಲಕ ಬಲಾತ್ಕಾರವಾಗಿ ಶಬಲೆಯನ್ನು ಕೊಂಡೊಯ್ಯಲು ಮುಂದಾದ. ಆದರೆ ಶಬಲೆಯ ಮೈಯಿಂದ ಹುಟ್ಟಿ ಬಂದ ಸಾವಿರ ಸಾವಿರ ಸೈನಿಕರು ಅನಾಹುತವಾಗದಂತೆ ತಡೆದರು. ಸೋತ ವಿಶ್ವಾಮಿತ್ರ ತಪಸ್ಸು ಮಾಡಿ ಎಲ್ಲ ಆಯುಧಗಳನ್ನು ವರವಾಗಿ ಪಡೆದು ವಸಿಷ್ಠರ ಆಶ್ರಮದ ಮೇಲೆ ಮತ್ತೆ ದಾಳಿ ಮಾಡಿದ. ಈ ಬಾರಿ ವಸಿಷ್ಠರು ಬ್ರಹ್ಮ ದಂಡದಿಂದ ಎದುರಿಸಿ ವಿಶ್ವಾಮಿತ್ರನನ್ನು ಸೋಲಿಸಿದರು. ಬಲಿಷ್ಠ ಆಯುಧಗಳು ಬ್ರಹ್ಮ ದಂಡದೆದುರು ನಾಶವಾದವು. ದರ್ಪ ಮುರಿಯಿತು, ಅಹಂಕಾರ ಕರಗಿತು. ಬಾಹುಬಲಕ್ಕಿಂತ ಭಾವಬಲ ದೊಡ್ಡದು ಎಂಬುದನ್ನು ವಿಶ್ವಾಮಿತ್ರರು ಅರಿತರು. ಶಬಲೆಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಆಸೆ ಬಿಟ್ಟರು. ತಾನು ವಸಿಷ್ಠರಂತಾಗಬೇಕು ಎಂಬ ಆಸೆ ಮನದಲ್ಲಿ ಮೂಡಿತು. ಇದು ಸಾತ್ವಿಕ ಆಸೆ ಇದರಲ್ಲಿ ಒಳಿತಿದೆ. ಅವನದು ನನಗಾಗ ಬೇಕು ಎಂದಾಗ ಅಲ್ಲಿ ಜಗಳ. ನಾನು ಅವನಾಗಬೇಕು ಎಂದಾಗ ಅಲ್ಲಿ ಒಳಿತು, ಸಾಧನೆ ಹೀಗೆ ಆಸೆ ಬಲಿಷ್ಠವಾದಾಗ ಅದು ಸಂಕಲ್ಪ ವಾಗುತ್ತದೆ. ಸಂಕಲ್ಪ ಸಾಕಾರವಾದಾಗ ಒಳಿತಾಗುತ್ತದೆ.
ನಾವು ದೇವರನ್ನೇ ಬಯಸಿದರೆ ಅದು ತೀವ್ರವಾದ ಆಸೆ. ಅದನ್ನು ಭಜನೆ ,ಧ್ಯಾನ ,ಪೂಜೆ ಎನ್ನುತ್ತೇವೆ . ಅಲ್ಲಿ ನಮಗೆ ಒಳಿತಾಗುತ್ತದೆ. ಮಾನಸಿಕ ನೆಮ್ಮದಿ ಸಿಗುತ್ತದೆ. ಹೀಗೆ ಆಸೆಯನ್ನು ಒಳ್ಳೆಯ ಜಾಗದಲ್ಲಿಡಬೇಕು. ಆಗ ಅದು ನಮ್ಮ ಪಾಲಿಗೆ ವರವಾಗುತ್ತದೆ. ಅದೇ ಆಸೆ ಕೆಡುಕಿದ್ದರೆ ಅದು ನಮ್ಮ ಪಾಲಿಗೆ ಶಾಪವಾಗಿ ಪರಿಣಮಿಸುತ್ತದೆ. ಉದಾಹರಣೆಗೆ ರಾಮ ಸೀತೆಯನ್ನು ಬಯಸಿದರೆ ತಪ್ಪಲ್ಲ ಅಲ್ಲಿ ಶುಭ ಆದರೆ ರಾವಣ ಸೀತೆಯನ್ನು ಬಯಸಿದರೆ ಅಲ್ಲಿ ರಾಮಾಯಣ ಹಾಗಾಗಿ ಸಲ್ಲದ ಆಸೆ ಬೇಡ. ಸಾತ್ವಿಕ ಆಸೆ ಇರಲಿ. ಆಸೆಗೆ ಆಳವಾದ ಉದ್ದೇಶ ದೊಡ್ಡದಾದ ಗುರಿ ಇರಲಿ ಅದು ಖಂಡಿತ ತಪಸ್ಸಾಗುತ್ತದೆ.
✍️ *ಡಾ.ರವೀಂದ್ರ ಭಟ್ಟ ಸೂರಿ.