ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಉಮೇಶ ನಾಯ್ಕ ಬರ್ಗಿ

ನಮ್ಮ ಬದುಕು ಕೇವಲ ನಮ್ಮ ಬದುಕಿನ ನಿರ್ಧಾರದ ಮೇಲೇ ನಿಂತಿರುವುದಲ್ಲ. ಅದು ನಮ್ಮ ಜೊತೆ ಸಿಕ್ಕುವವರ ಮೇಲೂ ಅವಲಂಬಿತವಾಗಿರುತ್ತದೆ. ಗಾಳಿ ಹೋಗುವ ದಿಕ್ಕಿನಲ್ಲೇ ಬೀಸಿದರೆ ‘ನಾವೆ’ ಬೇಗ ದಡ ತಲುಪಬಹುದು. ವಿರುದ್ಧ ದಿಕ್ಕಿನಲ್ಲಿ ಬೀಸಿದರೆ ದಡ ತಲುಪುವುದು ವಿಳಂಬವಾಗಬಹುದು. ಕೆಲವೊಮ್ಮೆ ಚಂಡಮಾರುತಗಳು ಸಿಕ್ಕರಂತೂ ಮುಗಿದೇ ಹೋಯಿತು ಕಥೆ. ? ಇಂದು ಮತ್ತೋರ್ವ ಶಿಕ್ಷಕ ಮಿತ್ರರೊಂದಿಗೆ ತಮ್ಮೆದುರಾಗುತ್ತಿದ್ದೇನೆ. ನನ್ನ ಬದುಕಿನ ನಾವೆಗೆ ಹರಿಗೋಲಾಗಿ ನಿಂತ ಉಮೇಶ ನಾಯ್ಕರು ಇಂದಿನ ಅಕ್ಷರ ಅತಿಥಿ.
‌‌‌‌‌‌‌‌ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬರ್ಗಿಯವರಾದ ಉಮೇಶ ನಾಯ್ಕರು ಗೋಕರ್ಣ ಸಮೀಪ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಕ್ರೀಯಾಶೀಲವಾಗಿ ಕೆಲಸ ಮಾಡುವ ಇಂಥ ಶಿಕ್ಷಕರು ಸಿಗುವುದು ಊರಿನ ಅದೃಷ್ಟ. ಮಕ್ಕಳ ಭಾಗ್ಯ. ಸುಂದರವಾದ ಮುತ್ತು ಪೋಣಿಸುವ ಅಕ್ಷರ, ಶಿಸ್ತಿನ ನಿರ್ವಹಣೆ ಉಮೇಶ ನಾಯ್ಕರ ಪ್ಲಸ್ ಪಾಯಿಂಟ್. ವೃತ್ತಿಗೆ ಕನಸಿನಲ್ಲೂ ಮೋಸ ಮಾಡುವವರಲ್ಲ ಅವರು.
2011 ರಲ್ಲಿ ನಾನು ಹೊನ್ನಾವರಕ್ಕೆ ವರ್ಗಾವಣೆಗೊಂಡು ಬಂದಾಗ ಉಮೇಶ‌ ನಾಯ್ಕರು‌‌ ನಮಗೆ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾನು ಕೆರೆಕೋಣಿಗೆ ಬಂದ ಸಮಯಕ್ಕೆ ನನ್ನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡು ಮಾರ್ಗದರ್ಶನ ನೀಡಿದವರು ಶ್ರೀಯುತ ಉಮೇಶ ನಾಯ್ಕರು.
‌‌ ಹಿರಿತನ ಎನ್ನುವುದು ಕೇವಲ ವಯಸ್ಸಿಗೆ ಸಂಬಂಧಿಸಿದ್ದಲ್ಲ. ಹಿರಿದಾಗಿ ನಡೆಸಿಕೊಳ್ಳುವುದರ ಮೇಲೂ ಅದು ಅವಲಂಬಿತವಾಗಿರುತ್ತದೆ. ಕಿರಿಯರ ಮೇಲೆ ಅಧಿಕಾರದಿಂದ ದಬ್ಬಾಳಿಕೆ ಮಾಡುವ, ಊರಿನಲ್ಲಿ ಇಲ್ಲ ಸಲ್ಲದ್ದನ್ನು ಹೇಳಿ‌ ಬೆಂಕಿ ಹಚ್ಚುವ, ಇಬ್ಬರ ನಡುವೆ ಜಗಳ ಹೊತ್ತಿಸಿ ದೂರ ನಿಂತು ಚಂದ ನೋಡುವ ಕಲೆ ಬಹಳ ಜನರಿಗೆ ಸಿದ್ಧಿಸಿರುತ್ತದೆ. ಆದರೆ ಕಿರಿಯರನ್ನೂ ಹಿರಿಯರಂತೆ ಗೌರವಿಸಿ ಅವರಿಂದಲೂ ನಾವು ಕಲಿಯಬೇಕಾದ್ದು ಬಹಳಷ್ಟಿದೆ ಎನ್ನುವ ನಿಜವಾದ ಹಿರಿತನ ಇರುವವರು ಬಹಳ ಅಪರೂಪ. ಉಮೇಶ ನಾಯ್ಕರು ಕಿರಿಯನಾದ ನನ್ನನ್ನೂ ಹಿರಿದಾಗಿ ನಡೆಸಿಕೊಂಡರು.
ಯಾವುದೇ ತರಬೇತಿ ಇರಲಿ ಸಂದೀಪ ನಿನಗೊಂದು ಅವಧಿ ಇದೆ ನೋಡು……ನೀನು ಏನೇ ಹೇಳು ಎರಡು ಗಂಟೆ ನಿನಗೆ…ಎನ್ನುತ್ತಿದ್ದರು. ನನ್ನ ಚಿಂತನವೆಂದರೆ ಅವರಿಗೆ ಬಲುವೇ ಪ್ರೀತಿ. ಕುಳಿತು ಕೇಳಿ ಆಸ್ವಾದಿಸುತ್ತಿದ್ದರು. ನನ್ನ ಬರವಣಿಗೆಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಒಂದು ದಿನ ನೀವು ಎತ್ತರಕ್ಕೇರುತ್ತೀರಿ…. ಖಂಡಿತ ಎಂದು ನನ್ನನ್ನು ಹುರಿದುಂಬಿಸುತ್ತಿದ್ದರು.
‌‌‌‌‌‌‌‌‌‌ ಉಮೇಶ ನಾಯ್ಕರು ಬಹಳ ಧೈರ್ಯವಂತ ಮನುಷ್ಯರು. ಊರಿನಲ್ಲಿ ಪ್ರತಿಯೊಬ್ಬರೂ ಅವರಿಗೆ ಗೊತ್ತು. ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಅವರು ಕಾರ್ಯಕ್ರಮ ಸಂಘಟಿಸಿದರೆ ಊರಿನವರು ಬಹಳ ಸಂತೋಷದಿಂದ ಒಗ್ಗೂಡಿ ಬರುತ್ತಿದ್ದರು.
‌‌‌‌‌‌ ಉಮೇಶ ನಾಯ್ಕರು ಕ್ರೀಡೆಯಲ್ಲಿ ಕೂಡ ತುಂಬಾ ಆಸಕ್ತಿ ಉಳ್ಳವರು. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಖೋ ಖೋ ಆಟಗಾರರಾಗಿ ರೂಪುಗೊಳ್ಳುತ್ತಿದ್ದರು. ಕೇವಲ ಮಾಸ್ತರರಾಗಿ ವರ್ಗಕೋಣೆಗಷ್ಟೇ ಸೀಮಿತವಾಗದೇ ಊರವರ ಸಹಾಯ ಸಹಕಾರ ಪಡೆದು ಶಾಲೆಯನ್ನು ಸರ್ವಾಂಗ ಸುಂದರಗೊಳಿಸುವುದಕ್ಕೆ ಅವರು ಯಾವಾಗಲೂ ಎತ್ತಿದ ಕೈ. ಕಾಟಾಚಾರಕ್ಕೆ ಯಾವುದನ್ನೂ ಮಾಡುವವರಲ್ಲ ಅವರು. ಆಡುವವರೂ ಅಲ್ಲ.
ಯಾರು ಸಮಾಜಕ್ಕೆ ಬೇಕಾದ ಕೆಲಸವನ್ನು ಮಾಡುತ್ತಾರೋ ಅವರನ್ನು ಸಮಾಜವೂ ನೆನಪಿಟ್ಟುಕೊಳ್ಳುತ್ತದೆ. ನಮ್ಮಿಂದ ಸಮಾಜಕ್ಕೆ ಆಗದ ಕಾರ್ಯ ಘಟಿಸಿದರೂ ಅದನ್ನೂ ಸಮಾಜ ನೆನಪಿಟ್ಟುಕೊಳ್ಳುತ್ತದೆ. ಉಮೇಶ ನಾಯ್ಕರು ತಾವು ಎಲ್ಲೇ ಹೋದರೂ ನೆನಪಿನಲ್ಲಿಡುವಂಥ ಸತ್ಕಾರ್ಯ ಮಾಡಿ ಬರುತ್ತಾರೆ.
‌‌ಉಮೇಶ ನಾಯ್ಕರ ಕಾರ್ಯವೈಖರಿಯನ್ನು ನಾನು ಇಂದಿಗೂ ಅಭಿಮಾನಿಸುತ್ತೇನೆ. ಕೆಲವೊಮ್ಮೆ ವ್ಯವಸ್ಥೆ ಬೇಡದ ಕೆಲಸಕ್ಕೆ ಕೈ ಹಾಕಿದರೂ ನಾವು ವಿರೋಧಿಸುವುದಿಲ್ಲ ಯಾಕೆಂದರೆ ಆಗಬೇಕಾದ್ದು ಆಗಲಿ….ನಮಗ್ಯಾಕೆ ಊರವರ ಉಸಾಬರಿ ಎಂದು ನಾವು ಸುಮ್ಮನಿದ್ದು ಬಿಡುತ್ತೇವೆ. ಉಮೇಶ ನಾಯ್ಕರು ಹಾಗೆ ಸುಮ್ಮನಿರುವ ವ್ಯಕ್ತಿ ಅಲ್ಲವೇ ಅಲ್ಲ. ಸರಿಯಲ್ಲವೆನಿಸಿದರೆ ತಕ್ಷಣವೇ ಅದನ್ನು ಅವರೆದುರೇ ಹೇಳಿ ಬಿಡುತ್ತಾರೆ. ಒಮ್ಮೆ ಬೇಸರವಾದರೂ ಸರಿ ವ್ಯವಸ್ಥೆ ಸರಿಯಾಗುತ್ತದೆ. ?
ಹಾತೊರೆದು ಮುಂದೆ ಹೋಗಿ ತಾನು ಅದನ್ನೊಂದು ಮಾಡುವೆ….ಇದನ್ನೊಂದು ಮಾಡುವೆ…..ಎಲ್ಲವನ್ನೂ ತಾನೇ ಮಾಡುವೆ….. ಎನ್ನುವವರಲ್ಲ ಅವರು. ಹಾಗಂತ ಮಾಡಿದ ಕೆಲಸ ಉಮೇಶ ನಾಯ್ಕರು ಮಾಡಿದ್ದು ಅನ್ನುವ ಹಾಗೇ ಮಾಡುತ್ತಾರೆ. ಬುದ್ಧಿವಂತಿಕೆ ನಮ್ಮಲ್ಲೇ ಇರಬೇಕೆಂದೇನೂ ಇಲ್ಲ ಅದು ಬೇರೆಯವರಲ್ಲಿ ಇದ್ದರೂ ಆದೀತು ಆದರೆ ಅದನ್ನು ಬಳಸಿಕೊಳ್ಳುವಷ್ಟು ಬುದ್ಧಿವಂತಿಕೆ ನಮ್ಮಲ್ಲಿರಬೇಕು. ನಮಗಿಂತ ಬುದ್ಧಿವಂತರು ಎಂದು ಕಂಡಾಕ್ಷಣ ಅವರ ಮೇಲೆ ಕತ್ತಿ ಮಸೆಯುವ ಹತ್ತಾರು ಜನರನ್ನು ಮೊದಲೇ ಕಂಡಿದ್ದ ನನಗೆ ಉಮೇಶ ನಾಯ್ಕರು ನಿಜವಾಗಿಯೂ ವಿಶೇಷ ಎನಿಸಿದ್ದು ಸುಳ್ಳಲ್ಲ.
ಜಾತಿಯ ಸುತ್ತ ಗಿರಕಿ ಹೊಡೆಯುವವರು….ಗಿರಕಿ ಹೊಡೆದು ಹೊಡೆದು ಅವರೇ ತಲೆ ತಿರುಗಿ ಬೀಳುತ್ತಾರೆ. ? ನೀತಿಯಿಂದ ಬದುಕುವವರು ಹೃದಯದಲ್ಲಿ ನೆನಪಿಡುವಂತಾಗುತ್ತಾರೆ. ಉಮೇಶ ನಾಯ್ಕರ ಬಾವನೆಂಟ ಶ್ರೀಯುತ ಮೋಹನ ನಾಯ್ಕರೂ ನನ್ನ ಅತ್ಯಂತ ಆಪ್ತ ಸ್ನೇಹಿತರು. ನನ್ನನ್ನು ಪ್ರೋತ್ಸಾಹಿಸುವವರೂ ಹೌದು. ಆದರಿಸುವವರೂ ಹೌದು. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಕೊನೆಗೆ ಎಲ್ಲೋ ಸಾಯುವ ಮುಂಚೆ ನಮ್ಮವರ ಮನಸ್ಸುಗಳನ್ನು ಗೆಲ್ಲಬೇಕು. ಬಾವ-ನೆಂಟರಿಬ್ಬರೂ ನಮ್ಮ ಮನೆಯ ಕಾರ್ಯಕ್ರಮಕ್ಕೆ ಹಾಜರಿದ್ದು ನಮ್ಮ ಸಂಭ್ರಮಕ್ಕೆ ಕಾರಣರಾಗಿದ್ದನ್ನು ನಾನು ಮರೆತಿಲ್ಲ. ಉಮೇಶ ನಾಯ್ಕರು, ಮೋಹನ ನಾಯ್ಕರು ಬಾವ ನೆಂಟ ಎನ್ನುವುದಕ್ಕಿಂತ ಸ್ವಂತ ಸಹೋದರರಂತಿದ್ದಾರೆ. ಅತ್ಯುತ್ತಮ ನಾಯಕತ್ವ ಗುಣ ಅವರ ನಿಜವಾದ ಆಸ್ತಿ. ಉಮೇಶ ನಾಯ್ಕರ ಮನೆಯವರೂ ಸದ್ಗೃಹಿಣಿ. ಹೋದಾಗೆಲ್ಲಾ ತುಂಬು ಹೃದಯದಿಂದ ಆತಿಥ್ಯ ಮಾಡಿದ್ದಾರೆ. ಅವರ ಬಂಧು ಭಾವಕ್ಕೆ ನಾನು ಋಣಿ.
ಉಮೇಶ ನಾಯ್ಕರು ನನಗೆ ಪ್ರೀತಿಯಿಂದ ಕೊಟ್ಟ ಜವಾಬ್ದಾರಿಯನ್ನು ಅವರಿಗೆ ಅಷ್ಟೇ ಪ್ರೀತಿಯಿಂದ ನಿರ್ವಹಿಸಿ ಕೊಟ್ಟಿದ್ದೇನೆ. ಮಗ ರಾಹುಲನಿಗೂ ನಾಲ್ಕಕ್ಷರವನ್ನು ಪ್ರೀತಿಯಿಂದ ಕಲಿಸಿದ್ದೇನೆ. ಅವರಿಗೆ ಶುಭವಾಗಬೇಕು. ಶುಭವಾಗುತ್ತಲೇ ಇರಬೇಕು.
ಸದ್ಗುರು ಶ್ರೀಧರರ ಆಶೀರ್ವಾದ ಉಮೇಶ ನಾಯ್ಕರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  “ಮೋಹದ-ಕ್ಷಯವೇ ಮೋಕ್ಷ”

ಉಮೇಶ ನಾಯ್ಕರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 98457 18737

??????⚫⚪???????⚫⚪?????

RELATED ARTICLES  ಜೀವನದಲ್ಲಿ ಸಾಮರಸ್ಯ